ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥಸಪ್ತಮಿಯ ಸೂರ್ಯಾರಾಧನೆ

ಇಂದು ರಥಸಪ್ತಮಿ
Last Updated 18 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ರಥಸಪ್ತಮಿ ಬಂತು ಎಂದರೆ ಸೆಕೆ ಆರಂಭವಾದಂತೆ–ಎಂಬ ಮಾತು ಬಳಕೆಯಲ್ಲಿದೆಯಷ್ಟೆ.

ಹೌದು, ಈ ಭೌತಿಕ ವಿದ್ಯಮಾನಕ್ಕೂ ರಥಸಪ್ತಮಿಗೂ ಸಂಬಂಧ ಇದೆ. ಇಂದು ಸೂರ್ಯನು ತನ್ನ ರಥವನ್ನು ಏರುತ್ತಾನೆ ಎಂಬ ಕಲ್ಪನೆಯಲ್ಲಿ ರೂಪುಗೊಂಡಿರುವ ಪರ್ವವೇ ರಥಸಪ್ತಮಿ. ಹೆಸರಿನಲ್ಲೇ ಈ ಸೂಚನೆ ಇದೆಯೆನ್ನಿ! ಸೂರ್ಯನು ರಥ ಏರುವುದು ಕೇವಲ ಪೌರಾಣಿಕ ಕಲ್ಪನೆಯಷ್ಟೆ ಅಲ್ಲ, ನಿಸರ್ಗದ ತತ್ತ್ವಕ್ಕೂ ಈ ಕಲ್ಪನೆಗೂ ಸಾವಯವ ಸಂಬಂಧ ಇದೆ ಎನ್ನುವುದು ಗಮನಾರ್ಹ.

ಸೂರ್ಯ ನಮ್ಮ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು. ಸೂರ್ಯದೇವನನ್ನು ಆರಾಧಿಸುವ ಪ್ರಮುಖ ಪರ್ವದಿನವೇ ರಥಸಪ್ತಮಿ. ಸೂರ್ಯನಿಲ್ಲದೆ ನಮ್ಮ ಬದುಕಿಲ್ಲ. ಸೃಷ್ಟಿಯಲ್ಲಿರುವ ಎಲ್ಲ ಜೀವಿಗಳ ಅಳಿವು–ಉಳಿವು ಸೂರ್ಯನನ್ನೇ ಆಶ್ರಯಿಸಿದೆ. ಹೀಗಾಗಿ ಅವನು ನಮ್ಮ ಪಾಲಿಗೆ ದೇವರೇ ಆಗಿದ್ದಾನೆ. ಋಗ್ವೇದದಲ್ಲಿಯ ಮಂತ್ರವೊಂದು, ಸೂರ್ಯನನ್ನು ಕುರಿತಾದ್ದು, ಹೀಗಿದೆ:

‘ಯೇನ ಸೂರ್ಯ ಜ್ಯೋತಿಷಾ ಬಾಧಸೇ ತಮೋ
ಜಗಚ್ಛ ವಿಶ್ವಮುದಿಯರ್ಷಿ ಭಾನುನಾ
ತೇನಾಸ್ಮದ್ವಿಶ್ವಾಮನಿರಾಮನಾಹುತಿಂ
ಅಪಾಮೀವಾಮಪ ದುಷ್ಷ್ವಪ್ನ್ಯಂ ಸುವ ’

ಇದರ ಭಾವಾರ್ಥ: ’ಎಲೈ ಸೂರ್ಯನೇ, ನೀನು ಯಾವ ತೇಜಸ್ಸಿನಿಂದ ಅಂಧಕಾರವನ್ನು ಹೋಗಲಾಡಿಸುವೆಯೋ, ಯಾವ ನಿನ್ನ ಬೆಳಕಿನಿಂದ ಇಡಿಯ ಜಗತ್ತನ್ನು ಎಚ್ಚರಿಸುವೆಯೋ, ಆ ತೇಜಸ್ಸಿನಿಂದಲೇ ಅನ್ನದ ಅಭಾವವನ್ನೂ ಹೋಗಲಾಡಿಸು; ನಮ್ಮ ಜಡತ್ವವನ್ನೂ ತೊಲಗಿಸು; ರೋಗಗಳಿಂದಲೂ ಕೆಟ್ಟ ಕನಸುಗಳಿಂದಲೂ ನಮ್ಮನ್ನು ಕಾಪಾಡು.’

ಸೂರ್ಯ ನಮ್ಮ ಜೀವನದ ಎಲ್ಲ ಆಯಾಮಗಳನ್ನೂ ಹೇಗೆ ಪ್ರಭಾವಿಸುತ್ತಿದ್ದಾನೆ ಎಂಬುದನ್ನು ಈ ಮಂತ್ರ ಸೊಗಸಾಗಿ ಧ್ವನಿಸಿದೆ. ನಮ್ಮ ಆಹಾರ, ವಿಹಾರ, ಆರೋಗ್ಯ, ಬುದ್ಧಿ – ಹೀಗೆ ಎಲ್ಲ ವಿವರಗಳಲ್ಲೂ ಸೂರ್ಯನ‍ಪ್ರಭಾವ ಇರುವುದು ಸ್ಪಷ್ಟ. ಇಂಥ ಸೂರ್ಯನ ಆರಾಧನೆಗೆ ಮೀಸಲಾದ ದಿನವೇ ರಥಸಪ್ತಮಿ.

ಸೂರ್ಯಾರಾಧನೆಗೆ ಇನ್ನೊಂದು ಆಯಾಮವೂ ಉಂಟು. ಇಡಿಯ ಸೃಷ್ಟಿಯೇ ಪರಮಾತ್ಮನ ಅಧೀನ. ಈ ಪರಮಾತ್ಮನು ಪರಂಜ್ಯೋತಿಯೂ ಹೌದು. ಅವನ ಪ್ರತೀಕವೇ ಸೂರ್ಯ. ಹೀಗಾಗಿ ಭಗವಂತನ ಆರಾಧನೆಯಲ್ಲಿ ನಮ್ಮ ಋಷಿಗಳು ಸೂರ್ಯೋಪಾಸನೆಗೆ ತುಂಬ ಮಹತ್ವವನ್ನು ಕೊಟ್ಟರು. ಸೂರ್ಯನಾರಾಯಣ – ಎಂದೇ ಅವನನ್ನು ಪೂಜಿಸಲಾಗುತ್ತದೆ.

ರಥಸಪ್ತಮಿಯ ದಿನ ಸೂರ್ಯನಮಸ್ಕಾರವನ್ನು ಮಾಡುವ ಪದ್ಧತಿಯೂಉಂಟು. ಆರೋಗ್ಯಕ್ಕೂ ಸೂರ್ಯನಿಗೂ ಇರುವ ಸಂಬಂಧವನ್ನು ಈ ಆಚರಣೆ ಎತ್ತಿಹಿಡಿಯುತ್ತದೆ.

ಸೂರ್ಯನ ಸ್ವಭಾವ ಬೆಳಕು. ಬೆಳಕು ನಮ್ಮ ಜೀವನಕ್ಕೆ ಬೇಕಾದ ದಾರಿಯೇ ಹೌದು. ನಮ್ಮ ಬಹಿರಂಗಕ್ಕೆ ಮಾತ್ರವಲ್ಲದೆ, ಅಂತರಂಗಕ್ಕೂ ಬೆಳಕಿನ ಆವಶ್ಯಕತೆಯಿದೆ. ಹೊರಗಿನ ಬೆಳಕಿಗೆ ಸೂರ್ಯ ಕಾರಣವಾದರೆ, ಒಳಗಿನ ಬೆಳಕಿಗೆ ನಮ್ಮೊಳಗೆ ಚೈತನ್ಯಸ್ವರೂಪದಲ್ಲಿರುವ ಆತ್ಮವಸ್ತುವೇ ಕಾರಣ. ಹೀಗಾಗಿ ಸೂರ್ಯನು ಪರಬ್ರಹ್ಮಸ್ವರೂಪನೂ ಎನಿಸಿಕೊಳ್ಳುತ್ತಾನೆ.

ಭಗವಂತನನ್ನು ವಿವಿಧ ಸಂಕೇತಗಳಲ್ಲಿ ಕಂಡು, ಆರಾಧಿಸುವ ಕ್ರಮ ಉಂಟು. ಆದರೆ ಸೂರ್ಯ ನಮ್ಮ ಪಾಲಿಗೆ ಪ್ರತ್ಯಕ್ಷ ದೈವ. ನಮ್ಮ ಕಣ್ಣಿಗೆ ಕಾಣುವ ಈ ದೇವರನ್ನು ಪೂಜಿಸಿದರೆ ಎಲ್ಲ ದೇವರನ್ನೂ ಪೂಜಿಸಿದ ಫಲ ಬರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT