ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ವಿಶ್ವಕರ್ಮನ ಅದ್ಭುತ ಕೌಶಲ

ಭಾಗ 283
ಅಕ್ಷರ ಗಾತ್ರ

ಶಿವನಿಗಾಗಿ ವಿಶ್ವಕರ್ಮನಿಂದ ನಿರ್ಮಿಸಿದ್ದ ವಾಸದ ಮನೆಯಲ್ಲಿ ರತ್ನದ ಪಾತ್ರೆಗಳನ್ನು, ರತ್ನಖಚಿತ ಘಟಾದಿಗಳನ್ನು ಅಲಂಕಾರವಾಗಿ ಇಟ್ಟಿದ್ದರು. ಮುತ್ತು-ರತ್ನಮಣಿಗಳಿಂದ ವಿಧವಿಧವಾದ ಆಕೃತಿಗಳನ್ನು ತಯಾರಿಸಿ ಇಟ್ಟಿದ್ದರು. ಅಲ್ಲಲ್ಲಿ ರತ್ನಗಳನ್ನು ಹಾಕಿರುವ ದೊಡ್ಡ ದೊಡ್ಡ ಕನ್ನಡಿಗಳನ್ನು ತೂಗುಹಾಕಿದ್ದರು. ಶ್ವೇತಚಾಮರಗಳನ್ನು ತಗುಲಿಹಾಕಿದ್ದರು. ಮುತ್ತಿನ ಮತ್ತು ರತ್ನಮಣಿಗಳನ್ನು ಅಲ್ಲಲ್ಲಿಯೇ ಗೊಂಚಲುಗೊಂಚಲಾಗಿ ತೂಗುಹಾಕಿದ್ದರು. ಇಂಥ ರಮ್ಯವಾದ ವಾಸಮಂದಿರವು ಮತ್ತಾವುದೂ ಜಗತ್ತಿನಲ್ಲಿ ಇಲ್ಲವೆನಿಸುವಷ್ಟು ಆಕರ್ಷಕವಾಗಿತ್ತು.

ಮಂದಿರದ ಒಂದು ಪ್ರದೇಶಕ್ಕೆ ಶಿವಲೋಕವೆಂದು ಹೆಸರು ಬರೆಯಲಾಗಿತ್ತು. ಅಲ್ಲಿ ಅನೇಕ ವಿಧದ ಸುಗಂಧ ಪರಿಮಳದ್ರವ್ಯಗಳನ್ನು ಚಿಮುಕಿಸಿದ್ದರಿಂದ ಮೈಮನಸ್ಸು ಪುಳಕಗೊಳಿಸುವಂಥ ಸುವಾಸನೆಯು ಹರಡಿತ್ತು. ಚಂದನ, ಅಗರು ಮುಂತಾದವುಗಳ ಹೊಗೆಯನ್ನು ಹಾಕಿದ್ದರಿಂದ ನಾಸಿಕಗಳು ಉಲ್ಲಾಸದಿಂದ ಆಘ್ರಾಣಿಸುವಂತಿದ್ದವು. ವಾಸಮಂದಿರದಲ್ಲಿ ವಿಶ್ವಕರ್ಮ ಬಿಡಿಸಿದ ಚಿತ್ರಗಳಲ್ಲಿ ಒಂದು ಕಡೆ ಮನೋಹರವಾಗಿ ಕಾಣುವ ವೈಕುಂಠಲೋಕದ ಚಿತ್ರವಿದ್ದರೆ, ಇನ್ನೊಂದು ಕಡೆ ಬ್ರಹ್ಮಲೋಕದ ದೃಶ್ಯ ಬರೆದಿದ್ದ. ಮತ್ತೊಂದು ಕಡೆ ಅಷ್ಟದಿಕ್ಪಾಲಕರ ಸೌಧಗಳನ್ನು, ಮಗದೊಂದು ಕಡೆ ಕೈಲಾಸಪರ್ವತ. ಹಾಗೆಯೇ ಅಮರಾವತಿ, ಶಿವಲೋಕವನ್ನು ಬಹುರಮ್ಯವಾಗಿ ಚಿತ್ರಿಸಿದ್ದ. ಇಂಥ ಅತಿರಮಣೀಯವಾದ ವಾಸಮಂದಿರದ ರತ್ನಖಚಿತವಾದ ಮಂಚದಲ್ಲಿ ಆನಂದದಿಂದ ಮಲಗಿದ.

ಹೀಗೆ ರತ್ನಪರ್ಯಂಕದಲ್ಲಿ ಶಂಕರ ಮಲಗಿ ನಿದ್ರಿಸುತ್ತಿದ್ದರೆ, ಪರ್ವತರಾಜ ನಿದ್ರಿಸದೆ ನಾಳಿನ ಕಾರ್ಯಕ್ರಮಗಳಿಗೆ ಅಗತ್ಯವಾದ ಕೆಲಸವನ್ನು ತನ್ನ ಸೇವಕರಿಂದ ಮಾಡಿಸುತ್ತಿದ್ದ. ಅಷ್ಟರಲ್ಲಿ ಬೆಳಗಾಯಿತು. ಮದುವೆಗೆ ಬಂದವರೆಲ್ಲಾ ಒಬ್ಬೊಬ್ಬರಾಗಿ ಏಳಲು ಪ್ರಾರಂಭಿಸಿದರು. ವಾದ್ಯಗಾರರು ಉತ್ಸಾಹದಿಂದ ಮುಂಜಾನೆ ವಾದ್ಯಗಳನ್ನು ಬಾರಿಸಿದರು. ವಾದ್ಯಗಳ ಧ್ವನಿ ಕೇಳಿ ದೇವತೆಗಳೆಲ್ಲರೂ ಪರಮೇಶ್ವರನನ್ನು ಸ್ಮರಿಸುತ್ತಾ ಉತ್ಸಾಹದಿಂದ ಎದ್ದರು. ಅವರೆಲ್ಲಾ ಕೈಲಾಸಕ್ಕೆ ಹೊರಡಲು ತಮ್ಮ ವಾಹನಗಳನ್ನು ಸಜ್ಜುಗೊಳಿಸಿದರು. ನಂತರ ಶಿವನನ್ನು ಎಬ್ಬಿಸಲು ಯಮಧರ್ಮನನ್ನು ವಿಷ್ಣು ಕಳುಹಿಸಿಕೊಟ್ಟ. ‘ಪ್ರಮಥಾಧಿಪನೆ, ಶುಭಕರವಾದ ಪ್ರಭಾತವು ಪ್ರಾಪ್ತವಾಗಿರುವುದು. ಏಳು, ಎದ್ದೇಳು. ಜನಾವಾಸಕ್ಕೆ ತೆರಳಿ ಅಲ್ಲಿರುವರನ್ನೆಲ್ಲರನ್ನೂ ಕೃತಾರ್ಥರನ್ನಾಗಿ ಮಾಡು’ ಎಂದು ಅವನು ಪ್ರಾರ್ಥಿಸಿದ.

ಶಂಕರನ ಅಪ್ಪಣೆಯನ್ನು ಪಡೆದು ಯಮಧರ್ಮ ಜನಾವಾಸ ಸ್ಥಳಕ್ಕೆ ಹೋದ. ಅನಂತರ ಶಂಕರ ಸಹ ಹೊರಡಲು ಸಿದ್ಧನಾದ. ಆ ಸಮಯದಲ್ಲಿ ಸ್ತ್ರೀಯರೆಲ್ಲರೂ ಶಂಕರನ ಪಾದಕಮಲಗಳನ್ನು ನೋಡುವ ಕುತೂಹಲದಿಂದ ಅಲ್ಲಿಗೆ ಬಂದು ಮಂಗಳಗೀತೆಗಳನ್ನು ಹಾಡಿದರು. ಜಗತ್ಪ್ರಭು ಶಂಕರ ಸಂಸಾರಿಗಳಂತೆ ಪ್ರಾತಃಕಾಲದಲ್ಲಿ ಮಾಡಬೇಕಾದ ಕೃತ್ಯಗಳನ್ನು ನೆರವೇರಿಸಿದ. ನಂತರ, ಶಿಷ್ಟಾಚಾರದಂತೆ ತಾಯಿ ಸಮಾನಳಾದ ಮೇನಾದೇವಿಗೆ ಮತ್ತು ತಂದೆ ಸಮಾನರಾದ ಹಿಮವಂತರಿಗೆ ನಮಸ್ಕರಿಸಿದ. ಅವರ ಆಶೀರ್ವಾದ ಪಡೆದು ಜನಾವಾಸ ಸ್ಥಳಕ್ಕೆ ಹೋದ. ಆ ಸಮಯದಲ್ಲಿ ಅಲ್ಲಿರುವ ಜನರೆಲ್ಲರೂ ವಿಧವಿಧವಾದ ವಾದ್ಯಗಳನ್ನು ನುಡಿಸಿ, ಸಂಭ್ರಮಿಸಿದರು. ಮುನಿಗಳು ವೇದಘೋಷ ಮಾಡಿದರು. ಪರಶಿವ ಹರಿ, ಬ್ರಹ್ಮನಿಗೆ ನಮಸ್ಕರಿಸಿದ. ನೆರೆದ ಜನರಿಗೆ ಮಹಾಶಿವ ಆಶೀರ್ವಚನ ನೀಡಿದ. ಮಂಗಳಕರವಾದ ಶಿವನ ಮಾತನ್ನು ಕೇಳಿ ಜನರೆಲ್ಲ ಜಯಕಾರ ಮಾಡಿದರು. ದೇವತೆಗಳು ಮುನಿಗಳು ಭಕ್ತಿಯಿಂದ ಶಿವನನ್ನು ಸ್ತುತಿಸಿದರು.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಎರಡನೆಯ ಸಂಹಿತೆಯಾದ ರುದ್ರಸಂಹಿತೆಯ ಮೂರನೆಯ ಖಂಡವಾದ ಪಾರ್ವತೀಖಂಡದ ಐವತ್ತೆರಡನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT