ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ನ ತಾ ತಿಳಿವುದೇ ದಿಟದ ತಿಳಿವಳಿಕೆ

ವಚನಾಮೃತ
Last Updated 3 ಜನವರಿ 2020, 19:45 IST
ಅಕ್ಷರ ಗಾತ್ರ

ಕತ್ತಲೆಯ ಮನೆಯಲ್ಲಿ ಸಕ್ಕರೆ ಸವಿದವನಂತಿರಬೇಕು

ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು

ಇದಕ್ಕೆ ಗುರುವಿನ ಹಂಗೇಕೆ, ಲಿಂಗದ ಪೂಜೆ ಏಕೆ, ಸಮಯದ ಹಂಗೇಕೆ?

ತನ್ನ ತಾನು ಅರಿದವಂಗೆ ಏಣಾಂಕನ ಶರಣರ ಸಂಗವೇಕೆ?

ಇಷ್ಟವನರಿದವಂಗೆ ನಾನೇನು, ನೀನೇನು ಎಂಬ

ಗೊಜಡಿನ ಭೃಮೆಯೇಕೆ ಅಮುಗೇಶ್ವರಾ?

ನೂರಕ್ಕಿಂತ ಹೆಚ್ಚು ವಚನಗಳನ್ನು ರಚನೆ ಮಾಡಿದ ಕೆಲವೇ ವಚನಕಾರ್ತಿಯರಲ್ಲಿ ಅಮುಗೆ ರಾಯಮ್ಮನೂ ಒಬ್ಬಳು.

ಭಕ್ತಿ ಎಂಬುದು ಅಂತರಂಗದಲ್ಲಿ ಸಾಧಿತವಾಗಬೇಕಾದ ವಿಚಾರ. ಪ್ರತಿಯೊಬ್ಬ ವ್ಯಕ್ತಿ ತನ್ನೊಳಗೆ ತಾನೇ ಅನುಸಂಧಾನ ಮಾಡಿಕೊಂಡು ಭಗವಂತನನ್ನು ಅಂದರೆ ಪೂರ್ಣಪ್ರಮಾಣದ ಬೆಳಕನ್ನು ಪಡೆದುಕೊಳ್ಳಬೇಕು. ಹೀಗೆಂದು ಆಲೋಚಿಸುವ ರಾಯಮ್ಮನ ವಿಚಾರವನ್ನು ನೋಡಿದಾಗ ಆ ಕಾಲದಲ್ಲಿಯೇ ಈ ಅನಕ್ಷರಸ್ಥ ಸ್ತ್ರೀ ಅದೆಷ್ಟು ಎತ್ತರದ ಮಟ್ಟದಲ್ಲಿ ತನ್ನ ತಿಳಿವಳಿಕೆಯನ್ನು ಉನ್ನತೀಕರಿಸಿಕೊಂಡಿದ್ದಳು ಎಂದು ಆಶ್ಚರ್ಯವೆನಿಸುತ್ತದೆ.

ಮನೆಯಲ್ಲಿ ದೀಪದ ಬೆಳಕಿಲ್ಲದಿದ್ದಾಗ ಅಥವಾ ಕತ್ತಲು ತುಂಬಿರುವಾಗ ಒಬ್ಬಾತ ಸಕ್ಕರೆ ತಿಂದರೆ ಅದು ಉಳಿದವರಿಗೆ ಕಾಣುವುದಿಲ್ಲ, ತಿಳಿಯುವುದೂ ಇಲ್ಲ. ಆದರೆ ತಿಂದವನಿಗೆ ಅದರ ಮಧುರಾನುಭೂತಿ ಸಂಪೂರ್ಣವಾಗಿ ದೊರಕಿರುತ್ತದೆ. ಬಟ್ಟಬಯಲಲ್ಲಿ ನಿಂತಾಗ ದೂರದೂರದ ತನಕ ಎಲ್ಲವೂ ನಿಚ್ಚಳವಾಗಿ ಕಾಣುತ್ತಿರುತ್ತದೆ. ಅಂತಹ ಸ್ಪಷ್ಟತೆಯ ಘಳಿಗೆಯಲ್ಲಿ ಇಷ್ಟಲಿಂಗದ ದರ್ಶನವಾದರೆ ಅದು ನಿಜದ ಸಂಪೂರ್ಣ ಸಾಕ್ಷಾತ್ಕಾರವಲ್ಲದೆ ಮತ್ತೇನು?

ಇಂತಹ ವೈಯಕ್ತಿಕ ಸಾಧನೆಗೆ ಯಾವ ಗುರುವಿನ ಹಂಗೂ ಬೇಕಾಗುವುದಿಲ್ಲ. ಅಥವಾ ಲಿಂಗದ ಪೂಜೆಯೂ ಅಗತ್ಯವಿಲ್ಲ. ನಿರ್ಗುಣನೂ ನಿರಾಕಾರನೂ ಆದ ಪರಮಾತ್ಮನನ್ನು ಸೇರುವ ಬೆಳಕಿನ ಹಾದಿಯಲ್ಲಿ ತಡಕಾಡುವವರಿಗೆ ಗುರುವಿನ ಮಾರ್ಗದರ್ಶನ ಮತ್ತು ಲಿಂಗಪೂಜೆಯಂತಹ ಬಾಹ್ಯಾಚರಣೆಯ ಆವಶ್ಯಕತೆಯಿರುತ್ತದೆ. ಯಾರು ತನ್ನನ್ನು ತಾನು ಅರಿತುಕೊಂಡಿರುತ್ತಾರೆಯೋ ಆತನಿಗೆ ಶಿವಶರಣರ ಸಂಗವೂ ಅಗತ್ಯವಿರುವುದಿಲ್ಲ.

ನಾನೇನು ನೀನೇನು ಎಂಬ ಜ್ಞಾನವನ್ನು ಪಡೆಯುವುದು ಸುಲಭದ ಮಾತಲ್ಲ. ಸ್ವ ಅರಿವೇ ಮನುಷ್ಯನ ಎಲ್ಲ ಆಧ್ಯಾತ್ಮಿಕ ಪ್ರಯತ್ನಗಳ ಗುರಿ. ಅದಕ್ಕಾಗಿಯೇ ಆತ ಗುರುವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಮೂರ್ತರೂಪದಲ್ಲಿ ಭಗವದಾರಾಧನೆ ನಡೆಸುತ್ತಾನೆ.

ಏಣಾಂಕ ಅಂದರೆ ಶಿವ. ಗೊಜಡು ಎಂದರೆ ಗೊಂದಲ. ಆ ಕಾಲದಲ್ಲಿ ತೀವ್ರವಾಗಿದ್ದ ಶರಣಚಳವಳಿಯಲ್ಲಿ ಲಿಂಗಪೂಜೆ, ಗುರುಭಕ್ತಿ, ಶರಣರಸೇವೆ ಮುಂತಾದ ಬಾಹ್ಯಾಚರಣೆಗಳು ವ್ಯಾಪಕವಾಗಿ ಚಾಲ್ತಿಯಲಿದ್ದವು. ಹಾಗಿರುವಾಗ ಆಂತರಿಕ ಅರಿವಿನ ಆವಶ್ಯಕತೆಯನ್ನು ಎತ್ತಿಹಿಡಿದು ಆ ನಿಜದ ಬೆಳಕಿಗಾಗಿ ಉಳಿದೆಲ್ಲ ಕತ್ತಲ ತಡಕಾಟಗಳು ವ್ಯರ್ಥವೆಂಬ ಸತ್ಯವನ್ನು ಅರುಹುವ ದಿಟ್ಟತೆಯನ್ನು ವ್ಯಕ್ತಪಡಿಸುವ ರಾಯಮ್ಮ ಏಕಕಾಲದಲ್ಲಿ ಅಚ್ಚರಿಯನ್ನೂ, ಮೆಚ್ಚುಗೆಯನ್ನು ಮೂಡಿಸುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT