ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive | ಸಾಂಸ್ಕೃತಿಕ ಅನನ್ಯತೆಯನ್ನು ಜೀವಜಲದಂತೆ ಪೊರೆಯುವ ಪಿತೃಪಕ್ಷ

Last Updated 6 ಸೆಪ್ಟೆಂಬರ್ 2020, 8:21 IST
ಅಕ್ಷರ ಗಾತ್ರ
Pv Web Exclusive | ಸಾಂಸ್ಕೃತಿಕ ಅನನ್ಯತೆಯನ್ನು ಜೀವಜಲದಂತೆ ಪೊರೆಯುವ ಪಿತೃಪಕ್ಷ
ADVERTISEMENT
""
Pv Web Exclusive | ಸಾಂಸ್ಕೃತಿಕ ಅನನ್ಯತೆಯನ್ನು ಜೀವಜಲದಂತೆ ಪೊರೆಯುವ ಪಿತೃಪಕ್ಷ
""
Pv Web Exclusive | ಸಾಂಸ್ಕೃತಿಕ ಅನನ್ಯತೆಯನ್ನು ಜೀವಜಲದಂತೆ ಪೊರೆಯುವ ಪಿತೃಪಕ್ಷ
""

ನಮ್ಮ ಪೂರ್ವಿಕರನ್ನು ಸಾಂತ್ವನಗೊಳಿಸಿ ಅವರ ಆಶೀರ್ವಾದ ಪಡೆಯಲು ವರ್ಷದಲ್ಲಿ ಒಂದು ಪಕ್ಷದ ಅವಧಿಯನ್ನು ಮೀಸಲಿಟ್ಟಿದ್ದೇವೆ. ಆ ಹದಿನೈದು ದಿನ ಹೊರತಾಗಿಯೂ ದೀಪಾವಳಿಯ ಹಿಂದೆ – ಮುಂದೆ, ಯುಗಾದಿ ಹಬ್ಬದ ಮಾರನೇ ದಿನವೂ ಕೆಲವರು ತಮ್ಮ ಹಿರೀಕರನ್ನು ಸ್ಮರಿಸುತ್ತಾರೆ. ಅದನ್ನು ಪಿತೃ ಆರಾಧನೆ ಅಥವಾ ಹಿರಿಯರ ಹಬ್ಬ ಎನ್ನುತ್ತೇವೆ. ಇದು ಪರಂಪರೆಯ ಪ್ರವರ್ತಕರನ್ನು ಗೌರವಿಸುತ್ತದೆ. ಜೊತೆಗೆ ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆಪ್ರವಹಿಸುವ ಪ್ರಕ್ರಿಯೆಯನ್ನೂ ಮಾಡುತ್ತದೆ. ಈ ಕಾರಣಕ್ಕೆ ಪಿತೃ ಪೂಜೆ ತನ್ನದೇ ಆದ ಸಾಂಸ್ಕೃತಿಕ ಅನನ್ಯತೆಯನ್ನು ಪಡೆದಿದೆ.

ಸ್ವರ್ಗಸ್ಥರಾದ ನಮ್ಮ ಪೂರ್ವಿಕರು ಒಂದು ಸುತ್ತು ಭೂ ಲೋಕ ಪ್ರದಕ್ಷಿಣೆಗೆ ಒಂದು (ಪಾಕ್ಷಿಕ ಅವಧಿ) ಸಮಯವನ್ನುವಸು–ರುದ್ರ–ಆದಿತ್ಯ ದೈವಗಳು ನೀಡಿವೆ ಎನ್ನುವುದು ನಂಬಿಕೆ. ಪಿತೃಪಕ್ಷದ ಆ ಅವಧಿಯನ್ನು ಮಾಳಪಕ್ಷ, ಹಿರಿಯರ ಹಬ್ಬ ಎಂದೂ ಕರೆಯುತ್ತೇವೆ. ನಮ್ಮ ಹಿರೀಕರನ್ನು ಆರಾಧಿಸಿ ಅವರ ಆಶೀರ್ವಾದ ಪಡೆಯುವ ಈ ಹಬ್ಬಊರಿಂದೂರಿಗೆ, ಜನಾಂಗದಿಂದ ಜನಾಂಗಕ್ಕೆ ಭಿನ್ನವೂ ಅನನ್ಯವೂ ಆಗಿರುವುದು ಸಾಂಸ್ಕೃತಿಕ ಅಸ್ಮಿತೆಯ ಭಾಗ. ಹಿರಿಯರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಧೂಪವನ್ನು ಹಾಕುವುದು ಈ ಹಬ್ಬದ ವೈಶಿಷ್ಟ್ಯ. ಧೂಪ ಹಾಕುವ ಮುನ್ನ ಅದಕ್ಕಾಗಿ ನಡೆಯುವ ಸಾಂಪ್ರದಾಯಿಕ ಪ್ರಕ್ರಿಯೆ ಬೆರಗುಗೊಳಿಸುತ್ತದೆ. ಅದು ಕೂಡ ವೈವಿಧ್ಯಮಯ ರೂಪದಲ್ಲಿ ಏಕೋದ್ದೇಶವನ್ನು ಪ್ರತಿಬಿಂಬಿಸುತ್ತದೆ.

ಕೆಲವು ದಿನಗಳ ಹಿಂದೆ ನಟ ಅಂಬರೀಷ್‌ ಅವರ ಚಿರಸ್ಮರಣೆಯ ಪೂಜೆಯ ಫೋಟೊ ವೈರಲ್‌ ಆಗಿತ್ತು. ಅದಕ್ಕೆ ಕಾರಣ ಅಂದಿನ ಪೂಜೆಯಲ್ಲಿ ಇರಿಸಿದ್ದ ಮದ್ಯದ ಬಾಟಲಿ ಕುತೂಹಲದ ಕೇಂದ್ರವಾಗಿತ್ತು. ಅದನ್ನು ವಿನೋದದ ಸಂಗತಿಯಂತೆ ಪರಿಭಾವಿಸಿ ಆ ಸ್ಥಿರ ಚಿತ್ರಕ್ಕೆ ಚಲನೆಯ ರೂಪ ನೀಡಿದ್ದರೂ ಅದರ ಆಂತರ್ಯದಲ್ಲಿಆದಿಮ ಸಂಸ್ಕೃತಿಯ ಗೌರವದ ಬಿಂಬ ಪ್ರತಿಫಲಿತವಾಗಿದೆ. ಅಂದರೆ, ಅವರವರ ಪೂರ್ವಜರ ಆಸೆ ಆಕಾಂಕ್ಷೆಗಳನ್ನು ಪೂರೈಯಿಸುವ ಮೂಲಕ ಅವರ ಹವ್ಯಾಸವನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಗೌರವಿಸುವ ಉದಾರತೆಯೂ ಹಿರಿಯರ ಹಬ್ಬದ ಹಿಂದೆ ಇದೆ. ಹಾಗಾಗಿಯೇ ಹಿರಿಯರ ಪೂಜೆಗೊಂದು ಭಿನ್ನ ಆಯಾಮವೇ ಇದೆ. ಕೆಲವರಲ್ಲಿ ಮದ್ಯವೂ ಅರ್ಪಣೆಗೆ ಒಳಗಾದರೆ, ಇನ್ನೂ ಕೆಲವರ ಮನೆಯಲ್ಲಿ ಬೀಡಿ– ಸಿಗರೇಟ್‌ (ತಂಬಾಕು, ಸಿಗರೇಟು, ನಶ್ಯ) ಸಮರ್ಪಿಸಲಾಗುತ್ತದೆ. ಅಂತೆಯೇ ಅವರ ಅಪೇಕ್ಷೆಯ ತಿಂಡಿ–ತಿನಿಸುಗಳ ಆಕರ್ಷಣೆ ಮಾತ್ರ ಮಾತಿಗೆ ಅತೀತ. ಯಾವ ಹಬ್ಬಕ್ಕೂ ಒಟ್ಟಾಗಿ ಸೇರದಮನೆಯ ಮಕ್ಕಳು ಅವರ ಮಕ್ಕಳು ಈ ಹಬ್ಬಕ್ಕಾಗಿ ಒಂದೆಡೆ ಸೇರುತ್ತಾರೆ. ಸಂಬಂಧಗಳ ನಂಟನ್ನು ಬೆಸೆದು ಬಿಗಿಗೊಳಿಸುವ ಅಂಟಿನಂತೆ ಪಿತೃಪಕ್ಷ ಕಾಣಿಸುತ್ತದೆ. ಇದು ಅನೇಕರಿಗೆ ದುಬಾರಿಯ ಬಾಬತ್ತು ಕೂಡ ಹೌದು. ಆದರೂ ಮಾಡದೆ ಬಿಡುವುದಿಲ್ಲ. ಅವರವರ ಶಕ್ತ್ಯಾನುಸಾರ ಮಾಡುವ ಪದ್ಧತಿ ಇದ್ದೇ ಇದೆ. ಇದೇ ಕಾರಣಕ್ಕೆ ‘ಮನೆಯ ಮಗನನ್ನಾದರೂ ಮಾರಿ ಮಾಳಪಕ್ಷ ಮಾಡು’ ಎಂಬ ಮಾತು ಹಳೆಯ ಮೈಸೂರು ಭಾಗದಲ್ಲಿ ಜನಜನಿತವಾಗಿದೆ.

Pv Web Exclusive | ಸಾಂಸ್ಕೃತಿಕ ಅನನ್ಯತೆಯನ್ನು ಜೀವಜಲದಂತೆ ಪೊರೆಯುವ ಪಿತೃಪಕ್ಷ

ಭಿನ್ನತೆಯ ಬಹುರೂಪ

ಮಲೆನಾಡಿನ ಸೆರಗಿನಲ್ಲಿ ಮಾತೃಪ್ರಧಾನ ಸಂಸ್ಕೃತಿ ಕಾಣಿಸುತ್ತದೆ. ಅದಕ್ಕೆ ಅವರು ಮಾಡುವ ಹಿರಿಯರ ಪೂಜಾ ಕ್ರಮವೇ ಸಾಕ್ಷಿಯಾಗುತ್ತದೆ. ಇಡಕಲು ಅಥವಾ ಅಡಕಲು ಅಂದರೆ ನೀರು ತುಂಬಿದ ಹರವೆ. ಅದಕ್ಕೆ ಸೀರೆ ಉಡಿಸಿ ಬಳೆ– ಬಂಗಾರದ ಅಲಂಕಾರ ಮಾಡುತ್ತಾರೆ. ಅದರ ಪಕ್ಕದಲ್ಲಿ ಗಂಡಿನ ರೂಪದ ಬಿಂದಿಗೆ ಇಟ್ಟು ಪಂಚೆ– ಬಟ್ಟೆ ಇಡುತ್ತಾರೆ. ನಂತರಹಿರಿಯರನ್ನು ಕರೆದುಕೊಳ್ಳುವ ಪ್ರಕ್ರಿಯೆ ಸಾಗುತ್ತದೆ.

ಹಿರಿಯರನ್ನು ಆರಾಧನೆ ಮಾಡುವ ಮೂಲಕ ಅವರ ಸಂಸ್ಕೃತಿ, ಪರಂಪರೆ, ನಡವಳಿಕೆ, ಬದುಕಿನ ಕ್ರಮವನ್ನು ಕಲಿಯುವುದು ಅದನ್ನು ಮುಂದಿನ ತಲೆಮಾರಿಗೆ ಸಾಗಿಸುವುದು ಈ ಆಚರಣೆಯ ಹಿಂದೆ ಗೋಚರಿಸುತ್ತದೆ.ತಮ್ಮ ಶ್ರೀಮಂತ ಸಂಸ್ಕೃತಿಯ ಬದುಕಿನ ಸಂವಹನವನ್ನೂ ಈ ಹಬ್ಬ ಮಾಡುತ್ತದೆ. ಇಲ್ಲಿ ಆಡಂಬರದ ಅದ್ಧೂರಿ ಇರುವುದಿಲ್ಲ. ತೀರಾ ಸರಳವಾಗಿ ಅವರವರ ಕುಟುಂಬದ ಸಂಪ್ರದಾಯದ ಅನುಸಾರ ನಡೆಯುತ್ತದೆ. ಅವರ ಅರಿವಿಗೆ ದಕ್ಕಿದಂತೆ ಈ ಪೂಜಾ ವಿಧಿವಿಧಾನಗಳನ್ನು ಪಾಲಿಸುವುದು ಕೂಡ ಮತ್ತೊಂದು ವೈಶಿಷ್ಟ್ಯವೇ ಸರಿ. ಹಿರಿಯರ ಇಷ್ಟಾರ್ಥ ಪೂರೈಸುವ ನೆಪದಲ್ಲಿ ಮಾಡುವ ಉಪಚಾರ ಸ್ವಲ್ಪ ಹೆಚ್ಚಾಗುತ್ತದೆ. ನಾಸ್ತಿಕ– ಆಸ್ತಿಕ ಎಂಬ ನಂಬಿಕೆ ಏನೇ ಇದ್ದರೂ ಕಾಟಾಚಾರಕ್ಕೆ ಮಾಡುವ ಹಬ್ಬ ಅಲ್ಲವೇ ಅಲ್ಲ. ಕುಟುಂಬವೊಂದರ ತಲೆಮಾರುಗಳು ಎಂದೂ ಸೇರದಿದ್ದರೂ ಹಿರಿಯರ ಆರಾಧನೆಯ ನೆಪದಲ್ಲಿ ಒಂದೆಡೆ ಸೇರುತ್ತಾರೆ. ತಮ್ಮ ವೈಯಕ್ತಿಕ ದಾಯಾದಿ ಕಲಹಗಳನ್ನು ಒಂದಿಷ್ಟಾದರೂ ಇದು ಮರೆಮಾಚುತ್ತದೆ.ಸಮುದಾಯವನ್ನು ಬೆಸೆದು ಪರಸ್ಪರ ಪುನರ್‌ ಪರಿಚಯ ಮಾಡಿಸುತ್ತದೆ. ಇದರಿಂದ ಸಂಬಂಧ ಉಳಿಯುತ್ತೆ, ಸಂಸ್ಕೃತಿ ದಾಟುತ್ತದೆ. ಗುರು ಹಿರಿಯರನ್ನು ಗೌರವಿಸಬೇಕು ಅನ್ನುವ ಅರಿವು ಎಳೆಯರಿಗೆ ಸೇರುತ್ತದೆ.

ಇಲ್ಲಿ ಆಕೃತಿಗಿಂತ ನಿರಾಕಾರ ನೀರಿಗೊಂದು ರೂಪ ನೀಡುವುದು ಕೂಡ ವಿಶಿಷ್ಟ.ಜಲಸಂಸ್ಕೃತಿ ಹರಿವನ್ನು, ಬದುಕಿನ ಸಂರಚನೆಯನ್ನು ಪ್ರತಿಫಲಿಸುತ್ತದೆ.ಅಂದರೆ ಗಂಗೆಯನ್ನು ಪೂಜೆ ಮಾಡುವ ಮೂಲಕ ಪೂಜಿಸುವವರ ಜೀವ ದ್ರವ್ಯವನ್ನು ಶ್ರೀಮಂತಗೊಳಿಸುತ್ತದೆ. ತರಾವರಿ ಊಟೋಪಚಾರ ಹಿರಿಯರ ಪೂಜೆಯ ಎಡೆಯಲ್ಲಿ ಇಣುಕುತ್ತದೆ. ಮಾಂಸಾಹಾರ – ಸಸ್ಯಾಹಾರದ ಬಗೆ ಬಗೆಯ ರುಚಿಯ ಪದಾರ್ಥಗಳು ಅಲಂಕಾರವಾಗಿರುತ್ತವೆ. ಯಾವ ಪದಾರ್ಥದ ಪರೀಕ್ಷಾರ್ಥ ರುಚಿಯನ್ನು ನೋಡದೆ ಸಿಹಿ, ಕಾರ, ಉಪ್ಪನ್ನು ಹಾಕಿರುತ್ತಾರೆ. ಹಿರಿಯರಿಗೆ ಸಮರ್ಪಿಸುವ ಪದಾರ್ಥದ ರುಚಿ ನೋಡಿದರೆ ಅದು ಅಶುದ್ಧ ಎನ್ನುವುದು ನಂಬಿಕೆ.

ಲಕ್ಷ್ಮೀಪೂಜೆ ಜೊತೆಯ ಹಿರಿಯರ ಸ್ಮರಣೆ:

ದೀಪಾವಳಿಯಲ್ಲಿ ಲಕ್ಷ್ಮಿಪೂಜೆಯ ದಿನ ಹಿರಿಯರ ಪೂಜೆಯನ್ನೂ ಕೆಲಸಮುದಾಯ ಮಾಡುತ್ತವೆ. ಅವರೆಲ್ಲ ಬಹುತೇಕ ಸಸ್ಯಾಹಾರಿಗಳಾಗಿದ್ದು, ಲಕ್ಷ್ಮಿಗೆ ಬೇರೆಯ ನೈವೇದ್ಯ, ತಮ್ಮ ಹಿರೀಕರಿಗೆ ಬೇರೆಯದೇ ಎಡೆಯನ್ನು ಮಾಡುತ್ತಾರೆ. ಹಿರಿಯರ ಪೂಜೆಯ ನಂತರ ಅವರ ಎಡೆಯ ಭಾಗವನ್ನು ಅವರ ಅಂತಿಮ ಸಂಸ್ಕಾರ ಮಾಡಿದ ಸ್ಥಳ (ಸಮಾಧಿ) ಇಲ್ಲವೇ, ತಮ್ಮ ಅನುಕೂಲಕ್ಕೆ ಅನುಗುಣವಾದ ಸ್ಥಳದಲ್ಲಿ ಕಾಗೆಗೆ ಅರ್ಪಿಸುತ್ತಾರೆ. ದೀಪಾವಳಿಯ ಮೂರನೇಯ ದಿನ ಮಾಂಸಾಹಾರಿಗಳ ಹಿರಿಯರ ಹಬ್ಬ ಮೆರಗುಗಟ್ಟುತ್ತದೆ.ಕುಟುಂಬವನ್ನು ಅಗಲಿದ ಎಳೆಯ ಮಕ್ಕಳೂ ಹಿರಿಯರ ರೂಪಾಂತರ ಪಡೆದು ಪೂಜೆಗೆ ಒಳಗಾಗುವುದು ಹಿರಿಯರ ಹಬ್ಬದಲ್ಲಿ ಮಾತ್ರ.

ಪಿತೃ ಪಕ್ಷ ಭಿನ್ನ

ಶ್ರಾದ್ಧಾ ತಿಥಿಯಂತೆ ಪಿತೃ ಪಕ್ಷ ಅಲ್ಲ. ಏಕೆಂದರೆ ಶ್ರಾದ್ಧಾದಲ್ಲಿ ನಿರ್ದಿಷ್ಟ ಪಿತೃ ಬಂದರೆ ಪಿತೃಪಕ್ಷದ ಹೊತ್ತಿನಲ್ಲಿಎಲ್ಲ ಪಿತೃಗಳು ಬರುತ್ತಾರೆ. ತಾಯಿ ಕಡೆಯವರೂ, ತಂದೆಯ ಕಡೆಯವರು, ಸ್ನೇಹಿತ– ಬಂಧು– ಗುರುವರ್ಗದವರೂ ಕೂಡ ಬರುತ್ತಾರೆ ಎನ್ನುವುದು ನಂಬಿಕೆ. ಪಿಂಡ ಪ್ರದಾನ ಮಾಡುವಾಗ ಅವರವರ ಮನಸಿನಲ್ಲಿ ನೆಲೆಯೂರಿದ ಎಲ್ಲರನ್ನೂ ಸ್ಮರಿಸಬಹುದು. ಪಿತೃಲೋಕದಲ್ಲಿ ನೆಲೆಗೊಂಡ ಪೂರ್ವಿಕರು ಒಂದು ದಿವಸ ಅವರ ಸಂತಾನ ವೀಕ್ಷಣೆಗೆ ಬರುತ್ತಾರೆ. ಅವರ ನಂಬಿಕೆಯ ಅನುಸಾರ ಪಿತೃ ಆರಾಧನೆಯಯನ್ನು ಮಾಡುತ್ತಾರೆ. ಪಿತೃ ಪಕ್ಷದ ಬಿದಿಗೆಯ ದಿನ ಕೆಲವರು ತಮ್ಮ ತರ್ಪಣಾಕಾರ್ಯ ಮಾಡಿದರೆ,ಇನ್ನೂ ಕೆಲವರು ಸಪ್ತಮಿಯ ದಿನ ಮಾಡುತ್ತಾರೆ. ಬಹುತೇಕರು ಪಿತೃಪಕ್ಷದ ಕೊನೆಯ ದಿನ ಅಂದರೆ ಮಹಾಲಯ ಅಮಾವಾಸ್ಯೆಯ ದಿನ ಮಾಡುತ್ತಾರೆ. ಪಿಂಡವನ್ನು ಪ್ರೀತಿಪಾತ್ರರಿಗೆಲ್ಲ ಇಡಬಹುದು. ಅಂದರೆ ಅಗಲಿದ ಪೂರ್ವಜರಿಗೇ ಆಗಬೇಕು ಎಂದಿಲ್ಲ. ಒಡನಾಟದ ಯಾರಾದರೂ ಆಗಬಹುದು. ಅವರಿಗೆ ಪಿಂಡ ಇಟ್ಟು ಅವರನ್ನು ಸ್ಮರಸಿ ಕೃತಾರ್ಥರಾಗಲು ಇದು ಸಕಾಲ.

ತಿಥಿಗಿಂತ ಪಿತೃ ಪಕ್ಷ ಏಕೆ ಭಿನ್ನವಾಗುತ್ತದೆ ಎಂದರೆ, ಶ್ರಾದ್ಧಾ ಎಲ್ಲರಿಗೂಪ್ರಸಾದ ಅಲ್ಲ. ಆ ಕಾರಣಕ್ಕೆ ಊಟವನ್ನು ಎಲ್ಲರೂ ಸೇವಿಸುವುದಿಲ್ಲ. ಉಪಚಾರದಲ್ಲಿ ಕುಟುಂಬಸ್ಥರು ಮಾತ್ರ ಸಹಭಾಗಿಗಳಾಗುತ್ತಾರೆ. ಮಹಾಲಯ ಪಕ್ಷದಲ್ಲಿ ಹಾಗಾಗುವುದಿಲ್ಲ. ಅಂದಿನ ತರ್ಪಣ ಎಲ್ಲರಿಗೂ ಪ್ರಸಾದ ರೂಪವೆ ಆಗುತ್ತದೆ. ಅಂದರೆ ಯಾವುದೇ ರೂಪದಲ್ಲಿ ನಮ್ಮ ಪೂರ್ವ ಸಂಬಂಧಿಗಳು ಅಲ್ಲಿಗೆ ಬಂದಿರುತ್ತಾರೆ. ಹಾಗಾಗಿ ಸಂಬಂಧಕ್ಕೆ ಭಾಜನರು ಆಗದೆ ಇದ್ದವರೂ ಪ್ರಸಾದ ಸ್ವೀಕರಿಸುತ್ತಾರೆ. ತಿಥಿ ನಿರ್ದಿಷ್ಟತೆಯ ಕಾರಣಕ್ಕೆ ಸೀಮಿತವಾಗುತ್ತದೆ. ಪಕ್ಷದಲ್ಲಿ ಪಿತೃಗಳ ಜೊತೆ ಬಂಧು–ಬಳಗ, ಗುರುಗಳು, ಸ್ನೇಹ– ವಲಯದವರೂ ಸೇರುವುದರಿಂದ ಅದರ ಹರವು ಇನ್ನೂ ವಿಸ್ತಾರವಾಗುತ್ತದೆ.ಎಲ್ಲರ ಮನೆಯಲ್ಲೂ ಎಲ್ಲರನ್ನೂ ಕರೆಯುತ್ತಾರೆ.

Pv Web Exclusive | ಸಾಂಸ್ಕೃತಿಕ ಅನನ್ಯತೆಯನ್ನು ಜೀವಜಲದಂತೆ ಪೊರೆಯುವ ಪಿತೃಪಕ್ಷ

ಸಮಾಧಿ ಆರಾಧನೆ

ಪೂರ್ವಜರನ್ನು ಮಣ್ಣು ಮಾಡಿದ ಜಾಗಕ್ಕೆ ಪೂಜನೀಯ ಭಾವನೆ ಇರುತ್ತದೆ. ಕೆಲವರು ಅಲ್ಲಿಸಸಿಯೊಂದನ್ನು ಹಾಕಿರುತ್ತಾರೆ. ಅವರ ಹಿರಿಯರನ್ನು ಪೂಜಿಸಲು ನಿಗದಿ ಪಡಿಸಿ ಆ ಒಂದು ದಿನ ಅಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಅವರು ನೆಟ್ಟ ಸಸಿ ಬೆಳೆದಿರುತ್ತದೆ ಅದರ ಅಡಿ ಎಡೆ ಇಟ್ಟು. ಹಿರೀಕರ ಬಯಕೆಗಳನ್ನೆಲ್ಲಾ ಪೂರೈಸಿ ಅದನ್ನು ಕಾಗೆಗಳಿಗೆ ಸಮರ್ಪಿಸುತ್ತಾರೆ. ಅವರು ಬೆಳೆಸಿದ ಮರದಲ್ಲಿಯೇ ತಮ್ಮ ಪೂರ್ವಿಕರನ್ನು ಕಾಣುವ ನೋಟ ವಿಶಿಷ್ಟ.

ಸೂರ್ಯ– ಚಂದ್ರರಲ್ಲಿ ಪೂರ್ವಿಕರು:

ಹಿರಿಯರ ಹಬ್ಬವನ್ನುಯುಗಾದಿಯೋತ್ತರವೇ ಮಾಡಲಿ, ದಸರೆಯ ಪೂರ್ವದಲ್ಲಿಯೇ ಮಾಡಲಿ ಹಿರಿಯರ ಪೂಜೆಗೆ ಸೂರ್ಯ– ಚಂದ್ರರನ್ನು ಕರೆಯುವುದು ಇನ್ನೂ ವಿಶಿಷ್ಟ.ಪಾಳೆಗಾರರು– ಆಡಳಿತಗಾರರ ಸಂಬಂಧ ಬೆಸುದುಕೊಂಡವರುಮಡಿಕೆಯ ನೀರ ಬಿಂಬದಲ್ಲಿ ಪೂರ್ವಿಕರನ್ನು ಕಾಣುವ ಜೊತೆಗೆ ಸೂರ್ಯ– ಚಂದ್ರರ ಪ್ರತಿಮೆಯನ್ನೂ ಪೂಜಿಸುತ್ತಾರೆ. ಅವರ ಪೂರ್ವಿಕರನ್ನು ಸೂರ್ಯ– ಚಂದ್ರರ ಬೆಳಕಿನಲ್ಲಿ ಕಾಣುತ್ತಾರೆ. ಅವರ ಮನೆಯಲ್ಲಿ ಪ್ರತಿಮೆಗಳು ಇಲ್ಲದೆ ಇದ್ದರೆಕಲ್ಲು ಇಟ್ಟು ಅದರ ಮೇಲೆ ವಿಭೂತಿಯಲ್ಲಿ ಸೂರ್ಯ ಚಂದ್ರರನ್ನು ಬರೆಯುತ್ತಾರೆ. ನಂತರ ತಮ್ಮ ಕುಟುಂಬದ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಹಿರಿಯರ ಇಷ್ಟಾರ್ಥಗಳನ್ನು ಅರ್ಪಿಸುತ್ತಾರೆ.

Pv Web Exclusive | ಸಾಂಸ್ಕೃತಿಕ ಅನನ್ಯತೆಯನ್ನು ಜೀವಜಲದಂತೆ ಪೊರೆಯುವ ಪಿತೃಪಕ್ಷ

ಹಾಗಾದರೆ ಪಿತೃಪಕ್ಷ ಯಾವಾಗ?

ಈ ವರ್ಷ ಸೆಪ್ಟೆಂಬರ್ ‌2ರಿಂದ ಸೆಪ್ಟೆಂಬರ್ ‌17ರವರೆಗೆ ಪಿತೃಪಕ್ಷಕ್ಕೆ ಕಾಲಮಿತಿ ಒದಗಿ ಬಂದಿದೆ. ಇದು ಪೂರ್ವಿಕರ ಆರಾಧನೆಗೆ ಸಕಾಲ. ಈ ಸಮಯದಲ್ಲಿ ಪಿತೃಗಳ ಆಸೆಗಳನ್ನು ಪೂರೈಸಿದರೆ ಅವರು ಸದಾ ನಮ್ಮ ಮೇಲೆ ಕೃಪೆ ಇಟ್ಟುಆಶೀರ್ವಾದಿಸುತ್ತಾರೆ ಎಂದು ಭಾವಿಸಿದ್ದೇವೆ. ಪಿತೃ ಪಕ್ಷದ ಪೂಜೆಯನ್ನು ಕೆಲವರು ರಾತ್ರಿ ಮನೆಯಲ್ಲಿ ಮಾಡಿದರೆ ಇನ್ನೂ ಕೆಲವರು ಹಗಲು ಹೊತ್ತು ಮನೆ, ನದಿ, ದೇವಸ್ಥಾನ, ಸಮಾಧಿ, ತೋಟದಲ್ಲಿ ಮಾಡುತ್ತಾರೆ. ಪೂಜೆಯ ನಂತರ ಎಡೆಯನ್ನು ಕಾಗೆಗಳಿಗೆ ನೀಡುವ ಮೂಲಕ ಕೆಲವರು ಅವರ ಪೂರ್ವಿಕರಿಗೆ ಅದನ್ನು ತಲುಪಿಸುತ್ತಾರೆ.

ಪಿತೃಗಳಿಗೆ ಪಿಂಡ ಪ್ರದಾನ ಮಾಡುವ ಉದ್ದೇಶ ಏನೆಂದರೆ, ನಮ್ಮ ಸ್ವರ್ಗದ ನಿವಾಸಿಗಳಾದ ಹಿರಿಯರಿಗೆ ಏನಾದರೂ ತೊಂದರೆ ಆಗಿದ್ದರೆ ಅದನ್ನು ಪರಿಹರಿಸುವ ಸಂಬಂಧ ಪಿಂಡವಿಟ್ಟು ಅವರ ಆತ್ಮವನ್ನು ಪ್ರಾರಬ್ಧ ಕರ್ಮದಿಂದ ಪಾರು ಮಾಡಿ ಸದ್ಗತಿ ಶಾಶ್ವತವಾಗಲಿ ಎನ್ನುವ ದೃಷ್ಟಿಯಲ್ಲಿ ಪಿತೃ-ದೇವತೆಗಳನ್ನು ಬೇಡುವ ಉದ್ದೇಶದಿಂದ ಈ ಆಚರಣೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT