ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ | ನಿಂದಕರಿರಬೇಕು...

Last Updated 26 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಇದಿರೆನ್ನ ಹಳಿದವರು ಮತಿಯ ಬೆಳಗುವರು
ಮನದ ಕಾಳಿಕೆ ಕಳೆವವರೆನ್ನ ನಂಟರು
ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ
ಹೇಯೋಪಾದಿಯ ತೋರುವವರು
ಇದು ಕಾರಣ, ನಾನನ್ಯ ದೇಶಕ್ಕೆ ಹೋಗೆನು
ಸಕಳೇಶ್ವರದೇವರ ತೋರುವರೊಳರಿಲ್ಲಿಯೆ

ಸಕಳೇಶ ಮಾದರಸ ರಚಿಸಿರುವ ವಚನವಿದು.

ಇದಿರು ಹಳಿಯುವವರು ಎಂದರೆ ನನ್ನ ಎದುರಿಗೆ ನಿಂತು ಬೈಯುವವರು. ಪ್ರತ್ಯಕ್ಷವಾಗಿ ವ್ಯಕ್ತಿಯೊಬ್ಬನ ಎದುರಿಗೆ ಬಂದು ನಿಂದಿಸಬೇಕಾದಾಗ ಆ ವಿಚಾರದಲ್ಲಿ ಸತ್ಯಾಂಶ ಇರಬೇಕಾಗುತ್ತದೆ. ಆದ್ದರಿಂದ ಮಾದರಸನ ಅಭಿಪ್ರಾಯದಲ್ಲಿ ಅಂಥವರು ತನ್ನ ಬುದ್ಧಿಯನ್ನು ಬೆಳಗುವವರು. ಅಂದರೆ ಅವರು ನಮ್ಮ ಜ್ಞಾನವನ್ನು ಹೆಚ್ಚಿಸುತ್ತಾರೆ. ನಮ್ಮ ಅರಿವಿನಾಚೆಯ ವಿಚಾರಗಳನ್ನು ತಿಳಿಸುವವರು ಸಹಜವಾಗಿಯೇ ನಮ್ಮ ತಿಳಿವಿನ ಕ್ಷಿತಿಜವನ್ನು ಹೆಚ್ಚಿಸುತ್ತಾರೆ. ಅವರು ಬೈದರು ಎಂಬ ಒಂದೇ ಕಾರಣಕ್ಕಾಗಿ ನಾವು ಅವರನ್ನು ದ್ವೇಷಿಸಬಾರದು. ನಮಗೇ ತಿಳಿಯದ ನಮ್ಮ ತಪ್ಪುಗಳನ್ನು ಅವರು ಹೇಳುತ್ತಿರಬಹುದಲ್ಲವೆ?

ಕಾಳಿಕೆ ಎಂದರೆ ಕತ್ತಲೆ. ಮನದ ಕಾಳಿಕೆ ಎಂದರೆ ಅಜ್ಞಾನ. ನಮ್ಮ ಅಜ್ಞಾನವನ್ನು ಕಡಿಮೆ ಮಾಡುವವರು ನಮ್ಮ ನೆಂಟರು ಎಂದೇ ಭಾವಿಸಬೇಕು. ದುರಾಚಾರಿಗಳು ‘ನಾವು ಹೀಗೆ ಇರಬಾರದು’ ಎನ್ನುವುದಕ್ಕೆ ಮಾದರಿಯಾಗಿರುತ್ತಾರೆ. ಅವರನ್ನು ಕನ್ನಡಿಯಂತೆ ಭಾವಿಸಿಕೊಂಡರೆ ನಾವು ‘ಹೀಗೆ ಆಗಬಾರದು’ ಎಂಬ ಎಚ್ಚರಿಕೆಯೂ ಮೂಡುತ್ತದೆ. ‘ನಾವೇ ಇವರು’ ಎಂದು ಅಂದುಕೊಂಡರೆ ನಮ್ಮನ್ನು ಇನ್ನಷ್ಟು ಸರಿಪಡಿಸಿಕೊಳ್ಳಬಹುದು. ಹೇಯವಾಗಿ ಬದುಕಿದರೆ ಎಷ್ಟು ಅಸಹ್ಯವಾಗಿರುತ್ತದೆ ಎಂಬುದಕ್ಕೆ ನಿದರ್ಶನವಾಗುತ್ತಾರೆ ದುರುಳರು.

ಹೀಗೆ ನಮಗೆ ಅಗತ್ಯವಿರುವ ಒಳ್ಳೆಯ-ಕೆಟ್ಟ ಉದಾಹರಣೆಗಳೆಲ್ಲ ಇಲ್ಲಿಯೇ ನಮ್ಮ ಸುತ್ತಮುತ್ತಲು ಇವೆ. ನಮ್ಮನ್ನು ನಾವು ತಿದ್ದಿಕೊಳ್ಳುವುದಕ್ಕೆ ನಾವಿರುವ ಪರಿಸರದಲ್ಲಿಯೇ ಬೇಕಾದಷ್ಟು ಅವಕಾಶಗಳಿವೆ. ಹಾಗಿರುವಾಗ ನಾನು ಬೇರೆ ದೇಶಕ್ಕೆ ಹೋಗಬೇಕಾದ ಅವಶ್ಯಕತೆಯೇ ಇಲ್ಲ ಎನ್ನುವುದು ಮಾದರಸನ ಅಭಿಪ್ರಾಯ.

ಬದುಕಿನಲ್ಲಿ ಎಲ್ಲವನ್ನೂ ಸಕಾರಾತ್ಮಕವಾಗಿಯೇ ಸ್ವೀಕರಿಸಬೇಕೆಂಬ ವ್ಯಕ್ತಿತ್ವ ವಿಕಸನದ ನಿಲುವನ್ನು ಈ ವಚನ ಬಹಳ ಸುಂದರವಾಗಿ ಪ್ರತಿಪಾದಿಸುತ್ತದೆ. ನಮ್ಮನ್ನು ನಿಂದಿಸುತ್ತಾರೆಂದು ಮನಸ್ಸನ್ನು ಕುಗ್ಗಿಸುವ ಬದಲಿಗೆ ಅದರಿಂದ ನಮಗೆ ಪ್ರಯೋಜನವಿದೆ ಎಂದು ಭಾವಿಸಿಕೊಳ್ಳುವುದು ಬಹಳ ದೊಡ್ಡ ಜೀವನಾದರ್ಶವಾಗಿದೆ. ಸಮಾಜ ಎಂದ ಮೇಲೆ ಎಲ್ಲ ಬಗೆಯ ಜನರೂ ಇರುತ್ತಾರೆ. ಸಜ್ಜನರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ದುರಾಚಾರಿಗಳು ಇರುತ್ತಾರೆ. ಅವರ ಅಸ್ತಿತ್ವದ ಕುರಿತು ಕಹಿಭಾವನೆಯನ್ನು ತಾಳುವುದರಿಂದ ಅವರೇನು ಸುಧಾರಣೆಗೊಳ್ಳುವುದಿಲ್ಲ; ಆದರೆ ನಮ್ಮ ಮನಸ್ಸು ಪ್ರಕ್ಷುಬ್ಧಗೊಳ್ಳುತ್ತದೆ. ಅದರ ಬದಲು ಅವರು ಇರುವುದರಿಂದಲೂ ನಮಗೆ ಒಳಿತೇ ಆಗುತ್ತದೆ ಎಂಬ ದೃಷ್ಟಿಕೋನವನ್ನು ಬೆಳೆಸಿಕೊಂಡರೆ ಬದುಕು ಇನ್ನಷ್ಟು ಸುಂದರವೆಂದು ಭಾಸವಾಗುತ್ತದೆ. ಒಳಿತು-ಕೆಡುಕು ಅಥವಾ ಸೌಂದರ್ಯ-ಕುರೂಪ ಇವೆಲ್ಲ ನಮ್ಮ ದೃಷ್ಟಿಯಲ್ಲಿ ಇರುತ್ತದೆಯೇ ಹೊರತು ಬಾಹ್ಯ ಪ್ರಪಂಚದ ವಸ್ತುಗಳಲ್ಲಿರುವುದಿಲ್ಲ. ಎಲ್ಲರ ಉಪಸ್ಥಿತಿಯನ್ನೂ ಸಕಾರಾತ್ಮಕವಾಗಿ ನೋಡಬಲ್ಲ ಮಾನಸಿಕ ಧೃಡತೆಯನ್ನು ರೂಢಿಸಿಕೊಂಡರೆ ಪ್ರತಿಯೊಂದು ಸ್ಥಿತಿಯಲ್ಲಿಯೂ ಹೆಚ್ಚಿನ ಸಾಧನೆ ಮಾಡಬಲ್ಲ ಶಕ್ತಿಯು ನಮಗೆ ಒದಗಿ ಬರುತ್ತದೆ. ಇಂತಹ ಅದ್ಭುತ ಆಲೋಚನೆಯನ್ನು ಮಾದರಸನು ಬಹಳ ಮಾರ್ಮಿಕವಾಗಿ ಪ್ರತಿಪಾದಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT