ಭಾನುವಾರ, ನವೆಂಬರ್ 29, 2020
25 °C

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–15

ಡಾ.ಬಸವರಾಜ ಸಾದರ Updated:

ಅಕ್ಷರ ಗಾತ್ರ : | |

ಒಡೆಯರು ಭಕ್ತರಿಗೆ ಸಲುವ ಸಹಪಂಕ್ತಿಯಲ್ಲಿ,
ಗುರು ಅರಸೆಂದು, ತನ್ನ ಪರಿಸ್ಪಂದವೆಂದು
ರಸದ್ರವ್ಯವ ಎಸಕದಿಂದ ಇಕ್ಕಿದಡೆ,
ಅದು ತಾನರಿದು ಕೊಂಡಡೆ ಕಿಸುಕುಳದ ಪಾಕುಳ.
ಅಲ್ಪ ಜಿಹ್ವೆಲಂಪಟಕ್ಕೆ ಸಿಕ್ಕಿ ಸಾವ ಮತ್ಸ್ಯದಂತೆಯಾಗದೆ
ಈ ಗುಣವ ನಿಶ್ಚಯಿಸಿದಲ್ಲಿ ಏಲೇಶ್ವರಲಿಂಗವನರಿಯಬಲ್ಲ.

-ಏಲೇಶ್ವರ ಕೇತಯ್ಯ

ಮನುಷ್ಯರೇ ಆದ ಹಲವರನ್ನು, ಉಚ್ಚವರ್ಣದ ಕೆಲವರು ಸಾಮುದಾಯಿಕ ಊಟದ ಪಂಕ್ತಿಗಳಲ್ಲಿ ಸೇರಿಸಿಕೊಳ್ಳದಿರುವ ಬಗ್ಗೆ ಈಗಲೂ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಇತಿಹಾಸಕಾಲದಿಂದ ನಡೆಯುತ್ತ ಬಂದ ಈ ಅಮಾನವೀಯ ಕೃತ್ಯಕ್ಕೆ, ಸಹಪಂಕ್ತಿಭೋಜನ ಮಾಡುವ ಮೂಲಕ, ಶತಶತಮಾನಗಳ ಹಿಂದೆಯೇ ಪಾಠ ಕಲಿಸಿದರು ಕಲ್ಯಾಣದ ಶರಣರು. ಇಂಥ ಕ್ರಾಂತಿಕಾರಿ ಕ್ರಮದ ಮೂಲಕ, ವರ್ಣ ಮತ್ತು ವರ್ಗಭೇದಗಳೆಂಬ ಪಿಡುಗುಗಳನ್ನು ತೊಡೆದು ಹಾಕಿ, ಸಮಾಜದಲ್ಲಿ ಸಮಾನತೆ ಸಾಧಿಸುವ ಮತ್ತು ಸ್ಥಾಪಿಸುವ ಘನ ಉದ್ದೇಶ ಅವರದಾಗಿತ್ತು. ಇದಕ್ಕೂ ಮುಂದೆ ಹೋದ ಶರಣರು, ಸಹಪಂಕ್ತಿಭೋಜನದ ಸಂದರ್ಭದಲ್ಲಿ ಅನುಸರಿಸಬೇಕಾದ ಸರ್ವಸಮಾನತೆಯ ಇನ್ನೂ ಕೆಲವು ವಿಶೇಷ ನೀತಿಸೂತ್ರಗಳನ್ನು ಪ್ರತಿಪಾದಿಸಿ, ಅವುಗಳಂತೆ ನಡೆದದ್ದು ದಾಖಲಿಸಲೇಬೇಕಾದ ಪ್ರಗತಿಪರ ನಡೆ. ಏಲೇಶ್ವರ ಕೇತಯ್ಯನ ಈ ವಚನ ಅಂಥ ನೀತಿಸೂತ್ರಗಳನ್ನು ಸ್ಪಷ್ಟವಾಗಿ ಮಂಡಿಸುತ್ತದೆಯಷ್ಟೇ ಅಲ್ಲ; ಅವುಗಳನ್ನು ಮೀರಿದರೆ ಆಗುವ ಕೆಟ್ಟ ಮತ್ತು ಅಸಹ್ಯ ಪರಿಣಾಮಗಳನ್ನೂ ಎತ್ತಿ ಹೇಳುತ್ತದೆ.

ಈ ವಚನದಲ್ಲಿ ಮೊದಲು, ಎಲ್ಲರಿಗೂ ಸಲ್ಲುವ ಸಹಪಂಕ್ತಿಭೋಜನದ ಚಿತ್ರ ಕೊಡುತ್ತ, ಅಲ್ಲಿ ದೇವರು, ಭಕ್ತರು, ರಾಜರು, ಶ್ರೀಮಂತರು, ಗುರುಗಳು ಮತ್ತು ಉಳಿದವರೆಲ್ಲರೂ ಸಮಾನವಾಗಿ ಕುಳಿತು ಊಟ ಮಾಡುತ್ತಿದ್ದರೆಂಬುದನ್ನು ದೃಢಪಡಿಸುತ್ತಾನೆ ಕೇತಯ್ಯ. ಹಾಗೆ ಸಹಪಂಕ್ತಿಯಲ್ಲಿ ಎಲ್ಲರೂ ಸಮಾನವಾಗಿ ಕುಳಿತು ಊಟ ಮಾಡುವಾಗ, ಅವರೆಲ್ಲರಿಗೂ ಊಟ ನೀಡುವ ವ್ಯಕ್ತಿಯು ಇವರು ದೇವರು, ಇವರು ಭಕ್ತರು, ಇವರು ಗುರು, ಈತ ಅರಸ, ಇವರು ನನ್ನ ಸಂಬಂಧಿಕರು ಎಂದು ಭಾವಿಸಿ, ಅವರಿಗೆ ಮಾತ್ರ ಪ್ರೀತಿಯಿಂದ ರಸಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ನೀಡಿದರೆ ಅದು ಅಸಹ್ಯ, ಅಕ್ರಮ ಎನ್ನುತ್ತಾನೆ ಆತ.

ಊಟ ನೀಡುವವನು ಹೀಗೆ ಸಹಪಂಕ್ತಿಯಲ್ಲಿರುವ ಕೆಲವರಿಗೇ ಅತಿಯಾದ ಮಮತೆಯಿಂದ ಹೆಚ್ಚು ಪದಾರ್ಥಗಳನ್ನು ನೀಡಿದಾಗ, ಸಹಪಂಕ್ತಿಯಲ್ಲಿ ಕುಳಿತವರು ಅದನ್ನು ತಿಳಿದೂ ಸುಮ್ಮನೇ ತಿಂದುಬಿಟ್ಟರೆ, ಅದು ಹೇಸಿಗೆಯನ್ನು ತಿಂದಷ್ಟೇ ತುಚ್ಛ ಕೆಲಸ ಎನ್ನುತ್ತಾನೆ ಏಲೇಶ್ವರ ಕೇತಯ್ಯ. ಈ ಕೃತ್ಯವು, ನಾಲಿಗೆಯ ರುಚಿಗಾಗಿ ಗಾಳಕ್ಕೆ ಸಿಕ್ಕಿಸಿದ ಹುಳವನ್ನು ತಿನ್ನಲು ಹೋಗುವ ಮೀನವು, ತಾನೇ ಆ ಗಾಳದಲ್ಲಿ ಸಿಕ್ಕಿಹಾಕಿಕೊಳ್ಳುವ ಸ್ಥಿತಿಯಂತೆ ಆಗುತ್ತದೆಯೆಂಬುದೂ ಅವನ ಅಭಿಮತ. ಹಾಗೆ ಮಾಡುವುದು ಸಾಮಾಜಿಕವಾಗಿ ಮಹಾಪಾಪವೆಂಬುದೇ ಇಲ್ಲಿ ಏಲೇಶ್ವರ ಕೇತಯ್ಯನ ಧ್ವನಿ. ಇಂಥ ತರತಮದ ಮತ್ತು ಭೇದ-ಭಾವದ ಕೆಟ್ಟ ಪರಿಣಾಮವನ್ನು ಅರಿತು, ಸರ್ವರೂ ಸಮಾನರೆಂಬ ಭಾವದಿಂದ ಸಹಪಂಕ್ತಿಯಲ್ಲಿ ಊಟ ಮಾಡಬೇಕೆಂಬುದೇ ಇಲ್ಲಿರುವ ಪ್ರಮುಖ ಸಂದೇಶ. ಈ ಸತ್ಯವನ್ನರಿತು ಅದರಂತೆ ಆಚರಿಸುವುದು ದೇವರಿಗೂ ಪ್ರೀತಿಯಾಗುವ ಕೆಲಸವೆನ್ನುತ್ತಾನೆ ಕೇತಯ್ಯ.

ಸಮುದಾಯದ ಎಲ್ಲರೂ ಸಹಪಂಕ್ತಿಯಲ್ಲಿ ಸಮಾನರಾಗಿ ಕುಳಿತು ಊಟ ಮಾಡುವುದಷ್ಟೇ ಅಲ್ಲ, ಹಾಗೆ ಕುಳಿತವರಲ್ಲಿ ಮತ್ತೆ ಅವರವರ ಸ್ಥಾನಮಾನಗಳನ್ನಾಧರಿಸಿ ತರತಮಗಳನ್ನು ಮಾಡಬಾರದೆಂಬ ಖಚಿತ ನಿಲುವೂ ಶರಣರದಾಗಿತ್ತು. ಏಲೇಶ್ವರ ಕೇತಯ್ಯನ ಈ ವಚನ ಸಾರುತ್ತಿರುವುದು ಅಂಥ ಸತ್ಯವನ್ನೇ. ಈಗಲೂ ಕಾಡುತ್ತಿರುವ ಸಹಪಂಕ್ತಿಭೋಜನದ ಸಮಸ್ಯೆ ಮತ್ತು ತತ್ಸಂಬಂಧಿ ಸಂಘರ್ಷಕ್ಕೆ ಶರಣರು ಅಂದೇ ತಮ್ಮ ಕ್ರಿಯಾತ್ಮಕ ನಡೆಯ ಮೂಲಕ ಉತ್ತರ ಕೊಟ್ಟಿರುವುದು ಚಾರಿತ್ರಿಕ ದಾಖಲೆ. ಪಂಕ್ತಿಭೇದ ಮತ್ತು ವ್ಯಕ್ತಿಭೇದ ಮಾಡುವವರು ಇದನ್ನರಿಯಬೇಕು-ಅನುಸರಿಸಬೇಕು. ಈಗ ಆಗಬೇಕಿರುವ ಕೆಲಸ ಅದೊಂದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು