ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಅಪರ್ಣಳಾದ ಪಾರ್ವತಿ

Last Updated 15 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕಠೋರವಾದ ತಪಸ್ಸಿಗೆ ಕುಳಿತ ಪಾರ್ವತಿ ತನಗಾದ ಅನೇಕ ವಿಧವಾದ ದುಃಖಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಕೇವಲ ಮನಸ್ಸನ್ನು ಶಿವನಲ್ಲಿರಿಸಿ ತಪವನ್ನ ಆಚರಿಸುತ್ತಿದ್ದಳು. ಮೊದಮೊದಲು ಫಲಾಹಾರವನ್ನು ಸೇವಿಸುತ್ತಿದ್ದಳು. ಆಮೇಲೆ, ಎಲೆ(ಪರ್ಣ)ಗಳನ್ನು ಮಾತ್ರ ಸೇವಿಸುತ್ತಿದ್ದಳು. ಹೀಗೆ ಅನೇಕ ವರ್ಷಗಳನ್ನು ಕಳೆದ ನಂತರ, ಪರ್ಣವನ್ನೂ ಆಹಾರವಾಗಿ ಸೇವಿಸದೆ ಘೋರ ತಪಸ್ಸು ಮಾಡಿದಳು. ಇದನ್ನು ಕಂಡ ದೇವತೆಗಳು ಗಿರಿಜೆಯನ್ನು ‘ಅಪರ್ಣಾ’ (ಎಲೆಯನ್ನೂ ಸೇವಿಸದವಳು) ಎಂದು ಕರೆದರು.

ಪಾರ್ವತಿಯು ಒಂಟಿ ಕಾಲಿನಿಂದ ನಿಂತು ಶಿವನನ್ನು ಸ್ಮರಿಸುತ್ತಾ, ಪಂಚಾಕ್ಷರಮಂತ್ರವನ್ನು ಜಪಿಸುತ್ತಾ ಮಹಾತಪವನ್ನಾಚರಿಸಿದಳು. ನಾರುಬಟ್ಟೆಯನ್ನುಟ್ಟು, ಜಟೆಯನ್ನು ಬಿಟ್ಟು, ತಪವನ್ನ ಆಚರಿಸುವುದರಲ್ಲಿ ಮುನಿಗಳನ್ನೂ ಮೀರಿಸಿದಳು. ಹೀಗೆ ಮೂರು ಸಾವಿರ ವರ್ಷಗಳು ಕಳೆದುಹೋದವು. ಈ ಹಿಂದೆ ಅದೇ ಸ್ಥಾನದಲ್ಲಿ ಕುಳಿತು, ಶಿವ ಅರವತ್ತು ಸಾವಿರ ವರ್ಷಗಳವರೆಗೆ ತಪಸ್ಸು ಮಾಡಿದ್ದ ನಿದರ್ಶನವಿತ್ತು.
ಇಂತಹ ಸ್ಥಳದಲ್ಲಿ ನಿಂತು ಗಿರಿಜೆಯು ಸ್ವಲ್ಪ ಹೊತ್ತು ಯೋಚಿಸಿದಳು, ‘ನಾನು ತಪವನ್ನಾಚರಿಸುತ್ತಿರುವ ವಿಚಾರ ಮಹಾದೇವನಿಗೆ ತಿಳಿದಿಲ್ಲವೇ? ತಿಳಿದಿದ್ದರೆ, ಇಷ್ಟು ವರ್ಷಗಳಾದರೂ ಏಕೆ ಪ್ರತ್ಯಕ್ಷನಾಗಲಿಲ್ಲ? ಶಂಕರನು ಸರ್ವಜ್ಞನು, ಸರ್ವರೂಪನು, ಎಲ್ಲೆಡೆಯಲ್ಲಿಯೂ ದೃಷ್ಟಿಯುಳ್ಳವನು, ಸಕಲೈಶ್ವರ್ಯಗಳನ್ನು ಕೊಡುವವನು. ಎಲ್ಲರ ಮನಸ್ಸನ್ನೂ ಪ್ರೇರಿಸುವವನು. ಸಕಲ ದುಃಖಗಳನ್ನೂ ಹೋಗಲಾಡಿಸುವವನು. ಹೀಗಿದ್ದರೂ ತನಗೇಕೆ ಶಿವ ಒಲಿಯಲಿಲ್ಲ’ ಎಂದು ಯೋಚಿಸಿದ ಪಾರ್ವತಿ ಒಂದು ಕಠಿಣ ನಿರ್ಧಾರಕ್ಕೆ ಬಂದಳು.

ನಾನು ಎಲ್ಲ ಫಲೇಚ್ಛೆಗಳನ್ನೂ ಬಿಟ್ಟು ನಿಜವಾಗಿ ಅನುರಕ್ತಳಾಗಿದ್ದರೆ ಶಿವನು ನನಗೆ ಪ್ರಸನ್ನನಾಗಲಿ. ನಾರದ ಉಪದೇಶಿಸಿದ ಶಿವಪಂಚಾಕ್ಷರಮಂತ್ರವನ್ನು ನಾನು ಭಕ್ತಿಯಿಂದ ಜಪಿಸಿ ತಪವನ್ನಾಚರಿಸುತ್ತಿರುವುದು ನಿಜವಾದರೆ ಶಿವನು ಪ್ರಸನ್ನನಾಗಲಿ. ಯಾವ ವಿಕಾರವೂ ಇಲ್ಲದೇ ನಾನು ಶಿವನನ್ನು ಭಕ್ತಿಯಿಂದ ಆರಾಧಿಸಿರುವುದು ನಿಜವಾದರೆ ಶಿವನು ಪ್ರಸನ್ನನಾಗಲಿ ಎಂದು ಗಿರಿಜೆ, ವಿಕಾರರಹಿತಳಾಗಿ ತಲೆಕೆಳಗಾಗಿ ಬಹಳಕಾಲ ತಪವನ್ನಾಚರಿಸಿದಳು.

ಮಹಾಮುನಿಗಳಿಗೂ ಅಸಾಧ್ಯವಾದಂತಹ ಘೋರತಪವನ್ನು ಮಾಡುತ್ತಿರುವ ಪಾರ್ವತಿಯನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು. ಅವಳ ತಪಸ್ಸಿನ ದರ್ಶನಮಾಡಿ ಜನರು ಧನ್ಯರಾದೆವವು ಎಂದುಕೊಳ್ಳುತ್ತಿದ್ದರು. ‘ಪಾರ್ವತಿ ತಪಸ್ಸು ಮಾಡುವ ರೀತಿ ಕೇಳಿದರೆ ಅಥವಾ ನೋಡಿದರೆ, ಇತರೆ ತಪಸ್ವಿಗಳು ನಾಚಿಕೆಯಿಂದ ಮುಂದೆ ತಪವನ್ನೇ ಮಾಡಲಾರರು’ ಎಂದು ಕೆಲವರು ಹೇಳಿದರೆ, ‘ಪಾರ್ವತಿ ಮಾಡುತ್ತಿರುವ ತಪಸ್ಸಿಗಿಂತಲೂ ಉತ್ತಮವಾದುದು ಹಿಂದೆ ನಡೆದಿಲ್ಲ, ಮುಂದೆಯೂ ನಡೆಯಲಾರದು’ ಅಂತ ಹೊಗಳುತ್ತಿದ್ದರು. ಸಾಮಾನ್ಯ ಜನರಿರಲಿ, ಮಹಾಸಮರ್ಥರೂ ಅವಳ ತಪಸ್ಸನ್ನು ಮೆಚ್ಚುತ್ತಿದ್ದರು.

ಅಸೂಯಾಪರರಾಗಿ ಯೋಚಿಸುವ ಸಣ್ಣ ಮನಸ್ಸಿನವರೂ ಪಾರ್ವತಿಯ ತಪಸ್ಸನ್ನು ಕಂಡು ಆಶ್ಚರ್ಯಪಟ್ಟರು. ತಮ್ಮ ಎಂದಿನ ದುರಭಿಮಾನವನ್ನು ಬಿಟ್ಟು, ಸಾಧಕರನ್ನು ಔದಾರ್ಯದಿಂದ ಆದರಿಸುವ ಸದ್ಗುಣ ಕಲಿತುಕೊಂಡರು. ಯಾವಾಗಲೂ ಸಹಜ ವೈರದಿಂದಿರುವ ಕ್ರೂರಪ್ರಾಣಿಗಳು ಗಿರಿಜೆಯ ತಪಸ್ಸಿನ ಮಹಿಮೆಯಿಂದ ತಮ್ಮ ಸ್ವಭಾವವನ್ನು ಬಿಟ್ಟು ಶಾಂತಿಯಿಂದ ಸುಖವಾಗಿದ್ದವು. ಆ ತಪೋವನದಲ್ಲಿ ಮರಗಳೆಲ್ಲ ಯಾವಾಗಲೂ ಫಲಭರಿತವಾಗಿರುತ್ತಿದ್ದವು. ಅನೇಕ ಬಗೆಯ ಹೂವುಗಳು ಅರಳಿ ಕಂಗೊಳಿಸುತ್ತಿದ್ದವು. ಕೈಲಾಸದಂತೆ ಸರ್ವಾನುಕೂಲಗಳಿಂದ ಕೂಡಿದ ಆ ವನವೇ ಕೊನೆಗೆ ಪಾರ್ವತಿಗೆ ಇಷ್ಟಸಿದ್ಧಿ ಸ್ಥಾನವಾಯಿತು. ಇಲ್ಲಿಗೆ ಪಾರ್ವತೀಖಂಡದ ಇಪ್ಪತ್ತೆರಡನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT