ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲ್ಲುಲಿಗೋ.. ಸಲಾಂಭ್ರಿಗೋ!

ಸೀಗೆ ಹುಣ್ಣಿಮೆಯ ಸಂಭ್ರಮ
ಶಿವಾನಂದ ಎನ್. ದೊಡ್ಡಮನಿ
Published 28 ಅಕ್ಟೋಬರ್ 2023, 1:26 IST
Last Updated 28 ಅಕ್ಟೋಬರ್ 2023, 1:26 IST
ಅಕ್ಷರ ಗಾತ್ರ

ಭೂತಾಯಿ ಹಸಿರುಟ್ಟು ಹುಲುಸಾದ ಫಸಲು ತುಂಬಿಕೊಂಡು ಕಂಗೊಳಿಸುತ್ತಿರುವಾಗ ಆ ಫಸಲಿಗೆ ಸೀರೆಯುಡಿಸಿ ಉಡಿ ಕಟ್ಟಿ, ಕುಪ್ಪುಸ ತೊಡಿಸಿ, ಪೂಜಿಸಿ ಆರಾಧಿಸುವ ರೈತ ಸಮೂಹ ಪಂಚ ಪಾಂಡವರ ದ್ಯೋತಕವಾಗಿ ಜಮೀನಲ್ಲಿ 5 ಕಲ್ಲುಗಳನ್ನಿರಿಸಿ ಪೂಜೆ ಸಲ್ಲಿಸುತ್ತಾರೆ. ಇದನ್ನೇ ಭೂಮಿ ಪೂಜೆ, ಶೀಗೆ ಹುಣ್ಣಿಮೆ ಎಂದು ಸಂಭ್ರಮಿಸುವರು. ಹೊಲದ ನಾಲ್ಕು ಸುತ್ತ ಚೆರಗ ಚೆಲ್ಲುವಾಗ ಮುಂದೆ ಒಬ್ಬರು ನೀರನ್ನು ಸಿಂಪಡಿ ಹುಲ್ಲುಲಗೋ ಅಂತ ಕೂಗ್ತಾರೆ. ಆವಾಗ್ಲೇ ಹಿಂದಿನಿಂದ ಇಬ್ರು ಸಲಾಂಭ್ರಿಗೋ ಎಂದು ಹೊಲದಲ್ಲೆಲ್ಲ ಚರಗ ಚೆಲ್ಲುವ ಪದ್ಧತಿ ಇದೆ.

ಉತ್ತರ ಕರ್ನಾಟಕದ ಸುತ್ತಲಿನ ಹಲವು ಗ್ರಾಮಗಳಲ್ಲಿ ಸೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿಗಳೊಂದಿಗೆ ಸಾಂಪ್ರದಾಯಿಕವಾಗಿ ನಮ್ಮ ಜನಪದರು ಹಾಕಿಕೊಟ್ಟ ಮಾರ್ಗದಲ್ಲಿ ಆಚರಿಸುತ್ತ ಬಂದಿದ್ದಾರೆ. ರೈತರು ಖುಷಿ ಖುಷಿಯಿಂದಲೇ ಭೂದೇವಿಯ ಆರಾಧನೆಯಲ್ಲಿ ನಿರತವಾಗುವುದನ್ನು ಆ ದಿನ ವಿಶೇಷವಾಗಿ ಗಮನ ಸೆಳೆಯುವುದನ್ನು ಕಾಣಬಹುದು.

ಈ ದಿನ ವಿಶೇಷವಾಗಿ ರೈತರ ಶಕ್ತಿಯಾಗಿರುವ ಬಸವಣ್ಣನೆಂದು ನಂಬಿರುವ ಎತ್ತುಗಳನ್ನು ಮೈತೊಳೆದು ಸಿಂಗರಿಸಿ ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರ ಜೊತೆಗೆ ತಮ್ಮ ಕೃಷಿ ಭೂಮಿಗೆ ತೆರಳಿದ ರೈತರು ಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸಿ, ಧನ್ಯತಾ ಭಾವದಲ್ಲಿ ತೇಲುವ ಶುಭದಿನವಾಗಿದೆ.

ರೈತ ಸಮೂಹ ಅಲ್ಲಿ ಹೊಲದಲ್ಲಿಯೇ ಸಿಗುವ ಗುಂಡು ಕಲ್ಲುಗಳಿಂದ ಪಾಂಡವರ ಮೂರ್ತಿ ನಿರ್ಮಿಸಿ ಅವುಗಳಿಗೂ ಪೂಜೆ ಸಲ್ಲಿಸಿ ಕುಟುಂಬದ ಯಜಮಾನ ಫಸಲಿಗೆ ಅರ್ಪಿಸಿರುವ ಎಡೆ (ಊಟ) ಸೇವಿಸುವ ಪದ್ಧತಿಯಿದೆ. ಎಡೆ ಸ್ವೀಕರಿಸುವ ಸಂದರ್ಭದಲ್ಲಿಯಾರೊಂದಿಗೂ ಮಾತನಾಡದೇ ಮೌನವಾಗಿ ಅತ್ಯಂತ ಶ್ರದ್ಧೆಯಿಂದ ಪ್ರಸಾದ ಸ್ವೀಕರಿಸಿದರೆ ಮುಂದಿನ ವರ್ಷದವರೆಗೆ ಯಾವುದೇ ತಾಪತ್ರಯ ಇಲ್ಲದಂತೆ ಫಸಲು ಕೈಹಿಡಿಯಲಿದೆ ಎನ್ನುವ ನಂಬಿಕೆಯೂ ಇದೆ.

ಸೀಗೆ ಹುಣ್ಣಿಮೆಯ ಸಡಗರಕ್ಕಾಗಿಯೇ ಈ ಭಾಗದಲ್ಲಿ ಹತ್ತಾರು ತರಾವರಿ ಹಬ್ಬದಡುಗೆ ಸಿದ್ಧಗೊಳ್ಳುತ್ತವೆ ಕಡುಬು, ಖರ್ಚಿಕಾಯಿ, ಹೋಳಿಗೆ, ಎಣ್ಣೆ ಹೋಳಿಗೆ, ಎಣಗಾಯಿ ಪಲ್ಯೆ, ಮಡಕಿಕಾಳು, ಹೆಸರು ಪಲ್ಯೆ, ವಿಧವಿಧದ ಬುತ್ತಿ ಹೀಗೆ ಹಲವಾರು ಪದಾರ್ಥಗಳನ್ನು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜತೆಗೂಡಿ ಸಹಭೋಜನದಲ್ಲಿ ತೊಡಗಿ ರೈತರು ಸೀಗೆ ಹುಣ್ಣಿಮೆಯ ಅರ್ಥಪೂರ್ಣ ಆಚರಣೆ ಮಾಡುವುದನ್ನು ಕಾಣುತ್ತೇವೆ.

ಮನೆಗಳಿಗೆ ಮರಳುವ ಸಂದರ್ಭದಲ್ಲಿ ಸ್ವಲ್ಪ ಫಸಲು ಕೊಯ್ದು ಮನೆಗೆ ತಂದು ಪೂಜೆ ಸಲ್ಲಿಸಲಾಗುವುದು. ಮುಂದೆ ಫಸಲಿನ ರಾಶಿಯಲ್ಲಿ ಅದನ್ನು ಇಟ್ಟರೆ ಮತ್ತಷ್ಟು ಸಮೃದ್ಧವಾಗಲಿದೆ ಎನ್ನುವ ಭಾವನೆ ಇದೆ. ಒಟ್ಟಾರೆ ಭೂತಾಯಿಯ ಆರಾಧನೆಗೆ ಮೀಸಲಿರುವ ಸೀಗೆ ಹುಣ್ಣಿಮೆ ಈ ಪ್ರದೇಶದಲ್ಲಿ ಅತ್ಯಂತ ಶ್ರದ್ಧೆಯಿಂದ ಮಾಡಲಾಗುತ್ತದೆ.

ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತಾಪಿ ಜನವರ್ಗ ಈ ಹಬ್ಬದಂದು ಮನೆಗಳಲ್ಲಿ ವಿವಿಧ ಬಗೆಯ ಕಾಳು ಕುದಿಸಿ, ಸಿಹಿ ತಿನಿಸುಗಳನ್ನು ಮಾಡಿ ಅವುಗಳನ್ನು ಹೊಲದ ಸುತ್ತಲೂ ಚರಗದ ರೂಪದಲ್ಲಿ ಚೆಲ್ಲುವುದರಿಂದ ಫಸಲು ಸಮೃದ್ಧವಾಗಲಿದೆ ಎನ್ನುವ ನಂಬಿಕೆಯ ಜೊತೆಗೆ ಹಕ್ಕಿ ಪಕ್ಷಿಗಳು ಅವನ್ನು ತಿನ್ನಲು ಬಂದು ಫಸಲಿಗೆ ಮುತ್ತಿರುವ ಕ್ರಿಮಿಕೀಟಗಳನ್ನು ತಿನ್ನುತ್ತವೆ ಎಂಬ ವೈಜ್ಞಾನಿಕ ತಿಳಿವಳಿಕೆಯೂ ನಮ್ಮ ಜನಪದರಿಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT