ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಕೈಲಾಸ ಪ್ರವೇಶಿಸಿದ ಶಿವ

ಅಕ್ಷರ ಗಾತ್ರ

ಕೈಲಾಸಕ್ಕೆ ಹೋಗಬೇಕೆಂದು ಕಾಷ್ಠಾಗೂಢ, ಸುಕೇಶ ಮತ್ತು ವೃಷಭ ಎಂಬ ಮೂವರು ಪ್ರತ್ಯೇಕವಾಗಿ ಅರವತ್ತನಾಲ್ಕುಕೋಟಿ ಗಣಗಳೊ ಡನೆ ಬಂದರು. ಚೈತ್ರ, ನಕುಲೀಶ ತಲಾ ಏಳು ಕೋಟಿ ಗಣಗಳೊಡನೆ ಬಂದರೆ, ಲೋಕಾಂತಕ-ದೀಪ್ತಾತ್ಮ-ದೈತ್ಯಾಂತಕ ಹಾಗೂ ದೇವದೇವನಿಗೆ ಪ್ರಿಯವಾದ ಭೃಂಗೀ, ರಿಟಿ, ಅಶನಿ, ಭಾನುಕ ಎಂಬುವರೆಲ್ಲರೂ ಒಬ್ಬೊ ಬ್ಬರೂ ಏಳು ಕೋಟಿಯಷ್ಟು ಗಣಗಳೊಡನೆ, ಸನಾತನ ಅರವತ್ತು ನಾಲ್ಕು ಕೋಟಿ ಗಣಗಳೊಡನೆ, ಮಹಾಬಲಶಾಲಿಯೂ ಗಣಾಧಿಪತಿಯೂ ಆದ ನಂದಿಕೇಶ್ವರನೂ ನೂರು ಕೋಟಿ ಗಣಗಳೊಡನೆ ಬಂದರು. ಇವರಲ್ಲದೆ ಇನ್ನೂ ಅಸಂಖ್ಯಾತರಾದ ಮಹಾಬಲಿಷ್ಠರಾದ ಗಣೇಶ್ವರರೂ ಬಂದರು.

ಆಗಮಿಸಿದ ಎಲ್ಲಾ ಗಣಗಳಿಗೂ ಸಾವಿರ ತೋಳುಗಳು, ಎಲ್ಲರಿಗೂ ತಲೆಯಲ್ಲಿ ಜಟೆಗಳು, ಕಿರೀಟಗಳು ಇದ್ದವು. ಜೊತೆಗೆ ಎಲ್ಲರೂ ಚಂದ್ರರೇಖೆಯನ್ನು ಧರಿಸಿದ್ದರು. ಎಲ್ಲರ ಕೊರಳೂ ಕಪ್ಪಾಗಿದ್ದು, ಎಲ್ಲರಿಗೂ ಶಿವನಂತೆ ಮೂರು ಕಣ್ಣುಗಳು ಇದ್ದವು. ಒಬ್ಬೊಬ್ಬರೂ ಹಾರ, ಹತ್ತುಕಡಕು, ತೋಳುಬಳೆ, ಕಿರೀಟ ಮೊದಲಾದ ಆಭರಣಗಳಿಂದ ಭೂಷಿತರಾಗಿದ್ದರು. ಎಲ್ಲರೂ ಬ್ರಹ್ಮ, ಇಂದ್ರ, ವಿಷ್ಣುಗಳಿಗೆ ಸರಿಸಮರಾ ಗಿದ್ದರು. ಪ್ರತಿಯೊಬ್ಬರೂ ಅಣುಮಾದಿಸಿದ್ಧಿಗಳನ್ನು ಪಡೆದವರೇ ಆಗಿದ್ದರು. ಅವರೆಲ್ಲರೂ ಕೋಟಿ ಸೂರ್ಯರಿಗೆ ಸಮಾನವಾದ ತೇಜಸ್ಸುಳ್ಳವರಾಗಿದ್ದರು.

ಇಂತಹ ಗಣೇಶ್ವರರು, ಗಣಾಧಿಪತಿಗಳೆಲ್ಲರೂ ನಿರ್ಮಲ ತೇಜಸ್ಸಿನಿಂದ ಬೆಳಗುತ್ತಿದ್ದ ಇತರ ಮಹಾತ್ಮರೂ, ಶಿವನ ದರ್ಶನವನ್ನು ಪಡೆಯಬೇಕೆಂಬ ಅಭಿಲಾಷೆಯಿಂದ ಅಲ್ಲಿಗೆ ಮಹಾಪ್ರೀತಿಯಿಂದ ಬಂದಿದ್ದರು. ವಿಷ್ಣು ಮೊದಲಾದ ದೇವತೆಗಳೆಲ್ಲರೂ, ಅಂಜಲಿಬದ್ಧರಾಗಿ ನಮ್ರತೆಯಿಂದ ತಲೆಬಗ್ಗಿಸಿ ಶಿವನಿಗೆ ನಮಸ್ಕರಿಸಿದರು. ನಂತರ ಸುಶ್ರಾವ್ಯವಾಗಿ ಸ್ತೋತ್ರವನ್ನು ಮಾಡಿದರು. ಹೀಗೆ ವಿಷ್ಣು ಮೊದಲಾದವರೊಡನೆ ಪರಮೇಶ್ವರನಾದ ಆ ಮಹೇಶ್ವರನು, ಮಹಾತ್ಮನಾದ ಕುಬೇರನಿಗೆ ಸೇರಿದ ಕೈಲಾಸವನ್ನು ಪ್ರೀತಿಯಿಂದ ಪ್ರವೇಶಿಸಿದ.

ಕುಬೇರನೂ ಭಕ್ತಿಯಿಂದ ಮತ್ತು ಆದರದಿಂದಲೂ ತನ್ನ ಮನೆಗೆ ದಯಮಾಡಿಸಿದ ಶಿವನನ್ನು ಪರಿವಾರಸಮೇತನಾಗಿ ನಾನಾ ವಿಧವಾದ ಉಪಚಾರಗಳಿಂದ ಪೂಜಿಸಿದ. ನಂತರ, ಶಿವನಜೊತೆಯಲ್ಲಿ ಬಂದಿದ್ದ ವಿಷ್ಣು ಮೊದಲಾದ ಎಲ್ಲ ದೇವತೆಗಳನ್ನೂ ಗಣಗಳನ್ನೂ ಇನ್ನೂ ಇತರ ರನ್ನೂ ಶಿವನಿಗೆ ಸಂತೋಷವಾಗಲೆಂದು ಕುಬೇರ ಪೂಜಿಸಿದ. ಶಿವನು ಸಂತುಷ್ಟನಾಗಿ ಕುಬೇರನನ್ನು ಆಲಂಗಿಸಿ, ತಲೆಯನ್ನು ನೇವರಿಸಿದ. ಆತನ ಪಟ್ಟಣವಾದ ಅಲಕಾನಗರಿಯ ಬಳಿಯೇ ತನ್ನ ಪರಿವಾದವರೆಲ್ಲರೊಡನೆ ನೆಲೆಸಲು ನಿರ್ಧರಿಸಿದ.

ಕೈಲಾಸಕ್ಕೆ ಬಂದ ಶಿವಪ್ರಭು ತನಗೆ ಮತ್ತು ತನ್ನ ಗಣಗಳು, ಭಕ್ತರೊಡನೆ ವಾಸಮಾಡಲು ಅನುಕೂಲವಾಗುವಂತೆ ಅವರೆಲ್ಲರಿಗೂ ಯೋಗ್ಯತೆಗೆ ತಕ್ಕಂತೆ ನಿವಾಸಗಳನ್ನು ನಿರ್ಮಿಸುವಂತೆ ವಿಶ್ವಕರ್ಮನಿಗೆ ಅಪ್ಪಣೆ ಯಿತ್ತ. ಶಿವನ ಅಪ್ಪಣೆಯಂತೆ ವಿಶ್ವಕರ್ಮನು ಕೈಲಾಸಪರ್ವತದಲ್ಲಿ ಲಗುಬಗೆಯಿಂದ ನಾನಾ ವಿಧವಾದ ಶಿಲ್ಪಕಲಾ ವೈಭವಗಳಿಂದ ಬೆಳಗುವ ಬಗೆಬಗೆಯ ಭವನಗಳನ್ನು ನಿರ್ಮಿಸಿದ. ನಂತರ ವಿಷ್ಣುವಿನ ಪ್ರಾರ್ಥನೆಯಂತೆ ಸಂತುಷ್ಟ ಚಿತ್ತನಾದ ಶಿವನು ಕುಬೇರನನ್ನು ಅನುಗ್ರಹಿಸಿ ಕೈಲಾಸಪರ್ವತಕ್ಕೆ ತೆರಳಿದ.

ಭಕ್ತವತ್ಸಲನಾದ ಪರಮೇಶ್ವರನು ಒಳ್ಳೆಯ ಮುಹೂರ್ತದಲ್ಲಿ ತನ್ನ ನಿವಾಸವಾದ ಕೈಲಾಸವನ್ನು ಪ್ರವೇಶಿಸಿ ಎಲ್ಲರನ್ನೂ ಸನಾಥರನ್ನಾಗಿ ಮಾಡಿದ. ವಿಷ್ಣು ಮೊದಲಾದ ದೇವತೆಗಳೂ ಋಷಿಗಳೂ ಸಿದ್ಧರೂ ಎಲ್ಲರೂ ಸೇರಿ ಸಂತೋಷದಿಂದ ಶಿವನಿಗೆ ಅಭಿಷೇಕಮಾಡಿದರು. ನಾನಾ ವಿಧವಾದ ಕಾಣಿಕೆಗಳನ್ನು ಕ್ರಮವಾಗಿ, ಆರತಿಯನ್ನು ಬೆಳಗಿದರು. ಆಗ ಮಂಗಳಸೂಚಕವಾದ ಪುಷ್ಪವೃಷ್ಟಿಯು ನಡೆಯಿತು. ಅಲ್ಲಿ ಅಪ್ಸರ ಸ್ತ್ರೀಯರು ದಿವ್ಯವಾದ ಗಾನವನ್ನು ಹಾಡುತ್ತಾ ಸಂತೋಷವಾಗಿ ನರ್ತನ ಮಾಡಿದರು. ಎಲ್ಲಿ ನೋಡಿದರೂ ‘ಜಯ ಜಯ’ ಎಂಬ ಶಬ್ದವೂ ‘ನಮಃ’ ಎಂಬ ಶಬ್ದವೂ ಕೇಳಿಬರುತ್ತಿತ್ತು. ಎಲ್ಲರಲ್ಲಿಯೂ, ಸುಖವನ್ನು ಹೆಚ್ಚಿಸುವಂತಹ ಮಹಾ ಉತ್ಸಾಹವು ತಾಂಡವವಾಡುತ್ತಿತ್ತು.

ಆಗ ಸಿಂಹಾಸನದಲ್ಲಿ ಕುಳಿತಿದ್ದ ಶಿವನು ವಿಷ್ಣು ಮೊದಲಾಗಿ ಎಲ್ಲರಿಂದಲೂ ಸೇವೆಯನ್ನು ಯಥೋಚಿತವಾಗಿ ಸ್ವೀಕರಿಸುತ್ತಾ ಅತಿಶಯವಾಗಿ ಪ್ರಕಾಶಿಸುತ್ತಿದ್ದ. ಬಳಿಕ ದೇವತೆಗಳೇ ಮೊದಲಾದ ಎಲ್ಲರೂ ಅರ್ಥಗರ್ಭಿತವೂ ಪ್ರೀತಿವರ್ಧಕವೂ ಆದ ವಾಕ್ಯಗಳಿಂದ ಮಂಗಳವನ್ನುಂಟುಮಾಡುವ ಶಂಕರನನ್ನು ಸ್ತುತಿಸಿದರು. ಶಿವನು ಅವರ ಸ್ತುತಿಯನ್ನು ಕೇಳಿ ಪ್ರಸನ್ನನಾಗಿ, ಪ್ರೀತಿಯಿಂದ ವರಗಳನ್ನಿತ್ತ. ಅವರವರು ಕೋರಿದ ಕೋರಿಕೆಗಳನ್ನೆಲ್ಲಾ ಸಫಲಗೊಳಿಸಿದ. ಎಲ್ಲರೂ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ತಮ್ಮ ಮನೆಗಳಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT