ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ನವಮದ ನಿಗ್ರಹಿ ನವದುರ್ಗೆ

Last Updated 23 ಅಕ್ಟೋಬರ್ 2020, 20:02 IST
ಅಕ್ಷರ ಗಾತ್ರ

ಮನುಷ್ಯ ಹುಟ್ಟಿದಾಗಲೇ ಮದ-ಮಾತ್ಸರ್ಯ ಹುಟ್ಟಿರಬೇಕು. ಹೀಗಾಗಿ ಮನುಷ್ಯ ಇರುವವರೆಗೂ ಅವು ಅವನೊಂದಿಗೆ ಬೆಸೆದುಕೊಂಡೇ ಇರುತ್ತವೆ. ಅವನತಿಗೆ ಇಳಿಜಾರಿನಂತಿರುವ ನವಮದಗಳನ್ನು ಮೈಗೂಡಿಸಿಕೊಂಡವರು ಯಾವತ್ತೂ ಉದ್ಧಾರವಾದ ಇತಿಹಾಸವೇ ಇಲ್ಲ. ರಾವಣನಿಗೆ ಇದ್ದ ಕಾಮದ ಮದ ಅವನನ್ನೇ ಸುಟ್ಟಿತು. ದುರ್ಯೋಧನನಿಗಿದ್ದ ಮಹಾಸೇನಾಮದ ಸುಡುಗಾಡಿಗೆ ತಳ್ಳಿತು. ಅಧಿಕಾರದ ಮದ ರಾಜ್ಯಗಳನ್ನೆ ಅಳಿಸಿ-ರಾಜರನ್ನೆ ಬಲಿಪಡೆಯಿತು. ಗೆದ್ದ ಮದದಲ್ಲಿ ಹೆಚ್ಚು ದಿನ ಮೆರೆದವರೂ ಇಲ್ಲ.

ಪುರಾಣ-ಇತಿಹಾಸಗಳು ಎಷ್ಟೇ ಬೋಧನೆ ಮಾಡಿದರೂ ಮನುಷ್ಯನ ಮದಗಳು ಮಾತ್ರ ಕಾಲದಿಂದ ಕಾಲಕ್ಕೆ ಹೆಚ್ಚಾಗುತ್ತಲೇ ಇವೆ. ಮನುಷ್ಯನ ಮದ-ಉನ್ಮತ್ತತೆಯಿಂದ ಲೋಕದಲ್ಲಿ ನೆಮ್ಮದಿ ಕಾಣದಾದಾಗ ಆದಿಶಕ್ತಿಯೇ ಅವತಾರ ಎತ್ತಿಬಂದಳು. ಅವಳ ಕೋಪ-ತಾಪಕ್ಕೆ ಉರಿದು ಬೂದಿಯಾದ ದುಷ್ಟ ಸಂಕುಲಗಳು ಅದೆಷ್ಟೋ? ಆದರೂ ದುಷ್ಟರ ಹುಟ್ಟು ಅಡಗಿಲ್ಲ. ‘ದಂಡಂ-ದಶಗುಣಂ’ ತತ್ವ ಆ ಮಾತೆ ಅನುಸರಿಸಿದ್ದಕ್ಕೆ ಹಿಂದಿನ ಜನ್ಮದ ದುರಂತ ಕಾರಣ ಇರಬಹುದು. ಸೌಮ್ಯಸ್ವಭಾವದ ಸತಿಯಾಗಿ ಜನಿಸಿದಾಗ, ಅಪ್ಪ ದಕ್ಷನ ದುರಹಂಕಾರದ ಮಾತು ಕೇಳಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿತ್ತು. ಆದರೆ ಪರ್ವತರಾಜನ ಮಗಳಾಗಿ ಜನಿಸಿದ ಪಾರ್ವತಿ ಚಂಡಿಯಾದಳು. ದುಷ್ಟರ ದುರಹಂಕಾರ ಮರ್ಧಿಸುವ ದುರ್ಗೆಯಾದಳು. ಅಬಲೆಯಾಗದೆ ಪ್ರಬಲೆಯಾಗಿ ಈ ಜಗತ್ತನ್ನು ಉದ್ಧರಿಸಿದಳು.

ಪರ್ವತರಾಜನಿಗೆ ಶೈಲಸುತೆಯಾಗಿ, ಶಿವನನ್ನು ವರಿಸಬೇಕೆಂಬ ಹಠದಿಂದ ಬ್ರಹ್ಮಚಾರಿಣಿಯಾಗಿ ತಪಸ್ಸು ಮಾಡಿದಳು. ಶಿವನ ಕೈಹಿಡಿದು ಚಂದ್ರನಂತೆ ಹೊಳೆವ ಸುಂದರ ಚಂದ್ರಘಂಟಾಳಾದಳು. ಜೀವಸಂಕುಲವಿಲ್ಲದೆ ಕಗ್ಗತ್ತಲಿನಿಂದ ಕೂಡಿದ್ದ ಬ್ರಹ್ಮಾಂಡದಲ್ಲಿ ಕೂಷ್ಮಾಂಡಿನಿಯಾಗಿ ಭೂಮಿ ಸೃಷ್ಟಿಸಿದಳು. ಆದರೆ ಅಲ್ಲಿ ತ್ರಿಪುರಂಥ ದುಷ್ಟರು ಹುಟ್ಟಿದರು. ಇವರನ್ನು ಸಂಹರಿಸಲು ಸುಬ್ರಹ್ಮಣ್ಯನಿಗೆ ಜನ್ಮಕೊಟ್ಟು ಸ್ಕಂದಮಾತೆಯಾದಳು. ಹೀಗಿದ್ದರೂ ದುಷ್ಟರು ಹುಟ್ಟುವುದು ಹೆಚ್ಚಾದಾಗ ಕಾತ್ಯಾಯನಋಷಿಯ ಮಗಳಾಗಿ ಮೊದಲ ಬಾರಿ ದುಷ್ಟಸಂಹಾರಕ್ಕೆ ತಾನೇ ಇಳಿದಳು. ಇಷ್ಟಾದರೂ ಬುದ್ಧಿ ಕಲಿಯದ ದುಷ್ಟಸಂತತಿ ಮತ್ತೆ ಬೆಳೆದಾಗ, ಕಾಳರಾತ್ರಿಯ ಭಯಂಕರ ಕಾಳಿಯ ರೂಪ ತಾಳಿ ಶಿಕ್ಷಿಸಿದಳು. ಶಿಷ್ಟರ ರಕ್ಷಿಸಿದ ಗಿರಿರಾಜನ ಮಗಳಾದ ಗೌರಿ, ತ್ರಿಮೂರ್ತಿಗಳಿಗೆ ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿದಳು. ತನ್ನ ನಂಬಿದ ಭಕ್ತರಿಗೆ ಆಧ್ಯಾತ್ಮಿಕ ಸಿರಿಯನ್ನು ಬೋಧಿಸಿ ಸಿದ್ಧಿಧಾತ್ರಿಯಾದಳು.

ಹೀಗೆ ಪಾರ್ವತಿ ತನ್ನ ಬದುಕಿನಲ್ಲಿ ಇಟ್ಟ ಒಂಬತ್ತು ಹೆಜ್ಜೆ ಗುರುತುಗಳನ್ನು ನವದುರ್ಗೆಯಂತೆ ನವರಾತ್ರಿಯಲ್ಲಿ ಆಚರಿಸುತ್ತೇವೆ. ಸಮಾಜದೊಳಗಿರುವ ದುಷ್ಟರು, ತಪ್ಪು ತಿದ್ದಿಕೊಂಡು ಸಜ್ಜನರಂತೆ ಬದುಕಲೆಂಬುದು ಆಚರಣೆಯ ಮೂಲ ಉದ್ದೇಶ. ಇಂಥ ಬೋಧಪೂರ್ಣ ಹಬ್ಬವನ್ನು ಮೋದಪ್ರಮಾದದಲ್ಲಿ ಕಳೆಯುತ್ತಿರುವುದು ವಿಪರ್ಯಾಸ. ಪುರಾಣಕಾಲದಲ್ಲಿದ್ದಂಥ ರಾಕ್ಷಸರೂಪಿ ದುಷ್ಟರು ಈಗ ಇಲ್ಲದಿರಬಹುದು. ಆದರೆ ಮನುಷ್ಯರೂಪದಲ್ಲೇ ರಾಕ್ಷಸೀಗುಣ ಬೆಳೆಸಿಕೊಂಡವರು ಈಗಲೂ ಇದ್ದಾರೆ. ಅಂಥವರಿಗೆ ದುರ್ಗಾಮಾತೆ ಬೋಧಪ್ರದವಾಗಿದ್ದಾಳೆ. ಕಾಲದಿಂದ ಕಾಲಕ್ಕೆ ಮನುಷ್ಯರಲ್ಲಿ ದಟ್ಟೈಸುವ ನವಮದ ನಿಗ್ರಹಿಸಲು ನವದುರ್ಗೆ ಸದಾ ಸನ್ನದ್ಧಳಾಗಿದ್ದಾಳೆ.

ದುಷ್ಟಸಂಹಾರಕ್ಕೆ ಸದಾಕಾಲ ದೇವರೇ ಅವತಾರ ಎತ್ತಿಬರಲು ಸಾಧ್ಯವಿಲ್ಲ. ನಾವೇ ಸಮಾಜದಲ್ಲಿ ದುಷ್ಟರು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಇದಕ್ಕಾಗಿಯೇ ನಮ್ಮ ಹಿರಿಯರು ನವರಾತ್ರಿಯಂಥ ಉತ್ಸವಗಳನ್ನು ಆಚರಣೆಗೆ ತಂದಿರುವುದು. ಹಬ್ಬಗಳು ಆಮೋದದಲ್ಲಿ ಮೆರೆಯುವ ಹಬ್ಬಗಳಲ್ಲ. ಅವು ಸದಾ ನಮ್ಮನ್ನು ದಾರಿತಪ್ಪದಂತೆ ಎಚ್ಚರಿಸುವ ಬೋಧಪ್ರದ ಹಬ್ಬಗಳು. ಮನುಷ್ಯರಲ್ಲಿ ಹುಟ್ಟುವ ಹಣದ ಮದ, ಅಧಿಕಾರಮದ, ಸೌಂದರ್ಯಮದ, ಯೌವನಮದ, ದೌರ್ಜನ್ಯಮದ, ಕಾಮಮದ, ಕೀರ್ತಿಮದ, ಶಕ್ತಿಮದ, ಯುಕ್ತಿಮದಗಳನ್ನು ನಿಗ್ರಹಿಸಿದರೆ ನಮ್ಮ ಬದುಕು ‘ಸಚ್ಚಿದಾನಂದ’
ದಾಯಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT