ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್: ಸಮಾನತೆಯ ಸಂದೇಶ

ಮೇ 3ಕ್ಕೆ ಈದ್‌ ಉಲ್ ಫಿತ್ರ್
Last Updated 1 ಮೇ 2022, 19:31 IST
ಅಕ್ಷರ ಗಾತ್ರ

ರಂಜಾನ್ ಎಂದರೆ ಅರೇಬಿಕ್ ಭಾಷೆಯಲ್ಲಿ ಅಲ್-ರಮದ್ ಅಥವಾ ರಮದ ಅರ್ಥಾಥ್‌ ಶುಷ್ಕತೆ, ಶಾಖದ ತೀವ್ರತೆ ಅಥವಾ ದಿನಸಿಯ ದಾಸ್ತನಿನ ಕೊರತೆ ಎಂದು. ಕ್ರಿ.ಶ. 610ರಲ್ಲಿ ಜಿಬ್ರಾಯಿಲ್ ಎಂಬ ದೈವಚರರ ಮುಖೇನ ಪ್ರವಾದಿ ಮೊಹಮ್ಮದ್ (ಸ.ಅ)ರವರಿಗೆ ಪವಿತ್ರ ರಂಜಾನ್ ಮಾಸದ 27ನೇ ದಿನ, ಭಗವಂತನ ವಾಣಿಯು ಪವಿತ್ರ ಕುರಾನ್ ರೂಪದಲ್ಲಿ ಅವತೀರ್ಣಗೊಂಡ ಇಸ್ಲಾಂ ಧರ್ಮದ ಪುಣ್ಯದ ಒಂಬತ್ತನೇ ಮಾಸವೇ ರಂಜಾನ್ ತಿಂಗಳು. ಈ ಪವಿತ್ರ ತಿಂಗಳೆಲ್ಲ ಮುಸಲ್ಮಾನರು ಉಪವಾಸ, ಪ್ರಾರ್ಥನೆ, ದಾನ, ಧರ್ಮಗಳಿಗೆ ತಮ್ಮನ್ನು ಮೀಸಲಿಡುತ್ತಾರೆ. ಇದೇ ಪವಿತ್ರ ತಿಂಗಳನ್ನು ಲೈಲತುಲ್ ಖದ್ರ್ ಅಥವಾ ‘ಶಕ್ತಿಯುತ ರಾತ್ರಿ’ ಎಂದು ಕರೆಯಲು ಕಾರಣ ಆ ಪವಿತ್ರ ರಾತ್ರಿಯಲ್ಲೆ ಪವಿತ್ರ ಕುರಾನ್ ಅವತೀರ್ಣಗೊಂಡಿದ್ದರ ನಂಬಿಕೆ. ಉಪವಾಸವೆಂದರೆ ಬರೀ ದೈಹಿಕ ಹಸಿವು ಮಾತ್ರವಲ್ಲ, ಮಾನಸಿಕ ಹಸಿವನ್ನು ಹತೋಟಿಯಲ್ಲಿಡುವುದು ಅಷ್ಟೇ ಮುಖ್ಯ.

ಮಾನವನು ಆದಷ್ಟು ತನ್ನಲ್ಲಿರುವ ಕೆಟ್ಟತನಗಳನ್ನು ನಾಶಪಡಿಸಿ ಅವುಗಳು ಮತ್ತೆ ಹುಟ್ಟದಂತೆ ನಿಯಂತ್ರಿಸುವುದನ್ನು ಕಲಿಯಬೇಕು. ತಮ್ಮ ನಡತೆ, ನೋಟ, ಅಭ್ಯಾಸ, ಜೀವನ ಕ್ರಮ ಎಲ್ಲವನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯಬೇಕು. ಹಾಗೆಯೇ ಹಬ್ಬ ಮಾಡಲು ಆಗದ ಅಶಕ್ತರಿಗೆ ಫಿತ್ರದ ಮುಖೇನ ದಾನ ನೀಡಿ ಅವರು ಸಹ ಎಲ್ಲರಂತೆ ಹಬ್ಬ ಆಚರಿಸಲು ಸಹಕರಿಸಬೇಕು. ಇಸ್ಲಾಂ ಧರ್ಮದಲ್ಲಿ ಶ್ರೀಮಂತ, ಬಡವ ಎಂಬ ಭೇದವಿಲ್ಲ. ಭಗವಂತನ ಮುಂದೆ ಎಲ್ಲರೂ ಸಮಾನರು. ಶಕ್ತರು ಅಶಕ್ತರಿಗೆ ಸಹಕರಿಸಿ ಸಹಬಾಳ್ವೆ ನಡೆಸಬೇಕೆಂದು ಬೋಧಿಸುವುದೇ ಇಸ್ಲಾಂ ಧರ್ಮದ ಮೂಲತತ್ವ. ಆರ್ಥಿಕ ಸಮಾನತೆಯನ್ನು ಪ್ರತಿಯೊಬ್ಬರು ಪಾಲಿಬೇಕೆಂಬುದು ಇಸ್ಲಾಂ ಧರ್ಮದ ನಿಯಮ. ಪ್ರವಾದಿ(ಸ.ಅ)ರವರು ಹೇಳಿರುವುದು ‘ಈ ಸದ್ಖಾ ಎಂಬ ದಾನವು ಪಾಪದಂತೆ ಹರಡಿದ ಬೆಂಕಿಯನ್ನು ಆರಿಸಲು ಉಪಯೋಗಿಸಿದ ನೀರಿನಂತೆ’ ಅಂದಿದ್ದಾರೆ.

ರಂಜಾನ್ ಮಾಸದ ಕೊನೆಯ ಹತ್ತು ಮಹತ್ವದ ರಾತ್ರಿಗಳಲ್ಲಿ ಅನೇಕ ಬೇಡಿಕೆಗಳು ಈಡೇರುವುದೆಂಬ ನಂಬಿಕೆ. ಈ ರಾತ್ರಿಗಳಂದು ಸದ್ಖಾ, ಎಂದರೆ ಕೈಯಲ್ಲಾದ ದಾನವನ್ನು ಭಗವಂತನ ಮೇಲಿನ ಪ್ರೀತಿಯಿಂದ ನಿರ್ಗತಿಕರಿಗೆ ನೀಡುವುದು ಎಂದರ್ಥ. ಇಲ್ಲಿ ಮಾಡಿದ ಒಂದೊಂದು ಸತ್ಕಾರ್ಯವು 70 ಪುಣ್ಯಗಳಿಂದ ಗುಣಿಸಲ್ಪಡುತ್ತದೆ ಎಂಬ ನಂಬಿಕೆ. ಹಾಗೆ ಇಂದು ನಾವು ಮಾಡಿದ ಶುಭಕಾರ್ಯವು 83 ವರ್ಷಗಳ ಭಗವಂತನ ಪ್ರಾರ್ಥನೆಗೆ ಅಥವಾ ಆರಾಧನೆಗೆ ಸಮವೆಂದು ನಂಬಿಕೆ.

ಈ ಪವಿತ್ರ ಮಾಸದ 29ನೇ ಅಥವಾ 30ನೇ ದಿನ ಚಂದ್ರದರ್ಶನದೊಂದಿಗೆ ಆ ಪವಿತ್ರ ಮಾಸವು ಸಮಾಪ್ತಿಯಾದ ಸಂಭ್ರಮದಲ್ಲಿ ಕುತಬ್‌-ಎ-ರಂಜಾನ್ ಅಥವಾ ಈದುಲ್-ಫಿತ್ರ್ ಎಂದು ಆಚರಿಸಲಾಗುತ್ತದೆ. ಸಂಪೂರ್ಣ ತಿಂಗಳು ಆಚರಿಸಿದ ಉಪವಾಸ, ನಿರ್ಮಲ ಮನದ ಪ್ರಾರ್ಥನೆ, ಹಸಿದವರಿಗೆ ಊಟವಿತ್ತು, ನಿರ್ಗತಿಕರಿಗೆ ದಾನ ನೀಡಿ, ತಮ್ಮ ಕೈಯಲ್ಲಾದ ಸತ್ಕಾರ್ಯಗಳನ್ನು ಮಾಡಿದ ಆ ಪರಮ ಪಾವನ ತಿಂಗಳ ಸ್ಮರಣೆಯಲ್ಲಿ ಬದುಕಲುಳಿದ ದಿನಗಳಿಗೂ ಇಂತಹ ಶ್ರೇಯಸ್ಸನ್ನೇ ಅನುಗ್ರಹಿಸು ಎಂದು ಭಗವಂತನಲ್ಲಿ ಬೇಡುವ ಮಹಾನ್ ದಿನವೇ ಈದುಲ್ ಫಿತ್ರ್. ಈ ಪವಿತ್ರ ದಿನದಂದು ‘ಸರ್ವೇ ಜನಾಃ ಸುಖಿನೋ ಭವಂತುಃ’ ಎಂಬಂತೆ, ನಮ್ಮ ವಿಶ್ವದ ಎಲ್ಲಾ ಮಾನವರ ಆರೋಗ್ಯ, ಸುಖ, ಶಾಂತಿ, ಸೌಹಾರ್ದತೆಯ ಬದುಕಿಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆಗಳು ಈದ್ಗಾ ಅಥವಾ ಮಸೀದಿಗಳಲ್ಲಿ ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT