ಭಾನುವಾರ, ನವೆಂಬರ್ 29, 2020
20 °C

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–14

ಡಾ.ಬಸವರಾಜ ಸಾದರ Updated:

ಅಕ್ಷರ ಗಾತ್ರ : | |

ಹಿಂದಣ ಸುಖ, ಮುಂದಣ ದುಃಖಂಗಳು
ಮುಂದಣ ಸುಖ, ಹಿಂದಣ ದುಃಖಂಗಳು
ಇವ ತಾ ಸಂಧಿಸಿ ಅನುಭವಿಸಿದಲ್ಲಿ ಸಂಚಿತ ಪ್ರಾರಬ್ಧ
ಆಗಾಮಿಗಳೆಂದು
ಅಲ್ಲಿಯಲ್ಲಿ ಸಂಕಲ್ಪಿಸಿ ಕೇಳಲೇತಕ್ಕೆ?
ಹಿಂದೆ ಅಳಿದವರ ಕೇಳಿ, ಮುಂದೆ ಸಾವವರ ಕಂಡು
ಅಂದಂದಿಗೆ ನೂರು ತುಂಬಿತ್ತೆಂದು ಸಂದೇಹ
ನಿವೃತ್ತಿಯಾಗಿರಬೇಕು,
ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮಲಿಂಗವನರಿವುದಕ್ಕೆ.

- ಬಾಹೂರ ಬೊಮ್ಮಣ್ಣ 

ನಮ್ಮ ಮೂಲಭೂತವಾದಿ ಪರಂಪರೆಯು, ಹಿಂದಿನ ಜನ್ಮದಿಂದ ಬರುವ ಸಂಚಿತ ಕರ್ಮ, ಈ ಜನ್ಮದಲ್ಲಿ ಒಟ್ಟುಗೂಡುವ ಪ್ರಾರಬ್ಧ ಕರ್ಮ ಮತ್ತು ಮುಂದಿನ ಜನ್ಮಕ್ಕೆ ಹೋಗುವ ಆಗಾಮಿ ಕರ್ಮ-ಎಂದು ಮೂರು ಬಗೆಯ ಕರ್ಮಗಳಿವೆ ಎಂಬ ಹುಸಿ ಕಲ್ಪನೆ ಬಿತ್ತಿದೆ. ಅಜ್ಞ ಜನತೆಯ ಮೇಲೆ ಇಂಥ ಮೋಸದ ತಂತ್ರ ಹೇರಿ, ಅವುಗಳ ನಿವಾರಣೆಗೆ ತಮ್ಮ ಪುರೋಹಿತಿಕೆಯಲ್ಲಿಯೇ ಎಂಥೆಂಥದ್ದೋ ಪೂಜೆ-ಪುನಸ್ಕಾರ ಮಾಡಬೇಕೆಂಬ ಮಂಕುಬೂದಿ ಎರಚಿ, ಇಡೀ ಜನಸಮುದಾಯವನ್ನು ಅಂಧಃಕ್ಕಾರದಲ್ಲಿ ಕೆಡವಿದ ಪರಂಪರೆ ಅದು. ಇಂಥ ಅನೇಕ ಕುತಂತ್ರಗಳ ಹಿಂದಿದ್ದ ಸತ್ಯವನ್ನು ಬಯಲಿಗೆಳೆದ ಹನ್ನೆರಡನೆಯ ಶತಮಾನದ ಶರಣರು, ಜನಸಾಮಾನ್ಯರು ಅವುಗಳಿಂದ ಮೋಸಹೋಗುವುದನ್ನು ತಪ್ಪಿಸುವ ವಿನೂತನ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿದರು. ವಚನಕಾರರ ಅಂಥ ವೈಜ್ಞಾನಿಕ ಧೋರಣೆಗೆ ಸಾಕ್ಷಿಯಾದ ಅಸಂಖ್ಯ ವಚನಗಳಲ್ಲಿ ಬಾಹೂರ ಬೊಮ್ಮಣ್ಣ ಈ ವಚನವೂ ಒಂದು.

ಈ ವಚನ ಪ್ರವೇಶಿಸುವ ಮುನ್ನ, ಲೆಬನಾನಿನ ಶ್ರೇಷ್ಠ ಲೇಖಕ ಖಲೀಲ್ ಗಿಬ್ರಾನನು, ಸುಖ-ದುಃಖಗಳ ಬಗ್ಗೆ ಹೇಳಿರುವ ಮಾತೊಂದನ್ನು ನೆನಪಿಸಿಕೊಳ್ಳುವುದು ಅಗತ್ಯ. ಆತ ಹೇಳುತ್ತಾನೆ, ‘ಅವೆರಡನ್ನೂ ಬೇರ್ಪಡಿಸಲಾಗದು, ಅವು ಒಟ್ಟಾಗಿಯೇ ಬರುತ್ತವೆ. ಒಂದು ನಿಮ್ಮೊಡನೆ ಊಟಕ್ಕೆ ಕುಳಿತಾಗ, ಮತ್ತೊಂದು ನಿಮ್ಮ ಹಾಸಿಗೆಯ ಮೇಲೆ ನಿದ್ರಿಸುತ್ತಿರುತ್ತದೆ’ ಎಂದು. ಈ ಮಾತು ಬಾಹೂರ ಬೊಮ್ಮಣ್ಣನ ಪ್ರಸ್ತುತ ವಚನದ ಆರಂಭದಲ್ಲಿರುವ ‘ಹಿಂದಣ ಸುಖ, ಮುಂದಣ ದುಃಖಂಗಳು. ಮುಂದಣ ಸುಖ, ಹಿಂದಣ ದುಃಖಂಗಳು’ಎಂಬ ಮಾತಿನ ಪ್ರತಿಧ್ವನಿಯಂತಿದೆ. ನಾವು ಅನುಭವಿಸುವ ಸುಖ-ದುಃಖಗಳು ಒಂದರ ಒಳಗೆ   ಮತ್ತೊಂದು ಸೇರಿಕೊಂಡಿದ್ದು, ಅವು ಒಂದಾದ ನಂತರ ಇನ್ನೊಂದರಂತೆ ಬರುವ ಅನಿವಾರ್ಯ ವಿದ್ಯಮಾನಗಳು. ಹೀಗಿರುವಾಗ ಅವುಗಳಿಗೆ ಮುಖಾಮುಖಿಯಾಗಬೇಕೇ ಹೊರತು, ಅವು ಸಂಚಿತ, ಪ್ರಾರಬ್ಧ ಮತ್ತು ಆಗಾಮಿ ಕರ್ಮದ ಫಲಗಳು ಎಂದೆನ್ನುವ ಸುಳ್ಳು ಮಾತು ನಂಬಿ, ಅವುಗಳ ಪರಿಹಾರಕ್ಕೆ ಅಲ್ಲಿ ಇಲ್ಲಿ ಅಲೆದು ಕಣಿ ಕೇಳುವ ಅಗತ್ಯವಿಲ್ಲ ಎನ್ನುತ್ತಾನೆ ಬಾಹೂರ ಬೊಮ್ಮಣ್ಣ.

ಇಷ್ಟಕ್ಕೇ ನಿಲ್ಲದ ಬೊಮ್ಮಣ್ಣ, ಹಿಂದೆ ಅಳಿದು ಹೋದವರ ಮತ್ತು ಮುಂದೆ ಸಾಯುವವರ ವಾಸ್ತವ ಸ್ಥಿತಿಯನ್ನು ನೈಜ ನೆಲೆಯಲ್ಲಿ ಅರಿತು, ನಮಗೆ ಈಗಾಗಲೇ ನೂರು ವರ್ಷ ತುಂಬಿದೆಯೆಂದು ಧೈರ್ಯದಿಂದ ಬದುಕುವುದನ್ನು ಕಲಿಯಬೇಕೆಂದು ಸೂಚಿಸುತ್ತಾನೆ. ಕರ್ಮ ಕುರಿತ ನಮ್ಮ ಸಂದೇಹದ ನಿವಾರಣೆಗೆ ಅದೇ ಅತ್ಯಂತ ಸೂಕ್ತ ಮಾರ್ಗವೆಂಬುದು ಅವನ ಅಭಿಪ್ರಾಯ.

ಸಾಮಾನ್ಯ ಜನತೆಯಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿ, ಅವರನ್ನು ಸತ್ಯದ ಹುಡುಕಾಟಕ್ಕೆ ಹಚ್ಚಿದ ಶರಣರ ಅನನ್ಯ ಕ್ರಮಕ್ಕೆ ಬಾಹೂರ ಬೊಮ್ಮಣ್ಣನ ಈ ವಚನ ಸೂಕ್ತ ನಿದರ್ಶನ. ಹಾಗೆಯೇ, ಮೋಸಗಾರರ ಕುತಂತ್ರವನ್ನು ನೇರವಾಗಿ ಬಯಲಿಗೆಳೆದು ತೋರಿಸುವ ಧೈರ್ಯ ಪ್ರವೃತ್ತಿಗೂ ಅದು ಸಾಕ್ಷಿ. ಅಷ್ಟೇ ಅಲ್ಲ; ಇವೆಲ್ಲಕ್ಕೂ ಮಿಗಿಲಾಗಿ, ಮೂಲಭೂತವಾದಕ್ಕೆ ಪ್ರತಿಯಾಗಿ ಮತ್ತು ಪರ್ಯಾಯವಾಗಿ ಶರಣಕ್ರಾಂತಿಯು ಕಟ್ಟಿಕೊಟ್ಟ ವೈಜ್ಞಾನಿಕ ಧೋರಣೆಗೂ ಪ್ರಸ್ತುತ ವಚನ ಅನನ್ಯ ನಿದರ್ಶನವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು