ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಕೃತಜ್ಞತೆಯೆಂಬ ಕೈವಲ್ಯ ಗುಣ

ಜೀವನ –ಸೌಂದರ್ಯ
Last Updated 8 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಚಿಂತನಶೀಲ ಜೀವಿಯೆನಿಸಿಕೊಂಡ ಮನುಷ್ಯನ ಬದುಕಿಗೆ ಮೆರುಗು ನೀಡುವುದು ಕೃತಜ್ಞತೆಯೆಂಬ ಗುಣ. ಅಶನ-ವಸನ-ವಸತಿಗಳಷ್ಟೇ ಜೀವನದ ಮುಖ್ಯ ಗುರಿಯಲ್ಲ. ಪ್ರಾಣಿಗಳೂ ಈ ಮೂಲ ಬಯಕೆಗಳನ್ನು ಈಡೇರಿಸಿಕೊಳ್ಳುತ್ತವೆ, ಇವುಗಳಿಗಾಗಿ ಬಡಿದಾಡುತ್ತವೆ, ಈ ತೃಷೆಗಳ ವರ್ತುಲದಲ್ಲೇ ಬದುಕನ್ನು ಮುಗಿಸಿಬಿಡುತ್ತವೆ. ಆದರೆ ಮನುಷ್ಯನೆಂಬ ಪ್ರಾಣಿಗೆ ಚಿಂತನೆಯ ಶಕ್ತಿ ಇರುವುದರಿಂದ ಅವನು ಈ ಮೂಲ ಪ್ರವೃತ್ತಿಗಳೊಂದಿಗೆ ಕೆಲವು ಮೌಲ್ಯಗಳನ್ನು ಬದುಕಿಗೆ ಅಳವಡಿಸಿಕೊಂಡು ಜೀವನದ ಸವಾಲುಗಳಿಂದ ವಿಹ್ವಲನಾಗದೆ ಶಾಂತವಾಗಿ ಸಾವನ್ನು ಎದುರಿಸುವ ಹಂತ ಮುಟ್ಟುವ ಪ್ರಯತ್ನ ಮಾಡುತ್ತಾನೆ.

ಕ್ಷಮೆ, ಶಾಂತಿ, ದಯೆ, ಕರುಣೆ, ಉಪಕಾರಸ್ಮರಣೆ ಇವುಗಳಲ್ಲಿ ಮುಖ್ಯವಾದವು. ಆಂತರಿಕ ಮೌಲ್ಯಗಳಾದ, ತಪದ ತಂತ್ರಗಳಾದ ಧ್ಯಾನ, ಜಪ, ಯೋಗ(ಶಮ, ದಮ, ತಿತೀಕ್ಷಾ) ಮೊದಲಾದ ಅಂಶಗಳು ವ್ಯಕ್ತವಾಗುವುದೇ ವ್ಯಕ್ತಿಯ ಲೋಕವ್ಯವಹಾರದಲ್ಲಿ. ಅವನು ಜನರೊಂದಿಗೆ ಒಡನಾಡುವಾಗ ಮೇಲೆ ಕಾಣಿಸಿದ ಕ್ಷಮೆಯೇ ಮೊದಲಾದ ವ್ಯಕ್ತಗುಣಮೌಲ್ಯಗಳ ಮೂಲಕ ಸಹಬಾಳ್ವೆಯ ಸೊಗವನ್ನು ಹೆಚ್ಚಿಸುತ್ತಾನೆ.

ಕೃತಜ್ಞತೆಯೆಂಬ ಗುಣ ಮನುಕುಲದಲ್ಲಿ ಹೆಚ್ಚೆಚ್ಚು ವ್ಯಕ್ತವಾದಷ್ಟೂ ಜಗತ್ತು ಹೆಚ್ಚೆಚ್ಚು ಶಾಂತಿಯಿಂದ ಇರಲು ಸಾಧ್ಯ. ಈ ಸಂಪ್ರದಾಯ ಪ್ರಪಂಚದ ಎಲ್ಲ ಸಮುದಾಯಗಳಲ್ಲಿ ವ್ಯಕ್ತವಾಗುತ್ತ ಬಂದಿದೆ. ಕಾಣದ ಶಕ್ತಿಯೊಂದಕ್ಕೆ, ಪಡೆದ ನೆರವಿಗೆ ಕೈ ಮುಗಿವುದೇ ಕೃತಜ್ಞತೆ. ಅಸ್ಸಿಸ್ಸಿಯ ಸಂತ ಫ್ರಾನ್ಸಿಸ್ ತನ್ನ ಪ್ರಾರ್ಥನೆಯಲ್ಲಿ, ‘ಕೊಡುವುದರಿಂದ ಪಡೆವೆವು’ ಎನ್ನುತ್ತಾನೆ. ‘ಕೊಟ್ಟು ಕೆಟ್ಟವರಿಲ್ಲ’, ‘ನೀಡಿದೆನೆಂಬುದು ನಿಜದಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’ ಎಂಬ ಸಂತವಾಣಿಗಳೆಲ್ಲ ನೆನಪಿಸುವುದು ಇದನ್ನೇ. ಸ್ವಾಮಿ ವಿವೇಕಾನಂದರಂತೂ, ನಾವು ಪಡೆದುದಕ್ಕೆ ಕೃತಜ್ಞರಾಗುವುದಕ್ಕಿಲೂ, ನಾವು ಕೊಡಲು ಸಾಧ್ಯವಾದುದರ ಬಗ್ಗೆ ಕೃತಜ್ಞರಾಗಿರಬೇಕು ಎನ್ನುತ್ತಾರೆ. ‘ನೆರವು ನೀಡಿದ ಮನುಷ್ಯನಿಗೆ ನೀವು ಕೃತಜ್ಞರಾಗಿರಿ. ಅವನನ್ನೇ ದೈವವೆಂದು ಬಗೆಯಿರಿ. ಸಹಮಾನವರ ಸೇವೆಯ ಸದವಕಾಶದ ಮೂಲಕ ದೇವರ ಪೂಜೆಯನ್ನೇ ಮಾಡುವಂತಾದದ್ದು ನಮ್ಮ ಸೌಭಾಗ್ಯವಲ್ಲವೆ?’ ಎಂದು ಪ್ರಶ್ನಿಸುತ್ತಾರೆ ವಿವೇಕಾನಂದರು.

ಬದುಕಿನ ಸಂಕಟದ ಸಮಯದಲ್ಲಿ ಕೃತಜ್ಞತೆಯ ಭಾವವನ್ನು ಬಿಡದಿರುವುದೇ ದೊಡ್ಡ ಗುಣ. ಸಂತ ಪಾಲನು, ‘ಪ್ರತಿಯೊಂದಕ್ಕೂ ಕೃತಜ್ಞತೆ ಅರ್ಪಿಸಲು ಮರೆಯದಿರಿ. ಏಕೆಂದರೆ ಅದೇ ಭಗವಂತನ ಇಚ್ಛೆ’ ಎನ್ನುತ್ತಾನೆ. ಈ ಮಾತಿನ ಭಾವಾರ್ಥವೆಂದರೆ, ಕೃತಜ್ಞತೆಯ ಭಾವವವನ್ನು ಅಧಿಕವಾಗಿ ಹೊಂದುವುದರಿಂದ ನಾವು ದುಃಖ, ಬೇಸರದ ಸರಪಳಿಗಳಿಂದ ಮುಕ್ತರಾಗುತ್ತೇವೆ. ಬುದ್ಧನ ಜಾತಕಕಥೆಗಳಲ್ಲಿ ಹೆಚ್ಚು ವ್ಯಕ್ತವಾಗುವುದು ಅವನ ಉಪಕಾರಸ್ಮರಣೆಯ ಗುಣವಿಕಾಸ. ಹಂತ ಹಂತವಾಗಿ ಅದು ಬೆಳೆದು ಅವನು ಬುದ್ಧಸ್ಥಿತಿ(ಜನ್ಮ) ಪಡೆಯುವುದನ್ನು ಗಮನಿಸಬಹುದು. ಕೃತಜ್ಞತೆಯನ್ನು ತೋರುವುದು ಬಹುದೊಡ್ಡ ಗುಣ. ಅದರಿಂದ ಉಗಮಿಸುವ ಸಜ್ಜನಿಕೆ ವ್ಯಕ್ತಿಯನ್ನು ಪಕ್ವಗೊಳಿಸುತ್ತದೆ. ಶ್ರೀ ರಾಮಕೃಷ್ಣರಲ್ಲಿದ್ದ ವಿನೀತಭಾವವನ್ನು ಮೀರಲು ಯಾರಿಗೂ ಸಾಧ್ಯವಿರಲಿಲ್ಲ. ಯಾರಾದರೂ ಅವರಿಗೆ ಬಾಗಿ ನಮಿಸಿದರೆ, ಪ್ರತಿಯಾಗಿ ಅವರು ಇನ್ನಷ್ಟು ಬಾಗಿ ನಮಿಸುತ್ತಿದ್ದರಂತೆ; ಮತ್ತೆ ಅವರೇನಾದರೂ ಇನ್ನೂ ಬಾಗಿ ನಮಸ್ಕರಿಸಿದರೆ ಶ್ರೀ ರಾಮಕೃಷ್ಣರು ಮತ್ತಷ್ಟು ಬಾಗಿ ನಮಸ್ಕಾರ ಮಾಡುತ್ತಿದ್ದರಂತೆ. ಹೀಗೆ ಅವರನ್ನು ಈ ಕೃತಜ್ಞತೆ, ವಿನೀತಭಾವಗಳಲ್ಲಿ ಸೋಲಿಸಲು ಯಾರಿಗೂ ಸಾಧ್ಯವಿರಲಿಲ್ಲ.

ಕೃತಜ್ಞತೆ ದೊಡ್ಡ ಗುಣ. ಪಡೆದುಕೊಂಡವರಲ್ಲಿ ಅದು ಇದ್ದರೆ, ಪಡೆದುಕೊಂಡವರಿಗೆ ಶೋಭೆ. ನೀಡುವ ಅವಕಾಶ ದೊರೆತ ಬಗ್ಗೆ ನೀಡಿದವರಿಗೂ ಕೃತಜ್ಞತಾಭಾವ ಇದ್ದರೆ ಅದು ನೀಡಿದವರಿಗೆ ಶೋಭೆ. ಜಗತ್ತು ನಿಂತಿರುವುದೇ ಇಂತಹ ಸಾಮಾನ್ಯ ಗುಣವಿಕಾಸಗಳಲ್ಲಿ ಎಂಬುದನ್ನು ಅರಿಯುವುದೇ ನಿಜವಾದ ಧರ್ಮ. ಅಂತಹ ಧರ್ಮ ನಮ್ಮದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT