ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಮನೋನಿಗ್ರಹಿ ವಿಶ್ವ ಗೆಲ್ಲಬಲ್ಲ

ಅಕ್ಷರ ಗಾತ್ರ

ಮನಸ್ಸು ನಮ್ಮ ಬುದ್ಧಿಶಕ್ತಿಯ ಕೇಂದ್ರಬಿಂದು. ನಮ್ಮ ದೇಹದೊಳಗೆ ಮನಸ್ಸು ಎಲ್ಲಿದೆ ಅಂತ ಹುಡುಕುವುದಕ್ಕೆ ಸಾಧ್ಯವಿಲ್ಲ. ಇದು ಭಗವಂ ತನಂತೆ ಸರ್ವಾಂತರ್ಯಾಮಿ. ಯಾರ ಕಣ್ಣಿಗೂ ಕಾಣುವುದಿಲ್ಲ. ಯಾರ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಸದ್ಯಕ್ಕೆ ನಮ್ಮ ಮನಸ್ಸು ಮೆದುಳಿನಲ್ಲಿದೆ ಅಂತ ಭಾವಿಸಿದ್ದೇವೆ. ಮೆದುಳಿನ ಮಸ್ತಿಷ್ಕದಲ್ಲಿರುವ ನೆನಪುಗಳ ಶಕ್ತಿಯೇ ಬುದ್ಧಿಯ ತಾಣ ಅಂತ ಗುರುತಿಸಿದ್ದೇವೆ.

ಬುದ್ಧಿಶಕ್ತಿಯ ಚಾಲನೆಯಿಂದ ಮನಸ್ಸಿನ ಪರದೆ ಮೂಡಿ, ಅದರ ಮೇಲೆ ಚಿತ್ರಣಗಳು ಬರುತ್ತೆ ಅಂತ ಊಹಿಸಿ ದ್ದೇವೆ. ನನ್ನ ದೃಷ್ಟಿಯಲ್ಲಿ ವಿದ್ಯುತ್ ಶಕ್ತಿ ಮತ್ತು ಬುದ್ಧಿಶಕ್ತಿ ಭಿನ್ನವಲ್ಲ. ಯಂತ್ರ ಚಾಲನೆಗೆ ವಿದ್ಯುತ್ ಶಕ್ತಿ ಬೇಕಾದಂತೆಯೇ, ನಮ್ಮ ದೇಹದ ಚಲನೆಗೂ ಬುದ್ಧಿ ಶಕ್ತಿ ಬೇಕು. ಬುದ್ಧಿಶಕ್ತಿ ಮತ್ತು ವಿದ್ಯುತ್‍ಶಕ್ತಿ ಎರಡೂ ಅಸದೃಶ ಶಕ್ತಿಗಳು. ಇವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಉಪಯೋಗವಾಗುತ್ತದೆ. ತಪ್ಪಾಗಿ ಬಳಸಿದರೆ ಮಾರಕವಾಗುತ್ತೆ.

ಮಾನವನನ್ನು ಭಗವಂತ ಸೃಷ್ಟಿಸಿದರೆ, ಯಂತ್ರಗಳನ್ನು ಮಾನವ ಸೃಷ್ಟಿಸಿ ದ್ದಾನೆ. ಮಾನವನ ನಿಯಂತ್ರಿಸುವ ಶಕ್ತಿ ಭಗವಂತನಿಗಿದ್ದರೆ, ಯಂತ್ರ ಗಳನ್ನು ನಿಯಂತ್ರಿಸುವ ಯುಕ್ತಿ ಮಾನವನಿಗಿದೆ. ಸದ್ಯಕ್ಕೆ ಭಗವಂತ ಮಾನವನ ನಿಯಂತ್ರಿಸುವ ಯೋಚನೆ ಕೈ ಬಿಟ್ಟಿದ್ದಾನೆ. ಬುದ್ಧಿಶಕ್ತಿಯನ್ನು ನಿಯಂತ್ರಿ ಸುವ ಮನಸ್ಸೆಂಬ ರಿಮೋಟ್‍ನ್ನು ಮಾನವರ ಕೈಗೆ ಕೊಟ್ಟು ಪರೀಕ್ಷಿಸುತ್ತಿದ್ದಾನೆ. ಮಾನವರು ಈ ರಿಮೋಟನ್ನು ಪ್ರಯೋಗಿಸುವಾಗ ಸಂಪೂರ್ಣ ಯೋಚಿಸ ಬೇಕು. ತಪ್ಪಾಗಿ ಪ್ರಯೋಗಿಸಿದರೆ ಅಪಾಯ ತಪ್ಪಿದ್ದಲ್ಲ. ಯಂತ್ರವನ್ನು ಸದುಪ ಯೋಗಕ್ಕೆ ಮಾತ್ರ ಚಾಲನೆ ಮಾಡಬೇಕು. ದುರುಪಯೋಗಕ್ಕೆ ಮಾಡಿದರೆ, ಅದರ ದುಷ್ಪರಿಣಾಮವನ್ನ ನಾವೇ ಎದುರಿಸಬೇಕಾಗುತ್ತದೆ. ಸುಮ್ಮನೆ ಯಂತ್ರಚಾಲನೆ ಮಾಡಿದರೆ ಹೇಗೆ ವಿದ್ಯುತ್‍ಶಕ್ತಿ ವ್ಯಯವಾಗುತ್ತದೋ, ಹಾಗೆ ವ್ಯರ್ಥವಾದ ಆಲೋಚನೆಯಿಂದ ಬುದ್ಧಿಶಕ್ತಿ ನಷ್ಟವಾಗುತ್ತದೆ. ಇದಕ್ಕಾಗಿ ನಮ್ಮ ಬುದ್ಧಶಕ್ತಿಯನ್ನು ಸದ್ವಿಚಾರಗಳತ್ತ ಹರಿಸಬೇಕು. ದುರ್ವಿಚಾರಗಳತ್ತ ಹರಿಸಿದರೆ, ಅದರ ಪಾಪದ ಫಲವನ್ನು ನಾವೇ ಅನುಭವಿಸಬೇಕಾಗುತ್ತದೆ.

ಭಗವಂತ ಸೃಷ್ಟಿಸಿರುವ ಈ ಭೂಲೋಕ ಸಾಮಾನ್ಯವಾದುದಲ್ಲ. ನೂರಾರು ಕಲ್ಪಗಳ ನಂತರ ಭಗವಂತ ಯೋಚಿಸಿ-ಯೋಜಿಸಿ ಸೃಷ್ಟಿಸಿರುವ ಭೂಮಂಡಲ. ಇದರ ಮುಂದಾಳುತನವನ್ನ ಮಾತ್ರ ಮನುಷ್ಯರಿಗೆ ಕೊಟ್ಟಿದ್ದಾನೆ, ಒಡೆತನವನ್ನಲ್ಲ. ಮೂಲ ಭೂಮಾಲಿಕ ಭಗವಂತನೇ ಹೊರತು, ಮನುಷ್ಯನಲ್ಲ. ಭೂಲೋಕವನ್ನು ಉತ್ತಮವಾಗಿ ಮುನ್ನಡೆಸಲೆಂದು ಮನುಷ್ಯನ ಬುದ್ಧಿಗೆ ಮನಸ್ಸೆಂಬ ಸ್ವಯಂನಿಯಂತ್ರಣ ಶಕ್ತಿಯನ್ನ ಕೊಟ್ಟಿದ್ದಾನೆ. ಮನುಷ್ಯನ ನಿದ್ರೆಯಲ್ಲೇ ರೀಚಾರ್ಜ್ ಆಗುವ ಮನಸ್ಸು, ಬುದ್ಧಿಗಲ್ಲದೆ ದೇಹಕ್ಕೂ ಶಕ್ತಿ ತುಂಬುತ್ತಿದೆ. ಇಂಥ ಅಗಾಧವಾದ ಮಾನಸಿಕ ಶಕ್ತಿಯನ್ನು ನಿಯಂತ್ರಿಸುವುದು ಸುಲಭವಲ್ಲ. ಇದೊಂದು ರೀತಿ ಲಂಗುಲಗಾಮಿಲ್ಲದ ಹುಚ್ಚು ಕುದುರೆ. ಸದಾ ಆಸೆಯ ಬೆನ್ನತ್ತುವುದೇ ಅದರ ಹುಟ್ಟುಗುಣ. ಸದಾಕಾಲ ಚಡಪಡಿಸುವ ಈ ಮನಸ್ಸನ್ನು ನಿಯಂತ್ರಿಸಲು ನಮ್ಮೊಳಗೆ ಒಂದು ನಿಯಂತ್ರಣ ಶಕ್ತಿಯನ್ನು ಸ್ಥಾಪಿಸಿಕೊಳ್ಳಬೇಕು. ಅದೇ ಯೋಗ ಮತ್ತು ಧ್ಯಾನ. ಇಲ್ಲದಿದ್ದರೆ, ಮನಸಿನ ಹುಚ್ಚು ಓಟಕ್ಕೆ ನಮ್ಮ ಜೀವ ಮತ್ತು ಜೀವನ ಎರಡೂ ಬಲಿಯಾಗಬೇಕಾಗುತ್ತದೆ.

ಮನುಷ್ಯನನ್ನು ಉದ್ಧರಿಸುವ ಮತ್ತು ಮುಗ್ಗರಿಸುವ ಎರಡೂ ಗುಣ ಮನಸ್ಸಿಗಿದೆ. ಇದಕ್ಕೆ ಸದ್ವಿಚಾರಗಳನ್ನು ತುಂಬಿದರೆ, ಒಳ್ಳೆಯ ಕೆಲಸದತ್ತ ಗಮನ ಹರಿಸುತ್ತದೆ. ದುರ್ವಿಚಾರಗಳನ್ನು ಮಾಡಿದರೆ ಅದು ರೋಗಗ್ರಸ್ತವಾಗಿ ಕೆಟ್ಟದರತ್ತ ಯೋಚಿಸುತ್ತದೆ. ಆದ್ದರಿಂದ ಯೋಗದಿಂದ ದೇಹ ದಂಡಿಸಿದಂತೆ, ಧ್ಯಾನದಿಂದ ಮನಸ್ಸನ್ನು ನಿಯಂತ್ರಿಸಬೇಕು. ಸದಾ ಸದ್ಗುರುಗಳ ಉಪದೇಶಾಮೃತ ಕೇಳುತ್ತಾ, ಸತ್ಸಂಗದವರೊಂದಿಗೆ ಒಡನಾಡುತ್ತಿರಬೇಕು. ಆಗ ನಮ್ಮ ಮನಸ್ಸು ಕೆಟ್ಟದರತ್ತ ಚಂಚಲಿತವಾಗದೆ ಒಳ್ಳೆಯ ಮಾರ್ಗದತ್ತ ನಡೆಯುತ್ತದೆ. ಹೀಗೆ ಮನಸ್ಸನ್ನು ನಿಗ್ರಹಿಸಿದವರು ವಿಶ್ವವನ್ನೇ ಗೆಲ್ಲಬಲ್ಲರು, ಜನರ ವಿಶ್ವಾಸವನ್ನೂ ಗೆಲ್ಲಬಲ್ಲರು. ಇಂಥ ಮನೋನಿಗ್ರಹಿಗಳೇ ‘ಸಚ್ಚಿದಾನಂದ’ ಸತ್ಸಂಗದಲ್ಲಿ ಸುಖವಾಗಿರಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT