ಶುಕ್ರವಾರ, ಜೂನ್ 5, 2020
27 °C
ಬಿಮ್ಸ್‌ಗೆ ಅರ್ಪಣೆ

ಕೊರೊನಾ ಸೋಂಕಿತರ ಸೇವೆಗೆ ನಿಪ್ಪಾಣಿ ಯುವಕರಿಂದ ‘ಅನ್ನಪೂರ್ಣಾ’ ರೊಬೊಟ್

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಬಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್–19 ಸೋಂಕಿತರ ಚಿಕಿತ್ಸೆಗೆ ನೆರವಾಗಲು ನಿಪ್ಪಾಣಿಯ ಭಾರತೀಯ ವಿಚಾರ ಮಂಚ್‌ನ ಸದಸ್ಯರು ‘ಅನ್ನಪೂರ್ಣಾ’ ಹೆಸರಿನ ರೊಬೊಟ್‌ ಸಿದ್ಧಪಡಿಸಿದ್ದಾರೆ.

ಸೋಂಕಿತರಿಗೆ ಚಿಕಿತ್ಸೆ ಮಾತ್ರವಲ್ಲದೆ, ಊಟ, ಆರೈಕೆ, ಔಷಧಿ ನೀಡುವ ಕಾರಣಗಳಿಂದ ನರ್ಸ್‌ಗಳು ಹಾಗೂ ಇತರ ಸಿಬ್ಬಂದಿ ಸೋಂಕಿತರ ಸಂಪರ್ಕಕ್ಕೆ ಬರುವುದರಿಂದ ಅವರಿಗೂ ಸೋಂಕು ತಗಲುವ ಆತಂಕ ಇರುತ್ತದೆ. ಇಂಥ ಸೇವೆಗಳನ್ನು ನೀಡಲು ಗಡಿ ಪ್ರದೇಶದ ಯುವ ಎಂಜಿನಿಯರ್‌ಗಳು ರೊಬೊಟ್ ಅಭಿವೃದ್ಧಿಪಡಿಸಿದ್ದಾರೆ.

ಭಾರತೀಯ ವಿಚಾರ ಮಂಚ್‌ನ ಸದಸ್ಯ ಶೈಲೇಂದ್ರ ಪಾರಿಕ್ ಅವರ ಪರಿಕಲ್ಪನೆಯಲ್ಲಿ ಎಂಜಿನಿಯರ್‌ಗಳಾದ ತುಳಸಿ
ದಾಸ ಸಾಳುಂಕೆ, ಭರತ ಕುರಪೆ ಮತ್ತು ಭಾನುದಾಸ ಸಾಳುಂಕೆ ಅವರು ರೊಬೊಟ್‌ ಸಿದ್ಧಪಡಿಸಿದ್ದಾರೆ. ₹40 ಸಾವಿರ ವೆಚ್ಚವಾಗಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಆರ್ಥಿಕ ನೆರವು ನೀಡಿದೆ.

‘ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಮತ್ತು ಲೋಕಲ್–ವೋಕಲ್ ಪ್ರೇರಣೆಯಿಂದ ಈ ರೊಬೊಟ್ ಸಿದ್ಧಪಡಿಸಲಾಗಿದೆ. ಎಲ್ಲ
ವಸ್ತುಗಳನ್ನೂ ನಿಪ್ಪಾಣಿಯಲ್ಲೇ ಖರೀದಿಸಿದ್ದೇವೆ. ಬಳಕೆ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ನೀಡಲು ಸಿದ್ಧವಿದ್ದೇವೆ’ ಎಂದು ಶೈಲೇಂದ್ರ ಪಾರಿಕ್ ತಿಳಿಸಿದರು.

ಉಪಯೋಗವೇನು?: 2.6 ಅಡಿ ಉದ್ದ ಮತ್ತು ಅಗಲ ಹೊಂದಿರುವ ಈ ರೊಬೊಟ್‌ ಬ್ಯಾಟರಿಯಿಂದ 7 ಗಂಟೆಗಳಷ್ಟು ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗೆ ಊಟ, ಉಪಾಹಾರ, ಕುಡಿಯುವ ನೀರು, ಔಷಧಿ ಮತ್ತು ಇತರ ಅವಶ್ಯ ವಸ್ತುಗಳನ್ನು ಸಾಗಿಸುತ್ತದೆ. 

ಸಿಸಿಟಿವಿ ಕ್ಯಾಮೆರಾ: ‘ಇದಕ್ಕೆ ರಿಮೋಟ್ ಇಲ್ಲ. ಅಂತರ್ಜಾಲದ ನೆರವಿನಿಂದ ಮೊಬೈಲ್ ಮೂಲಕ ಆಪರೇಟ್ ಮಾಡಬಹುದು. 360 ಡಿಗ್ರಿಯಲ್ಲಿ ರೊಟೇಟ್ ಆಗುವ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಮೂಲಕ ವಾರ್ಡ್‌ನಲ್ಲಿ ಏನೇನು ನಡೆಯುತ್ತಿದೆ, ರೋಗಿಗಳ ಪ್ರತಿಕ್ರಿಯೆ ಹೇಗಿದೆ, ಸ್ವಚ್ಛತೆ ಇದೆಯೇ, ಔಷಧಿ ತೆಗೆದುಕೊಂಡರೇ, ಊಟ ಮಾಡಿದರೇ ಎಂಬ ಮಾಹಿತಿಗಳನ್ನು ಸಂಪರ್ಕ ಹೊಂದಿರುವ ಕಂಪ್ಯೂಟರ್‌ (ಗರಿಷ್ಠ 10ಕ್ಕೆಸಂಪರ್ಕ ಕಲ್ಪಿಸಬಹುದು) ಮೂಲಕ ವೀಕ್ಷಿಸಬಹುದು. ವಿಡಿಯೊ ಕಾನ್ಫರೆನ್ಸ್‌ಗೆ ಅನುಕೂಲವಾಗುವಂತೆ ಟ್ಯಾಬ್ ಅಳವಡಿಸಲಾಗಿದೆ. ರೋಗಿ–ವೈದ್ಯರು ಲೈವ್‌ ಸಂಭಾಷಣೆ ನಡೆಸಬಹುದು’ ಎಂದು ಹೇಳಿದರು.

ರೊಬೊಟ್ ಕಾರ್ಯವೈಖರಿ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಸಮ್ಮುಖದಲ್ಲಿ ಎಂಜಿನಿಯರ್ಗಳು ಮಾಹಿತಿ ನೀಡಿದರು. ಜಿಲ್ಲಾಡಳಿತಕ್ಕೆ ಇದನ್ನು ಹಸ್ತಾಂತರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು