ಸೋಮವಾರ, ಜನವರಿ 20, 2020
20 °C

ಶಾಂತಿ: ಮನಸ್ಸಿನ ಕಿಟಕಿ

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

Prajavani

ನಾವು ಶಾಂತಿ ಸಮಾಧಾನಗಳನ್ನು ಅರಸುವಾಗ ಏನನ್ನು ಹುಡುಕುತ್ತಿರುತ್ತೇವೆ? ಅಶಾಂತಿ ಎಂದರೆ ಏನದು ಅದು ನಮ್ಮಲ್ಲಿ ಉಂಟಾಗುವ ನೋವಿನಂತಹುದೇ ಭಯದಂತೆಯೇ ಆಸೆಯಂತಹುದೇ? ಅಥವಾ 'ಈಗ ಇಲ್ಲಿ ಮಳೆಯಾಗುತ್ತಿದೆ' ಎಂಬಂತಹ ಘಟನೆಯಾಧಾರಿತ ತಾತ್ಕಾಲಿಕ ಸತ್ಯದಂತಹುದೇ? 'ಶಾಂತಿ, ಸಮಾಧಾನ' ಎಂದರೆ 'ಇಂಥದ್ದು’; ನಾನೀಗ ಇರುವ ಪರಿಸ್ಥಿತಿ ನನ್ನ ಕಲ್ಪನೆಯ ಶಾಂತಿ, ಸಮಾಧಾನವನ್ನು ಹೋಲುತ್ತಿಲ್ಲ, ಆದ್ದರಿಂದ ನಾನು ಶಾಂತಿಯಿಂದ ಇಲ್ಲ, ಅಸಮಾಧಾನದಲ್ಲಿ ಇದ್ದೇನೆ, ಶಾಂತಿಯನ್ನು ಹುಡುಕುತ್ತಿದ್ದೇನೆ ಎಂಬಂತಹ ಪರಿಸ್ಥಿತಿಯಲ್ಲಿ ಇರುತ್ತೇವೆಯೇ?

ನಾವೀಗ ಬದುಕುತ್ತಿರುವ ಬದುಕಿನಿಂದ ಪ್ರತಿನಿತ್ಯ, ಪ್ರತಿಕ್ಷಣವೂ ತಪ್ಪಿಸಿಕೊಂಡು ಓಡಿಹೋಗಬೇಕು ಎನಿಸುತ್ತಿದ್ದರೆ ಖಂಡಿತ ಅದು ಅಶಾಂತಿಯ ಬದುಕೇ. ಹಿಮಾಲಯ ಪರ್ವತವನ್ನು ಸಾಹಸದಿಂದ ಏರಿದಂತೆ, ಶಾಂತಿಯ ಆಗರವನ್ನು ತಪಸ್ಸಿನಿಂದ, ಛಲದಿಂದ ತಲುಪುವುದು ಸಾಧ್ಯವೇ? ತಪಸ್ಸು, ಛಲ, ದೃಢಪ್ರಯತ್ನ, ಆತ್ಮವಿಶ್ವಾಸ – ಎಲ್ಲವೂ ಕಾರ್ಯಸಾಧನೆಗೆ ಬೇಕೇಬೇಕು. ಆದರೆ ಅವುಗಳೇ ಶಾಂತಿಸಾಧನೆಗೆ ನಿಜವಾದ ತೊಡಕುಗಳು ಅನ್ನುವುದರಲ್ಲಿ ತಪ್ಪೇನಾದರೂ ಇದೆಯೇ?

ಪ್ರಯತ್ನದಿಂದ ಮನುಷ್ಯ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಅತಿಯಾಗಿ ನಂಬಿದವರಿಗೆ ಅಶಾಂತಿ ಕಟ್ಟಿಟ್ಟ ಬುತ್ತಿ. ಏಕೆಂದರೆ ಅಂತಹವರು ಅಶಾಂತಿಯನ್ನು ದಮನ ಮಾಡುವ ಪ್ರಯತ್ನದಲ್ಲೇ ಇನ್ನೂ ಹೆಚ್ಚಿನ ಅಶಾಂತಿಯನ್ನು ಉಣ್ಣುತ್ತಿರುತ್ತಾರೆ. ಬೇರೆಲ್ಲಾ ರಂಗಗಳಲ್ಲಿ ಪ್ರಯತ್ನಕ್ಕೆ ಯಾವ ಮಹತ್ವ ಇದೆಯೋ ಅದನ್ನು ಕ್ಷಣಕಾಲ ಬದಿಗಿಟ್ಟು ನಮ್ಮ ಶಾಂತಿಯರಸುವ ಪ್ರಯತ್ನ ನಮಗೇನನ್ನು ಕೊಡುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಾವಿದರ ಸತ್ಯವನ್ನು ಅರಿಯಬಹುದು.

ಇದನ್ನೂ ಓದಿ: ಕಲಿಕೆಯೆಂಬ ಸರಸ್ವತೀ ಪೂಜೆ

ನಾವೀಗ ಒಂದು ಕೋಣೆಯಲ್ಲಿ ಕುಳಿತ್ತಿದ್ದೇವೆ ಎಂದುಕೊಳ್ಳೋಣ. ಕಿಟಕಿಯನ್ನು ತೆರೆದಾಗ ಹೊರಗೆ ಮನಸೂರೆಗೊಳ್ಳುವ ನೋಟ, ಹಸಿರು ಬೆಟ್ಟ, ಸಣ್ಣಗೆ ಹರಿಯುವ ಶುಭ್ರ ನದಿ, ನದಿಯ ಇಕ್ಕೆಲಗಳಲ್ಲಿ ಬಣ್ಣ ಬಣ್ಣದ ಹೂಗಳು, ವಿವಿಧ ಪಕ್ಷಿಗಳು – ಇಂಥ ಆನಂದದಲ್ಲಿ ತೇಲುತ್ತಿರುವಾಗ ಕಿಟಕಿಯ ಸರಳುಗಳ ಮೇಲಿರುವ ದಪ್ಪನೆಯ ಧೂಳು ನಮಗೆ ಕಾಣಿಸಿಬಿಡುತ್ತದೆ. ನಾವೀಗ ಧೂಳನ್ನು ನಿರ್ಲಕ್ಷಿಸಿ ಹೊರಗೆ ಕಾಣುವ ಸೌಂದರ್ಯವನ್ನು ಸವಿಯಬಹುದು, ಆದರೆ ‘ಕಿಟಕಿಗಳು ಶುಭ್ರವಾಗಿರಬೇಕು’ ಎನ್ನುವ ಹುಳ ನಮ್ಮ ತಲೆಯನ್ನು ಕೊರೆಯಲಾರಂಭಿಸುತ್ತದೆ. ಹೊರಗಿನ ನೋಟವನ್ನು ಮರೆತು ಕಿಟಕಿಯನ್ನು ಶುಚಿಗೊಳಿಸಲು ತೊಡಗುತ್ತೇವೆ; ಕಿಟಕಿಯ ಶುಭ್ರತೆಯೇ ಗೀಳಾಗಿ ಸೌಂದರ್ಯ ಕಳೆದುಹೋಗುತ್ತದೆ. 'ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು' ಎನ್ನುವುದೂ ಕೂಡ ಹೀಗೇ ‘ಕಿಟಕಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎನ್ನುವಂತಹ ಗೀಳಿನದ್ದು.

ಕಿಟಕಿಯ ಮೇಲೆ ಧೂಳು, ಕಸ ಸೇರುವುದು ಸಾಮಾನ್ಯ, ಏಕೆಂದರೆ ಅದು ತನ್ನನ್ನು ತಾನು ಹೊರಗಿನ ಪ್ರಪಂಚಕ್ಕೆ ಧೈರ್ಯವಾಗಿ ತೆರೆದುಕೊಂಡಿದೆ. ಹಾಗೆಯೇ ಮನಸ್ಸೂ ಕೂಡ, ಮನಸ್ಸಿನಲ್ಲಿ ಆಗಾಗ ಚಿಂತೆಯ, ಆತಂಕದ ಕಪ್ಪು ಧೂಳು ಕಸ ಸೇರಿಕೊಳ್ಳುತ್ತದೆ; ಅದನ್ನು ತೊಳೆದು ಶುಚಿಯಾಗಿಟ್ಟುಕೊಳ್ಳುವ ಸಾಹಸಕ್ಕೆ ಕೈ ಹಾಕಿದೆವೋ ಮುಗಿಯಿತು, ಅದು ಬರೀ ಧೂಳಲ್ಲ, ಕೆಸರಿನ ಸುಳಿ ಎನ್ನುವುದು ನಮ್ಮ ಅನುಭವಕ್ಕೆ ಬರುತ್ತದೆ. ಪುಣ್ಯಕ್ಕೆ ಮನಸ್ಸೆಂಬುವುದು ಕಬ್ಬಿಣದ ಸರಳುಗಳಿಂದ ಆದ ಕಿಟಕಿಯಲ್ಲ, ಅದು ಹರಿಯುವ ನದಿಯಂತಹ, ಚಿಗುರುವ ಸಸಿಯಂತಹ, ಬೆಳೆಯುವ ಮಗುವಿನಂತಹ ತನ್ನನ್ನು ತಾನೇ ನೋಡಿಕೊಳ್ಳಬಲ್ಲ, ನವೀಕರಿಸಿಕೊಳ್ಳಬಹುದಾದಂತಹ ಕಿಟಕಿ. ಅದರ ಮೇಲೆ ಆಗಾಗ ಏಳುವ ಕಪ್ಪು ಛಾಯೆಯನ್ನು ನಿರ್ಲಕ್ಷಿಸಿ ಸುಮ್ಮನೆ ಅದರ ಮೂಲಕ ನೋಡೋಣ. ಶಾಂತಿಧಾಮ ಎಲ್ಲೋ ಇಲ್ಲ, ಅದಕ್ಕೆ ಎಲ್ಲೂ ನಡೆದು ಹೋಗಬೇಕಾಗಿಲ್ಲ; ಅದು ಪ್ರಯತ್ನದಿಂದಲ್ಲ, ಆಪ್ರಯತ್ನದಿಂದ ನಾವಿದ್ದಲ್ಲೇ ಅನುಭವಕ್ಕೆ ಬರುವಂತದ್ದು. ಪ್ರಯತ್ನವೇ ಶಾಂತಿ–ಸಮಾಧಾನಕ್ಕೆ ಮಾರಕ, ಬೇಕಾದರೆ ಪ್ರಯತ್ನಿಸಿ ನೋಡಿ!

ಪ್ರತಿಕ್ರಿಯಿಸಿ (+)