ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ: ಬಾಳಿನ ಸಂತಸದ ವಸಂತ

Last Updated 21 ಮಾರ್ಚ್ 2023, 21:54 IST
ಅಕ್ಷರ ಗಾತ್ರ

ಕಾಲ ಎನ್ನುವುದು ಅಖಂಡವಾದ ತತ್ತ್ವ; ನಿರಂತರವಾಗಿರುತ್ತದೆ ಅದರ ಹರಿವು. ಅದು ಸತತವಾಗಿ ಹರಿಯುತ್ತಿದ್ದರೂ ಅದರಲ್ಲಿ ಹೊಸತನಕ್ಕೇನೂ ಕೊರತೆಯಿಲ್ಲ. ಹೀಗೆ ಕಾಲದ ಅನಂತಗುಣ ಮತ್ತು ನೂತನ ಸ್ವಭಾವಗಳ ಸಂಗಮವನ್ನೇ ನಾವು ಯುಗಾದಿಯ ಆಚರಣೆಯಲ್ಲಿ ಕಾಣುವುದು.

ಯುಗಾದಿ ಎಂದರೆ ಯುಗದ ಆದಿ; ಸೃಷ್ಟಿಯ ಪ್ರಥಮ ಕ್ಷಣ; ಮೊದಲ ದಿನವೂ ಹೌದು. ಆ ಮೊದಲ ದಿನ ಪ್ರತಿವರ್ಷವೂ ಬರುತ್ತದೆ ಎಂಬುದು ವಿಶೇಷ; ಆ ಪ್ರಥಮ ಕ್ಷಣ ನಮ್ಮ ಜೀವನದುದ್ದಕ್ಕೂ ಜೊತೆಯಾಗಿರುತ್ತದೆ ಎಂಬುದು ಸ್ವಾರಸ್ಯಕರ.

ಕಾಲದ ಈ ಚಕ್ರೀಯ ಗತಿಯನ್ನು ನಾವು ಪ್ರಕೃತಿಯಲ್ಲಿ ಸಹಜವಾಗಿ ಕಾಣುತ್ತೇವೆ. ಯುಗಾದಿಹಬ್ಬದ ಆಚರಣೆಯು ವಸಂತಮಾಸದಲ್ಲಿ ನಡೆಯುವುದಷ್ಟೆ. ಇದು ಕಾಲದ ಬದಲಾವಣೆಯನ್ನು, ಅದರ ನಾವೀನ್ಯವನ್ನು ಕಾಣುವ ಕಾಲ. ಎಲೆಗಳನ್ನು ಕಳೆದುಕೊಂಡ ಮರಗಿಡಗಳು ಮತ್ತೆ ಎಲೆಗಳ ಚಿಗುರನ್ನು ಪಡೆಯುತ್ತವೆ; ಇಡಿಯ ಪ್ರಕೃತಿಯು ಹಸುರಿನಿಂದ ಕಂಗೊಳಿಸುತ್ತದೆ. ಈ ಸಂಭ್ರಮವನ್ನು ಆಚರಿಸುತ್ತವೆಯೋ ಎನ್ನುವಂತೆ ಹಕ್ಕಿಗಳು ಮರಗಳ ಚಿಗುರನ್ನು ತಿನ್ನುತ್ತ ಹಾಡುತ್ತಿರುತ್ತವೆ. ಯುಗಾದಿಯ ಸಂದೇಶವನ್ನು ಪ್ರಕೃತಿಯೇ ಹಾಡಿ, ನಲಿದು ನುಡಿಯುತ್ತಿರುತ್ತದೆ: ‘ತುಂಬುತನ ಮತ್ತು ಖಾಲಿತನಗಳು ಕಾಲಚಕ್ರದ ಸಹಜ ನಡಿಗೆ’. ಇದನ್ನೇ ಮಾನುಷಭಾಷೆಯಲ್ಲಿ ಅನುವಾದ ಮಾಡಿದರೆ ಸಂಭ್ರಮ–ದುಗುಡಗಳು, ಸಂತೋಷ–ದುಃಖಗಳು, ಕತ್ತಲು–ಬೆಳಕುಗಳು ಸಹಜ ಗತಿಗಳು ಎಂದಾದೀತು. ಇವೆಲ್ಲವುಗಳ ಸಂಕೇತವಾಗಿಯೇ ಯುಗಾದಿಯ ಹಬ್ಬದಂದು ಬೇವು–ಬೆಲ್ಲಗಳ ಮಿಶ್ರಣವನ್ನು ಸೇವಿಸುವುದು. ಜೀವನದಲ್ಲಿ ಸಿಹಿ–ಕಹಿಗಳು ಸಹಜವಾದ ಘಟ್ಟಗಳು; ಇವನ್ನು ಸಹಜವಾಗಿಯೂ ಸಮಾನವಾಗಿಯೂ ಸ್ವೀಕರಿಸುವ ಗುಣವೇ ನಮ್ಮ ಬಾಳನ್ನು ಹಬ್ಬವಾಗಿಸುವ ವಿವೇಕ. ಮೊನ್ನೆಯವರೆಗೂ ಎಲೆ–ಹೂವು–ಕಾಯಿ–ಹಣ್ಣುಗಳಿಂದ ತುಂಬಿದ್ದ ಮರ ನೆನ್ನೆ ಬೆತ್ತಲಾಗಿ ಅದರ ಸೌಂದರ್ಯವನ್ನು ಕಳೆದುಕೊಂಡಿತ್ತು; ಆದರೆ ಇಂದು ಮತ್ತೆ ಅದು ನಳನಳಿಸುತ್ತಿದೆ. ನಮ್ಮ ಜೀವನವೂ ಹೀಗೆಯೇ. ಸುಖ–ದುಃಖ, ಬೆಳಕು–ಕತ್ತಲು, ರಾತ್ರಿ–ಹಗಲು – ಇವುಗಳಲ್ಲಿ ಯಾವುದೋ ಒಂದು ಮಾತ್ರವೇ ಇರದು; ಒಂದರಲ್ಲಿ ಇನ್ನೊಂದು ಅಡಗಿರುತ್ತದೆ. ಹೀಗಾಗಿ ನಾವು ಜೀವನವನ್ನು ಸಮಚಿತ್ತದಿಂದ ಸ್ವೀಕರಿಸುವುದೇ ಯುಗಾದಿಯ ದಿಟವಾದ ಹೋಳಿಗೆ.

ಯುಗಾದಿಯಂದು ಪಂಚಾಂಗಶ್ರವಣವೂ
ನಡೆಯುತ್ತದೆ; ಜೊತೆಗೆ ಭವಿಷ್ಯದ ಶ್ರವಣವೂ ನಡೆಯುತ್ತದೆ. ಭವಿಷ್ಯ ಎಂದರೆ ಆತಂಕ ಎಂದಲ್ಲ; ಸಿದ್ಧತೆ ಎಂದು ಅರ್ಥ. ನಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿಯುವ ಎಚ್ಚರಿಕೆಯೇ ಭವಿಷ್ಯಕ್ಕೆ ಕಿವಿ ಕೊಡಬೇಕು ಎಂಬುದರ ತಾತ್ಪರ್ಯ. ಮುಂದಿನ ದಿನಗಳಲ್ಲಿ ಆರೋಗ್ಯವು ಸಮಸ್ಯೆಯಾಗಬಹುದು ಎಂಬ ಸೂಚನೆ ಬಂದರೆ ಅದರ ಅರ್ಥ ನಮ್ಮ ದೇಹ–ಮನಸ್ಸುಗಳ ಕಡೆಗೆ ಹೆಚ್ಚಿನ ಗಮನ ಇರಲಿ ಎಂದು. ಆದಾಯ ಕಡಿಮೆ ಎಂದರೆ ನಮ್ಮಲ್ಲಿ ಆಲಸಿಕೆ ಮನೆ ಮಾಡುತ್ತಿದೆ; ಉತ್ಸಾಹವನ್ನು ತುಂಬಿಕೊಂಡು ದುಡಿಮೆಯಲ್ಲಿ ತೊಡಗಬೇಕು ಎಂದು. ಎಂದರೆ ಈ ಎಲ್ಲದರ ತಾತ್ಪರ್ಯ: ನಮ್ಮ ಏಳಿಗೆಯೂ ಪತನವೂ ನಮ್ಮ
ಭಾವ–ಬುದ್ಧಿ–ಕ್ರಿಯೆಗಳನ್ನೇ ನೆಚ್ಚಿಕೊಂಡಿವೆ. ಇದೇ ಯುಗಾದಿಯ ಸಂದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT