ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪಡಿ ಜಾತ್ರೆಯೆಂಬ ಕಲ್ಯಾಣದ ಯಾತ್ರೆ

Last Updated 26 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಮಂಟೇಸ್ವಾಮಿ ನೀಲಗಾರ ಪಂಥ ಕನ್ನಡ ನಾಡಿನ ಮಹತ್ವದ ಜನ ಸಂಸ್ಕೃತಿ ಧಾರೆಗಳಲ್ಲೊಂದು. ಹಾಗೇ ಮಂಟೇಸ್ವಾಮಿ ಜನಪದ ಕಾವ್ಯ ಕೂಡ ಸಾಹಿತ್ಯ, ಸಂಗೀತ, ಕಲೆ, ಕಲಾವಿದ, ಗಾಯಕ ಏಕೀರ್ಭವಿಸಿ ಮೈದಾಳುವ ಆಕರ್ಷಕ ಜೀವಂತ ಕಾವ್ಯನದಿ. ಮಂಟೇಸ್ವಾಮಿ ಪರಂಪರೆಯ ಜಾತ್ರೆ, ಹಬ್ಬ, ಆಚರಣೆಗಳ ಮೂಲಕ ಇಂದಿಗೂ ಆ ಸಂತರ ಶ್ರದ್ಧಾಕೇಂದ್ರಗಳಲ್ಲಿ, ಊರು ಕೇರಿಗಳಲ್ಲಿ ಈ ಕಾವ್ಯ ಮತ್ತು ಸಂಸ್ಕೃತಿಯ ಧಾರೆ ಹರಿಯುತ್ತಲೇ ಇದೆ. ಹೀಗೆ ಕಾವ್ಯ, ಸಂಸ್ಕೃತಿ ಹರಿದು ವಾಲಾಡುವ ನೀಲಗಾರರ ಶ್ರದ್ಧಾಕೇಂದ್ರಗಳಲ್ಲಿ ಕಪ್ಪಡಿ ಕ್ಷೇತ್ರವೂ ಒಂದು.

ಮೈಸೂರು ಜಿಲ್ಲೆ ಕೃಷ್ಣರಾಜನಗರ ಸಮೀಪದ ಕಾವೇರಿ ನದಿ ದಡದಲ್ಲಿರುವ ಈ ಕಪ್ಪಡಿ ಕ್ಷೇತ್ರ ಮಂಟೇಸ್ವಾಮಿ ಒಕ್ಕಲುಗಳ ಪ್ರಸಿದ್ಧ ಶ್ರದ್ಧಾ ಕೇಂದ್ರಗಳಲ್ಲೊಂದು. ಇಲ್ಲಿ ಮಂಟೇಸ್ವಾಮಿ ಶಿಶು ಮಕ್ಕಳೆನಿಸಿದ ರಾಚಪ್ಪಾಜಿ, ಚೆನ್ನಾಜಮ್ಮ ಐಕ್ಯವಾಗಿದ್ದು ಅವರ ಗೋರಿ ಗದ್ದಿಗೆಗಳಿವೆ. ಕಪ್ಪಡಿ ಕ್ಷೇತ್ರ ನೀಲಗಾರರು ಹಾಗೂ ಒಕ್ಕಲುಗಳ ಭಕ್ತ ಕೋಟಿ ಅನುಯಾಯಿಗಳ ಪಾಲಿಗೆ ಮೆಕ್ಕಾ ಮದೀನ ಇದ್ದಂತೆ. ಜೀವಮಾನದಲ್ಲಿ ಒಮ್ಮೆಯಾದರೂ ಒಕ್ಕಲಿನವರು ಕಪ್ಪಡಿ ಜಾತ್ರೆ ಮಾಡಲೇ ಬೇಕು.

ಈ ಜಾತ್ರೆ ಮತ್ತು ಮಂಟೇಸ್ವಾಮಿ ಸಂತಪಡೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಇಂದಿಗೂ ಹಾಡುವ ಮಂಟೇಸ್ವಾಮಿ ಜನಪದ ಮಹಾಕಾವ್ಯ ಹಾಗೂ ಕೊಡೇಕಲ್ಲ ವೀರಸಂಗಪ್ಪಯ್ಯ ಬರೆದ ಕ್ರಿ.ಶ. 1589ರ ‘ನಂದಿಯಾಗಮ ಲೀಲೆ’ ಕೃತಿ ಈ ಬಗೆಗೆ ಬೆಳಕು ಚೆಲ್ಲುತ್ತವೆ.

ಕಪ್ಪಡಿ ರಾಚಪ್ಪಾಜಿ ಕೊಡೇಕಲ್ಲ ಬಸವಣ್ಣನ ಹಿರಿಯ ಮಗ. ಕೊಡೇಕಲ್ಲ ಬಸವಣ್ಣ 12ನೇ ಶತಮಾನದ ಕಲ್ಯಾಣದ ಬಸವಣ್ಣನ ಚಳವಳಿ ಮತ್ತು ಆಶಯಗಳನ್ನು 15ನೇ ಶತಮಾನದಲ್ಲಿ ಮುಂದುವರಿಸಿದ ಅಭಿನವ ಬಸವಣ್ಣ. ತನ್ನ ಮಡದಿ ನೀಲಮ್ಮ, ಮಕ್ಕಳಾದ ರಾಚಪ್ಪಾಜಿ, ಗುಹೇಶ್ವರ ಮತ್ತು ಸಂಗಪ್ಪಯ್ಯ, ಶಿಷ್ಯ ಮಂಟೇಸ್ವಾಮಿ ಒಳಗೊಂಡಂತೆ ಕೊಡೇಕಲ್ಲ ಪರಂಪರೆಯ ನಾಯಕ. ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಸುರಪುರ ಸಮೀಪದ ಡೋಣಿ ನದಿ ದಡದಲ್ಲಿರುವ ಕೊಡೇಕಲ್ಲು ಇವರ ಕೇಂದ್ರ ಸ್ಥಾನ.

ಹಾಗೇ ನೋಡಿದರೆ, ಉತ್ತರ ಕರ್ನಾಟಕದ ಕೊಡೇಕಲ್ಲ ಬಸವಣ್ಣನ ಪಂಥ ಮತ್ತು ದಕ್ಷಿಣ ಕರ್ನಾಟಕದ ಮಂಟೇಸ್ವಾಮಿ ನೀಲಗಾರ ಪಂಥ ಒಂದೇ ವೃಕ್ಷದ ಎರಡು ಕವಲುಗಳು. ತನ್ನ ಗುರು ಗುರುಬಾರ ಲಿಂಗಯ್ಯರ ಮಾರ್ಗದರ್ಶನದಂತೆ ಮೈಸೂರು ಸೀಮೆಯ ಕಾವೇರಿ ಪರಿಸರದಿಂದ ಕೊಡೇಕಲ್ಲ ಬಸವಣ್ಣರ ಬಳಿಗೆ ತೆರಳಿ, ಶಿಷ್ಯ ಆಗಿ ಕಾಯಸಿದ್ಧಿ ಪಡೆದವರು ಮಂಟೇಸ್ವಾಮಿ. ಮಂಟೇಸ್ವಾಮಿ ಕಾವ್ಯದ ಕಲ್ಯಾಣ ಪಟ್ಟಣದ ಸಾಲಲ್ಲಿ ಬರುವಂತೆ, ಮಂಟೇಸ್ವಾಮಿ ಸಂಧಿಸುವುದು ಇದೇ ಕೊಡೇಕಲ್ಲ ಬಸವಣ್ಣ ಮತ್ತು ಅವರ ಪತ್ನಿ ನೀಲಮ್ಮ ಅವರನ್ನು. ಮಂಟೇಸ್ವಾಮಿಯ ಈ ಗುರು ದಂಪತಿ ಭೇಟಿಯನ್ನು ಸಾಂಕೇತಿಕವಾಗಿ ಇಟ್ಟುಕೊಂಡು ನೀಲಗಾರರು ಕಲ್ಯಾಣದ ಬಸವಣ್ಣ, ನೀಲಮ್ಮರ ದೃಢ ಪರೀಕ್ಷೆ ಎಂಬ ಸಾಂಸ್ಥಿಕಗೊಂಡ ವೀರಶೈವ ಲಿಂಗಾಯಿತ ವ್ಯವಸ್ಥೆಯನ್ನು ವಿಮರ್ಶೆಗೆ ಒಳಪಡಿಸುವುದನ್ನು ಕಾವ್ಯ ಕಟ್ಟಿ ಹಾಡುತ್ತಾರೆ.

ತಮ್ಮ ಮಗನ ಅಕಾಲಿಕ ಮರಣದಿಂದ ವಿಚಲಿತರಾಗುವ ರಾಚಪ್ಪಾಜಿ ಮತ್ತು ಪತ್ನಿ ದೊಡ್ಡಮ್ಮ ತಾಯಿ ಕೊಡೇಕಲ್ಲಿನಿಂದ ಮಂಟೇಸ್ವಾಮಿ ಜೊತೆಗೂಡಿ ದಕ್ಷಿಣದ ಮೈಸೂರು ಸೀಮೆಗೆ ಬರುತ್ತಾರೆ. ನೀಲಗಾರರು ಇದನ್ನು ಕಲ್ಯಾಣ ಪಟ್ಟಣದಿಂದ ಕತ್ತಲರಾಜ್ಯಕ್ಕೆ ಬಂದ ಪರಂಜ್ಯೋತಿ ಸಾಲು, ಉತ್ತರದೇಶ-ಕತ್ತಲರಾಜ್ಯ ಎಂಬ ಪರಿಕಲ್ಪನೆಯಲ್ಲಿ ಹಾಡುತ್ತಾರೆ. ಕತ್ತಲರಾಜ್ಯದ ಕಡೆಗಿನ ಈ ಪ್ರಯಾಣದಲ್ಲಿ ವಿಜಯನಗರ ಸಾಮ್ರಾಜ್ಯದ ಭೇಟಿಯೂ ಒಂದು. ರಾಚಪ್ಪಾಜಿ ವಿಜಯನಗರದ ಗಾರುಡಿಗರನ್ನು ತಮ್ಮ ಮೋಡಿ ವಿದ್ಯೆಯಿಂದ ಸೋಲಿಸುತ್ತಾರೆ. ಹಾಗೂ ಗೆದ್ದ ರಾಚಪ್ಪಾಜಿ ಗಾರುಡಿಗರ ಚೆನ್ನಾಜಮ್ಮನನ್ನು ಶಿಶುಮಗಳಾಗಿ ಪಡೆದು ತರುತ್ತಾರೆ.

ದಕ್ಷಿಣದ ಮೈಸೂರು ಸೀಮೆ ಕಡೆಗಿನ ಪ್ರಯಾಣದಲ್ಲಿ ಚಿಕ್ಕಮಗಳೂರು ಸಖರಾಯಪಟ್ಟಣದ ಭೇಟಿ ಮತ್ತೊಂದು. ಅಂದಿಗೆ ಮೈಸೂರು ಅರಸರ ಸಾಮಂತರಾಗಿದ್ದ ಸಖರಾಯ ಪಟ್ಟಣದ ಅರಸನ ಇಬ್ಬರು ಮಕ್ಕಳನ್ನು ಮಂಟೇಸ್ವಾಮಿ ಶಿಷ್ಯರನ್ನಾಗಿ ಪಡೆಯುತ್ತಾರೆ. ಅವರೇ ಇಂದಿನ ಮಂಟೇಸ್ವಾಮಿ ಪರಂಪರೆಯ ಉತ್ತರಾಧಿಕಾರಿ ಗುರು-ಪೀಠಾಧಿಪತಿಗಳಾಗಿರುವ ಮಳವಳ್ಳಿ ಸ್ವಾಮೀಜಿ ಹಾಗೂ ಬೊಪ್ಪೇಗೌಡನಪುರದ ಸ್ವಾಮೀಜಿಯಾಗಿದ್ದಾರೆ. ಈ ಘಟನೆಯನ್ನು ಸಖರಾಯ ಪಟ್ಟಣದ ವಿಷದ ಕಜ್ಜಾಯದ ಪ್ರಸಂಗವಾಗಿ ನೀಲಗಾರರು ಕಾವ್ಯದಲ್ಲಿ ಹಾಡುತ್ತಾರೆ.

ಮುಂದುವರೆದು ಅಂತಿಮ ಹಂತದ ಪ್ರಯಾಣದಲ್ಲಿ ಮಂಟೇಸ್ವಾಮಿ-ರಾಚಪ್ಪಾಜಿಯವರು ಮೈಸೂರು ಸಂಸ್ಥಾನವನ್ನು ತಲುಪುತ್ತಾರೆ. ಚಾರಿತ್ರಿಕವಾಗಿ ಮಂಟೇಸ್ವಾಮಿ ರಾಚಪ್ಪಾಜಿಯವರ ಮೈಸೂರು ಪ್ರವೇಶ ಬೋಳ ಚಾಮರಾಜ ಒಡೆಯ-ರಾಜ ಒಡೆಯರ ಆಳ್ವಿಕೆಯ ಕಾಲ (1578-1617). ಮೈಸೂರು ಸಂಸ್ಥಾನದ ಕಾರುಗಳ್ಳಿ ವೀರರಾಜಯ್ಯ (ಮಾರನಾಯಕ) ಮೈಸೂರು ಅರಸರ ರಾಜ್ಯಾಧಿಕಾರ ಕಬಳಿಸಿ, ರಾಜಕುಮಾರಿಯನ್ನು ವರಿಸಲು ಸಂಚು ರೂಪಿಸಿರುತ್ತಾನೆ. ಈ ವೇಳೆಗೆ ಬರುವ ಮಂಟೇಸ್ವಾಮಿ-ರಾಚಪ್ಪಾಜಿ ಅವನ ಸಂಚನ್ನು ವಿಫಲಗೊಳಿಸಿ, ಅರಸರ ಅಧಿಕಾರ ಉಳಿಸಿ, ಹರಸಿ ಮೈಸೂರು ಅರಮನೆಗೆ ಚಿನ್ನದ ಕಂಡಾಯ ಕೊಟ್ಟು ಮೈಸೂರು ಅರಸರ ಒಕ್ಕಲು ಪಡೆಯುತ್ತಾರೆ ಎಂಬ ಮಾಹಿತಿಗಳಿವೆ.

ರಾಜ ಒಡೆಯರು ದಳವಾಯಿ ವೀರ ರಾಜಯ್ಯನನ್ನು ಸೋಲಿಸಿದ ಬಗ್ಗೆ, ಸಂತರಿಬ್ಬರು ಮಾರನಾಯಕನ ಅಂತ್ಯಕ್ಕೆ ನೆರವಾದ ಬಗ್ಗೆ ತಿರುಮಲಾರ್ಯನ ಚಿಕ್ಕದೇವರಾಜ ವಿಜಯ, ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀ ತತ್ವನಿಧಿ ಕೃತಿಗಳಲ್ಲಿ ಪೂರಕ ಉಲ್ಲೇಖಗಳಿವೆ. ಇದನ್ನೇ ಮೈಸೂರು ಮಹಾರಾಣಿ ಮನೆಯೊಳಗೆ ಮೊದಲ ಭಿಕ್ಷಾ, ಕಾರಂಜಿ ಕೆರೆಯೊಳಗೆ ಕಾವಿಡೇರೆ ಹಾಕಿದ್ದು, ಕಾರುಗಳ್ಳಿ ಮಾರನಾಯಕನ ಕಥನಗಳಾಗಿ ನೀಲಗಾರರು ಮಂಟೇಸ್ವಾಮಿ ಕಾವ್ಯದಲ್ಲಿ ಹಾಡುತ್ತಾರೆ.

ಮೈಸೂರು ಅರಸರು ಹಿಂದಿನಿಂದ ಇಂದಿನ ಯದುವೀರ್ ಕೃಷ್ಣದತ್ತ ಒಡೆಯರ್ ವರೆಗೂ ಕಪ್ಪಡಿ, ಬೊಪ್ಪೇಗೌಡನಪುರ, ಆದಿಹೊನ್ನಾಯಕನಹಳ್ಳಿ, ಚಿಕ್ಕಲ್ಲೂರು, ಕುರುಬನಕಟ್ಟೆ ಕ್ಷೇತ್ರಗಳಿಗೆ ನಡೆದುಕೊಳ್ಳುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಇಂದಿಗೂ ಸಖರಾಯಪಟ್ಟಣದ ಅರಸು ಮಕ್ಕಳಾದ ಮಳವಳ್ಳಿ-ಬೊಪ್ಪೇಗೌಡನಪುರ ಪೀಠಾಧಿಪತಿಗಳಿಗೂ, ಮೈಸೂರು ಅರಸು ಮನೆತನಕ್ಕೂ ವೈವಾಹಿಕ ಸಂಬಂಧಗಳು ಇರುವುದು ಗಮನಾರ್ಹ. ಇಂದಿನ ಮಳವಳ್ಳಿ ಸ್ವಾಮಿಗಳಾದ ವರ್ಚಸ್ವಿ ಸಿದ್ಧಲಿಂಗ ರಾಜೇ ಅರಸ್‍ರವರು ಮೈಸೂರು ಅರಸು ಮನೆತನಕ್ಕೆ ಮೊಮ್ಮಗ. ಇವರ ಮಾತೃಶ್ರೀ ಮಹಾ ರಾಜಕುಮಾರಿ ಮೀನಾಕ್ಷಿ ದೇವಿಯವರು ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್‌ ಅವರ ಮಗಳು.

ಹಾಗೇ ಮಂಟೇಸ್ವಾಮಿ ಮಂಡ್ಯ ಸೀಮೆಯ ನಿಡುಘಟ್ಟ ಮಾರಳ್ಳಿ ಒಳಗೆ ಆಚಾರರ ಹುಡುಗ ಕೆಂಪಾಚಾರಿಯನ್ನು ಶಿಶುಮಗನನ್ನಾಗಿ ಪಡೆದು ನೀಲಗಾರ ದೀಕ್ಷೆಕೊಟ್ಟು ಸಿದ್ಧಪ್ಪಾಜಿಯನ್ನಾಗಿ ಮಾಡಿಸುತ್ತಾರೆ. ಅದೇ ಸಿದ್ಧಪ್ಪಾಜಿ ಮೂಲಕ ಹಲಗೂರು ಚಿಲ್ಲಾಪುರದ ಪಾಂಚಾಳ ಪಾಳೆಗಾರರ ಒಕ್ಕಲು ಪಡೆಯುತ್ತಾರೆ. ಅಷ್ಟೇ ಅಲ್ಲದೇ ಅವರಿಂದ ಕಬ್ಬಿಣದ ಭಿಕ್ಷೆ ಪಡೆದು ಮಠಮನೆ ಮಾಡುತ್ತಾರೆ. ಮುಂದುವರೆದು ಲಿಂಗಯ್ಯ ಚೆನ್ನಯ್ಯ ಎಂಬ ಶಿಷ್ಯರನ್ನು ಪಡೆದು ತಮ್ಮ ಪಂಥದ ಮೆರೆಯುವ ಕಂಡಾಯದ ದೇವರುಗಳನ್ನಾಗಿ ಮಾಡುತ್ತಾರೆ.

ಶಿವರಾತ್ರಿ ದಿನ ಕಪ್ಪಡಿ ಜಾತ್ರೆ ಆರಂಭವಾಗಿದೆ. ಏಪ್ರಿಲ್ 2, ಯುಗಾದಿ ಹಬ್ಬದಂದು ಬೊಪ್ಪೇಗೌಡನ ಪುರದ ಮಂಟೇಸ್ವಾಮಿ ಗದ್ದಿಗೆ ಜಾತ್ರೆಯೊಂದಿಗೆ ಮುಕ್ತಾಯವಾಗುತ್ತದೆ. ಕಪ್ಪಡಿ ಜಾತ್ರೆಯ ಕೊನೆಯ ದಿನವಾದ ಭಾನುವಾರ ಮಾದಲಿ ಪ್ರಸಾದದ ವಿತರಣೆ ನಡೆಯುತ್ತದೆ. ಮಂಟೇಸ್ವಾಮಿ ಗದ್ದಿಗೆಯಲ್ಲಿ ಎದಿರು ಸೇವೆ ಜಾತ್ರೆಯೂ ನಡೆಯುತ್ತದೆ.

ರಾಚಪ್ಪಾಜಿವರ ಧ್ಯಾನಪೀಠ ‘ಉರಿಗದ್ದಿಗೆ’ ಮೇಲೆ ಕೂರುವುದು ಜಾತ್ರೆಯ ಮಹತ್ವದ ಆಚರಣೆಗಳಲ್ಲೊಂದು. ಈ ಪೀಠ ಸತ್ಯ, ನ್ಯಾಯ, ನೀತಿ, ಸಮಾನತೆ, ಜಾತ್ಯಾತೀತತೆಯನ್ನು ಸಾರುವ ಪೀಠ ಎನಿಸಿದೆ.
ಪ್ರಸ್ತುತ ಇಂದು ಮಳವಳ್ಳಿ ಸ್ವಾಮೀಜಿ, ಬೊಪ್ಪಣಪುರ ಸ್ವಾಮೀಜಿ ವರ್ಷ ಬಿಟ್ಟು ವರ್ಷ ಈ ಉರಿಗದ್ದಿಗೆ ಪೀಠರೋಹಣ ಮಾಡುವ ಪದ್ಧತಿ ಇದೆ. ಈ ವರ್ಷ ವರ್ಚಸ್ವಿ ಬುದ್ಧಿಯವರ ಸರದಿ ಇದೆ. ಗದ್ದಿಗೆ ಏರುವ ಈ ಆಚರಣೆ ಇಡೀ ಪರಂಪರೆಯ ಉತ್ತರಾಧಿಕಾರತ್ವದ ಪ್ರತೀಕ ಎನಿಸಿದೆ.

ಒಂದು ತಿಂಗಳು ಜರುಗುವ ಈ ಜಾತ್ರೆಯಲ್ಲಿ ನೀಲಗಾರ ದೀಕ್ಷೆಯಿಂದ ಹಿಡಿದು ವಿವಿಧ ಸೇವೆಗಳನ್ನು ಭಕ್ತರು ಸಲ್ಲಿಸುತ್ತಾರೆ. ಕರ್ನಾಟಕದ ಉದ್ದಗಲಕ್ಕೂ ಭಕ್ತಾದಿಗಳು ಜಾತಿ, ಮತ, ಧರ್ಮ, ಪಂಥ, ಪಂಗಡಗಳ ಭೇದವಿಲ್ಲದೆ ನೆರೆಯುತ್ತಾರೆ. ಬರುವ ಭಕ್ತಾದಿಗಳಿಗೆ ಒಂದು ತಿಂಗಳವರೆಗೆ ಅನ್ನ ದಾಸೋಹವನ್ನು ನಡೆಸಲಾಗುತ್ತದೆ. ಮಳವಳ್ಳಿ ವರ್ಚಸ್ವಿ ಬುದ್ಧಿಯವರು ಹೇಳುವ ಪ್ರಕಾರ, ಶಿವರಾತ್ರಿ ದಿನ ಹಚ್ಚುವ ಅನ್ನದಾಸೋಹದ ಒಲೆಯು ನಿರಂತರ ಒಂದು ತಿಂಗಳು ಕೆಡದೆ ಉರಿಯುತ್ತಿರುತ್ತದೆ. ಸುತ್ತಮುತ್ತಲ ಊರುಗಳ ಹಲವು ಮುಸ್ಲಿಮರು ಕಪ್ಪಡಿ, ಬೊಪ್ಪೇಗೌಡನಪುರ ಜಾತ್ರೆ ಗದ್ದಿಗೆ ಗಳಿಗೆ ನಡೆದುಕೊಳ್ಳುವುದಿದೆ. ರಾಚಪ್ಪಾಜಿಯನ್ನು ಸುತ್ತಾಕ್ಷಾ ಎಂದು, ಚನ್ನಾಜಮ್ಮನನ್ನು ಮುನ್ನಾಕ್ಷಾ ಎಂದು, ಮಂಟೇಸ್ವಾಮಿ ಅವರನ್ನು ಮಾಂಕ್ಷಾವಲಿ ಎಂದು ಕರೆಯುವುದಾಗಿ ಮಾಹಿತಿ ಇದೆ. ಕೊಡೇಕಲ್ಲ ಬಸವಣ್ಣ ಕೂಡ ಹಿಂದೂ ಮುಸ್ಲಿಂ ಐಕ್ಯತೆ ಸೂಚಕ ಉಡುಪು ಧರಿಸಿದ ಉಲ್ಲೇಖವಿದೆ.

ಮಂಟೇಸ್ವಾಮಿ ರಾಚಪ್ಪಾಜಿಯವರ ಕಾಲಜ್ಞಾನ ಕಟ್ಟುಗಳನ್ನು ಗದ್ದಿಗೆಗಳ ಮೇಲಿಟ್ಟು ತಿಂಗಳಾನು ಕಾಲ, ವರ್ಷಾನು ಕಾಲ ಪೂಜಿಸಿಸುವುದು ಜಾತ್ರೆಗಳಲ್ಲಿ ಪದ್ಧತಿ. ಇದೊಂದು ಅಕ್ಷರ ಪರಂಪರೆ ಹಾಗೂ ಕಾಲಜ್ಞಾನ ವಚನಗಳನ್ನು ಆರಾಧಿಸುವ ಜಾತ್ರೆಯಾಗಿದೆ.

ಕೊಡೇಕಲ್ಲ ಬಸವಣ್ಣ ಮತ್ತು ಮಂಟೇಸ್ವಾಮಿ ಪರಂಪರೆಯ ಸಂತರು ಕಾಲಜ್ಞಾನಿ ಸ್ವರ ವಚನಕಾರರು. ಸ್ವತಃ ಮಂಟೇಸ್ವಾಮಿ ಬರೆದ 13 ಕಾಲಜ್ಞಾನ ವಚನಗಳು, ರಾಚಪ್ಪಾಜಿ ಬರೆದ 10 ಕೃತಿಗಳು 46 ತತ್ವಪದಗಳು ತಾಳೆಗರಿ ಹಸ್ತಪ್ರತಿ ರೂಪದಲ್ಲಿ ಕೊಡೇಕಲ್ಲು ಕ್ಷೇತ್ರದಲ್ಲಿ ದೊರೆತಿವೆ. ಮಂಟೇಸ್ವಾಮಿ ಸಂಗನಾತ್ಮಜ, ಸಂಗನಾಳು, ಚೆನ್ನ ಸಂಗನ ಕುವರ, ಮಂಟೇದಲಿಂಗ ಎಂಬ ಕಾವ್ಯ ನಾಮದಲ್ಲಿ ವಚನಗಳನ್ನು ಬರೆದರೆ, ರಾಚಪ್ಪಾಜಿ ರಾಚ, ಚಿಕ್ಕರಾಚ, ಹುಚ್ಚರಾಚ, ಬಾಲರಾಚ ಎಂಬ ಕಾವ್ಯನಾಮದಲ್ಲಿ ಸಾಹಿತ್ಯ ರಚಿಸಿದ್ದಾರೆ. ರಾಚಪ್ಪಾಜಿ ರಚಿಸಿದ 46 ತತ್ವಪದಗಳಲ್ಲಿ ಮೊದಲನೆಯದು ‘ನಾವು ಕುರುಬರು ನಮ್ಮ ದೇವರು ಬೀರಯ್ಯ’ ಎಂಬುದಾಗಿದೆ. ಇದು ಇಂದು ಕನಕದಾಸರು ರಚಿಸಿದ ಪದ್ಯ ಎಂದು ಜನಪ್ರಿಯಗೊಂಡಿದೆ. ಕನಕದಾಸರು ಗಹನವಾದ ವಿಷಯವೊಂದರ ಕುರಿತು ಚರ್ಚಿಸುವ ಸಲುವಾಗಿ ರಾಚಪ್ಪಯ್ಯನನ್ನು ಹುಡುಕಿಕೊಂಡು ಕೊಡೇಕಲ್ಲಿಗೆ ಬರುತ್ತಾರೆಂಬುದಾಗಿ ಇತಿಹಾಸದಲ್ಲಿ ಉಲ್ಲೇಖವಿದೆ.

ಇಂದಿಗೂ ಕಪ್ಪಡಿ, ಬೊಪ್ಪೇಗೌಡನಪುರದ ರಾಚಪ್ಪಾಜಿ-ಮಂಟೇಸ್ವಾಮಿ ಗದ್ದಿಗೆಗಳ ಮೇಲಿಟ್ಟು ಜಾತ್ರೆ ದಿನಗಳಂದು ಪೂಜಿಸುವ ವಚನಗಳ ಕಟ್ಟುಗಳು ಅವರ ಇತರೆ ಅಪ್ರಕಟಿತ ಹಸ್ತಪ್ರತಿಗಳಾಗಿವೆ ಎಂಬ ಮಾಹಿತಿ ಇದೆ.
ಕಲ್ಯಾಣದ ಬಸವಣ್ಣ-ಅಲ್ಲಮ ಪ್ರಭು ಅವರ 12ನೇ ಶತಮಾನದ ವಚನ-ಶರಣ ಚಳವಳಿ ಆಶಯಗಳನ್ನು 15ನೇ ಶತಮಾನದಲ್ಲಿ ಮುಂದುವರೆಸಿ ಅನುಷ್ಠಾನಗೊಳಿಸಲು ಶ್ರಮಿಸಿದವರು ಕೊಡೇಕಲ್ಲ ಬಸವಣ್ಣ-ಮಂಟೇಸ್ವಾಮಿ-ರಾಚಪ್ಪಾಜಿಯವರು. ಇವರು ಮುನ್ನಡೆಸಿದ ಚಳವಳಿ, ಕಟ್ಟ ಬಯಸಿದ ಪಂಥವನ್ನು ಅಮರಕಲ್ಯಾಣ ಹಾಗೂ ಕಡೆಯ ಕಲ್ಯಾಣ ಎಂದು ಕರೆಯಲಾಗಿದೆ. ವೀರಸಂಗಯ್ಯನ ನಂದಿಯಾಗಮ ಲೀಲೆ ಕೃತಿಯ ಆಧಾರದ ಮೇಲೆ ಈ ಸಂತ ಪರಂಪರೆಯ ಕಾಲ ಕ್ರಿ.ಶ. 1489-1589 ಎಂದು ತಿಳಿದು ಬರುತ್ತದೆ.

12ನೇ ಶತಮಾನದ ಬಸವಣ್ಣ ಕಲ್ಯಾಣದ ಕಳಚೂರಿಗಳ ಸಖ್ಯದಲ್ಲಿದಂತೆ, ಕೊಡೇಕಲ್ಲ ಬಸವಣ್ಣ ಸುರಪುರ ಬೇಡನಾಯಕರಿಗೆ ಪೋಷಕಾರದಂತೆ, ಮಂಟೇಸ್ವಾಮಿ, ರಾಚಪ್ಪಾಜಿ ಮೈಸೂರು ಅರಸರು ಹಲಗೂರು ಪಾಳೇಗಾರರ ಬೆಂಗಾವಲಾಗಿ ಒಕ್ಕಲು ಪಡೆದು ನೀಲಗಾರ ಪರಂಪರೆಯನ್ನು ನೆಲೆಗೊಳಿಸಿ ವಿಸ್ತರಿಸಿದ್ದಾರೆ.

ಕೊಡೇಕಲ್ಲ ಬಸವಣ್ಣ ಮತ್ತು ಮಂಟೇಸ್ವಾಮಿ ಪರಂಪರೆಗಳು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಜನರನ್ನು ಒಕ್ಕಲು ಪಡೆದ ಕಡೆಯ ಕಲ್ಯಾಣದ ಪ್ರತೀಕಗಳು. ಇಂದಿಗೂ ಪ್ರತೀವರ್ಷ ನಡೆಯುವ ಕಪ್ಪಡಿ-ಬೊಪ್ಪೇಗೌಡನಪುರ-ಚಿಕ್ಕಲ್ಲೂರು ಜಾತ್ರೆಗಳಿಗೆ ಮೈಸೂರು ಸೀಮೆಯ ಒಕ್ಕಲುಗಳಂತೆ ಕೊಡೇಕಲ್ಲ ಪರಂಪರೆಯ ಭಕ್ತರು ಬಂದುಹೋಗುವ ಪರಿಪಾಠವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT