ಭಾನುವಾರ, ಸೆಪ್ಟೆಂಬರ್ 19, 2021
30 °C

ಸಹಾಯ ಎನ್ನುವುದು ಸಹಜವಾಗಿರಬೇಕು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಪದ್ಮಾಕರಂ ದಿನಕರೋ ವಿಕಚಂ ಕರೋತಿ

ಚಂದ್ರೋ ವಿಕಾಸಯತಿ ಕೈರವಚಕ್ರವಾಲಮ್ |

ನಾಭ್ಯರ್ಥಿತೋ ಜಲಧರೋಽಪಿ ಜಲಂ ದದಾತಿ

ಸಂತಃ ಸ್ವಯಂ ಪರಹಿತೇ ವಿಹಿತಾಭಿಯೋಗಾಃ ||

ಇದರ ತಾತ್ಪರ್ಯ ಹೀಗೆ:

‘ಸಹಜವಾಗಿಯೇ ಸೂರ್ಯನು ಕಮಲವನ್ನು ಅರಳಿಸುತ್ತಾನೆ; ತನ್ನ ಉದಯದಿಂದ ಚಂದ್ರನು ಕುಮುದಿನೀಸಮೂಹವನ್ನು ಅರಳಿಸುತ್ತಾನೆ; ಯಾರೂ ಬೇಡದಿದ್ದರೂ ತಾನಾಗಿಯೇ ಮೋಡವು ನೀರನ್ನು ಕೊಡುತ್ತದೆ. ಸಜ್ಜನರು ತಾವಾಗಿಯೇ ಮತ್ತೊಬ್ಬರಿಗೆ ಹಿತವನ್ನು ಉಂಟುಮಾಡುವುದರಲ್ಲಿ ಉದ್ಯುಕ್ತರಾಗಿರುತ್ತಾರೆ.’

ಸಹಾಯ ಎನ್ನುವುದು ಸಹಜವಾಗಿರಬೇಕು. ಅದೊಂದು ಪ್ರದರ್ಶನಕ್ಕೋ ಅಹಂಕಾರಕ್ಕೋ ವ್ಯವಹಾರಕ್ಕೋ ವಸ್ತು ಆಗಬಾರದು ಎಂಬುದು ಸುಭಾಷಿತದ ಆಶಯ. ಇದನ್ನು ಸಮರ್ಥಿಸಲು ಅದು ಹಲವು ಉದಾಹರಣೆಗಳನ್ನು ಕೊಟ್ಟಿದೆ.

ಸಹಜವಾಗಿಯೇ ಸೂರ್ಯನು ಕಮಲವನ್ನು ಅರಳಿಸುತ್ತಾನೆ. ಎಂದರೆ ಕಮಲ ಅರಳಲಿ ಎಂದು ಸೂರ್ಯ ಉದಯಿಸುವುದಿಲ್ಲ. ಮಾತ್ರವಲ್ಲ, ‘ಕಮಲ ನನ್ನನ್ನು ಕೇಳಲಿ, ಆಮೇಲೆ ನಾನು ಹುಟ್ಟುತ್ತೇನೆ‘ ಎಂದೂ ಅವನು ಯೋಚಿಸುವುದಿಲ್ಲ. ಸೂರ್ಯ ಹುಟ್ಟುವುದು ಅವನ ಸಹಜ ಸ್ವಭಾವ. ಅದರಿಂದ ಲೋಕವು ಪ್ರಯೋಜನವನ್ನು ಪಡೆಯುತ್ತದೆ. ಹೀಗೆಯೇ ನಾವು ಇನ್ನೊಬ್ಬರಿಗೆ ಮಾಡುವ ಸಹಾಯದ ಸ್ವರೂಪ ಇರಬೇಕು. ನಾವು ಸಹಾಯವನ್ನು ಮಾಡುತ್ತಿದ್ದೇವೆ – ಎಂಬ ಅರಿವು ಕೂಡ ನಮಗೆ ಇರಬಾರದು. ಇನ್ನೊಬ್ಬರು ಕೇಳಲಿ, ಬಳಿಕ ಸಹಾಯ ಮಾಡೋಣ – ಅಹಂಕಾರವೂ ಇರಬಾರದು. ನಾವು ಸಹಜವಾಗಿ ಮಾಡುವ ಕೆಲಸದಲ್ಲಿಯೇ ನಾಲ್ಕು ಜನರಿಗೆ ಸಹಾಯ ಸಿಗಬೇಕು. ನಮ್ಮ ಕ್ರಿಯಾಶೀಲತೆಯನ್ನೂ ಸ್ವಭಾವನ್ನೂ ಸ್ವರೂಪವನ್ನೂ ಹೀಗೆ ರೂಪಿಸಿಕೊಳ್ಳಬೇಕು.

ಹೀಗೆಯೇ, ತನ್ನ ಉದಯದಿಂದ ಚಂದ್ರನು ಕುಮುದಿನೀಸಮೂಹವನ್ನು ಅರಳಿಸುತ್ತಾನೆ; ಯಾರೂ ಬೇಡದಿದ್ದರೂ ತಾನಾಗಿಯೇ ಮೋಡವು ನೀರನ್ನು ಕೊಡುತ್ತದೆ. ಚಂದ್ರನಿಗೆ ಕುಮುದಗಳು ಎಂದಾದರೂ ಸನ್ಮಾನವನ್ನು ಏರ್ಪಾಟುಮಾಡುತ್ತದೆಯೆ? ಮಳೆಯ ನೀರಿನಿಂದ ಪ್ರಯೋಜನವನ್ನು ಪಡೆಯುತ್ತಲೇ ಇರುವ ನಾವು ಮೋಡಗಳಿಗೆ ತೆರಿಗೆಯನ್ನು ಕಟ್ಟುತ್ತಿದ್ದೇವೆಯೆ?

ನಮ್ಮ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಈ ಸುಭಾಷಿತವನ್ನು ಚೆನ್ನಾಗಿ ಮನನ ಮಾಡಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.