ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡುವುದೋ? ಬಿಡುವುದೋ?

Last Updated 1 ನವೆಂಬರ್ 2019, 19:30 IST
ಅಕ್ಷರ ಗಾತ್ರ

‘ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು’ ಎಂಬ ಮಾತು ಲೋಕಪ್ರಸಿದ್ಧ. ಮೌಲ್ಯಯುತ ಬದುಕಿನ ಮೂಲಸೂತ್ರಗಳಲ್ಲಿ ನಿಸ್ಸಂಶಯವಾಗಿ 'ದಾನ'ವೆಂಬ ಮೌಲ್ಯವೂ ಒಳಗೊಳ್ಳುತ್ತದೆ. ಆದರೆ ಆಚರಣೆಯಲ್ಲಿ ನಾವು ಈ ಮೌಲ್ಯವನ್ನು ಹೇಗೆ ಅರ್ಥೈಸಿಕೊಂಡು ರೂಢಿಸಿಕೊಂಡಿದ್ದೇವೆ? ಸುತ್ತಲೂ ಹಾಗೊಮ್ಮೆ ಕಣ್ಣುಹಾಯಿಸಿದರೂ ಸಾಕು, ಎಲ್ಲೆಲ್ಲೂ 'ತಾನು' ಮಾಡಿದೆ ಎನ್ನುವುದನ್ನು ಪ್ರದರ್ಶಿಸುತ್ತಾ, ಗುರುತಿಸಿಕೊಳ್ಳುವುದಕ್ಕಾಗಿಯೇ ಹಪಾಹಪಿಸುವ ಮನಃಸ್ಥಿತಿ ವ್ಯಾಪಕವಾಗಿ ಕಂಡುಬರುತ್ತದೆ. ಆದರ್ಶ ಮತ್ತು ಆಚರಣೆಗಳ ನಡುವೆ ಇಷ್ಟು ದೊಡ್ಡ ಕಂದರವಾದರೂ ಏಕೆ ಎಂಬ ಪ್ರಶ್ನೆಯಲ್ಲಿಯೇ 'ದಾನ'ವೆಂಬ ಮೌಲ್ಯದ ಮಹತ್ವವೂ ತಿಳಿದೀತು. ಅದು ಕೇವಲ 'ಕೊಡುವುದಷ್ಟೇ' ಅಲ್ಲ, ಅದನ್ನು ಮೀರಿದ ಮುಖ್ಯವಾದ ತತ್ತ್ವವೊಂದಿದೆ ಎಂಬುದಾಗಿ ಮನದಟ್ಟಾದೀತು. ಈ ಮೊದಲು ನೋಡಿದ ನಾಣ್ನುಡಿಯಲ್ಲಿಯೇ ಈ ತತ್ತ್ವದ ಸೂಚನೆಯಿದೆಯಷ್ಟೇ.

ಈವಂಗೆ ದೈವಂಗೆ ಆವುದಂತರವಯ್ಯ
ದೇವನು ಜಗಕೆ ಕೊಡುವನು
ಕೈಯ್ಯಾರೆ ಈವನೇ ದೇವ ಸರ್ವಜ್ಞ

ಈವನೇ ದೇವ – ಎನ್ನುವ ಸರ್ವಜ್ಞ, ಕೊಡುವಾತನಲ್ಲಿ ದೈವವನ್ನು ಕಾಣುತ್ತಾನೆ. ಆದರೆ, 'ಆಡದೆ ಕೊಡುವವನು ರೂಢಿಯೊಳಗುತ್ತಮನು' ಎನ್ನುತ್ತಾ ಅವನಿಗಿರಬೇಕಾದ ಮೂಲಗುಣವನ್ನೂ ಒತ್ತಿ ಹೇಳುತ್ತಾನೆ. ‘ಆಡದೆ ಕೊಡುವುದು’, ‘ಎಡಗೈಗೆ ತಿಳಿಯದಿರುವುದು’ – ಇವೆಲ್ಲವೂ ಸೂಚಿಸುವ ತತ್ತ್ವವಾದರೂ ಏನು? ತಾನು ‘ಕೊಟ್ಟೆ’ ಅಥವಾ ‘ಕೊಡಬಲ್ಲವನು’ ಎಂಬ ಭಾವವಿದ್ದಲ್ಲಿ ಆ ಕ್ರಿಯೆಗೆ ಒಂದಿನಿತೂ ಬೆಲೆಯಿಲ್ಲ. ಕ್ರಿಯೆಯ ಸ್ವಾಮ್ಯ ತನ್ನದಲ್ಲ ಎಂಬ ಭಾವ ಮೂಡುವುದಾದರೂ ಹೇಗೆ? ಈಶಾವಾಸ್ಯದ 'ತ್ಯಕ್ತೇನ ಭುಂಜೀಥಾ' ಎನ್ನುವ ಮಾತಿನ ಬೆಳಕು ನಮಗಿಲ್ಲಿ ದಾರಿದೀಪವಾದೀತು. ಜಗತ್ತೆಲ್ಲವೂ ‘ಈಶಾವಾಸ್ಯಮ್’ ಎನ್ನುವ ಸತ್ಯದ ಅರಿವು ಸದಾ ಇದ್ದಲ್ಲಿ, ನನ್ನದಾದರೂ ಏನು ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುವಂಥದ್ದೇ. ಹಾಗಾಗಿ, ಇಲ್ಲಿ ಪಡೆದುಕೊಳ್ಳುವುದಾದರೂ ‘ಬಿಡುವುದರ’ ಮೂಲಕವೇ. ಹೀಗೆ ದಾನ ಎಂಬ ಮೌಲ್ಯದ ಅನುಸಂಧಾನ ‘ಬಿಡುವಿಕೆ’ಯ ಮೂಲಕವೇ. ಬೌದ್ಧರಲ್ಲಿಯೂ ಬೋಧಿಸತ್ವವನ್ನು ತಲುಪುವುದರಲ್ಲಿ ‘ದಾನಪಾರಮಿತ’ದ ಪಾತ್ರ ಮುಖ್ಯವಾದ್ದು. ಶಿಬಿ, ದಧೀಚಿ ಮೊದಲಾದವರೂ ಈ ಮೌಲ್ಯದ ಮೂರ್ತರೂಪಗಳೇ.

ದೀಪಾವಳಿಯ ಕಡೆಯ ದಿನ ಬಲಿಪಾಡ್ಯಮಿಯು ‘ದಾನದ’ ಕುರಿತಾಗಿ ಸಾರುವ ಸಂದೇಶ ಬೋಧಪ್ರದವಾದ್ದು.

ಭಗವಂತ ವಾಮನನ ವೇಷಧಾರಿಯಾಗಿ ವಟುವಿನ ರೂಪದಲ್ಲಿ ಬಂದು ಬಲಿಚಕ್ರವರ್ತಿಯಲ್ಲಿ ಭಿಕ್ಷೆ ಬೇಡುತ್ತಾನೆ. ಸರ್ವಲೋಕಗಳನ್ನೂ ಜಯಿಸಿ ತನ್ನ ಆಳ್ವಿಕೆಯಲ್ಲಿರಿಸಿಕೊಂಡಿದ್ದ ಬಲಿಚಕ್ರವರ್ತಿಗೆ ಒಬ್ಬ ವಟುವಿಗೆ ಕೊಡಲಾದದ್ದರೂ ಏನಿದ್ದೀತು? ವಾಮನನಿಗೆ ‘ಏನು ಬೇಕಾದರೂ ಕೇಳು’ ಎಂಬ ಅಪ್ಪಣೆಯಾಗುತ್ತದೆ. ವಾಮನ ‘ನನ್ನ ಮೂರು ಹೆಜ್ಜೆಗಳು ಕ್ರಮಿಸುವಷ್ಟು ಭೂಭಾಗವನ್ನು ಕೊಡು ಸಾಕು’ ಎನ್ನುತ್ತಾನೆ. ಈ ಬಾಲಿಶವಾದ ಬೇಡಿಕೆಯಿಂದ ಚೋದಿತನಾದ ಬಲಿ, 'ಬಾಲಕನೇ, ಮೂರುಲೋಕದ ಒಡೆಯ ನಾನು, ನನ್ನ ಬಳಿ ಮೂರು ಹೆಜ್ಜೆಯ ಭೂಭಾಗವನ್ನಷ್ಟೇ ಕೇಳುವುದೇ? ನಿನ್ನ ಬುದ್ಧಿಗೆ ಏನು ಹೇಳುವುದು. ಏನು ಇಚ್ಛೆ ಇದೆಯೋ ಅದನ್ನು ಬೇಡುವಂತವನಾಗು’ ಎಂದು ಪುನಃ ಬಾಲಕನಿಗೆ ತಿಳಿಸುತ್ತಾನೆ.

ಈ ಹಂತದಲ್ಲಿ ಭಗವಂತ ಹೇಳುವ ಮಾತು ಮುಖ್ಯವಾದ್ದು.‘ತಿಳಿದವನು (ಜ್ಞಾನಿ) ತನ್ನ ಅಗತ್ಯಕ್ಕಿಂತ ಹೆಚ್ಚಿನದ್ದನ್ನು ಬೇಡುವುದಿಲ್ಲ (ಬೇಡಕೂಡದು). ಇಂದ್ರಿಯ ನಿಗ್ರಹವಿಲ್ಲದವನಿಗೆ ಒಂದು ದ್ವೀಪವೇನು, ಸಪ್ತದ್ವೀಪಗಳನ್ನು ಕೊಟ್ಟರೂ ಸಾಲದಷ್ಟೇ!’

ಮೂರು ಹೆಜ್ಜೆಗಳಿಂದ ತೃಪ್ತನಾಗದವನಿಗೆ, ಸಪ್ತದ್ವೀಪಗಳು ಕೊಟ್ಟರೂ ಅಷ್ಟೇ. ದಾನ ತೆಗೆದುಕೊಳ್ಳುವವನಲ್ಲಿ ಇರಬೇಕಾದ ಗುಣವನ್ನು ಭಗವಂತನು ಪ್ರಕಟಿಸುತ್ತಾ ಅದಕ್ಕೆ ಸಂವಾದಿಯಾಗಿ 'ದಾನಿ'ಯಲ್ಲಿ ಇರಬೇಕಾದ ಗುಣವನ್ನೂ ಸೂಚಿಸುತ್ತಿದ್ದಾನೆಯಷ್ಟೇ. ಈ ಸೂಚನೆಯನ್ನು ಗ್ರಹಿಸದ ಬಲಿ, ಪುನಃ ತನ್ನ ಸಮೃದ್ಧಿಯ ಮೇಲ್ಮೆಯನ್ನು ಪ್ರದರ್ಶಿಸುತ್ತಾ ಹೆಚ್ಚೆಚ್ಚು ಕೇಳಲು ವಿಜ್ಞಾಪಿಸುತ್ತಾನೆ. ಈ ಹಂತದಲ್ಲಿ ಶುಕ್ರಾಚಾರ್ಯನ ಎಚ್ಚರಿಕೆಯ ಮಾತನ್ನೂ ಕೇಳದೆ ಅವನಿಂದಲೂ ಶಪಿತನಾಗಿ ಕಡೆಗೆ ವಟುವಿನ ವಿರಾಟ್ ಸ್ವರೂಪದ ಮುಂದೆ ತಾನು ಕುಬ್ಜನಾಗುತ್ತಾನೆ. ಕೊಡುವಿಕೆಯ ಹಮ್ಮು ಹರಿಯುತ್ತದೆ. ನಿಜಾರ್ಥದಲ್ಲಿ 'ಬಿಡುವುದಕ್ಕೆ' ತಯಾರಾಗುತ್ತಾನೆ. ಮೂರನೇ ಹೆಜ್ಜೆಯನ್ನು ತನ್ನ ತಲೆಯಮೇಲೆಯೇ ಇರಿಸಿಕೊಂಡು ಕೃತಾರ್ಥನಾಗುತ್ತಾನೆ.

'ಕೊಡುವಿಕೆಯ' ಅಹಂಮಿಕೆಯನ್ನು ದಾನವತ್ವಕ್ಕೆ ಸಮೀಕರಿಸಿ ಅದರ ದಮನಕ್ಕೆ ಭಗವಂತ ಅವತಾರವನ್ನೇ ತಾಳಬೇಕಾಯಿತೆಂದರೆ, ನಮ್ಮ ಪರಂಪರೆ ಈ ತತ್ತ್ವಕ್ಕೆ ಕೊಟ್ಟಿರುವ ಪ್ರಾಮುಖ್ಯವನ್ನು ಮನಗಾಣಬಹುದು.

ಬೃಹದಾರಣ್ಯಕೋಪನಿಷತ್ತಿನ ದಮಾದಿಗಳ ಉಪದೇಶ ಕೂಡ ಇಲ್ಲಿ ಪ್ರಸ್ತುತವಾದ್ದು. ತಪಸ್ಸಿನ ಬಲದಿಂದ ಉಪದೇಶವನ್ನು ಸ್ವೀಕರಿಸಲು ಅರ್ಹರಾಗಿದ್ದ ದೇವತೆಗಳು, ಮನುಷ್ಯರು ಮತ್ತು ದಾನವರನ್ನು ಉದ್ದೇಶಿಸಿ ಪ್ರಜಾಪತಿ ಬ್ರಹ್ಮ ಕೊಟ್ಟ ಉಪದೇಶ ‘ದಮ, ದಾನ, ದಯೆ’. ಮನುಷ್ಯನ ಸಹಜವಾದ ಗುಣವಾದ ಸಂಗ್ರಹ ಬುದ್ಧಿಗೆ ಮದ್ದಾಗಿ 'ದಾನ'ವೆಂಬ ಅನುಷ್ಠಾನದ ಮಾರ್ಗವನ್ನು ತೋರುವುದು ಉಪನಿಷತ್ತು. ಹಾಗಾಗಿ, 'ಕೊಡುವ' ಪ್ರಕ್ರಿಯೆ ನಿಮಿತ್ತವಷ್ಟೇ, ನಿಜವಾದ ಗುರಿಯಾದರೋ 'ಬಿಡುವಿಕೆಯ' ಮೂಲಕ 'ಪಡೆದುಕೊಳ್ಳುವುದೇ' ಆಗಿದೆ. ಈ ಮೌಲ್ಯದ ಅನುಸಂಧಾನ ಮಾಡಿಕೊಳ್ಳುವುದಕ್ಕೆ 'ತ್ಯಕ್ತೇನ ಭುಂಜೀಥಾ' ಎನ್ನುವ ಋಷಿವಾಣಿಯೇ ಆಧಾರಶ್ರುತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT