ಸೋಮವಾರ, ಆಗಸ್ಟ್ 8, 2022
21 °C

ರಕ್ಷಾಬಂಧನ: ಭಾವಕ್ಕೆ ಬಲದ ಕಂಕಣ

ನವೀನ ಗಂಗೋತ್ರಿ Updated:

ಅಕ್ಷರ ಗಾತ್ರ : | |

ರಕ್ಷಾಬಂಧನ–ಪ್ರಾತಿನಿಧಿಕ ಚಿತ್ರ

ಶ್ರಾವಣಪೂರ್ಣಿಮೆಯನ್ನು ಉಪಾಕರ್ಮದ ದಿನವನ್ನಾಗಿ, ರಕ್ಷಾಬಂಧನದ ಹಬ್ಬವಾಗಿ ಆಚರಿಸುತ್ತೇವೆ. ಅಂದಿನ ದಿನವನ್ನೇ ಸಂಸ್ಕೃತ ದಿನವನ್ನಾಗಿ ಆಚರಿಸುವುದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹೊಸದಾಗಿ ಸೇರಿಕೊಂಡ ಪರಂಪರೆ.

ಶ್ರದ್ಧಾವಂತರಿಗೆ ಬಲು ಮೆಚ್ಚಿನ ಮಾಸವಾದ ಶ್ರಾವಣಮಾಸದಲ್ಲಿ ಒಂದೊಂದು ದಿನವೂ ಪಾರಂಪರಿಕ ಮಹತ್ತ್ವವುಳ್ಳದ್ದು. ಇವತ್ತು ಶಾಸ್ತ್ರೀಯ ವಲಯದಲ್ಲಿ ಮಹಾಸಂಸ್ಕೃತಿ ಮತ್ತು ಸ್ಥಳೀಯ ಸಂಸ್ಕೃತಿ ಎಂದು ಗುರುತಿಸಲ್ಪಡುವ ಎಲ್ಲವೂ ಶ್ರಾವಣಮಾಸದಲ್ಲಿ ಇವೆ. ಚಾಂದ್ರಮಾನಕ್ಕನುಗುಣವಾಗಿ ಕರ್ನಾಟಕದಲ್ಲಿ ಶ್ರಾವಣಮಾಸವು ವಿಶೇಷದ್ದಾದರೆ ಕೇರಳ ಮತ್ತು ತಮಿಳುನಾಡುಗಳಲ್ಲಿ ಸೌರಮಾನಕ್ಕನುಗುಣವಾಗಿ ಕೆಲವಾರು ದಿನಗಳ ವ್ಯತ್ಯಾಸದಲ್ಲಿ ಬರುವ ಕರ್ಕಾಟಕಮಾಸ ಅಥವಾ ಆಟಿ-ಮಾಸವು ಅಷ್ಟೇ ವಿಶೇಷದ್ದು. ಆಯಾಯ ಪ್ರದೇಶಗಳಲ್ಲಿ ಕಾಲಗಣನೆಯ ಮಾನವೇನೇ ಇದ್ದರೂ ಭಾರತದುದ್ದಕ್ಕೂ ಈ ಕಾಲಖಂಡ ಬಲು ವಿಶಿಷ್ಟವಾದ್ದು.

ಶ್ರಾವಣಪೂರ್ಣಿಮೆಯನ್ನು ಉಪಾಕರ್ಮದ ದಿನವನ್ನಾಗಿ, ರಕ್ಷಾಬಂಧನದ ಹಬ್ಬವಾಗಿ ಆಚರಿಸುತ್ತೇವೆ. ಅಂದಿನ ದಿನವನ್ನೇ ಸಂಸ್ಕೃತದಿನವನ್ನಾಗಿ ಆಚರಿಸುವುದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹೊಸದಾಗಿ ಸೇರಿಕೊಂಡ ಪರಂಪರೆ. ಅವರವರು ಅನುಸರಿಸುವ ವೇದಗಳ ಆಧಾರದ ಮೇಲೆ ಉಪಾಕರ್ಮದ ದಿನ ವ್ಯತ್ಯಾಸವಾಗುವುದಿದೆಯಾದರೂ, ಅವೆಲ್ಲವೂ ಪೂರ್ಣಿಮೆಯ ಆಚೀಚೆಯೇ ಬರುತ್ತವೆನ್ನುವುದನ್ನು ಗಮನಿಸಬೇಕು.

ಉಪಾಕರ್ಮ ಅನ್ನುವ ಶಬ್ದವೇ ಹೇಳುವಂತೆ ಈ ಆಚರಣೆಯು ‘ತೊಡಗುವಿಕೆ‘ ಗೆ ಸಂಬಂಧಿಸಿದ್ದು. ಆಯಾಯ ವೇದಶಾಖೆಗಳನ್ನು ಮೌಖಿಕ ಪರಂಪರೆಯಲ್ಲಿ ಕಾಪಿಡುವ ಹೊಣೆ ಹೊತ್ತ ಸಮುದಾಯದವರು ತಾವು ಕಲಿತ ವೇದಭಾಗವನ್ನು ಪುನರ್ನವೀಕರಿಸಿಕೊಳ್ಳುವ ಸಂದರ್ಭ ಉಪಾಕರ್ಮವೆಂದರೆ. ಹೊಸದಾಗಿ ಉಪನೀತನಾದ ವಟು ತನ್ನ ಮೊದಲ ಅಧ್ಯಯನವನ್ನು ಆರಂಭಿಸುವ ದಿನವೂ ಇದುವೇ. ಈ ಆಚರಣೆಯು ತಿಳಿವಿನ (ವೇದದ) ತೊಡಗುವಿಕೆಗೆ ಸಂಬಂಧಿಸಿದ್ದರಿಂದ ತಿಳಿವಿನ ಅಧಿದೇವತೆಯಾದ ಗಾಯತ್ರಿಯ ಉಪಾಸನೆಯೂ, ಹಾಗೇ ಆ ತಿಳಿವನ್ನು ಮಾನವತೆಗೆ ಕೊಡಮಾಡಿದ ಋಷಿಮುನಿಗಳ ತರ್ಪಣವೂ ಇದರೊಂದಿಗೆ ಸೇರಿಕೊಂಡಿದೆ. ಪರಂಪರೆಯ ಮಹತ್ತ್ವ ಇರುವುದು ಇಲ್ಲೇ; ನಿನ್ನೆಯ ಉಪಕಾರ ಇಂದಿಗೆ ಮರೆತುಹೋಗುವ ಈ ಲೋಕದಲ್ಲಿ ಪರಂಪರೆ ಅನ್ನುವುದು ಮಾತ್ರ ಅರಿವನ್ನು ಕೊಡಮಾಡಿದ ಮಹಾಮಹಿಮರಾದ ಋಷಿಗಳನ್ನು ತಲೆತಲಾಂತರದಾಚೆಗೂ ನೆನೆಸಿಕೊಳ್ಳುತ್ತದೆ.

ಮಾನವಜೀವನವು ಹೊರಜಗತ್ತಿನಲ್ಲಿ ಇರುವಂತೆ ಭಾಸವಾದರೂ ವಸ್ತುತಃ ಅದು ಸಂಭವಿಸುತ್ತಿರುವುದು ಅರೆ ಎಚ್ಚರದ ಆಂತರಿಕ ಜಗತ್ತಿನಲ್ಲಿ. ಗಾಯತ್ರಿ ಎಂಬಾಕೆ ಪೂರ್ಣ ಎಚ್ಚರಿನ (ಬುದ್ಧಿಯ) ದೇವತೆ. ಮತ್ತವಳು ವೇದ (ತಿಳಿವು) ಮಾತೆಯೂ ಹೌದು. ಹಾಗಾಗಿ ತಿಳಿವಿನ ಪ್ರಸಂಗ ಇರುವಲ್ಲೆಲ್ಲ ಗಾಯತ್ರಿಯ ಪ್ರಸಂಗವೂ ಇದ್ದಿರುತ್ತದೆ. ಗಾಯತ್ರೀ ಅನ್ನುವುದು ಇಪ್ಪತ್ತನಾಲ್ಕು ಅಕ್ಷರಗಳ ಒಂದು ಛಂದಸ್ಸು. ಈ ಛಂದಸ್ಸಿನಲ್ಲಿ ಕಾಣಿಸಿಕೊಳ್ಳುವ ಬೇರೆಬೇರೆ ದೇವತೆಗಳ ಮಂತ್ರಗಳಿದ್ದರೂ ಗಾಯತ್ರೀ ಹೆಸರಿನಿಂದ ಖ್ಯಾತವಾದ್ದು ಮಾತ್ರ ಸವಿತೃಗಾಯತ್ರೀ ಅಥವಾ ಸೂರ್ಯಗಾಯತ್ರೀ ಮಂತ್ರ. ಹೆಸರಿಗೆ ತಕ್ಕಂತೆ ಇದು ಬುದ್ಧಿಯ ಬೆಳಗುವಿಕೆಗಾಗಿ ಸೂರ್ಯನನ್ನು ಕುರಿತಾದ ಪ್ರಾರ್ಥನೆ. ವೇದಗಳ ಅಧ್ಯಯನದ ಮೂಲವೇ ಗಾಯತ್ರಿಯಾದ್ದರಿಂದ ಆಕೆಯ ಉಪಾಸನೆಯು ವೈದಿಕರಿಗೆ ನಿತ್ಯಕರ್ಮವೂ ಹೌದು.

ವೇದ ಮತ್ತು ಗಾಯತ್ರೀ – ಇವೆರಡೂ ತೀರಾ ಬೌದ್ಧಿಕ ವಲಯದ ವಿಚಾರಗಳು. ಶ್ರಾವಣಪೂರ್ಣಿಮೆಯಾದರೋ ಬೌದ್ಧಿಕವಲಯಕ್ಕೆ ಮಾತ್ರ ಸೀಮಿತವಾಗದೇ ಸಾಮಾನ್ಯ ಜನರ ಬದುಕನ್ನೂ ಸೋಕುತ್ತದೆ.

ಸುರಕ್ಷತೆಯ ಭಾವ ಅನ್ನುವುದಿದೆಯಲ್ಲ, ಅದು ಆಹಾರ ನಿದ್ರೆ ಇತ್ಯಾದಿ ಅಗತ್ಯಗಳಂತೆಯೇ ಮಾನವಮನಸ್ಸಿಗೆ ಅತ್ಯಾವಶ್ಯಕವಾದ ಒಂದು ಸಂಗತಿ. ಸುರಕ್ಷತಾ ಭಾವವಿಲ್ಲದೆ ಬದುಕು ಸುಂದರವಾಗಿರದು. ಕುಟುಂಬ, ಸಮುದಾಯ ಮತ್ತು ಸಮಾಜಗಳು ತಮ್ಮಲ್ಲೇ ಪರಸ್ಪರ ಈ ಸುರಕ್ಷತಾ ಭಾವವನ್ನು ಹುಟ್ಟಿಸಿಕೊಳ್ಳುವ ಹಬ್ಬ ರಕ್ಷಾಬಂಧನವೆಂದರೆ. ಸಹೋದರಿ ಸಹೋದರನಿಗೆ ಕಟ್ಟುವ ರಕ್ಷೆಯಾದರೂ ಇದೇ ಅರ್ಥದ್ದು. ಭ್ರಾತೃಭಾವದ ಜಾಗರಣಕ್ಕಾಗಿ ಈ ಹಬ್ಬವನ್ನೇ ವಿಸ್ತಾರಗೊಳಿಸಿ ಸಹೋದರರೂ ಪರಸ್ಪರ ರಕ್ಷಾವಿನಿಮಯ ಮಾಡಿಕೊಳ್ಳುವುದು ಈಗೀಗ ರೂಢಿಯಲ್ಲಿದೆ. ಭಯ ಹುಟ್ಟಿಸಲೆಂದೇ ಹೊರಟ ದುಷ್ಟಚಿಂತನೆಗಳ ವಿರುದ್ಧ ರಕ್ಷಾಬಂಧನ ಅನ್ನುವುದೊಂದು ಸಾತ್ತ್ವಿಕ ಯುದ್ಧ; ಇರುಳ ವಿರುದ್ಧದ ಬೆಳಕಿನ ಯುದ್ಧದಂತೆ.

ನೆನಪಿನ ಮೊತ್ತವಾದ ಪರಂಪರೆಯನ್ನೇ ವಿಸ್ತಾರವಾಗಿ ನೆನಪಿಟ್ಟುಕೊಂಡ ಈ ನೆಲದ ಭಾಷೆ ಸಂಸ್ಕೃತ. ಅದಕ್ಕಾಗಿಯೂ ಒಂದು ದಿನವಿರಲಿ ಎಂದು ಆಡಳಿತವು ಚಿಂತಿಸಿದಾಗ ಸಿಕ್ಕ ದಿನವೂ ಶ್ರಾವಣಪೂರ್ಣಿಮೆಯೇ. ಕಳೆದ ಕೆಲವು ವರ್ಷಗಳಿಂದ ಇದು ಒಂದು ದಿನದ ಬದಲಾಗಿ ಒಂದಿಡೀ ಸಪ್ತಾಹಪೂರ್ತಿ ಆಚರಿಸ್ಪಡುತ್ತಿದೆ. ಹೀಗೆ ಶ್ರಾವಣ ಪೂರ್ಣಿಮೆಯು ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳ ಮರುನವೀಕರಣದ ಒಂದು ಪರ್ವ.

ರಕ್ಷಾಬಂಧನ

ಸುರಕ್ಷತೆಯ ಭಾವ ಅನ್ನುವುದಿದೆಯಲ್ಲ, ಅದು ಆಹಾರ ನಿದ್ರೆ ಇತ್ಯಾದಿ ಅಗತ್ಯಗಳಂತೆಯೇ ಮಾನವಮನಸ್ಸಿಗೆ ಅತ್ಯಾವಶ್ಯಕವಾದ ಒಂದು ಸಂಗತಿ. ಸುರಕ್ಷತಾ ಭಾವವಿಲ್ಲದೆ ಬದುಕು ಸುಂದರವಾಗಿರದು. ಕುಟುಂಬ, ಸಮುದಾಯ ಮತ್ತು ಸಮಾಜಗಳು ತಮ್ಮಲ್ಲೇ ಪರಸ್ಪರ ಈ ಸುರಕ್ಷತಾ ಭಾವವನ್ನು ಹುಟ್ಟಿಸಿಕೊಳ್ಳುವ ಹಬ್ಬ ರಕ್ಷಾಬಂಧನವೆಂದರೆ. ಸಹೋದರಿ ಸಹೋದರನಿಗೆ ಕಟ್ಟುವ ರಕ್ಷೆಯಾದರೂ ಇದೇ ಅರ್ಥದ್ದು. ಭ್ರಾತೃಭಾವದ ಜಾಗರಣಕ್ಕಾಗಿ ಈ ಹಬ್ಬವನ್ನೇ ವಿಸ್ತಾರಗೊಳಿಸಿ ಸಹೋದರರೂ ಪರಸ್ಪರ ರಕ್ಷಾವಿನಿಮಯ ಮಾಡಿಕೊಳ್ಳುವುದು ಈಗೀಗ ರೂಢಿಯಲ್ಲಿದೆ. ಭಯ ಹುಟ್ಟಿಸಲೆಂದೇ ಹೊರಟ ದುಷ್ಟಚಿಂತನೆಗಳ ವಿರುದ್ಧ ರಕ್ಷಾಬಂಧನ ಅನ್ನುವುದೊಂದು ಸಾತ್ತ್ವಿಕ ಯುದ್ಧ; ಇರುಳ ವಿರುದ್ಧದ ಬೆಳಕಿನ ಯುದ್ಧದಂತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು