ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | 3 ರಾಜಧಾನಿ ಕೈಬಿಟ್ಟ ಆಂಧ್ರ

Last Updated 22 ನವೆಂಬರ್ 2021, 19:45 IST
ಅಕ್ಷರ ಗಾತ್ರ

ಆಂಧ್ರ ಪ್ರದೇಶದ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿಯನ್ನು ಜಾಗತಿಕ ಮಟ್ಟದ ನಗರವಾಗಿ ಕಟ್ಟಿ ರಾಜಧಾನಿಯಾಗಿಸುವ ಯೋಜನೆ ಹೊಂದಿದ್ದರು. ನಂತರ ಅಧಿಕಾರಕ್ಕೆ ಬಂದ ಜಗನ್‌ ಮೋಹನ್‌ ರೆಡ್ಡಿ ಅವರು ಅಮರಾವತಿಯ ಜತೆಗೆ ಕರ್ನೂಲ್ ಮತ್ತು ವಿಶಾಖಪಟ್ಟಣವನ್ನೂ ರಾಜಧಾನಿಯಾಗಿ ಬೆಳೆಸುವ ನಿರ್ಧಾರಕ್ಕೆ ಬಂದಿದ್ದರು. ರಾಜಧಾನಿ ವಿಕೇಂದ್ರೀಕರಣ ಯೋಜನೆಗೆ ಅಮರಾವತಿಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ರೈತರ ಪ್ರತಿಭಟನೆಯು 700 ದಿನ ದಾಟಿದ ಬಳಿಕ, ರಾಜಧಾನಿ ವಿಕೇಂದ್ರೀಕರಣವನ್ನು ಕೈಬಿಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ. ರಾಜಧಾನಿ ಆಯ್ಕೆಯ ಹಿಂದಿನ ರಾಜಕೀಯ ಮತ್ತು ಇತರ ಲೆಕ್ಕಾಚಾರಗಳು ಹೀಗಿವೆ

ರಾಜಕೀಯ ಲೆಕ್ಕಾಚಾರ

ಅಮರಾವತಿಯನ್ನು ರಾಜಧಾನಿಯನ್ನಾಗಿಸುವ ಟಿಡಿಪಿ ಸರ್ಕಾರದ ನಿರ್ಧಾರದ ಹಿಂದೆ ರಾಜಕೀಯ ಲೆಕ್ಕಾಚಾರಗಳಿದ್ದವು. ಅಂತೆಯೇ ರಾಜ್ಯಕ್ಕೆ ಮೂರು ರಾಜಧಾನಿ ರಚಿಸುವ ವೈಎಸ್‌ಆರ್‌ಸಿ ಸರ್ಕಾರದ ನಡೆಯ ಹಿಂದೆಯೂ ರಾಜಕೀಯ ಲೆಕ್ಕಾಚಾರವೇ ಇತ್ತು. ಅಮರಾವತಿ ಜಿಲ್ಲೆ ವ್ಯಾಪಿಸಿರುವ ಗುಂಟೂರು ಮತ್ತು ವಿಜಯವಾಡ ಪ್ರದೇಶದಲ್ಲಿ ಕಮ್ಮ ಸಮುದಾಯದವರ ಪ್ರಾಬಲ್ಯವಿದೆ. ಈ ಸಮುದಾಯದ ನಾಯಕರಾಗಿರುವ ಎನ್.ಚಂದ್ರಬಾಬು ನಾಯ್ಡು ಅವರು ಸಹಜವಾಗಿಯೇ, ತಮ್ಮ ಮತಗಳ ಭದ್ರಕೋಟೆಯಲ್ಲಿ ರಾಜಧಾನಿ ಇರಬೇಕು ಎಂದು ಯೋಜಿಸಿದರು. ಇದೇ ಕಾರಣಕ್ಕೆ, ಹೆಚ್ಚು ಫಲವತ್ತಾದ ಕೃಷಿ ಭೂಮಿ ಇರುವ ಪ್ರದೇಶವನ್ನೇ ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದು ಒಂದು ದೊಡ್ಡ ರಾಜಕೀಯ ತಂತ್ರವಾಗಿತ್ತು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

‘ರೆಡ್ಡಿ ಸಮುದಾಯದವರು ಬಹುಸಂಖ್ಯಾತರಾಗಿರುವ ರಾಯಲಸೀಮಾ ಪ್ರದೇಶವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಆದರೆ, ಕಮ್ಮ ಜನರನ್ನು ಓಲೈಸಲು ಗುಂಟೂರು–ವಿಜಯವಾಡ ಪ್ರದೇಶವನ್ನು ರಾಜಧಾನಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂಬ ಆರೋಪ, ಅಮರಾವತಿಯನ್ನು ಆಯ್ಕೆ ಮಾಡಿಕೊಳ್ಳುವ ವೇಳೆ ಕೇಳಿಬಂದಿತ್ತು. ಹೀಗಾಗಿಯೇ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಅಧಿಕಾರಕ್ಕೆ ಬಂದಾಗ ಅಮರಾವತಿಯಿಂದ ರಾಜಧಾನಿಯನ್ನು ವಿಕೇಂದ್ರೀಕರಿಸುವ ಯತ್ನ ಮಾಡಿತು. ಆ ಮೂಲಕ ರೆಡ್ಡಿ ಜನರ ಓಲೈಕೆಗೆ ಮುಂದಾಯಿತು ಎಂದು ವಿಶ್ಲೇಷಿಸಲಾಗಿದೆ.

ರಾಜ್ಯದ ಎಲ್ಲಾ ಭಾಗಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 3 ರಾಜಧಾನಿಗಳನ್ನು ರಚಿಸಲಾಗುತ್ತಿದೆ ಎಂದು ವೈಎಸ್‌ಆರ್‌ಸಿ ಸರ್ಕಾರವು ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು. ಆದರೆ, ಟಿಡಿಪಿ ಸರ್ಕಾರದ ನಿರ್ಧಾರವನ್ನು ತೆಗೆದುಹಾಕುವ ಏಕೈಕ ಉದ್ದೇಶದಿಂದಷ್ಟೇ ವೈಎಸ್‌ಆರ್‌ಸಿ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ರಾಯಲಸೀಮಾ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಈ ಪ್ರದೇಶದ ಕರ್ನೂಲ್‌ ಜಿಲ್ಲೆಯನ್ನು, ನ್ಯಾಯಾಂಗ ರಾಜಧಾನಿಯನ್ನಾಗಿಸಲು ಸರ್ಕಾರ ಮುಂದಾಗಿತ್ತು. ನ್ಯಾಯಾಂಗ ವ್ಯವಸ್ಥೆಯನ್ನಷ್ಟೇ ಸ್ಥಾಪಿಸಿದರೆ, ಈ ಪ್ರದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಿದ್ದೂ ಅಲ್ಲಿ ರಾಜಧಾನಿ ರಚನೆಗೆ ಮುಂದಾದುದರ ಹಿಂದೆ, ರೆಡ್ಡಿ ಸಮುದಾಯದ ಮತದಾರರನ್ನು ಸಮಾಧಾನಪಡಿಸುವ ಹೊರತಾಗಿ ಬೇರೆ ಕಾರಣಗಳು ಇಲ್ಲ ಎಂದು ವಿಶ್ಲೇಷಿಸಲಾಗಿದೆ.

ಕಾರ್ಯಾಂಗದ ರಾಜಧಾನಿಯನ್ನಾಗಿ ರಾಜ್ಯದ ಉತ್ತರ ಭಾಗದಲ್ಲಿರುವ ವಿಶಾಖಪಟ್ಟಣವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವಿಭಜಿತ ಆಂಧ್ರಪ್ರದೇಶಲ್ಲಿ ವಿಶಾಖಪಟ್ಟಣವು ಎರಡನೇ ಅತ್ಯಂತ ದೊಡ್ಡ ನಗರ ಮತ್ತು ಅಭಿವೃದ್ಧಿ ಹೊಂದಿದ ಪ್ರದೇಶವಾಗಿತ್ತು. ಈಗಿನ ಆಂಧ್ರಪ್ರದೇಶದಲ್ಲೂ ಅದು ಅತ್ಯಂತ ದೊಡ್ಡ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿದೆ. ಹೀಗಾಗಿ ರಾಜ್ಯದ ಬೇರೆ ಜಿಲ್ಲೆಗಳನ್ನು ಕಡೆಗಣಿಸಿ, ವಿಶಾಖಪಟ್ಟಣವನ್ನು ಅಭಿವೃದ್ಧಿಪಡಿಸುತ್ತೇವೆ ಎಂಬುದರಲ್ಲಿ ಅರ್ಥವಿಲ್ಲ. ಈ ಪ್ರದೇಶದಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚುತ್ತಿದೆ. ಅದನ್ನು ನಿಯಂತ್ರಿಸುವ ಸಲುವಾಗಿ ವಿಶಾಖಪಟ್ಟಣವನ್ನು ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

‘ಅಮರಾವತಿ ರಚನೆಗೆ ಕ್ರಮ ತೆಗೆದುಕೊಳ್ಳುವ ಮುನ್ನವೇ ಕಮ್ಮ ಸಮುದಾಯದ ರಾಜಕೀಯ ನಾಯಕರು ಆ ಪ್ರದೇಶದಲ್ಲಿ ಜಮೀನು ಖರೀದಿಸಿದ್ದರು. ನಂತರ ಅಮರಾವತಿಗಾಗಿ ಸರ್ಕಾರ ಭೂಸ್ವಾಧೀನ ಮಾಡಿಕೊಂಡ ಜಮೀನಿನಲ್ಲಿ, ಈ ನಾಯಕರ ಜಮೀನಿನ ಪಾಲೇ ಅತ್ಯಧಿಕವಾಗಿತ್ತು’ ಎಂದು ವೈಎಸ್‌ಆರ್‌ಸಿ ನಾಯಕರು ಆರೋಪಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದಲೇ ರಾಜಧಾನಿಯನ್ನು ವಿಕೇಂದ್ರೀಕರಿಸಲಾಗುತ್ತಿದೆ ಎಂದೂ ಅವರು ಹೇಳುತ್ತಿದ್ದಾರೆ. ಆದರೆ ಅವರದ್ದೇ ಸರ್ಕಾರವಿದ್ದರೂ, ಈ ಬಗ್ಗೆ ತನಿಖೆಗೆ ಆದೇಶಿಸಿಲ್ಲ. ಹೀಗಾಗಿ ಈ ಅಕ್ರಮದ ಕಾರಣದಿಂದ ರಾಜಧಾನಿಯನ್ನು ವಿಕೇಂದ್ರೀಕರಿಸಲಾಗುತ್ತದೆ ಎಂಬುದು ಪೂರ್ಣಸತ್ಯವಲ್ಲ ಎಂದು ತಜ್ಞರು ಹೇಳಿದ್ದಾರೆ.

ಸಂಸತ್ತಿಗೆ ಮಾತ್ರವೇ ಅಧಿಕಾರ

‘ರಾಜ್ಯದ ರಾಜಧಾನಿಯನ್ನು ಸ್ಥಾಪಿಸುವ, ಬದಲಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ’. ಇದು ಆಂಧ್ರ ಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸುವ ವೈಎಸ್‌ಆರ್‌ಸಿ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಹಾಕಿರುವ ರೈತರ ಪರ ವಕೀಲರ ವಾದ.

‘ರಾಜ್ಯದ ರಾಜಧಾನಿಯನ್ನು ಸ್ಥಾಪಿಸುವ ಸಂಬಂಧ ಇರುವ ಅಧಿಕಾರಗಳು ಮತ್ತು ಅನುಸರಿಸಬೇಕಾದ ಪ್ರಕ್ರಿಯೆಗಳ ಬಗ್ಗೆ ಸಂವಿಧಾನದ 2ನೇ ಮತ್ತು 3ನೇ ವಿಧಿಯಲ್ಲಿ ವಿವರಿಸಲಾಗಿದೆ. ಸಂವಿಧಾನದ 2ನೇ ಮತ್ತು 3ನೇ ವಿಧಿಯ ಅಡಿ ನೂತನ ರಾಜ್ಯವನ್ನು ರಚಿಸಿ, ಅದರ ಭೌಗೋಳಿಕ ಗಡಿಗಳನ್ನು ನಿರ್ಧರಿಸಿ, ರಾಜಧಾನಿಯನ್ನು ಗುರುತಿಸುವ ಅಧಿಕಾರ ಸಂಸತ್ತಿಗೆ ಮಾತ್ರವೇ ಇದೆ. ಹೊಸ ರಾಜಧಾನಿ ರಚಿಸುವ ಸಂಬಂಧ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿ, ಅಂಗೀಕಾರ ಪಡೆಯಬೇಕು’ ಎಂದು ಈ ಅರ್ಜಿಗಳ ಪರ ವಾದ ಮಂಡಿಸುತ್ತಿರುವ ವಕೀಲರಲ್ಲಿ ಒಬ್ಬರಾದ ಮಲ್ಲೇಲ ಶೇಷಗಿರಿ ರಾವ್ ವಿವರಿಸಿದ್ದಾರೆ.

ಮಸೂದೆಗಳು ಏನು ಹೇಳುತ್ತವೆ?

ಮೂರು ರಾಜಧಾನಿ ಸ್ಥಾಪನೆ ಕುರಿತು 2020ರ ಜನವರಿಯಲ್ಲಿ ಮಸೂದೆಗಳನ್ನು ಮಂಡಿಸಲಾಗಿತ್ತು. ಅವುಗಳೆಂದರೆ, ‘ಆಂಧ್ರಪ್ರದೇಶ ರಾಜಧಾನಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ರದ್ದು ಮಸೂದೆ’ ಮತ್ತು ‘ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆ’.

ಈ ಮಸೂದೆಗಳ ಪ್ರಕಾರ, ರಾಯಲಸೀಮಾ ಭಾಗದ ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯಾಗಿ, ರಾಜ್ಯದ ಉತ್ತರ ಭಾಗದ ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿಯಾಗಿ, ಅಮರಾವತಿಯನ್ನು ಶಾಸಕಾಂಗ ರಾಜಧಾನಿಯನ್ನಾಗಿ ಪ್ರತ್ಯೇಕಿಸಬೇಕು. ಹೈಕೋರ್ಟ್ ಹಾಗೂ ನ್ಯಾಯಾಂಗಕ್ಕೆ ಸಂಬಂಧಪಟ್ಟ ಎಲ್ಲ ಕಚೇರಿ ಮತ್ತು ವಿಭಾಗಗಳನ್ನು ಕರ್ನೂಲ್‌ಗೆ, ಆಡಳಿತಕ್ಕೆ ಸಂಬಂಧಪಟ್ಟ ಕಚೇರಿ ಹಾಗೂ ವಿಭಾಗಗಳನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರ ಮಾಡುವ ಸಂಬಂಧ ಹೈಕೋರ್ಟ್‌ಗೆ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅಮರಾವತಿಯಲ್ಲಿ ವಿಧಾನಮಂಡಲವನ್ನು ಉಳಿಸಿಕೊಳ್ಳುವುದಾಗಿ ಹೇಳಿತ್ತು. ಈ ಮಸೂದೆಗಳಿಗೆ ವಿಧಾನಸಭೆ ಅನುಮೋದನೆ ನೀಡಿದೆ. ಆದರೆ ವಿಧಾನ ಪರಿಷತ್‌ನಲ್ಲಿ ವೈಎಸ್‌ಆರ್‌ಸಿ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ, ಮಸೂದೆಗಳು ಅಂಗೀಕಾರ ಪಡೆದಿಲ್ಲ. ಈ ಮಸೂದೆಗಳನ್ನು ಜುಲೈನಲ್ಲಿ ಮತ್ತೆ ಮಂಡನೆ ಮಾಡಲಾಗಿದ್ದು, ಇವುಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗಿದೆ. ಆದರೆ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ತೆಲುಗುದೇಶಂ ಪಕ್ಷ (ಟಿಡಿಪಿ) ಆರೋಪಿಸಿದೆ. ಮಂಡನೆಯಾದ ಒಂದು ತಿಂಗಳ ಅವಧಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ, ಮಸೂದೆ ಅಂಗೀಕಾರವಾಗಿದೆ ಎಂದರ್ಥ ಎಂಬುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಾನೂನು ಹೋರಾಟ

ಮೂರು ರಾಜಧಾನಿಗಳನ್ನು ಘೋಷಿಸಿದ ಜಗನ್ ನಿರ್ಧಾರವನ್ನು ಪ್ರತಿಪಕ್ಷಗಳು ಹಾಗೂ ಅಮರಾವತಿಯಲ್ಲಿ ರಾಜಧಾನಿ ಕಟ್ಟಲು ತಮ್ಮ 33 ಸಾವಿರ ಎಕರೆ ಜಮೀನು ನೀಡಿದ್ದ ರೈತರು ಬಲವಾಗಿ ವಿರೋಧಿಸಿದರು. ಹೈಕೋರ್ಟ್‌ನಲ್ಲಿ 100ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಈ ಪೈಕಿ 60 ಅರ್ಜಿಗಳನ್ನು ದಿನ ಬಿಟ್ಟು ದಿನ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಮಸೂದೆಗಳು ದುರುದ್ದೇಶದಿಂದ ಕೂಡಿವೆ ಎಂದು ಅರ್ಜಿದಾರರ ಪರ ವಕೀಲ ಉನ್ನಮ್ ಮುರಳೀಧರ ರಾವ್ ಅವರು ಆರೋಪಿಸಿದ್ದಾರೆ. ರಾಜಧಾನಿಯನ್ನು ಮೂರು ಭಾಗಗಳಾಗಿ ವಿಂಗಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಮೂರು ರಾಜಧಾನಿಗಳನ್ನು ರೂಪಿಸುವುದು ಆಂಧ್ರ ಪ್ರದೇಶ ರಾಜ್ಯ ವಿಭಜನೆ ಕಾಯ್ದೆ 2014ರ ಉಲ್ಲಂಘನೆ ಎಂದು ರೈತರು ಆರೋಪಿಸಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವಿದ್ದರೂ, ವಿಶಾಖಪಟ್ಟಣದಲ್ಲಿ ಅತಿಥಿಗೃಹ ನಿರ್ಮಾಣದಂತಹ ಕಾಮಗಾರಿಗಳನ್ನು ಸರ್ಕಾರ ಕೈಗೆತ್ತಿಕೊಂಡಿರುವುದು ನ್ಯಾಯಾಂಗ ನಿಂದನೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಆಂಧ್ರಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದರಿಂದ, ಜಗನ್ ಸರ್ಕಾರಕ್ಕೆ ಹಿನ್ನಡೆ ಉಂಟಾಗಿತ್ತು.

700 ದಿನ ಪೂರೈಸಿದ ರೈತರ ಪ್ರತಿಭಟನೆ

ಅಮರಾವತಿಯನ್ನು ಮಾದರಿ ರಾಜಧಾನಿಯಾಗಿ ನಿರ್ಮಿಸುವ ಚಂದ್ರಬಾಬು ನಾಯ್ಡು ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದ ರೈತರು ತಮ್ಮ ಜಮೀನುಗಳನ್ನು ಸರ್ಕಾರಕ್ಕೆ ನೀಡಿದ್ದರು. ಆದರೆ ಅಮರಾವತಿಯ ಜೊತೆಗೆ ಇನ್ನೆರಡು ರಾಜಧಾನಿಗಳನ್ನು ರೂಪಿಸುವ ಜಗನ್ ಸರ್ಕಾರದ ನಿರ್ಧಾರವು ಅವರಲ್ಲಿ ದಿಗ್ಭ್ರಮೆ ಮೂಡಿಸಿತು. ಮಸೂದೆಗಳನ್ನು ಸರ್ಕಾರ ಮಂಡಿಸುತ್ತಿದ್ದಂತೆಯೇ ಆರಂಭವಾದ ಪ್ರತಿಭಟನೆ, ಈಗ 700 ದಿನಗಳನ್ನು ಪೂರೈಸಿದೆ. ಹೈಕೋರ್ಟ್‌ನಲ್ಲೂ ಕಾನೂನು ಹೋರಾಟ ನಡೆಯುತ್ತಿದೆ. ಟಿಡಿಪಿ, ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳೂ ರೈತರ ಆಗ್ರಹಕ್ಕೆ ದನಿಗೂಡಿಸಿದವು.

ಇದೇ ನವೆಂಬರ್‌ನಲ್ಲಿ ರೈತರ ಹೋರಾಟವು ಮತ್ತೊಂದು ಹಂತಕ್ಕೆ ಅಡಿಯಿಟ್ಟಿದೆ. ಅಮರಾವತಿ ಪರಿರಕ್ಷಣಾ ಸಮಿತಿ ಮತ್ತು ಅಮರಾವತಿ ಜಂಟಿ ಕಾರ್ಯಸಮಿತಿಯು ಮಹಾಪಾದಯಾತ್ರೆ ಆಯೋಜಿಸಿವೆ. ಅಮರಾವತಿಯಿಂದ ತಿರುಪತಿಗೆ 45 ದಿನಗಳ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದೆ. ನವೆಂಬರ್ 1ರಂದು ಆರಂಭವಾದ ಯಾತ್ರೆಯು ಗುಂಟೂರು, ಪ್ರಕಾಶಂ, ನೆಲ್ಲೂರು ಮತ್ತು ಚಿತ್ತೂರು ಮಾರ್ಗವಾಗಿ ತೆರಳಿ, ಡಿಸೆಂಬರ್ 15ರ ವೇಳೆಗೆ ತಿರುಪತಿ ತಲುಪುವ ಯೋಜನೆ ಹಾಕಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT