ಸೋಮವಾರ, ಜೂನ್ 1, 2020
27 °C

ನೈತಿಕ ಪ್ರಜ್ಞೆ ಆಂತರ್ಯದ ಎಚ್ಚರ

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

Prajavani

ಯಾವ ಕೆಲಸ ಸರಿ, ಯಾವುದು ತಪ್ಪು – ಎಂದು ನಾವು ನಿರ್ಧರಿಸುವ ಬಗೆ ಯಾವುದು? ನಮ್ಮ ಆಲೋಚನೆ ಮತ್ತು ಕ್ರಿಯೆಗೆ ನೈತಿಕತೆಯ ಆಯಾಮ ಹೇಗೆ ದಕ್ಕುತ್ತದೆ? ಯಾವುದೇ ನಿರ್ಧಾರ ಕೈಗೊಂಡು ಅದನ್ನು ಕಾರ್ಯಗತಗೊಳಿಸಬೇಕಾದಾಗ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ಮುಖ್ಯ ಅಂಶ ಯಾವುದು? ಒಟ್ಟಾರೆ ನಮ್ಮ ನೈತಿಕ ವರ್ತನೆಯ ಮೂಲ ಯಾವುದು?

ದಯೆಯೇ ಧರ್ಮದ ಮೂಲ – ಎಂಬ ಮಾತಿನ ಆಳಕ್ಕಿಳಿದು ನೋಡಿದಾಗ, ಎಲ್ಲ ಸರಿ–ತಪ್ಪುಗಳ ತಿಳಿಸಿಕೊಡಬಲ್ಲ ಬೆಳಕೊಂದು ಕಣ್ಮುಂದೆ ಸುಳಿದಂತಾಗುವುದು ನಿಜ. ತನ್ನನ್ನೂ ಒಳಗೊಂಡು ಸಕಲ ಚರಾಚರ ಜೀವಿಗಳ ಒಳಿತೇ ಉದ್ದೇಶವಾಗಿರುವ ಕೆಲಸವೆಲ್ಲವೂ ‘ಧರ್ಮ’; ಅದೇ 'ಸರಿ' ಎನ್ನುವುದು ಹೌದಾದರೂ ಅದನ್ನು ದಿನನಿತ್ಯದಲ್ಲಿ ನಾವು ಕಂಡುಕೊಳ್ಳಬಹುದಾದ ಮಾರ್ಗ ಯಾವುದು?

ಬದುಕು ಎಂದಿಗೂ ನೇರ ಗೆರೆಯಂತೂ ಅಲ್ಲ; ಚಿಕ್ಕ ಮಕ್ಕಳು ಎರಡು ಮುಚ್ಚಿದ ಕೈಗಳನ್ನು ಮುಂದೆ ಹಿಡಿದು ಯಾವುದಾದರೂ ಒಂದನ್ನು ಆರಿಸು ಎನ್ನುವಂತಹ ಸುಲಭ, ಮುಗ್ಧ, ನಿರಪಾಯ ಆಯ್ಕೆಗಳೂ ಬದುಕಿನಲ್ಲಿಲ್ಲ. ‘ಇದೇ ಸರಿ, ಹೀಗೆ ಮಾಡು’ ಎನ್ನುವ ಮಾರ್ಗದರ್ಶನ ಸಿಗುವುದು ದುರ್ಲಭವಷ್ಟೇ ಅಲ್ಲ, ಸಿಕ್ಕಾಗ ನಾವು ಅದನ್ನು ನಿರ್ಲಕ್ಷಿಸುವುದೂ ನಿಜ. ಹೊರಗಿನ ಎಲ್ಲ ಬೆಳಕು ಮಂದವಾದಾಗ, ಕೈಹಿಡಿದು ನಡೆಸಬಲ್ಲವರೆಲ್ಲರೂ ತಾವೇ ದಿಕ್ಕೆಟ್ಟು ನಿಂತಿರುವಾಗ, ನನ್ನಂತೆಯೇ ಪ್ರಪಂಚದ ಪ್ರತಿಯೊಬ್ಬರೂ ತೊಳಲಾಡುತ್ತಿರುವಾಗಲೂ ಒಳಗಿನದೊಂದು ‘ಎಚ್ಚರ‘ ಕೆಲಸಮಾಡುತ್ತಿರುತ್ತದೆಯಾ? ಹಾಗೊಂದು ‘ಒಳ ಎಚ್ಚರ’ ಎಂಬುದು ನಮ್ಮೆಲ್ಲರಲ್ಲಿಯೂ ಅಡಗಿರುವ, ನಮ್ಮನ್ನು ಎಂತಹ ಕಷ್ಟದಿಂದಲೂ ಪಾರುಮಾಡಬಲ್ಲ ಮಾಯಾದೀಪವಿರಬಹುದೇ, ಆಪತ್ತಿಗಾಗುವ ಗುಪ್ತನಿಧಿಯಿರಬಹುದೇ ಎಂಬ ಆಲೋಚನೆ ಎಂದಾದರೂ ಬಂದಿದೆಯೇ? ಅದರ ಕುರಿತಾದ ಕುತೂಹಲ, ವಿಸ್ಮಯಗಳು ಉಂಟಾಗಿದವೆಯೇ? ಹಾಗಿದ್ದರೆ ಮಾನವ ಬದುಕಿನ ಅತ್ಯಂತ ಸುಂದರ ಅನುಭವವೊಂದನ್ನು ನೀವು ಹೊಂದಿದ್ದೀರಿ ಎಂದೇ ಅರ್ಥ.

ನೈತಿಕತೆಯ ಜಿಜ್ಞಾಸೆಯೊಂದು ಚಿಗುರೊಡೆದು, ಸ್ವಹಿತ-ಪರಹಿತಗಳು ಘರ್ಷಣೆಗೊಂಡು, ಅವೆರಾಡೂ ಒಂದರೊಳಗೊಂದು ಅಡಗಿರಬಹುದೇ ಎಂಬ ಆಶ್ಚರ್ಯ ಹುಟ್ಟಿಸಿ, ಕಾರುಣ್ಯ, ಆನಂದ, ಸಾರ್ಥಕತೆಯೊಟ್ಟಿಗೆ, ವೈಚಾರಿಕತೆಯೂ ದರ್ಶನವೂ ಏಕಕಾಲದಲ್ಲಿ ಉಂಟಾಗುವ ಅನುಭವದಿಂದಲೇ ಅಲ್ಲವೇ ಒಳಗಿನ ಎಚ್ಚರದ ಬೆಳಕು ಉದ್ದೀಪನಗೊಳ್ಳುವುದು? ಸರಿ-ತಪ್ಪುಗಳ ನಿರ್ಧಾರ ಕೇವಲ ಸುಖ-ಅಸುಖಗಳ ಪ್ರಶ್ನೆಯಲ್ಲ, ಲಾಭ-ನಷ್ಟದ ಲೆಕ್ಕಾಚಾರವೂ ಅಲ್ಲ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ಸಾವಿರ ವರ್ಷ ಬದುಕುವ ಹುನ್ನಾರವೂ ಅಲ್ಲ. ವಿವೇಕಯುತ ನಿರ್ಧಾರಗಳನ್ನು ಕೈಗೊಳ್ಳಲು ಪ್ರೇರೇಪಿಸುವ ಆಂತರ್ಯದ ಎಚ್ಚರ ಸಂಸ್ಕಾರದಿಂದಷ್ಟೇ ಅಲ್ಲ, ನಿರಂತರ ಆತ್ಮಾವಲೋಕನ, ವಿಮರ್ಶೆಗಳಿಂದ ಸ್ವತಃ ಸಾಧಿಸಬೇಕಾದ ಮೌಲ್ಯ. ಬದುಕಿನಲ್ಲಿ ಯಾವುದು ಮುಖ್ಯ, ಕೊನೆಗೂ ಯಾವುದು ಎಂದಿಗೂ ರಾಜಿ ಮಾಡಿಕೊಳ್ಳಲೇಬಾರದ ಮೌಲ್ಯ ಎಂಬುದರ ಶೋಧನೆಯ ಹಾದಿ ನೇರವಿಲ್ಲ.

ಹತ್ತು ಜನರನ್ನು ರಕ್ಷಿಸಲು ಒಬ್ಬರಿಗೆ ಹಿಂಸೆ ಕೊಡುವುದು ಹೇಗೆ ಸಮರ್ಥನೀಯ? ನಾನು ಆಪತ್ತಿಗೆ ಸಿಲುಕಿಕೊಂಡಾಗ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಇತರರಿಗೆ ಎಷ್ಟು ಹಾನಿ ಮಾಡಬಹುದು? ತಿಳಿಯದೆ ಮಾಡಿದ ತಪ್ಪಿಗೆ ಶಿಕ್ಷೆ ಬೇಕೇ? ನಾನು ಕಷ್ಟದಲ್ಲಿರುವಾಗ, ನನಗೆ ಸಹಾಯ ಮರೀಚಿಕೆಯಾಗಿರುವಾಗಲೂ ಇತರರ ಕಷ್ಟಕ್ಕೆ ಮರುಗಲು ಸಾಧ್ಯವೇ? ನನ್ನೆಲ್ಲಾ ಸರಿ ತಪ್ಪುಗಳು ನನ್ನದೇ ಸ್ವತಂತ್ರ ಆಯ್ಕೆಗಳೇ? ಇನ್ನೂ ಹಲವಾರು ಪ್ರಶ್ನೆಗಳಿಗೆ ಮೇಲ್ನೋಟಕ್ಕೆ ಕಾಣುವ ಉತ್ತರಗಳೆಲ್ಲವೂ ಸರಿಯಲ್ಲದಿರಬಹುದು. ನಿರಂತರ ಜಿಜ್ಞಾಸೆಯಿಂದಷ್ಟೇ ನೈತಿಕತೆಯ ಮರ್ಮ ತಿಳಿಯಬಹುದು.

ಕರ್ತವ್ಯ-ಜವಾಬ್ದಾರಿಗಳೋ ಮಾನವೀಯತೆಯೋ ಆರ್ದ್ರಭಾವನೆಗಳೋ ಧರ್ಮ-ಕರ್ಮಗಳ ಬಗ್ಗೆ ಆಳವಾದ ಶ್ರದ್ಧೆಯೋ ನೈಸರ್ಗಿಕವಾಗಿ ನಮ್ಮೊಳಡಗಿರುವ ‘ನ್ಯಾಯ ಸಂವೇದನೆಯೋ’ – ಯಾವುದಾದರೂ ಸರಿಯೇ – ‘ನನ್ನಂತೆ ಪರರು; ನನ್ನ ಅತ್ಯಂತ ಸಣ್ಣ ಕೆಲಸವೂ/ನಿರ್ಧಾರವೂ ಈ ಪ್ರಪಂಚದ ಒಂದು ಅತ್ಯಂತ ಸಣ್ಣ ಕಣವನ್ನಾದರೂ ಬದಲಾಯಿಸದೆ ಬಿಡದು’ ಎಂಬ ಎಚ್ಚರದ ದೀಪಕ್ಕೆ ನಿರಂತರತೆಯನ್ನು ಕೊಡುವ ತೈಲಧಾರೆಯಾಗಬಹುದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.