ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣದ ಮೊದಲ ಹಬ್ಬ ಉಲ್ಲಾಸದ ನಾಗಪಂಚಮಿ

Published 19 ಆಗಸ್ಟ್ 2023, 23:36 IST
Last Updated 19 ಆಗಸ್ಟ್ 2023, 23:36 IST
ಅಕ್ಷರ ಗಾತ್ರ

ಶ್ರಾವಣಮಾಸದ ನಾಲ್ಕು ಮತ್ತು ಐದನೇ ದಿನಗಳನ್ನು ನಾಗನ ಪೂಜೆಗಾಗಿ ಮೀಸಲಿಡಲಾಗಿದೆ. ಸಾಲು ಸಾಲು ಹಬ್ಬಗಳನ್ನು ತನ್ನ ಜೊತೆಗೆ ಕರೆದು ತರುವ ಶ್ರಾವಣದ ಮೊದಲ ಹಬ್ಬ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ಆಚರಣೆಯನ್ನು ಉತ್ತರ ಕರ್ನಾಟಕದವರು ‘ಪಂಚಮಿ ಹಬ್ಬ’ ಎಂದು ಕರೆಯುತ್ತಾರೆ.

ನವವಿವಾಹಿತ ಹೆಣ್ಣುಮಕ್ಕಳು ತೌರುಮನೆಗೆ ಬರಲು ಕಾತರದಿಂದ ಕಾಯುತ್ತಾರೆ. ಹಬ್ಬ ಇನ್ನೂ ವಾರವಿದೆ ಎನ್ನುವಾಗಲೇ ಸೋದರರು ಕರೆಯಲು ಹೋಗುವುದು ಸಂಪ್ರದಾಯ. ಅಮಾವಾಸ್ಯೆ ಕಳೆಯುತ್ತಿದ್ದ ಹಾಗೆ ಎಲ್ಲರ ಮನೆಯಲ್ಲಿ ಹಬ್ಬದ ತಯಾರಿ ಜೋರಾಗಿ ಶುರುವಾಗುತ್ತದೆ. ಜೋಳದ ಅರಳು ಹುರಿಯುವ ಘಮ ಘಮ ಎಲ್ಲೆಡೆ ಹರಡಿದಂತೆ ಹೆಂಗಳೆಯರ ಸಡಗರ ರಂಗೇರುತ್ತದೆ. ‘ಪಂಚಮಿ ತಯಾರಿ ಜೋರೇನ್ರಿ’ ಎಂದು ಒಬ್ಬರನ್ನೊಬ್ಬರು ಕೇಳಿಕೊಳ್ಳುತ್ತ ಬಗೆ ಬಗೆಯ ಉಂಡೆಗಳನ್ನು ತಯಾರಿಸುತ್ತಾರೆ. ಕಡಲೆ ಹಿಟ್ಟಿನ ಶೇವು ತಯಾರಿಸಿ ಬೆಲ್ಲದ ಪಾಕದಲ್ಲಿ ಹಾಕಿ ಉಂಡೆ ಕಟ್ಟುತ್ತಾರೆ. ಅವಲಕ್ಕಿ, ಶೇಂಗಾ, ಎಳ್ಳು, ಮೋತಿಚೂರು, ಬೂಂದಿ, ರವೆ, ಹೆಸರಿಟ್ಟು, ಕಡಲೆಹಿಟ್ಟು, ಅಂಟಿನ ಉಂಡೆ, ಲಡ್ಡಿಕೆ ಉಂಡೆ – ಹೀಗೆ ಹತ್ತಾರು ರೀತಿಯ ಉಂಡೆಗಳು ಸಿದ್ದವಾಗಿ ಡಬ್ಬ ಸೇರುತ್ತವೆ. ಚಕ್ಕುಲಿ, ಕೋಡುಬಳೆ, ಶಂಕರಪಾಳಿ, ಗರಿ ಗರಿ ಅವಲಕ್ಕಿ ಚೂಡ, ಚೂರುಮುರಿ ಚೂಡ – ಇವೆಲ್ಲ ಸಿದ್ದವಾಗುವಾಗ ಓಣಿ ತುಂಬಾ ಘಮ ಘಮ ವಾಸನೆ ಹಬ್ಬಿ ಎಲ್ಲರಲ್ಲೂ ಹೊಸ ಉತ್ಸಾಹ ಮೂಡಿಸುತ್ತವೆ.

ಮಣ್ಣಿನಿಂದ ತಯಾರಿಸಿದ ನಾಗಪ್ಪಗಳನ್ನು ಕೆಲವರು ಪೇಟೆಗಳಲ್ಲಿ ಕೊಂಡರೆ, ಕೆಲವರು ತಾವೇ ತಯಾರಿಸಿಕೊಳ್ಳುತ್ತಾರೆ. ಚೌತಿಯ ದಿನ ಮನೆಯ ಒಳಗೆ ಹಾಲೆರೆಯುತ್ತಾರೆ. ಜೋಳದ ಅರಳು, ತಂಬಿಟ್ಟು ಬಗೆಬಗೆಯ ಕಾಳುಗಳಿಂದ ತಯಾರಿಸಿದ ಉಸುಲಿ ನೈವೇದ್ಯ ಮಾಡುತ್ತಾರೆ. ಆ ದಿನ ಹೆಂಗಳೆಯರಿಗೆ ಉಪವಾಸ. ತಾವು ವ್ರತಧಾರಣೆ ಮಾಡಿದ್ದೇವೆ ಎಂಬ ಸಂಕೇತಕ್ಕಾಗಿ ದಾರವನ್ನು ಮೂರೇಳೆ ಐದೇಳೆ ಅಥವಾ ಏಳು ಎಳೆಗಳಲ್ಲಿ ಧರಿಸುತ್ತಾರೆ. ಅಕ್ಕ ಪಕ್ಕದ ಮಹಿಳೆಯರನ್ನು ಕರೆದು ಅರಿಶಿಣ ಕುಂಕುಮ ಹಚ್ಚಿ ಉಡಿ ತುಂಬುತ್ತಾರೆ. ಆ ದಿನ ನಾಗಪ್ಪ ಮನೆಗೆ ಬರುತ್ತಾನೆ ಎಂಬ ನಂಬಿಕೆಯಲ್ಲಿ ರೊಟ್ಟಿ ತಟ್ಟುವುದಿಲ್ಲ. ಯಾವ ಕರಿದ ಪದಾರ್ಥಗಳನ್ನೂ ಮಾಡುವುದಿಲ್ಲ.

ಮಾರನೇ ದಿನ ಪಂಚಮಿ. ಅಂದು ಎಲ್ಲರೂ ಹೊಸ ಸೀರೆ ಉಡುತ್ತಾರೆ. ಪ್ರತಿ ಮನೆಯ ಹಿತ್ತಿಲಲ್ಲಿ ಮರಗಳಿಗೆ ಹಗ್ಗ ಬಿಗಿದು ಉಯ್ಯಾಲೆ ಕಟ್ಟಿ ಮಕ್ಕಳು-ಮುದುಕಿಯರೆನ್ನದೆ ಎಲ್ಲ ಮಹಿಳೆಯರೂ ಉಯ್ಯಾಲೆ ಆಡುತ್ತಾರೆ. ಕೆಲವು ಹಳ್ಳಿಗಳಲ್ಲಿ ಯುವಕರು ದೊಡ್ಡ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿ ಜೋಕಾಲಿ ತಯಾರಿಸುತ್ತಾರೆ. ಊರಿನ ಎಲ್ಲ ಹೆಂಗಳೆಯರೂ ಅಲ್ಲಿ ಸೇರಿ ಜೋಕಾಲಿ ಆಡುತ್ತಾರೆ. ನಗು-ವಿನೋದ, ಕೇಕೆ–ಗದ್ದಲಗಳಿಂದ ಎಲ್ಲರ ಮನಸ್ಸು ಉಲ್ಲಾಸಗೊಳ್ಳುತ್ತದೆ. ಕಾರಣಾಂತರಗಳಿಂದ ತೌರಿಗೆ ಬರದೇ ಇದ್ದ ಹೆಣ್ಣುಮಕ್ಕಳಿಗೆ ಹೊಸ ಸೀರೆ ಮತ್ತು ಪಂಚಮಿ ಉಂಡೆಗಳನ್ನು ಕಳಿಸಿ ಕೊಡುತ್ತಾರೆ. ಕರಾವಳಿ ಜಿಲ್ಲೆಯಲ್ಲಿ ರಂಗೋಲಿಯಿಂದ ನಾಗಪ್ಪನನ್ನು ಬಿಡಿಸಿ ಪೂಜೆ ಮಾಡುತ್ತಾರೆ. ಅರಿಶಿಣ ಎಲೆಯ ಮೇಲೆ ಅಕ್ಕಿ ಹಿಟ್ಟು ಹಚ್ಚಿ ಕಾಯಿ-ಬೆಲ್ಲದ ಹೂರಣ ತುಂಬಿ ಎಲೆಯನ್ನು ಮಡಚಿ ಆವಿಯಲ್ಲಿ ಬೇಯಿಸಿ ಪಾತೋಳಿ ತಯಾರಿಸುತ್ತಾರೆ. ನಾಗಬನ ಅಥವಾ ಹುತ್ತ ಇದ್ದರೆ ಅಲ್ಲಿ ಹೋಗಿ ಹಾಲೆರೆದು ಪೂಜಿಸುತ್ತಾರೆ. ಮಲೆನಾಡಿನಲ್ಲಿ ಕೂಡ ನಾಗರಕಲ್ಲುಗಳು ಇರುವ ಕಡೆ ಹೋಗಿ ಹಾಲು ಎರೆಯುವ ಕ್ರಮ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT