ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆ ಒಳಿತಿನ ಒಲವು

Last Updated 4 ಜೂನ್ 2020, 3:29 IST
ಅಕ್ಷರ ಗಾತ್ರ

ಪ್ರೀ ತಿ ಮತ್ತು ಪೂಜೆ – ಇವೆರಡು ಮಾನವನು ತನ್ನ ಮೈ–ಮನಸ್ಸುಗಳಿಂದ ಸಾಧಿಸುವ ಸಂಗತಿಗಳೇ ಆದರೂ ಅವೆರಡೂ ಕ್ರಿಯೆಗಳಲ್ಲ. ಪ್ರೀತಿಸಲ್ಪಡುವ ಮತ್ತು ಪ್ರೀತಿಸುವ ವ್ಯಕ್ತಿಗಳಿಬ್ಬರಲ್ಲಿ ಪರಸ್ಪರ ಪ್ರೇಮದ ಭಾವ ಇರುವುದರಿಂದ ಅದು ಕೇವಲ ಕ್ರಿಯೆಗಿಂತ ಹೆಚ್ಚಿನದಾಗುತ್ತದೆ.

ಹಾಗೆಯೇ ಭಕ್ತ, ಭಗವಂತ ಮತ್ತು ಭಕ್ತಿಗಳೆಂಬ ಮೂರು ಸಂಗತಿಗಳ ಸಂಗಮವಾದ ಪೂಜೆಯೂ ಬರಿಯ ಕ್ರಿಯೆಯಲ್ಲ. ಪೂಜಕ ಮತ್ತು ಪೂಜಿತವಾಗುವ ಸಂಗತಿಯ ನಡುವಿನ ಭಾವದ ಕಾರಣದಿಂದ ಅದು ಕೇವಲ ಕ್ರಿಯೆಯ ಹಂತಕ್ಕಿಂತ ಮೇಲಿನದಾಗುತ್ತದೆ. ಭಗವಾನ್ ಶ್ರೀಕೃಷ್ಣನಾದರೂ ಗೀತೆಯಲ್ಲಿ ‘ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ’ ಅನ್ನುವ ಅನುಜ್ಞೆಯನ್ನು ಭಕ್ತನಿಗೂ ಭಗವಂತನಿಗೂ ಕೊಡಿಸಿದ್ದಾನಷ್ಟೆ. ಈ ‘ಭಾವಿಸುವಿಕೆ‘ ಅನ್ನುವುದು ಭಕ್ತನಲ್ಲಿ ಮಾತ್ರ ಇರುವುದಲ್ಲ, ಬದಲಿಗೆ ಭಗವಂತನಿಗೂ ಅದು ಭಕ್ತನ ವಿಷಯದಲ್ಲಿ ಅಪೇಕ್ಷಿತವೂ, ಇಷ್ಟವೂ ಆಗಿದ್ದೆನ್ನುವುದು ಭಕ್ತಿಮಾರ್ಗದ ಪರಿಭಾಷೆ.

ಕೇವಲ ಭಗವಂತನ ವಿಷಯದಲ್ಲಿ ಮಾತ್ರವಲ್ಲ, ಯಾವೆಲ್ಲ ಕ್ರಿಯೆಯಲ್ಲಿ ಭಾವಶುದ್ಧತೆಯೆಂಬುದು ಮಿಳಿತವಾಗಿದೆಯೋ ಅವೆಲ್ಲವೂ ಪೂಜೆಯೇ ಆಗುತ್ತದೆ. ನಮ್ಮಲ್ಲಿ ಪೂಜೆ ಅನ್ನುವುದು ಕೇವಲ ಭಗವದರ್ಚನೆಗೆ ಮಾತ್ರವೇ ಸೀಮಿತವಾಗಿಲ್ಲವೆನ್ನುವುದನ್ನು ನೋಡುವಾಗ ಈ ಮಾತು ನಿಚ್ಚಳವಾಗುತ್ತದೆ. ಗಡಿ ಕಾಯುವ ಯೋಧನದ್ದಿರಬಹುದು, ಗುರುವಿನ ಕುರಿತಾದ ಶಿಷ್ಯನ ಭಾವವಿರಬಹುದು, ಪ್ರಕೃತಿಯ ಕುರಿತಾದ ಸಾಮಾನ್ಯ ಮನಸಿನದ್ದಿರಬಹುದು – ಇಲ್ಲೆಲ್ಲ ಪರಸ್ಪರತೆಯ ಭಾವವನ್ನೊಳಗೊಂಡ ಬರಿಯ ಕ್ರಿಯೆಗಿಂತ ಎತ್ತರದ್ದಾದ ಒಂದು ಸಂಗತಿಯಿದೆ. ಮಾತೃಪೂಜೆ, ದೇಶಭಕ್ತಿ, ಗುರುಪೂಜೆ, ಪ್ರಕೃತಿಯ ಅರ್ಚನೆ – ಇವೆಲ್ಲವೂ ನಮ್ಮ ವಿಶಾಲ ಸಂಸ್ಕೃತಿಯಲ್ಲಿ ಪ್ರಶ್ನೆಗೊಳಗಾಗದೇ ಸ್ವೀಕೃತವಾಗಿದ್ದನ್ನು ನಾವಿಲ್ಲಿ ನೆನೆಯಬಹುದು.

ದೇವನೆಂಬುದು ಒಂದು ಹೊಳಹು. ಅದು ಒಳಿತಿನ ಉಳಿವಿನ ಭರವಸೆ, ಜೀವದ ಮಾನಸಿಕ ಆಸರೆ. ಅದರ ಕುರಿತಾದ ಪ್ರೇಮವನ್ನು ಅಭಿವ್ಯಕ್ತಿಸುವುದಿದೆಯಲ್ಲ, ಅದುವೇ ಪೂಜೆ. ದೇವನೆಂಬ ಹೊಳಹನ್ನು ಭಕ್ತನು ತನ್ನ ಕಣ್ಮನಗಳ ಅರಿವಿಗೆ ನಿಲುಕುವ ಸಂಗತಿಯಾಗಿ ಕಲ್ಪಿಸಿಕೊಂಡುದರಿಂದಲೇ ನಮ್ಮಲ್ಲಿ ಅಸಂಖ್ಯ ವಿಧದ ಮೂರ್ತಿಗಳೂ, ದೇವನ ಸಂಕೇತಗಳೂ ಇವೆ. ಬದುಕಿನ ಭರವಸೆಯ ಹೊಳಹನ್ನು ತನಗೆ ಒಪ್ಪುವ ಮಾದರಿಯಲ್ಲಿ, ತನ್ನ ಕಣ್ಮನಗಳ ಸಾಮರ್ಥ್ಯದ ಮಿತಿಯಲ್ಲಿ ಕಟ್ಟಿಕೊಳ್ಳುವ ಸ್ವಾತಂತ್ರ್ಯವು ಭಕ್ತನಿಗಿದೆ.

ಮಾನವನು ತನ್ನ ಮಿದುಳಿಗೆ ಎಟುಕದ ಸಂಗತಿಯನ್ನು ಇದೀಗಲೇ ಎಟುಕುತ್ತಿರುವ ಸಂಗತಿಗಳ ಮೂಲಕ ಪಡೆಯಲು ಹವಣಿಸುತ್ತಾನೆ. ದೇವನ ಕುರಿತಾದ ಭಕ್ತನ ಹವಣೂ ಸಹ ಇದೇ ರೀತಿಯದ್ದು. ಪೂಜೆಯ ಸಂರಚನೆಯನ್ನು ನೋಡುವಾಗಲೂ ಈ ಮಾತು ನಿಜವೆನ್ನಿಸುತ್ತದೆ. ಪೀಠದಲ್ಲಿರುವ ದೇವತೆಯನ್ನು ಪೂಜಿಸುವ ಮುನ್ನ ಆ ದೇವತೆಯನ್ನಿರಿಸಲಾದ ಜಾಗದ ಶುದ್ಧಿ, ಆ ನೆಲದ ಪೂಜೆ, ತಾನು ಕುಳಿತ ಆಸನದ ಪೂಜೆ, ಪೂಜಾ ಪರಿಕರಗಳ ಪೂಜೆ, ಪೂಜೆಗೆ ಬಳಸುವ ನೀರಿನ ಪೂಜೆ, ದೇವನು ಕುಳಿತ ಪೀಠದ ಪೂಜೆ ಕೊನೆಗೆ ದೇವನನ್ನು ಪೂಜಿಸುವ ತಾನೆಂಬ ತನ್ನದೇ ಪೂಜೆ! ಇವೆಲ್ಲ ಹಂತಗಳನ್ನು ಮುಗಿಸಿದಮೇಲಷ್ಟೇ ಅವ್ಯಕ್ತದ ವ್ಯಕ್ತರೂಪವಾದ ಮೂರ್ತಿಪೂಜೆಯಷ್ಟೆ.

ಇಲ್ಲಿ ಭಕ್ತನಿಗೊಂದು ಎಚ್ಚರವಿದೆ ಅದೇನೆಂದರೆ ತಾನು ಕಾಣಲು ಬಯಸುತ್ತಿರುವ ಮೂರ್ತರೂಪವನ್ನು ಬಿಟ್ಟು ಉಳಿದ ರೂಪಗಳೂ ಆ ದೇವನಿಗೆ ಇದ್ದಿರಬಹುದು, ಮತ್ತು ಆ ರೂಪದಲ್ಲೊಂದು ರೂಪ ತಾನೂ ಆಗಿರುತ್ತೇನೆ ಅನ್ನುವುದು. ಅದಕ್ಕಾಗಿಯಲ್ಲವೇ ದೇವಪೂಜೆಗಿಂತ ಮುಂಚೆ ಆತ್ಮಾರ್ಚನೆ ಎಂಬುದು ನಮ್ಮಲ್ಲಿರುವುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT