ಶನಿವಾರ, ಜೂನ್ 19, 2021
26 °C

ಭವರೋಗವೈದ್ಯ ಗುರುರಾಯರು

ಯು. ಪಿ. ಪುರಾಣಿಕ್‌ Updated:

ಅಕ್ಷರ ಗಾತ್ರ : | |

ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ದಿನವಾದ ಮಂಗಳವಾರ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ರಾಯರ ಮೂಲಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿಸಿದರು

ಶ್ರೀ ರಾಘವೇಂದ್ರಸ್ವಾಮಿಗಳು ಸಶರೀರವಾಗಿ ಬೃಂದಾವನಸ್ಥರಾಗಿ ಇಂದಿಗೆ 349 ಸಂವತ್ಸರಗಳಾಗುತ್ತವೆ. ವಿಶ್ವದಾದ್ಯಂತ ಈ ಶುಭದಿನವನ್ನು ಭಕ್ತಾದಿಗಳು ಬಹುಪ್ರೀತಿ ಹಾಗೂ ಸಂಭ್ರಮದಿಂದ ಆಚರಿಸುತ್ತಾರೆ.

ಬ್ರಹ್ಮಲೋಕದ ಶಂಕುಕರ್ಣನೆಂಬ ದೇವತೆ ಕೃತಯುಗದಲ್ಲಿ ಪ್ರಹ್ಲಾದರಾಜನಾಗಿ, ದ್ವಾಪರದಲ್ಲಿ ಬಾಹ್ಲಿಕರಾಜನಾಗಿ ಕೊನೆಯಲ್ಲಿ ಕಲಿಯುಗದಲ್ಲಿ ವ್ಯಾಸರಾಯರು ಮತ್ತು ರಾಘವೇಂದ್ರಸ್ಚಾಮಿಗಳಾಗಿ ಅವತಾರ ಎತ್ತುತ್ತಾನೆ. ಶ್ರೀ ರಾಘವೇಂದ್ರಸ್ವಾಮಿಗಳು ಕ್ರಿ. ಶ. 1595 ಮನ್ಮಥನಾಮ ಸಂವತ್ಸರ, ಫಾಲ್ಗುಣ ಶುದ್ಧ ಸಪ್ತಮಿಯಂದು, ಗೋಪಮ್ಮ ಹಾಗೂ ತಿಮ್ಮಣ್ಣ ಭಟ್ಟ ದಂಪತಿಗಳ ಮಗನಾಗಿ, ಇಂದಿನ ತಮಿಳುನಾಡಿನ ಭುವನಗಿರಿಯಲ್ಲಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ವೆಂಕಟನಾಥ ಅಥವಾ ವೆಂಕಣ್ಣ ಭಟ್ಟ. ಮುಂದೆ ಶ್ರೀ ಮೂಲರಾಮರ ಇಚ್ಛೆಯಂತೆ, ಶ್ರೀ ಸುಧೀಂದ್ರತೀರ್ಥರ ಉತ್ತರಾಧಿಕಾರಿಯಾಗಿ ಕ್ರಿ. ಶ. 1621 ದುರ್ಮುಖಿನಾಮ ಸಂವತ್ಸರ ಫಾಲ್ಗುಣ ಶುದ್ಧ ಬಿದಿಗೆಯಂದು ಸನ್ಯಾಸ ಸ್ವೀಕರಿಸಿದರು.

ಸುಮಾರು ಮೂರೂವರೆ ಶತಮಾನಗಳ ಹಿಂದೆ ವೈದಿಕ ಧರ್ಮ ತುತ್ತತುದಿಯಲ್ಲಿರುವಾಗಲೇ, ಸರ್ವಧರ್ಮ ಸಹಿಷ್ಣುತೆಯನ್ನು ಕಾಪಾಡಿಕೊಂಡುಬಂದು, ಜಾತಿ–ಮತ–ಪಂಥಗಳನ್ನು ಲೆಕ್ಕಿಸದೆ, ವಿಶ್ವಶಾಂತಿಗಾಗಿ ಜೀವನವನ್ನೇ ಮುಡುಪಾಗಿಟ್ಟು, ಮಾನವ ಜನಾಂಗದ ಮೇಲೆ ಬೆಳಕು ಚೆಲ್ಲಿದ ಭಾರತದ ಯತಿಶ್ರೇಷ್ಠರಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳೂ ಒಬ್ಬರು.

ಶ್ರೀ ರಾಘವೇಂದ್ರಸ್ವಾಮಿಗಳು ಮೂಲತಃ ಮಾಧ್ವಸಿದ್ಧಾಂತದ ಪ್ರತಿಪಾದಕರು; ಆ ಸಿದ್ಧಾಂತದ ಮೇಲೆ 47 ಅಮೋಘ ಗ್ರಂಥಗಳನ್ನೂ ರಚಿಸಿದ್ದಾರೆ. ಜೊತೆಗೆ ಅವರು ಮುಸ್ಲಿಂ, ಕ್ರೈಸ್ತದರ್ಮದ ಸಮನ್ವಯಕಾರರು ಎಂಬ ಪ್ರಸಿದ್ಧಿಯನ್ನೂ ಪಡೆದಿದ್ದಾರೆ. ಅವರು ಸಶರೀರವಾಗಿ ಬೃಂದಾವನಸ್ಥರಾಗಿ, ಇಂದಿಗೂ ರಾರಾಜಿಸುತ್ತಿರುವ ಇಂದಿನ ಮಂತ್ರಾಲಯ ಅಂದಿನ ಆದವಾನಿ ನವಾಬನಾದ ಸಿದ್ದಿ ಮಸೂದ್‌ ಖಾನ್‌ನಿಂದ ದಾನವಾಗಿ ಪಡೆದ ಸ್ಥಳ. ಈ ಪ್ರೀತಿಯ ದ್ಯೋತಕವಾಗಿ ರಾಯರು ತಮ್ಮ ಬೃಂದಾವನದ ತುದಿಯಲ್ಲಿ, ಮುಸ್ಲಿಂ ವಾಸ್ತುಶೈಲಿಯ ‘ಗುಮ್ಮಟ‘ವನ್ನು ಸ್ವತಃ ಇಚ್ಛೆಪಟ್ಟು ಇರಿಸಿಕೊಂಡಿದ್ದಾರೆ. ಇಂದಿಗೂ ಈ ಗುಮ್ಮಟವನ್ನು ನೋಡಬಹುದು.

ರಾಯರು ಬೃಂದಾವನಸ್ಥರಾದ 135 ವರ್ಷಗಳ ಬಳಿಕ, ಅಂದಿನ ಬಳ್ಳಾರಿ ಕಲೆಕ್ಟರ್‌ ಸರ್‌ ಥಾಮಸ್‌ ಮುನ್ರೋ ಅವರಿಗೆ ದರ್ಶನ ನೀಡಿ, ಅವರೊಂದಿಗೆ ಇಂಗ್ಲಿಷ್‌ನಲ್ಲಿಯೇ ಸಂಭಾಷಣೆ ನಡೆಸಿದರೆಂದು ಸ್ವತಃ ಮುನ್ರೋ ಅವರೇ ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸಿದ್ದಾರಂತೆ. ರಾಯರು ಮುಸ್ಲಿಂ–ಕ್ರೈಸ್ತಮತಗಳೊಂದಿಗೆ ಬಾಂಧವ್ಯಕ್ಕೆ ಸಂಕೇತವಾಗಿದ್ದಾರೆ ಎನ್ನಬಹುದು.

ರಾಘವೇಂದ್ರಸ್ವಾಮಿಗಳು ತಮ್ಮ ಜೀವಿತಾವಧಿಯಲ್ಲಿ ಹಲವು ಪವಾಡಗಳನ್ನು ಮಾಡಿದ್ದರೆಂಬುದು ದಾಖಲೆಗೊಂಡಿದೆ. ಇಂದಿಗೂ ಅವರು ಭಕ್ತರ ಪಾಲಿಗೆ ಕಾಮಧೇನುವಾಗಿ, ಕಲ್ಪವೃಕ್ಷವಾಗಿ ಬೇಡಿದ ವರಗಳನ್ನು ನೀಡುತ್ತಿದ್ದಾರೆಂಬ ನಂಬಿಕೆ ಬಲವಾಗಿದೆ. ಒಟ್ಟಿನಲ್ಲಿ ಜಾತಿ–ಮತ–ಭಾಷೆಗಳ ಎಲ್ಲೆಯನ್ನು ಮೀರಿ ಎಲ್ಲರಿಂದಲೂ ಪೂಜೆಗೊಳ್ಳುತ್ತಿರುವ ರಾಘವೇಂದ್ರಸ್ವಾಮಿಗಳು ಅವರ ಭಕ್ತರಿಗೆ ಕಲಿಯುಗ ದೈವವೇ ಆಗಿದ್ದಾರೆ. ಅವರು ನೆಲಸಿರುವ ಮಂತ್ರಾಲಯ ಜಗತ್ತಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. 

ಇಂದು ರಾಯರ ಆರಾಧನೆ. ಅತ್ಯಂತ ದಯಾಳು ಹಾಗೂ ಭವರೋಗವೈದ್ಯರಾದ ರಾಘವೇಂದ್ರಸ್ವಾಮಿಗಳು ಈ ಪರ್ವಕಾಲದಲ್ಲಿ ಮಾನವಕುಲದ ಮೇಲೆ ಕರುಣೆ ತೋರಿಸಿ, ಕೋವಿಡ್‌ ರೋಗವನ್ನು ನಾಶಪಡಿಸಿ, ವಿಶ್ವದ ಜನತೆ ಶಾಂತಿ–ಸಮೃದ್ಧಿಯಿಂದ ಬಾಳಲು ಕೃಪೆ ಮಾಡಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.