ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ₹33,783 ಕೋಟಿ ಬಿಟ್‌ಕಾಯಿನ್‌ಗೆ ಡಿಜಿಟಲ್ ಕನ್ನ!

ಕ್ರಿಪ್ಟೊಕರೆನ್ಸಿಯ ಬಹುದೊಡ್ಡ ವಂಚನೆ ಬಯಲು
Last Updated 27 ಫೆಬ್ರುವರಿ 2022, 21:45 IST
ಅಕ್ಷರ ಗಾತ್ರ

ಕ್ರಿಪ್ಟೊಕರೆನ್ಸಿಯ ಸಾಧಕ ಬಾಧಕಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಅತಿದೊಡ್ಡ ಕ್ರಿಪ್ಟೊಕರೆನ್ಸಿ ವಂಚನೆಯನ್ನು ಅಮೆರಿಕದ ಎಫ್‌ಬಿಐ ಇತ್ತೀಚೆಗೆ ಬಯಲಿಗೆಳೆದಿದೆ. ಅಮೆರಿಕದ ಹೀಥರ್ ಮೋರ್ಗೆನ್ ಹಾಗೂ ಇಲ್ಯಾ ಲೀಟೆನ್‌ಸ್ಟೈನ್‌ ಎಂಬ ಜೋಡಿಯನ್ನು ಬಂಧಿಸುವ ಮೂಲಕ ಪ್ರಕರಣ ಬಯಲಿಗೆ ಬಂದಿದೆ. 360 ಕೋಟಿ ಡಾಲರ್ (ಸುಮಾರು ₹27,000 ಕೋಟಿ) ಮೊತ್ತದ ಬಿಟ್‌ಕಾಯಿನ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಪ್ರಮುಖ ಕ್ರಿಪ್ಟೊಕರೆನ್ಸಿ ಎನಿಸಿರುವ ‘ಬಿಟ್‌ಕಾಯಿನ್‌’ಗೆ 2016ರ ಆಗಸ್ಟ್‌ನಲ್ಲಿ ಹೀಥರ್ ಹಾಗೂ ಲೀಟೆನ್‌ಸ್ಟೈನ್‌ ದಂಪತಿ ಕನ್ನ ಹಾಕಿದ್ದರು. 7.1 ಕೋಟಿ ಡಾಲರ್ (ಸುಮಾರು ₹475 ಕೋಟಿ) ಮೌಲ್ಯದ ಬಿಟ್‌ಕಾಯಿನ್ ಅನ್ನು ಇವರು ಕಳ್ಳ ಮಾರ್ಗದ ಮೂಲಕ ವರ್ಗಾಯಿಸಿದ್ದರು. (ಈಗಿನ ಮೌಲ್ಯ 450 ಕೋಟಿ ಡಾಲರ್–ಅಂದಾಜು ₹33,783 ಕೋಟಿ) ವಿವಿಧ ರೀತಿಯ ಕ್ರಿಪ್ಟೊಕರೆನ್ಸಿಗಳ ಖರೀದಿ, ಮಾರಾಟ ಹಾಗೂ ನಿರ್ವಹಣೆ ಮಾಡುವ ‘ಬಿಟ್‌ಫಿನೆಕ್ಸ್’ ವೇದಿಕೆಯ ಮೂಲಕ ಬಿಟ್‌ಕಾಯಿನ್ ಕದ್ದಿದ್ದರು ಎಂದು ಎಫ್‌ಬಿಐ ಆರೋಪಿಸಿದೆ.

ತನಿಖಾ ಸಂಸ್ಥೆಯ ಮಾಹಿತಿ ಪ್ರಕಾರ, ಒಟ್ಟು 1,19,754 ಬಿಟ್‌ಕಾಯಿನ್‌ಗಳನ್ನು ಕಳ್ಳತನ ಮಾಡಲಾಗಿದೆ. ಈ ಎಲ್ಲವನ್ನೂ ಒಂದೇ ಬಾರಿಗೆ ಕದ್ದಿಲ್ಲ. ಸುಮಾರು 2,000 ವಹಿವಾಟುಗಳಲ್ಲಿ ಇವುಗಳನ್ನು ಬೇರೆ ಬೇರೆ ವ್ಯಾಲೆಟ್‌ಗಳಿಗೆ ವರ್ಗಾಯಿಸಲಾಗಿದೆ. ಈ ಆರು ವರ್ಷಗಳಲ್ಲಿ ಬಿಟ್‌ಕಾಯಿನ್‌ ಹೆಚ್ಚು ಜನಪ್ರಿಯತೆ ಪಡೆದಿದ್ದು, ಮೌಲ್ಯವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಕದ್ದಿರುವ ಬಿಟ್‌ಕಾಯಿನ್‌ಗಳ ಮೌಲ್ಯ 7.1 ಕೋಟಿ ಡಾಲರ್‌ನಿಂದ 450 ಕೋಟಿ ಡಾಲರ್‌ಗೆ ತಲುಪಿದೆ.

ಕದ್ದಿರುವ ಬಿಟ್‌ಕಾಯಿನ್‌ಗಳನ್ನು ಲೀಟೆನ್‌ ಸ್ಟೈನ್‌ ಅವರ ನಿಯಂತ್ರಣದಲ್ಲಿರುವ ವ್ಯಾಲೆಟ್‌ಗೆ ಮೊದಲು ವರ್ಗಾಯಿಸಲಾಗಿತ್ತು. ಈ ಪೈಕಿ 25 ಸಾವಿರ ಬಿಟ್‌ಕಾಯಿನ್‌ಗಳನ್ನು ಸರಣಿ ವಹಿವಾಟು ಗಳ ಮೂಲಕ ದಂಪತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಉಳಿದ 94 ಸಾವಿರ ಬಿಟ್‌ಕಾಯಿನ್‌ಗಳನ್ನು ಕೋರ್ಟ್ ಆದೇಶದ ಪ್ರಕಾರ ತನಿಖಾ ಸಂಸ್ಥೆ ಜಪ್ತಿ ಮಾಡಿದೆ. ಇವುಗಳ ಮೌಲ್ಯ ಈಗ ಸುಮಾರು ₹27,000 ಕೋಟಿ.

ಹಣ ವರ್ಗಾವಣೆಯ ಹಲವು ಅಕ್ರಮ ತಂತ್ರಗಳನ್ನು ಬಳಸಿಕೊಂಡು ಈ ದಂಪತಿ ಕ್ರಿಪ್ಟೊಕರೆನ್ಸಿಯನ್ನು ನಗದಾಗಿ ಪರಿವರ್ತಿಸಿಕೊಂಡಿದ್ದಾರೆ. ಅಕ್ರಮದ ವಾಸನೆ ಬಾರದಂತೆ ನೋಡಿಕೊಳ್ಳಲು ಯತ್ನಿಸಿದ್ದ ಅವರು, ದೊಡ್ಡ ಮೊತ್ತದ ವಹಿವಾಟುಗಳ ಬದಲಾಗಿ, ಸಣ್ಣ ಸಣ್ಣ ವಹಿವಾಟುಗಳನ್ನು ಮಾಡಿದ್ದರು. ಒಟ್ಟು ಎರಡು ಸಾವಿರ ವಹಿವಾಟುಗಳು ಆಗಿದ್ದು ಇದೇ ಕಾರಣಕ್ಕೆ.

ಸ್ವಯಂಚಾಲಿತ ಹಣ ವರ್ಗಾವಣೆಗೆ ಅನುವು ನೀಡುವ ಕಂಪ್ಯೂಟರ್ ಪ್ರೋಗ್ರಾಮ್‌ಗಳನ್ನು ಇವರು ಬಳಸಿಕೊಂಡಿದ್ದರು. ತನಿಖೆಯ ದಾರಿ ತಪ್ಪಿಸಲು, ಕದ್ದ ಹಣವನ್ನು ವಿವಿಧ ರೀತಿಯ ಡಿಜಿಟಲ್ ಕರೆನ್ಸಿ ಖಾತೆಗಳು ಹಾಗೂ ಡಾರ್ಕ್‌ನೆಟ್‌ನಲ್ಲಿ ಠೇವಣಿ ಇರಿಸಿದ್ದರು. ವಿವಿಧ ರೀತಿಯ ಡಿಜಿಟಲ್ ಕರೆನ್ಸಿಗಳಲ್ಲಿ ಠೇವಣಿ ಇಡುವುದು ಹಾಗೂ ಅವುಗಳನ್ನು ಒಂದರಿಂದ ಮತ್ತೊಂದಕ್ಕೆ ವರ್ಗಾಯಿಸುವ ‘ಚೈನ್ ಹೋಪಿಂಗ್’ ತಂತ್ರವನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದರು. ಕಾನೂನುಬದ್ಧ ಚಟುವಟಿಕೆಗಳಿಗೆ ಅಮೆರಿಕದ ಬ್ಯುಸಿನೆಸ್ ಖಾತೆಗಳನ್ನು ಬಳಸಿಕೊಂಡು ಯಾರಿಗೂ ಅನುಮಾನ ಬಾರದಂತೆ ಎಚ್ಚರಿಕೆ ವಹಿಸಿದ್ದರು. ಬಿಟ್‌ಕಾಯಿನ್ ಸ್ವರೂಪದ ಆಲ್ಟ್‌ಕಾಯಿನ್, ಎನ್‌ಎಫ್‌ಟಿ, ಗಿಫ್ಟ್‌ ಕಾರ್ಡ್‌, ಚಿನ್ನ ಖರೀದಿಗೆ ಈ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಫೆ.7ರಂದು ಹೊರಡಿಸಿದ ಬಂಧನ ವಾರಂಟ್‌ನಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ವಂಚಕ ದಂಪತಿ

ಹೀಥರ್ (34) ಹಾಗೂ ಲೀಟೆನ್‌ಸ್ಟೈನ್‌ (31) ಇಬ್ಬರೂ ಅಮೆರಿಕದ ಪ್ರಜೆಗಳು. ಲೀಟೆನ್‌ಸ್ಟೈನ್‌ ರಷ್ಯಾದ ಪೌರತ್ವವನ್ನೂ ಪಡೆದಿದ್ದಾನೆ. ಹೀಥರ್ ಪತ್ರಕರ್ತೆಯಾಗಿ ಕೆಲಸ ಮಾಡಿದ್ದಾರೆ. ಫೋರ್ಬ್ಸ್ ಹಾಗೂ ಇಂಕ್ ನಿಯತಕಾಲಿಕಗಳಿಗೆ ಕೆಲವು ವರ್ಷ ಅಂಕಣಗಳನ್ನು ಬರೆದಿದ್ದರು. ಹೀಥರ್ ಬಂಧನದ ಬಳಿಕ ಸ್ಪಷ್ಟನೆ ನೀಡಿರುವ ಫೋರ್ಬ್ಸ್, ವೆಬ್‌ಸೈಟ್‌ನ ‘ಫೋರ್ಬ್ಸ್‌ವಿಮೆನ್’ ವಿಭಾಗದಲ್ಲಿ 2017ರಿಂದ ಕೆಲಸ ಆರಂಭಿಸಿದ ಅವರನ್ನು 2021ರ ಸೆಪ್ಟೆಂಬರ್‌ನಲ್ಲಿ ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ತಿಳಿಸಿದೆ. ತಾವೊಬ್ಬ ರ್‍ಯಾ‍ಪರ್ ಎಂದು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಮೋರ್ಗೆನ್ ಬರೆದುಕೊಂಡಿದ್ದಾರೆ.

ಲೀಟೆನ್‌ಸ್ಟೈನ್‌ ತಮ್ಮನ್ನು ಬ್ಲಾಕ್‌ಚೈನ್ ನವೋದ್ಯಮದ ಸ್ಥಾಪಕ ಎಂದು ಹೇಳಿಕೊಂಡಿದ್ದಾರೆ. ತಾವೊಬ್ಬ ತಂತ್ರಜ್ಞಾನ ಉದ್ಯಮಿ, ಕೋಡರ್ ಮತ್ತು ಹೂಡಿಕೆದಾರ ಎಂದೂ ಲಿಂಕ್ಡ್‌ಇನ್ ಪ್ರೊಫೈನಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಇಬ್ಬರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾದ ಹಾಗೂ ಅಮೆರಿಕಕ್ಕೆ ವಂಚನೆ ಎಸಗಿದ ಆರೋಪ ಮಾಡಲಾಗಿದೆ. ಹೀಗಾಗಿ 20ರಿಂದ 25 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆಯಿದೆ.

ಕದ್ದವರನ್ನು ಪತ್ತೆ ಮಾಡಿದ್ದು ಹೀಗೆ...

2016ರಲ್ಲೇ ಮೋರ್ಗೆನ್ ದಂಪತಿ ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದರೂ, ಅದನ್ನು ಕದ್ದವರು ಯಾರು ಎಂಬುದನ್ನು ಪತ್ತೆ ಮಾಡಲು ಐದು ವರ್ಷವೇ ಬೇಕಾಯಿತು. ‘ಬಿಟ್‌ಕಾಯಿನ್‌ನಂತಹ ಕ್ರಿ‍ಪ್ಟೊಕರೆನ್ಸಿಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಬಹುದು ಎಂದು ಬಹಳಷ್ಟು ಮಂದಿ ನಂಬಿದ್ದಾರೆ. ಆದರೆ, ಇದು ಸುಳ್ಳು. ಕ್ರಿಪ್ಟೋಕರೆನ್ಸಿಯಲ್ಲಿ ನಡೆಯುವ ವ್ಯವಹಾರಗಳನ್ನೂ ಪತ್ತೆ ಮಾಡಬಹುದು ಎಂಬುದನ್ನು ನಾವು ಈಗ ಸಾಬೀತು ಮಾಡಿದ್ದೇವೆ’ ಎಂದು ಎಫ್‌ಬಿಐನ ಅಧಿಕಾರಿಗಳು ಹೇಳಿದ್ದಾರೆ.

ಬಿಟ್‌ಫಿನೆಕ್ಸ್‌ನ ಗ್ರಾಹಕರ ಖಾತೆಗಳಿಗೆ 2016ರಲ್ಲಿ ಹ್ಯಾಕರ್ ಒಬ್ಬ ಕನ್ನ ಹಾಕಿದ್ದ. ಒಟ್ಟು 2,000 ವಹಿವಾಟುಗಳ ಮೂಲಕ 1.19 ಲಕ್ಷ ಬಿಟ್‌ಕಾಯಿನ್‌ಗಳನ್ನು ಆತ ಒಂದು ಖಾತೆಗೆ ವರ್ಗಾವಣೆ ಮಾಡಿದ್ದ. ಆ ಹ್ಯಾಕರ್ ಯಾರು ಎಂಬುದು ಪತ್ತೆಯಾಗಿರಲಿಲ್ಲ. ಜತೆಗೆ ಆ ಎಲ್ಲಾ ಬಿಟ್‌ಕಾಯಿನ್‌ಗಳು ವರ್ಗಾವಣೆಯಾಗಿದ್ದ ಖಾತೆಯ ವಿವರ ಪತ್ತೆಯಾಗಿರಲಿಲ್ಲ. ಹೀಗಾಗಿ ಮುಗಿದ ಪ್ರಕರಣ ಎಂದೇ ಭಾವಿಸಲಾಗಿತ್ತು. ಆದರೆ ಆ ಬಿಟ್‌ಕಾಯಿನ್‌ಗಳ ಬೆನ್ನು ಹತ್ತಿದ್ದ ಪೊಲೀಸರು, ಅವನ್ನು ಹಿಂಬಾಲಿಸುತ್ತಲೇ ಇದ್ದರು.

ಒಂದುಬಿಟ್‌ಕಾಯಿನ್‌ ಸೃಷ್ಟಿಯಾದ ನಂತರ ಅದಕ್ಕೆ ನೀಡಲಾಗುವ ಎಲೆಕ್ಟ್ರಾನಿಕ್‌ ಕೋಡ್‌ ಎಂದಿಗೂ ಬದಲಾಗುವುದಿಲ್ಲ. ಅದರಿಂದ ನಡೆಸುವ ಪ್ರತಿ ವಹಿವಾಟೂ ಇದೇ ರೂಪದಲ್ಲಿ ಬ್ಲಾಕ್‌ಚೈನ್‌ ಲೆಡ್ಜರ್‌ನಲ್ಲಿ ದಾಖಲಾಗುತ್ತಾ ಹೋಗುತ್ತದೆ. ಕಳವಾಗಿದ್ದ ಬಿಟ್‌ಕಾಯಿನ್‌ಗಳ ಇ–ಕೋಡ್‌ಗಳನ್ನು ಹಿಡಿದು ಹಿಂಬಾಲಿಸಿದ ಪೊಲೀಸರಿಗೆ, ಅವೆಲ್ಲವೂ 12 ಬೇರೆ ಬೇರೆ ಖಾತೆಗಳ ಮಧ್ಯೆ ವರ್ಗಾವಣೆಯಾಗುತ್ತಿರುವುದು ಪತ್ತೆಯಾಗಿತ್ತು. ಕಳವಾಗಿದ್ದ 1.19 ಲಕ್ಷ ಬಿಟ್‌ಕಾಯಿನ್‌ಗಳಲ್ಲಿ, 25,000 ಬಿಟ್‌ಕಾಯಿನ್‌ಗಳನ್ನು ಮಾತ್ರ ಹೀಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅತ್ಯಂತ ಪ್ರಬಲ ಮತ್ತು ವೇಗದ ಕಂಪ್ಯೂಟರ್‌ಗಳ ಮೂಲಕ ಈ ವರ್ಗಾವಣೆ ನಡೆದಿದ್ದ ಕಾರಣ ಕಂಪ್ಯೂಟರ್‌ನ ಐಪಿ ವಿಳಾಸವನ್ನು ಪತ್ತೆ ಮಾಡುವುದೂ ಸಾಧ್ಯವಾಗಿರಲಿಲ್ಲ. ಇದರ ಮಧ್ಯೆಯೇ ಡಾರ್ಕ್‌ವೆಬ್‌ನಲ್ಲಿನ ಆನ್‌ಲೈನ್ ವಹಿವಾಟು ಪೋರ್ಟಲ್‌ ‘ಆಲ್ಫಾಬೈ’ನಲ್ಲಿ ಹಲವು ಸರಕು ಮತ್ತು ಸೇವೆಗಳನ್ನು ಖರೀದಿಸಲು ಈ ಬಿಟ್‌ಕಾಯಿನ್‌ಗಳನ್ನು ಬಳಸಲಾಗಿತ್ತು. ವಾಲ್‌ಮಾರ್ಟ್‌ ಗಿಫ್ಟ್‌ಕಾರ್ಡ್‌ಗಳನ್ನು ಖರೀದಿಸಲೂ ಈ ಬಿಟ್‌ಕಾಯಿನ್‌ಗಳನ್ನು ಬಳಸಲಾಗಿತ್ತು.

ಐದು ವರ್ಷಗಳಲ್ಲಿ 25,000 ಬಿಟ್‌ಕಾಯಿನ್‌ಗಳ ವರ್ಗಾವಣೆ ನಡೆದಿದೆ. ವರ್ಗಾವಣೆಯನ್ನು ಅತ್ಯಂತ ವೇಗದಲ್ಲಿ ನಡೆಸಲಾಗಿದೆ. ಆದರೆ ಈಚೆಗೆ ಒಮ್ಮೆ ಗ್ರಾಹಕರ ಖಾತೆ ಮೇಲ್ದರ್ಜೆಗೆ ಏರಿಸಿದ ನಂತರ, ಒಮ್ಮೆಗೇ ಹಲವು ವರ್ಗಾವಣೆಗಳು ನಡೆದವು. ಅಷ್ಟೆಲ್ಲಾ ವರ್ಗಾವಣೆಗಳನ್ನು ಏಕಕಾಲದಲ್ಲಿ ನಿರ್ವಹಿಸುವಲ್ಲಿ ಆ ಕಂ‍ಪ್ಯೂಟರ್‌ ವಿಳಂಬ ಮಾಡಿತ್ತು. ಆಗ ಅದರ ಐಪಿ ವಿಳಾಸವನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾದರು. ಐಪಿ ವಿಳಾಸವನ್ನು ಬಳಸಿಕೊಂಡು ಆ ಕಂಪ್ಯೂಟರ್‌ ಅನ್ನು ಒಳಹೊಕ್ಕಾಗ, ಈ ಎಲ್ಲಾ ಬಿಟ್‌ಕಾಯಿನ್‌ಗಳು ವರ್ಗಾವಣೆಯಾಗಿದ್ದ 12 ಖಾತೆಗಳನ್ನೂ ಇದೊಂದೇ ಕಂಪ್ಯೂಟರ್‌ ಮೂಲಕ ನಿರ್ವಹಿಸಿರುವುದು ಪತ್ತೆಯಾಯಿತು.

ಆನಂತರ ನ್ಯಾಯಾಲಯದಿಂದ ವಾರಂಟ್‌ ಪಡೆದುಕೊಂಡು, ಐಪಿ ವಿಳಾಸವಿದ್ದ ಕಂಪ್ಯೂಟರ್‌ ಇದ್ದ ಮನೆ ವಿಳಾಸವನ್ನು ಪತ್ತೆ ಮಾಡಿದರು. ಅದು ಪೊಲೀಸರನ್ನು ಮೊರ್ಗನ್ ದಂಪತಿಯ ಮನೆಗೆ ಕರೆದುಕೊಂಡು ಬಂತು. ಅವರಲ್ಲಿ ಇದ್ದ ಗೂಢಲಿಪಿಯ ಕಡತಗಳ ಹಾರ್ಡ್‌ಡಿಸ್ಕ್‌ ಅನ್ನು ಪರಿಶೀಲಿಸಿ, ಅವರನ್ನು ಬಂಧಿಸಲಾಯಿತು. ದಂಪತಿ ಬಳಿ ಇದ್ದ 94,636 ಬಿಟ್‌ಕಾಯಿನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

ಸುರಕ್ಷಿತವಲ್ಲ ಎಂಬುದು ಸಾಬೀತು

ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮತ್ತು ವಹಿವಾಟು ನಡೆಸುವುದು ಅತ್ಯಂತ ಸುರಕ್ಷಿತ ವಿಧಾನ ಎಂಬ ಭಾವನೆ ಜನರಲ್ಲಿದೆ. ಆದರೆ, ಹ್ಯಾಕಿಂಗ್‌ ತಂತ್ರಜ್ಞಾನ ಬಳಸಿ ಬೇರೆಯವರ ಕ್ರಿಪ್ಟೊಕರೆನ್ಸಿ ಖಾತೆಗಳಿಗೆ ಕನ್ನ ಹಾಕಬಹುದು ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ಹೀಗಾಗಿ ಬಿಟ್‌ಕಾಯಿನ್‌ ಜನರು ಭಾವಿಸಿದಷ್ಟು ಸುರಕ್ಷಿತವಲ್ಲ. ಜತೆಗೆ ಬಿಟ್‌ಕಾಯಿನ್‌ನಂತಹ ಕ್ರಿಪ್ಟೊಕರೆನ್ಸಿಗಳಿಗೆ ಸರ್ಕಾರದ ಖಾತರಿ ಇರುವುದಿಲ್ಲವಾದ ಕಾರಣ, ಇಂತಹ ವಂಚನೆಗಳು ನಡೆದಾಗ ಹಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಅಪಾಯಗಳೇ ಹೆಚ್ಚು. ಹೀಗಾಗಿ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡುವ ಮುನ್ನ ಈ ಎಲ್ಲಾ ಅಪಾಯಗಳನ್ನು ಪರಿಗಣಿಸಬೇಕು ಎಂದು ಎಫ್‌ಬಿಐ ಅಧಿಕಾರಿಗಳು ಹೇಳಿದ್ದಾರೆ.

ಕ್ರಿಪ್ಟೊಕರೆನ್ಸಿಗಳಲ್ಲಿನ ವ್ಯವಹಾರ, ವರ್ಗಾವಣೆ ಮತ್ತು ವಂಚನೆಗಳನ್ನೂ ಪತ್ತೆ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಇವುಗಳನ್ನು ಪತ್ತೆಮಾಡಲು ದೀರ್ಘಾವಧಿ ಬೇಕಾಗುತ್ತದೆ ಎಂಬುದು ನಿಜವಾದರೂ, ಪತ್ತೆ ಮಾಡಲು ಸಾಧ್ಯವೇ ಇಲ್ಲ ಎಂಬುದು ಸುಳ್ಳು. ಇದನ್ನು ಈ ಪ್ರಕರಣ ಸಾಬೀತು ಮಾಡಿದೆ. ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮತ್ತು ಅವುಗಳ ಬಳಕೆ ಹೆಚ್ಚಾದ ನಂತರ ಎಫ್‌ಬಿಐ, ಇಂತಹ ಕರೆನ್ಸಿ ವಿನಿಮಯ ಕೇಂದ್ರಗಳು, ಕ್ರಿಪ್ಟೊ ವರ್ಗಾವಣೆಗಳ ಮೇಲೆ ಕಣ್ಣಿರಿಸಿದೆ. ಇವುಗಳ ಮೇಲೆ ಸದಾ ನಿಗಾ ಇಡುವಂತಹ ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಎಫ್‌ಬಿಐ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT