ಶನಿವಾರ, ಜುಲೈ 2, 2022
24 °C

ವೇದವ್ಯಾಸರ ಶಿವಪುರಾಣಸಾರ: ಅಗ್ನಿಗಾಹುತಿಯಾದ ಸತೀದೇವಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ವೇದವ್ಯಾಸರ ಶಿವಪುರಾಣಸಾರ

ಪುತ್ರಿ ಸತಿಯೊಂದಿಗೆ ಅನ್ಯೋನ್ಯವಾಗಿ ಸುಖಸಂಸಾರ ಮಾಡುತ್ತಿದ್ದ ಅಳಿಯ ರುದ್ರನ ಮೇಲಿನ ದ್ವೇಷ ದಕ್ಷಬ್ರಹ್ಮನಿಗೆ ಹೋಗಲಿಲ್ಲ. ಅವನು ಶಿವನನ್ನು ನಿಷ್ಕಾರಣವಾಗಿ ನಿಂದಿಸುತ್ತಿದ್ದ. ತಿಳಿವಳಿಕೆಯಿಲ್ಲದೆ ಅಹಂಕಾರದಿಂದ ಮೆರೆಯುತ್ತಿದ್ದ. ರುದ್ರದೇವ ತನ್ನ ಮಾವನ ಅವಿವೇಕವನ್ನು ಬಹಳ ಕಾಲ ಸಹಿಸುತ್ತಾ ಬಂದ.

ಹೀಗಿರಲು ಒಂದು ದಿನ ದಕ್ಷಬ್ರಹ್ಮ ಯಾಗವೊಂದನ್ನು ಪ್ರಾರಂಭಿಸಿದ. ಆ ಯಾಗಕ್ಕೆ ನನಗೆ (ಬ್ರಹ್ಮ) ಮತ್ತು ವಿಷ್ಣು ಸೇರಿದಂತೆ ಎಲ್ಲಾ ದೇವತೆಗಳನ್ನೂ ಆಹ್ವಾನಿಸಿದ. ಆದರೆ ತನ್ನ ಅಳಿಯ ಹರನನ್ನೂ, ತನ್ನ ಪುತ್ರಿಯಾದ ಸತೀದೇವಿಯನ್ನೂ ಕರೆಯಲಿಲ್ಲ. ಸತಿ ತುಂಬಾ ನೊಂದುಕೊಂಡಳು. ಹೇಗಾದರೂ ತಂದೆಯ ಯಜ್ಞದಲ್ಲಿ ಪಾಲ್ಗೊಳ್ಳಬೇಕೆಂದು ಸತೀದೇವಿ ನಿರ್ಧರಿಸಿದಳು. ಇದಕ್ಕಾಗಿ ಪತಿಯಾದ ಶಿವನಿಂದ ಅಪ್ಪಣೆಯನ್ನು ಪಡೆದು ತನ್ನ ತಂದೆಯ ಮನೆಗೆ ಬಂದಳು. ಯಜ್ಞದಲ್ಲಿ ತನ್ನ ಪತಿಯಾದ ರುದ್ರನಿಗೆ ಹವಿರ್ಭಾಗ ಕೊಡದಿರುವುದನ್ನು ನೋಡಿ ಖಿನ್ನಳಾದಳು. ಇಂಥ ಸಂದರ್ಭದಲ್ಲಿ ದಕ್ಷ ತನ್ನ ಮಗಳೆಂಬುದನ್ನೂ ಲೆಕ್ಕಿಸದೆ, ಸತಿದೇವಿಯನ್ನು ಆದರಿಸಲಿಲ್ಲ. ಬದಲಿಗೆ ಮತ್ತಷ್ಟು ಅವಮಾನಮಾಡಿದ. ಇದರಿಂದ ಮತ್ತಷ್ಟು ನೊಂದ ಸತೀದೇವಿಯು ಅಲ್ಲಿ ಸೇರಿದ್ದ ರುದ್ರದ್ವೇಷಿಗಳನ್ನೆಲ್ಲಾ ನಿಂದಿಸಿ, ಆಕ್ರೋಶ ವ್ಯಕ್ತಪಡಿಸಿದಳು. ಯಜ್ಞಾಗ್ನಿಗೆ ಬಿದ್ದು ಶರೀರತ್ಯಾಗ ಮಾಡಿದಳು.

ಹೀಗೆ ಸತಿದೇವಿ ದೇಹತ್ಯಾಗ ಮಾಡಿದುದನ್ನು ಕೇಳಿ ದೇವದೇವನಾದ ಶಿವನಿಗೆ ಮಹಾಕ್ರೋಧವುಂಟಾಯಿತು. ಮಹತ್ತಾದ ತನ್ನ ಜಟೆಯನ್ನು ಭೂಮಿಗೆ ಅಪ್ಪಳಿಸಿ, ಅದರಿಂದ ವೀರಭದ್ರನನ್ನು ಸೃಜಿಸಿದ. ಸೇನಾ ಪರಿವಾರವನ್ನೂ ಸೃಷ್ಟಿಸಿದ. ಆಗ ವೀರಭದ್ರನು ‘ನಾನು ಮಾಡಬೇಕಾದ ಕಾರ್ಯವೇನು? ನನಗೇನಪ್ಪಣೆ’ ಎಂದು ಕೇಳಿದ. ದಕ್ಷಯಜ್ಞಕ್ಕೆ ಹೋಗಿ ಅಲ್ಲಿ ಸೇರಿರುವವರೆಲ್ಲರಿಗೂ ಅಪಮಾನ ಮಾಡಿ, ಯಜ್ಞನಾಶ ಮಾಡು – ಎಂದು ಅಪ್ಪಣೆ ಮಾಡಿದ. ಶಿವನ ಆಜ್ಞೆಯಂತೆ ಮಹಾಬಲಶಾಲಿಯಾದ ವೀರಭದ್ರ ತನ್ನ ಸೈನ್ಯದೊಂದಿಗೆ ದಕ್ಷನ ಯಜ್ಞಶಾಲೆಗೆ ಹೋದ. ಅಲ್ಲಿ ವೀರಭದ್ರನ ಆಜ್ಞೆಯಂತೆ ಶಿವಸೇನೆಯು ಯಜ್ಞಕಾರ್ಯವನ್ನು ಧ್ವಂಸಗೊಳಿಸಿತು. ವೀರಭದ್ರ ಅಲ್ಲಿ ಸೇರಿರುವವರೆಲ್ಲರನ್ನೂ ಒಬ್ಬರನ್ನೂ ಬಿಡದೆ ಉಗ್ರವಾಗಿ ಶಿಕ್ಷಿಸಿದ. ದಕ್ಷಬ್ರಹ್ಮನ ಶಿರಸ್ಸನ್ನು ಕತ್ತರಿಸಿದ್ದಲ್ಲದೆ, ಅದನ್ನು ಯಾಗಾಗ್ನಿ ಕುಂಡಕ್ಕೆ ಹಾಕಿ ಹೋಮಮಾಡಿದ. ಹೀಗೆ ವೀರಭದ್ರ ಯಜ್ಞಧ್ವಂಸ ಮಾಡಿದ ಬಳಿಕ ಶಿವನ ಬಳಿ ಹೋಗಿ, ನಮಸ್ಕರಿಸಿ ನಿಂತ.

‘ಎಲೈ ನಾರದಮುನಿ! ಹೀಗೆ ವಿಷ್ಣುವೇ ಮೊದಲಾದ ದೇವತೆಗಳು ನೋಡುತ್ತಿದ್ದಂತೆಯೇ ಅವರನ್ನು ತಿರಸ್ಕರಿಸಿ ವೀರಭದ್ರ ಮತ್ತವನ ಶಿವಗಣಗಳು ದಕ್ಷನ ಯಜ್ಞವನ್ನು ಧ್ವಂಸಮಾಡಿದರು. ಜಗತ್ಪ್ರಭುವಾದ ರುದ್ರನು ಕೋಪಗೊಂಡರೆ ಎಂದಿಗೂ ಸುಖವಾಗುವುದಿಲ್ಲ’ ಎಂದ ಬ್ರಹ್ಮ.

ಘಟನೆ ನಂತರ ದೇವತೆಗಳೆಲ್ಲ ರುದ್ರನನ್ನು ಸ್ತುತಿಸಿದಾಗ, ದೀನವತ್ಸಲನಾದ ಶಿವನು ಪ್ರಸನ್ನನಾದ. ಅವರೆಲ್ಲರ ವಿಜ್ಞಾಪನೆ ಸಫಲವಾಗುವಂತೆ ಮಾಡಿದ. ಲೀಲಾಮಯನೂ ಮಹಾತ್ಮನೂ ಆದಂಥ ಶಂಕರನು ಮೊದಲಿನಂತೆಯೇ ದೇವತೆಗಳಲ್ಲಿ ಕೃಪೆಯನ್ನು ತೋರಿಸಿದ. ಕೃಪಾಮಯನಾದ ಶಂಕರನು ದಕ್ಷಬ್ರಹ್ಮನನ್ನು ಬದುಕಿಸಿದ. ಮತ್ತೆ ದಕ್ಷ ತನ್ನ ಯಜ್ಞವನ್ನು ಯಶಸ್ವಿಯಾಗಿ ಮಾಡುವಂತೆ ಕರುಣೆ ತೋರಿದ. ವಿಶ್ವದೇವತೆಗಳೆಲ್ಲಾ ಆ ಯಜ್ಞದಲ್ಲಿ ಶಿವನನ್ನು ಶುದ್ಧಾಂತಃಕರಣದಿಂದ ವಿಶೇಷವಾಗಿ ಪೂಜಿಸಿ, ಪುನೀತರಾದರು.

ಯಜ್ಞಾಗ್ನಿಯಲ್ಲಿ ಬಿದ್ದು ದಹಿಸುತ್ತಿದ್ದ ಸತೀದೇಹದಿಂದ ಹೊರಹೊರಟ ಅಗ್ನಿಜ್ವಾಲೆಯು ಅಲ್ಲಿನ ಒಂದು ಪರ್ವತದ ಮೇಲೆ ಬಿದ್ದಿತು. ಸಮಸ್ತ ಲೋಕಕ್ಕೂ ಸುಖವನ್ನುಂಟುಮಾಡುವ ಆ ಜ್ವಾಲೆಯನ್ನು ದೇವತೆಗಳು ಭಕ್ತಿಯಿಂದ ಪೂಜಿಸಿದರು. ಆ ಜ್ವಾಲೆಯು ಜ್ವಾಲಾಮುಖಿಯೆಂದು ಪ್ರಸಿದ್ಧಳಾದ ಪರಮೇಶ್ವರಿಯಾದಳು. ಆ ದೇವಿಯು ಸಕಲ ಇಷ್ಟಾರ್ಥಗಳನ್ನು ಕೊಡುವವಳಲ್ಲದೆ, ಕೇವಲ ದರ್ಶನ ಮಾತ್ರದಿಂದಲೇ ಸಕಲ ಪಾಪವನ್ನು ನಾಶಮಾಡುವಳೂ ಆಗಿರುವಳು. ಈಗಲೂ ಜನರು ಆ ಜ್ವಾಲಾಮುಖಿದೇವಿಯನ್ನು ಸಕಲೇಷ್ಟಸಿದ್ಧಿಗಾಗಿ ಪೂಜಿಸಿ, ಉತ್ಸವಗಳನ್ನಾಚರಿಸುವರು.

ಮುಂದೆ ಸತೀದೇವಿಯು ಹಿಮವಂತನ ಪುತ್ರಿಯಾಗಿ ಜನಿಸಿದಳು. ಆಗ ಪರ್ವತಪುತ್ರಿಗೆ ‘ಪಾರ್ವತೀ’ ಎಂದು ಹೆಸರಾಯಿತು. ಪಾರ್ವತಿ ಕಠಿಣವಾದ ತಪಸ್ಸನ್ನಾಚರಿಸಿ ಪರಮೇಶ್ವರನನ್ನೆ ಪುನಃ ಪತಿಯಾಗಿ ಪಡೆದಳು ಎಂದು ಬ್ರಹ್ಮ ನಾರದನಿಗೆ ಹೇಳುವಲ್ಲಿಗೆ ಸತೀಖಂಡದ ಒಂದನೆಯ ಅಧ್ಯಾಯ ಮುಗಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು