‘ಸ್ವಯಂ ಸೇವಕರ ಪಡೆಯಲ್ಲಿ ಸಂತೃಪ್ತಿಯ ಭಾವ’

7
ಎಲ್ಲರಲ್ಲೂ ಮನತೃಪ್ತಿಯ ಖುಷಿ; ಸೇವೆಯ ಸಾರ್ಥಕತೆ

‘ಸ್ವಯಂ ಸೇವಕರ ಪಡೆಯಲ್ಲಿ ಸಂತೃಪ್ತಿಯ ಭಾವ’

Published:
Updated:
Prajavani

ಕಗ್ಗೋಡ: ಬರೋಬ್ಬರಿ ಎಂಟು ದಿನ ಇಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವ–5ಕ್ಕೆ ಜನ ಸಾಗರವೇ ನೆರೆದಿತ್ತು. ನಿತ್ಯವೂ ಅಪಾರ ಸಂಖ್ಯೆಯ ಜನರಿಗೆ ಊಟ–ಉಪಾಹಾರ, ಕುಡಿಯುವ ನೀರು, ವಸತಿ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಅಚ್ಚುಕಟ್ಟಿನಿಂದ ನಿರ್ವಹಿಸಲಾಗಿತ್ತು. ಇದಕ್ಕೆ ಮೆಚ್ಚುಗೆಯ ಮಹಾಪೂರ ವ್ಯಕ್ತವಾಯಿತು.

ದಾಸೋಹದ ಮನೆಯಲ್ಲಿ ನಿತ್ಯವೂ 50ಕ್ಕೂ ಹೆಚ್ಚು ಒಲೆಗಳು ನಂದದೆ ಕಾರ್ಯ ನಿರ್ವಹಿಸಿದವು. ಕ್ರೇನ್ ಮೂಲಕ ಪ್ರಸಾದ ನಿಲಯದ 70ಕ್ಕೂ ಹೆಚ್ಚು ಕೌಂಟರ್‌ಗಳಿಗೆ ಊಟ ಸರಬರಾಜು ಮಾಡಲಾಯಿತು. ಅವಿಭಜಿತ ಜಿಲ್ಲೆಯ ವಿವಿಧ ಭಾಗಗಳ 300ಕ್ಕೂ ಹೆಚ್ಚು ಬಾಣಸಿಗರು ರುಚಿಕಟ್ಟಾದ ಅಡುಗೆ ತಯಾರಿಸಿದರು. ಸಹಸ್ರ, ಸಹಸ್ರ ಸಂಖ್ಯೆಯ ಸ್ವಯಂ ಸೇವಕರು ಅಡುಗೆ ಬಡಿಸುವುದು ಹಾಗೂ ಸರಬರಾಜು ಕಾರ್ಯದಲ್ಲಿ ತೊಡಗಿಕೊಂಡಿದ್ದ ದೃಶ್ಯ ಗೋಚರಿಸಿತು.

‘ನಿತ್ಯವೂ 6ರಿಂದ 9 ಟನ್‌ ಅಕ್ಕಿಯ ಅನ್ನ, ಸಾಂಬಾರ್‌, ಪಲ್ಲೆ, ಉಪಾಹಾರಕ್ಕೆ ಉಪ್ಪಿಟ್ಟನ್ನು ಬಾಣಸಿಗರು ರುಚಿಕಟ್ಟಾಗಿ ತಯಾರಿಸಿ, ಉತ್ಸವಕ್ಕೆ ಬಂದ ಜನರಿಗೆ ಊಟಕ್ಕೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಿದ್ದಾರೆ’ ಎಂದು ಊಟದ ಉಸ್ತುವಾರಿ ಸುಧೀರ ಚಿಂಚಲಿ ತಿಳಿಸಿದರು.

‘ನಿತ್ಯವೂ ಸಹಸ್ರಾರು ಸಂಖ್ಯೆಯ ಜನರಿಗೆ ಅಚ್ಚುಕಟ್ಟಾದ, ರುಚಿಕಟ್ಟಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆಯಿಂದ ಸಂಗ್ರಹಿಸಿದ್ದ 15 ಲಕ್ಷ ರೊಟ್ಟಿ, 6 ಲಕ್ಷ ಶೇಂಗಾ ಹೋಳಿಗೆ, 2 ಲಕ್ಷ ಬೂಂದಿ ಉಂಡೆ, 75 ಕ್ವಿಂಟಲ್‌ ಬೂಂದಿ ಕಾಳು ಸೇರಿದಂತೆ ಧಾನ್ಯ, ತರಕಾರಿ ಎಲ್ಲವೂ ಖಾಲಿಯಾದವು’ ಎಂದು ಚಿಂಚಲಿ ಮಾಹಿತಿ ನೀಡಿದರು.

‘ಹಸಿದ ಜನರ ಹೊಟ್ಟೆ ತಣಿಸಲು ಚಾಣಕ್ಯ ಕರಿಯರ್ ಅಕಾಡೆಮಿಯ 2000 ವಿದ್ಯಾರ್ಥಿಗಳು ನಿತ್ಯ ಪಾಳಿಯಂತೆ ಊಟ ಬಡಿಸಿದ್ದೇವೆ. ಎಂಟು ದಿನವೂ ಇಲ್ಲಿ ಸೇವೆಗೈದಿದ್ದೇವೆ’ ಎಂದು ಗುರುರಾಜ ಹುಣಶ್ಯಾಳ, ಪರಶುರಾಮ ಗುಟೂರ ತಿಳಿಸಿದರು.

‘ಉತ್ಸವಕ್ಕೆ ಬಂದ ಜನರಿಗೆ ಬೆಳಿಗ್ಗೆ ಉಪಾಹಾರಕ್ಕಾಗಿ ಉಪ್ಪಿಟ್ಟು, ಊಟಕ್ಕಾಗಿ ಹುಗ್ಗಿ, ಮಾದಲಿ, ಸಜ್ಜಕ, ಶೇಂಗಾ ಹೋಳಿಗೆ, ಬೂಂದಿ, ಜೋಳ, ಸಜ್ಜೆ ರೊಟ್ಟಿ, ಅನ್ನ ಸಾಂಬರ್ ಕೊಟ್ಟಿದ್ದೇವೆ’ ಎಂದು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಹುಲ ಮಾದರ, ರಮೇಶ ವಾರದ, ಸಿದ್ಧಲಿಂಗ ಬಾಗೇವಾಡಿ ಹೇಳಿದರು.

ಪ್ರಸಾದ ನಿಲಯ ಸೇರಿದಂತೆ ಕಾರ್ಯಕ್ರಮದ ನೂರಾರು ಎಕರೆ ಜಾಗದಲ್ಲಿ ಸಹಸ್ರಾರು ಜನ ನೆರೆದಿದ್ದರೂ; ಸ್ವಚ್ಛತೆಗೆ ಆದ್ಯತೆ ಸಿಕ್ಕಿತ್ತು. ಸ್ವಯಂ ಸೇವಕರು ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು ಕಂಡು ಬಂದಿತು. ತಟ್ಟೆಗೆ ಊಟ ಬಡಿಸಿಕೊಂಡ ಜನರು, ಶಾಲಾ ಮಕ್ಕಳು ಸಾಲಾಗಿ ಕುಳಿತು ಊಟ ಮಾಡುವ ಮೂಲಕ ಶಿಸ್ತನ್ನು ಪ್ರದರ್ಶಿಸಿದರು. ಪೊಲೀಸ್ ಸಿಬ್ಬಂದಿ ಸೇರಿದಂತೆ, ಸ್ವಯಂ ಸೇವಕರು ಮಾರ್ಗದರ್ಶನ ನೀಡಿದ್ದು ಸಾಮಾನ್ಯವಾಗಿತ್ತು.

ಪೆಂಡಾಲ್‌ನ ಎರಡೂ ಬದಿ ಶುದ್ಧ ಕುಡಿಯುವ ನೀರಿಗಾಗಿ ನೂರಾರು ನಳದ ತೊಟ್ಟಿಗಳನ್ನು ನಿರ್ಮಿಸಲಾಗಿತ್ತು. ಬಳಕೆ ನೀರಿಗಾಗಿ 12 ಟ್ಯಾಂಕರ್ ಹಾಗೂ ಪಕ್ಕದ ಕೆರೆಯ ನೀರನ್ನು ಬಳಸಿದ್ದು ಗೋಚರಿಸಿತು.

‘ನಮಗಿದು ಹೊಸ ಅನುಭವ. ಹಲವು ಕಾರ್ಯಕ್ರಮ ನೋಡಿದ್ದೇವೆ. ನಿತ್ಯ ಅಸಂಖ್ಯಾತ ಜನರಿಗೆ ರುಚಿ ಶುಚಿಯಾದ ಊಟ ಬಡಿಸುವ ಸೌಭಾಗ್ಯ ನಮ್ಮದು. ಸೇವಾಗುಣ ಹೆಚ್ವಿಸಲು ಸಂಸ್ಕೃತಿ ಉತ್ಸವ ಸಹಕಾರಿಯಾಯಿತು’ ಎಂದು ವಿಜಯಪುರ ಚಾಣಕ್ಯ ಕರಿಯರ ಅಕಾಡೆಮಿಯ ಕಲ್ಮೇಶ ಚೌಧರಿ, ಅಕ್ಷಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಸಾಕಷ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಇಲ್ಲಿ ಊಟಕ್ಕಾಗಿ ಹೆಚ್ಚು ಸಮಯ ಸರದಿಯಲ್ಲಿ ನಿಲ್ಲುವ ಪ್ರಮೇಯ ಬರಲಿಲ್ಲ’ ಎಂದು ಉಪನ್ಯಾಸಕ ಸುಧೀರ ಬಿರಾದಾರ, ಸಚಿನ್‌ ಕುಳಗೇರಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !