ಮಂಗಳವಾರ, ನವೆಂಬರ್ 24, 2020
21 °C

ಆಳ-ಅಗಲ| ಎಐಟಿಯುಸಿ: ಸಂಘರ್ಷದ ಹಾದಿಯಲ್ಲಿ ನೂರು ವರ್ಷ

ಎಚ್‌. ಆರ್‌. ಶೇಷಾದ್ರಿ Updated:

ಅಕ್ಷರ ಗಾತ್ರ : | |

ದೇಶದ ಪ್ರಥಮ ಕೇಂದ್ರೀಯ ಕಾರ್ಮಿಕ ಸಂಘಟನೆ ಸ್ಥಾಪನೆಯಾಗಿ ಅಕ್ಟೋಬರ್‌ 31ಕ್ಕೆ ಒಂದು ಶತಮಾನ ತುಂಬಿದೆ. ಕಾರ್ಮಿಕ ಚಳವಳಿಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಜಗತ್ತಿನ ಕೆಲವೇ ಕೆಲವು ಸಂಘಟನೆಗಳಲ್ಲಿ ಎಐಟಿಯುಸಿ ಸಹ ಒಂದು. ರಾಷ್ಟ್ರೀಯವಾಗಿ ಹಾಗೂ ಅಂತರರಾಷ್ಟ್ರೀಯವಾಗಿ ಅನೇಕ ವ್ಯತಿರಿಕ್ತ ಪರಿಣಾಮಗಳನ್ನು ಕಂಡು ಅನುಭವಿಸಿದ ಎಐಟಿಯುಸಿ, ವರ್ಗಸಮರ ಹಾಗೂ ಸಮಾಜವಾದದಲ್ಲಿ ನಂಬಿಕೆಯಿಟ್ಟು ಮತ್ತಷ್ಟು ಆಳವಾಗಿ ಮತ್ತು ವಿಶಾಲವಾಗಿ ಬೆಳೆಯುತ್ತಿದೆ. ಆದ್ದರಿಂದಲೇ ಈ ಸಂಘಟನೆಯನ್ನು ಕಾರ್ಮಿಕ ಚಳವಳಿಯ ಮಾತೃಸಂಸ್ಥೆ ಎಂದು ಬಣ್ಣಿಸುವುದು ಅತ್ಯಂತ ಸಮಂಜಸ.


ಎಚ್‌. ಆರ್‌. ಶೇಷಾದ್ರಿ

ಇಂದು ದೇಶದ ಕಾರ್ಮಿಕ ವರ್ಗ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ; ಈಗ ನಾವು ಎದುರಿಸುತ್ತಿರುವ ಕೆಲವು ಸಮಸ್ಯೆಗಳು ಸ್ವಾತಂತ್ರ್ಯಪೂರ್ವದಲ್ಲಿ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಆಡಳಿತದಲ್ಲಿನ ಬಂಡವಾಳಶಾಹಿಗಳ ದಬ್ಬಾಳಿಕೆ, ದೌರ್ಜನ್ಯಗಳನ್ನು ನೆನಪಿಗೆ ತರುತ್ತವೆ. ಇಂತಹ ಸಮಸ್ಯೆ ಗಳನ್ನು ಹೋರಾಟಗಳ ಮೂಲಕ ಎದುರಿಸಿ ಮೆಟ್ಟಿನಿಲ್ಲುವ ಶಕ್ತಿ ಕಾರ್ಮಿಕ ವರ್ಗಕ್ಕಿದೆ. ಹಾಗಿರಬೇಕಾದರೆ ಶ್ರಮಿಕವರ್ಗದ ಐಕ್ಯತೆ, ಸಂಘಟನೆಗಳಲ್ಲಿ ಸಾಮರಸ್ಯ, ರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಮಾಜವಾದಿ ರಾಜಕೀಯ ದೃಷ್ಟಿಕೋನದ ಚಿಂತನೆ ಅವಶ್ಯಕ. ಈ ಕೆಲಸದಲ್ಲಿ ಎಐಟಿಯುಸಿ ಮುಂಚೂಣಿಯಲ್ಲಿದ್ದು ಸಂಘಟನೆ ನಾಯಕತ್ವ ಮೇಲ್ಕಂಡ ಪರಿಕಲ್ಪನೆಯೊಂದಿಗೆ ಮುನ್ನಡೆಯುತ್ತಿದೆ.

ಭವಿಷ್ಯವನ್ನು ರೂಪಿಸಿಕೊಳ್ಳಲು ಇತಿಹಾಸದ ಅರಿವು ಅಗತ್ಯ. ಈ ದಿಸೆಯಲ್ಲಿ ನೋಡಿದರೆ, ಕಾರ್ಮಿಕವರ್ಗದ ಹೋರಾಟದಲ್ಲಿ ಶ್ರೀಮಂತ ಪರಂಪರೆಯನ್ನು ಎಐಟಿಯುಸಿ ಹೊಂದಿದೆ. ನಡೆದುಬಂದ ಹಾದಿಯನ್ನು ಮೇಲಕುಹಾಕುವ ಸಂದರ್ಭ ಇದು ಮತ್ತು ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾದ ಮಾರ್ಪಾಡುಗಳನ್ನು ಮಾಡಿಕೊಂಡು ಚಳವಳಿಯನ್ನು ಮುಂದುವರಿಸುವುದು ಅನಿವಾರ್ಯ.

ಭಾರತದಲ್ಲಿ ಕಾರ್ಮಿಕ ಚಳುವಳಿಯ ಉಗಮ ಮತ್ತು ಎಐಟಿಯುಸಿ ಸ್ಥಾಪನೆ

18ನೇ ಶತಮಾನದಲ್ಲಿ ಯುರೋಪಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಉತ್ಪಾದನಾ ವಿಧಾನಗಳಲ್ಲಿ ಆದ ಬದಲಾವಣೆಗಳು ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಗರ್ಭದಲ್ಲೇ ಜನಿಸಿದ ಕಾರ್ಮಿಕ ವರ್ಗದ ಪ್ರತಿರೋಧದ ಅಭಿವ್ಯಕ್ತಿಯೇ ಕಾರ್ಮಿಕ ಚಳುವಳಿ. 19ನೇ ಶತಮಾನದ ಮಧ್ಯಭಾಗದಲ್ಲಿ ಮುಂಬೈನಲ್ಲಿ ‘ಬಾಂಬೆ ಸ್ಪಿನ್ನಿಂಗ್‌ ಮತ್ತು ವೀವಿಂಗ್ ಮಿಲ್’ ಮೂಲಕ ಪ್ರಾರಂಭವಾದ ಕೈಗಾರಿಕಾ ಚಟುವಟಿಕೆ, ನಂತರದ ದಿನಗಳಲ್ಲಿ ಕ್ಷಿಪ್ರವಾಗಿ ದೇಶದ ಬೇರೆ ಬೇರೆ ನಗರಗಳಲ್ಲಿ ಜವಳಿ ಉದ್ಯಮ, ಸೆಣಬು ಕಾರ್ಖಾನೆ, ಗಣಿಗಾರಿಕೆ, ರೈಲ್ವೆ, ಬಂದರು-ರೇವು, ಅಂಚೆ ಮತ್ತು ತಂತಿ, ಚಹಾ ತೋಟಗಾರಿಕೆ ಇತ್ಯಾದಿ ಕ್ಷೇತ್ರಗಳಿಗೆ ವ್ಯಾಪಿಸಿತು.

ಮುಂಬೈನ ‘ಮಾಂಡೋವಿ ಸ್ಪಿನ್ನಿಂಗ್ ಅಂಡ್ ವೀವಿಂಗ್’ ಮಿಲ್‌ನಲ್ಲಿ ನೌಕರಿಯಲ್ಲಿದ್ದ ನಾರಾಯಣ ಮೇಘಾಜಿ ಲೇಖಂಡ ಅವರು ಬಾಂಬೆ ಮಿಕ್ಸ್ ಹ್ಯಾಂಡ್ ಅಸೋಸಿಯೇಷನ್ ಎಂಬ ಹೆಸರಿನ ಕಾರ್ಮಿಕ ಸಂಘಟನೆಯನ್ನು ಸ್ಥಾಪಿಸಿದರು. ನಂತರದ ವರ್ಷಗಳಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ ರಾಯ್, ಪಿ.ಸಿ.ಮುಜಂದಾರ್, ಬಿ.ಪಿ.ವಾಡಿಯಾ ಮುಂತಾದವರು ಕಾರ್ಮಿಕ ಸಂಘಟನೆಗಳಿಗೆ ನಾಯಕತ್ವ ನೀಡಿ ಕಾರ್ಮಿಕ ಚಳವಳಿಯನ್ನು ಮುನ್ನಡೆಸಿದರು. ಇವರಲ್ಲಿ ಲೋಕಮಾನ್ಯ ತಿಲಕರು ಕಾರ್ಮಿಕರ ಮಧ್ಯೆ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದರು. ಇವರ ನಾಯಕತ್ವವನ್ನು ಕಾರ್ಮಿಕ ವರ್ಗ ಎಷ್ಟು ಗೌರವಿಸುತ್ತಿತ್ತು ಎನ್ನಲು ಒಂದು ಘಟನೆಯನ್ನು ಸ್ಮರಿಸಲೇಬೇಕಾಗಿದೆ: ಸುಳ್ಳು ಪ್ರಕರಣವೊಂದರಲ್ಲಿ ಬಂಧಿಸಲಾಗಿದ್ದ ತಿಲಕರಿಗೆ 1908ರಲ್ಲಿ ಮುಂಬೈ ನ್ಯಾಯಾಲಯ ಆರು ವರ್ಷಗಳ ಜೈಲು ಶಿಕ್ಷೆಯ ತೀರ್ಪು ನೀಡಿದ್ದನ್ನು ವಿರೋಧಿಸಿ ಮುಂಬೈ ಕಾರ್ಮಿಕರು ಆರು ದಿನ ಮುಷ್ಕರ ನಡೆಸಿದರು. ಈ ಮುಷ್ಕರವನ್ನು, ಅಂದು ಜನಸಾಮಾನ್ಯರು, ವ್ಯಾಪಾರಸ್ಥರ, ಬುದ್ಧಿಜೀವಿಗಳು ಬೆಂಬಲಿಸಿದ ಪರಿಣಾಮವಾಗಿ ಇಡೀ ಮುಂಬೈ ನಗರ ಸ್ತಬ್ಧವಾಗಿತ್ತು ಎಂಬುದನ್ನು ಚರಿತ್ರೆಯಲ್ಲಿ ಕಾಣಬಹುದು. ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಲಕ್ಷಾಂತರ ಮಂದಿ ಕಾರ್ಮಿಕರ ಪಾತ್ರವನ್ನು ಮತ್ತು ಇದರ ಹಿಂದೆ ಇದ್ದ ಸಾಮ್ರಾಜ್ಯಶಾಹಿ ಪ್ರಭುತ್ವದ ಧೋರಣೆಗಳನ್ನು ಹಿಮ್ಮೆಟ್ಟಿಸಲು ನಡೆಸಿದ ಕಾರ್ಯತಂತ್ರವನ್ನು ಪ್ರಪಂಚದ ಅನೇಕ ಅಗ್ರಮಾನ್ಯ ನಾಯಕರು ಪ್ರಶಂಸಿದ್ದನ್ನು ಕಾಣಬಹುದಾಗಿದೆ. ಇದೊಂದು ಚರಿತ್ರಾರ್ಹ ಹೋರಾಟವಾಗಿತ್ತಲ್ಲದೆ ಮುಂದಿನ ಅನೇಕ ಚಳುವಳಿಗೆ ಹಾಗೂ ಘಟನೆಗಳಿಗೆ ಸ್ಫೂರ್ತಿಯ ಸೆಲೆಯಾಗಿತ್ತು.

ವಾಸ್ತವದಲ್ಲಿ ಮೊದಲನೇ ಮಹಾಯುದ್ಧದ ತರುವಾಯ ಭಾರತದಲ್ಲಿ ಕೈಗಾರಿಕೀಕರಣವು ತೀವ್ರಗತಿಯಲ್ಲಿ ಸಾಗುತ್ತಿತ್ತು. ಆದರೆ ಕಾರ್ಮಿಕರಿಗೆ ಸಂಬಂಧಿಸಿದಂತೆ ವೇತನ ಹೆಚ್ಚಳಕ್ಕಾಗಿ, ನಿರ್ದಿಷ್ಟ ಅವಧಿ ಕೆಲಸಕ್ಕಾಗಿ, ಕೆಲಸ ಮಾಡುವ ಸ್ಥಳದಲ್ಲಿ ಸೂಕ್ತ ರಕ್ಷಣೆ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ, ಸಂಘ ರಚಿಸುವ ಶಾಸನಬದ್ಧ ಹಕ್ಕುಗಳಿಗೆ ಕಾಯ್ದೆಗಳಿರಲಿಲ್ಲ.

ಕೆಲವೇ ರಿಯಾಯಿತಿಗಳನ್ನು ಕಾರ್ಮಿಕರಿಗೆ ಕೊಡಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಆಗ ಚಾಲ್ತಿಯಲ್ಲಿದ್ದ ‘ದಂಡ ಸಂಹಿತೆ, ಒಪ್ಪಂದದ ಉಲ್ಲಂಘನೆ ಕಾಯ್ದೆ ಮಾಲೀಕರ ಮತ್ತು ಕಾರ್ಮಿಕರ ಸಂಬಂಧಗಳನ್ನು ನಿಯಂತ್ರಿಸುತ್ತಿತ್ತು ಹಾಗೂ ಕಾರ್ಮಿಕರಿಗೆ ಶಿಕ್ಷೆ ನೀಡುವ ಸಾಧನಗಳಾಗಿದ್ದವು. ನಂತರದಲ್ಲಿ ಜಗತ್ತಿನಾದ್ಯಂತ ನಡೆದ ಅನೇಕ ಬೆಳವಣಿಗೆಗಳ ಪರಿಣಾಮವಾಗಿ ಭಾರತದಲ್ಲಿಯೂ ಒಂದು ರಾಷ್ಟ್ರೀಯ ಕಾರ್ಮಿಕ ಸಂಘಟನೆ ಸ್ಥಾಪನೆಯ ಅವಶ್ಯಕತೆಯನ್ನು ಹಲವಾರು ನಾಯಕರು ಮನಗಂಡರು. ಇಂತಹವರಲ್ಲಿ ಕೆಲವರು ಮಾರ್ಕ್ಸ್ ವಾದದಿಂದ ಪ್ರಭಾವಿತರಾದವರಾಗಿದ್ದರು. ಬಲಪಂಥೀಯ ಚಿಂತನೆಗಳನ್ನು ಹೊಂದಿದ್ದ ಕೆಲವರೂ ಇವರಲ್ಲಿ ಇದ್ದರು. ದೇಶವನ್ನು ಸಾಮ್ರಾಜ್ಯಶಾಹಿಗಳಿಂದ ಮುಕ್ತಗೊಳಿಸಲು ನಡೆಸುತ್ತಿದ್ದ ಹೋರಾಟದಲ್ಲಿ ಇವರು ಭಾಗಿಯಾಗಿದ್ದರು. ಈ ಎಲ್ಲ ಚಿಂತನೆಗಳೇ ಎಐಟಿಯುಸಿ ಸ್ಥಾಪನೆಗೆ ಕಾರಣವಾಯಿತು.

ಹಲವು ಟಿಸಿಲು

ಕಾರ್ಮಿಕ ವರ್ಗದ ಹಿತಾಸಕ್ತಿಯ ಜೊತೆಗೆ ದೇಶದ ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡು ಮುಂದುವರಿಯುತ್ತಿದ್ದ ಎಐಟಿಯುಸಿಯಿಂದ ಹೊರಹೋದ ಕೆಲವು ನಾಯಕರು ತಮ್ಮದೇ ಆದ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ಸ್ಥಾಪಿಸಿದರು. ಬಲಪಂಥೀಯ ಚಿಂತನೆ ಒಲವು ಹೊಂದಿದ್ದ ನಾಯಕರು ಐ.ಎನ್.ಟಿ.ಯು.ಸಿ. ( 1947 ) ಬಿ.ಎಂ.ಎಸ್ . (1955), ಸಮಾಜವಾದಿ ಚಿಂತನೆ ಹೊಂದಿದ್ದ ನಾಯಕರು ಎಚ್.ಎಂ.ಎಸ್ . (1948) ಹಾಗೂ ಎಡಪಕ್ಷಗಳ ವಿಭಜನೆಯಿಂದ 1949 ರಲ್ಲಿ ಯು.ಟಿ.ಯು.ಸಿ. ಹಾಗೂ 1970 ರಲ್ಲಿ ಸಿ.ಐ.ಟಿ.ಯು ಇತ್ಯಾದಿ ಸಂಘಟನೆಗಳಾಗಿ ವಿಭಜನೆ ಹೊಂದಿದವು.

ಇಂದು ದೇಶದ ಕಾರ್ಮಿಕ ವರ್ಗ ಬೇರೆ ಬೇರೆ ಹೆಸರಿನಲ್ಲಿ ಸಂಘಟನೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಕೆಲವು ಸಂಘಟನೆಗಳು ಜಾತಿ - ಧರ್ಮಗಳ ಪ್ರಭಾವಕ್ಕೆ ಒಳಗಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಂತೆ ಪರಿವರ್ತನೆಯಾಗಿರುವುದು ತೀವ್ರ ದುಃಖದ ಸಂಗತಿ. ಇದರ ಹೊರತಾಗಿಯೂ ಕಾರ್ಮಿಕ ಸಂಘಟನೆಗಳ ಒಗ್ಗಟ್ಟು ಹಾಗೂ ಆಳುವ ಸರ್ಕಾರದ ಜನವಿರೋಧಿ, ರೈತ - ಕಾರ್ಮಿಕ ವಿರೋಧಿ ನೀತಿಗಳನ್ನು ಎಲ್ಲ ಸಂಘಟನೆಗಳ ಜೊತೆ ಸೇರಿ ಎದುರಿಸಿ ಚಳವಳಿ ನಡೆಸುವ ಕಾರ್ಯದಲ್ಲಿ ಎಐಟಿಯುಸಿ ಮುಂಚೂಣಿಯಲ್ಲಿದೆ. ಕಾಂ. ಇಂದ್ರಜಿತ್ ಗುಪ್ತಾ , ಕಾಂ. ಎ.ಬಿ.ಬರ್ದನ್, ಕಾಂ. ಒ.ಎನ್‌. ಗುರುದಾಸ್ ದಾಸ್ ಗುಪ್ತರವರ ಶ್ರಮದ ಫಲವಾಗಿ  25 ವರ್ಷಗಳಲ್ಲಿ ಸುಮಾರು 14 ರಾಷ್ಟ್ರೀಯ ಮುಷ್ಕರಗಳು ಜರುಗಿವೆ ಹಾಗೂ ಈ ಎಲ್ಲ ಮುಷ್ಕರಗಳಲ್ಲಿ ಎಲ್ಲ ಕ್ಷೇತ್ರದ ಕೋಟ್ಯಾಂತರ ಮಂದಿ ಕಾರ್ಮಿಕರು ಭಾಗವಹಿಸಿದ್ದಾರೆ.

ಎಐಟಿಯುಸಿಯ ಹೋರಾಟಕ್ಕೆ ಕೊನೆ ಇಲ್ಲ. ಕೇಂದ್ರ ಸರ್ಕಾರ ತಂದಿರುವ ಕಾರ್ಮಿಕ ಕಾನೂನುಗಳ ಸಂಹಿತೆ (Labour Code), ಭೂಸ್ವಾಧೀನ ಕಾಯ್ದೆ, ರಕ್ಷಣಾವಲಯವು ಸೇರಿದಂತೆ ಎಲ್ಲ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ನೀತಿ, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಾಯ್ದೆಗೆ ಒತ್ತಾಯಿಸಿ ಮತ್ತು ₹21,000 ಕನಿಷ್ಠ ವೇತನ ಹಾಗೂ ಮಾಸಿಕ ₹2,500 ಪಿಂಚಣಿ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವೆಂಬರ್‌ 26ರಂದು ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಲಾಗಿದೆ. ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಅನೇಕ ಫೆಡರೇಶನ್‌ಗಳು ಈ ಮುಷ್ಕರ ನಡೆಸಲಿವೆ. ನೂರು ವರ್ಷಗಳ ಇತಿಹಾಸವಿರುವ ಎಐಟಿಯುಸಿಯ ಮೇಲೆ ಗುರುತರ ಜವಾಬ್ದಾರಿ ಇದೆ; ಬಂಡವಾಳಶಾಹಿ ವ್ಯವಸ್ಥೆಗೆ ಸಮಾಜವಾದವೇ ಪರ್ಯಾಯ ಎಂಬುದು ಈ ಸಂಘಟನೆಯ ನಂಬಿಕೆ. ವರ್ಗ ಸಂಘರ್ಷದ ಮೂಲಕ ಚಳವಳಿ ರಾಜಕಾರಣಕ್ಕೆ ಇಡೀ ಶ್ರಮಿಕ ವರ್ಗವನ್ನು ಸಜ್ಜುಗೊಳಿಸುವ ವಿಶ್ವಾಸದೊಂದಿಗೆ ತನ್ನ ಚಾರಿತ್ರಿಕ ಜವಾಬ್ದಾರಿಯನ್ನು ಮನಗಂಡು ಮುನ್ನಡೆಯುವ ಗಂಭೀರ ಪ್ರಯತ್ನವನ್ನು ಮಾಡುತ್ತದೆ.

(ಲೇಖಕ ಎಐಟಿಯುಸಿಯ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ)

***

ಸ್ವಾತಂತ್ರ್ಯಾನಂತರ ಎ.ಐ.ಟಿ.ಯು.ಸಿ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಕಾರ್ಮಿಕರ ವರ್ಗದ ಶ್ರೇಯೋಭಿವೃದ್ಧಿಗಾಗಿ ಎ.ಐ.ಟಿ.ಯು.ಸಿ. ತನ್ನ ಹೋರಾಟವನ್ನು ಮುಂದುವರಿಸಿತು. ಕಾರ್ಮಿಕರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹಲವು ಹೋರಾಟಗಳನ್ನು ನಡೆಸಲಾಗಿದೆ. 1974ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ವೇತನ ಏರಿಕೆಗೆ ಕಡಿವಾಣ, ಕಡ್ಡಾಯ ಠೇವಣಿ ನಿಯಮಗಳನ್ನು ವಿರೋಧಿಸಿ ಹೋರಾಟ ನಡೆಸಲಾಗಿತ್ತು. 7 ವರ್ಷ ತುಟ್ಟಿಭತ್ಯೆಯ ಶೇಕಡ 50ರಷ್ಟು ಕಡಿತ ಮತ್ತು ನಂತರ ಅಧಿಕಾರಕ್ಕೆ ಬಂದ ಜನತಾ ಪಕ್ಷ ತರಲು ಉದ್ದೇಶಿಸಿದ್ದ ಕೈಗಾರಿಕಾ ಬಾಂಧವ್ಯ ಬಿಲ್ (Industrial Relation Bill) ವಾಪಸಾತಿಗಾಗಿ ಇತರ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜೊತೆ ಸೇರಿ ಐಕ್ಯತಾ ಹೋರಾಟ ನಡೆಸಿದೆ. 1969ರಲ್ಲಿ ಬ್ಯಾಂಕ್ ರಾಷ್ಟ್ರೀಕರಣಕ್ಕೆ ಎ.ಐ.ಬಿ.ಇ.ಎ. ನಡೆಸಿದ ಹೋರಾಟಕ್ಕೆ ಎ.ಐ.ಟಿ.ಯು.ಸಿಯ ನಾಯಕತ್ವವೂ ಇತ್ತು.

ಮೊದಲ ಸಮ್ಮೇಳನ

ಲಾಲಾ ಲಜಪತ್‌ರಾಯ್‌ರವರ ಅಧ್ಯಕ್ಷತೆಯಲ್ಲಿ 1920ರ ಅಕ್ಟೋಬರ್‌ 31ರಂದು ಮುಂಬೈ ನಗರದ ಎಂಪರರ್ ಥಿಯೇಟರ್‌ನಲ್ಲಿ ಜರುಗಿದ್ದ ಸ್ಥಾಪನಾ ಸಮಾವೇಶದಲ್ಲಿ ಸುಮಾರು 5 ಲಕ್ಷ ಕಾರ್ಮಿಕರನ್ನು ಪ್ರತಿನಿಧಿಸುತ್ತಿದ್ದ 102 ಸಂಘಟನೆಗಳ 801 ಪ್ರತಿನಿಧಿಗಳು ಭಾಗವಹಿಸಿದ್ದರು. ಆ ಹೊತ್ತಿಗಾಗಲೇ ಲೋಕಮಾನ್ಯ ತಿಲಕರು ನಿಧನರಾಗಿದ್ದರು (1920ರ ಆಗಸ್ಟ್‌ 1). ಬಿ.ಪಿ. ವಾಡಿಯಾ, ಅನ್ನಿಬೆಸೆಂಟ್, ಸಯ್ಯದ್ ಅಬ್ದುಲ್ಲಾ, ಬಾಪ್ಟಿಸಾ, ವಿ.ಪಟೇಲ್, ಕೆ.ಎಫ್. ನಾರಿಮನ್, ಎಂ.ಎನ್. ಜೋಷಿ ಮುಂತಾದ ನಾಯಕರ ಉಪಸ್ಥಿತಿ ಸ್ಥಾಪನಾ ಸಮ್ಮೇಳನದ ಗಮನಾರ್ಹ ಸಂಗತಿ.

ಲಾಲಾ ಲಜಪತ್‌ರಾಯ್‌ರವರು ಎ.ಐ.ಟಿ.ಯು.ಸಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ತಮ್ಮ ಭಾಷಣದಲ್ಲಿ ಎ.ಐ.ಟಿ.ಯು.ಸಿ. ಸ್ಥಾಪನೆ ಚಾರಿತ್ರಿಕ ಮೈಲಿಗಲ್ಲು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಎಲ್ಲ ವರ್ಗದ ಜನರನ್ನು ಸಂಘಟಿಸಿ ವರ್ಗ ಹಿತಾಸಕ್ತಿಯ ಜೊತೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಬೇಕು, ದೇಶದಲ್ಲಿ ಸಮಾಜವಾದ ನಿರ್ಮಾಣಕ್ಕೆ ಶ್ರಮಿಸಬೇಕು, ಕಾರ್ಮಿಕರಿಗೆ ಉದ್ಯೋಗ ಭದ್ರತೆ ಹಾಗೂ ಹಕ್ಕುಗಳಿಗಾಗಿ ಕಾಯ್ದೆ ರೂಪಿಸಲು ಸರ್ಕಾರಗಳ ಮೇಲೆ ಒತ್ತಡ ತರಬೇಕು, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸಂಘಟನೆಯ ಸ್ವಾತಂತ್ರ್ಯ, ಮುಷ್ಕರದ ಹಕ್ಕು, ಮಹಿಳಾ ಕಾರ್ಮಿಕರಿಗೆ ಸೂಕ್ತ ರಕ್ಷಣೆಗಾಗಿ ಹೋರಾಟವನ್ನು ಮುಂದುವರಿಸಬೇಕು ಎಂಬುದು ಅವರ ಭಾಷಣದ ಸಾರಾಂಶವಾಗಿತ್ತು. ಅನೇಕ ಹೋರಾಟಗಳ ಪರಿಣಾಮವಾಗಿ 1926ರಲ್ಲಿ ಟ್ರೇಡ್ ಯೂನಿಯನ್ ಕಾಯ್ದೆ, ಸಂಘಟನಾ ಶಕ್ತಿಗೆ ಅನುಗುಣವಾಗಿ ವೇತನ ಹೆಚ್ಚಳ ಹಾಗೂ ಸೌಲಭ್ಯಗಳು ಮತ್ತು ಕಾರ್ಮಿಕರ ಪರಿಹಾರ ಕಾಯ್ದೆ ಜಾರಿಗೆ ಬಂದವು.

1936ರಲ್ಲಿ ವೇತನ ಪಾವತಿ ಕಾಯ್ದೆ, ಕೈಗಾರಿಕಾ ಉದ್ಯೋಗ (ಸ್ಥಾಯಿ ನಿಯಮ) ಕಾಯ್ದೆ 1946, ಕೆಲಸದ ಅವಧಿ, ರಜಾ ಸೌಲಭ್ಯ ಇತ್ಯಾದಿಗಳಿಗಾಗಿ ಕಾರ್ಖಾನೆ ಕಾಯ್ದೆ, ಬೆಲೆ ಏರಿಕೆಯನ್ನು ಸರಿದೂಗಿಸಲು ತುಟ್ಟಿ ಭತ್ಯೆ ಇತ್ಯಾದಿಗಳು ಜಾರಿಗೊಂಡವು.

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯಲ್ಲಿ (ಐಎಲ್‌ಒ) ದೇಶದ ಕಾರ್ಮಿಕ ವರ್ಗವನ್ನು ಪ್ರತಿನಿಧಿಸಿ, ದುಡಿಯುವ ವರ್ಗವು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸುವ ಅವಕಾಶ ದೊರಕಿತ್ತು. ಒಂದು ಅಂದಾಜಿನ ಪ್ರಕಾರ, 1939-1945ರ ನಡುವೆ ನಾಲ್ಕು ಸಾವಿರಕ್ಕೂ ಹೆಚ್ಚು ಮುಷ್ಕರಗಳು ನಡೆದಿದ್ದು ಒಟ್ಟಾರೆ 37 ಲಕ್ಷ ಕಾರ್ಮಿಕರು ಭಾಗವಹಿಸಿದ್ದರು.

ಅಭಿಪ್ರಾಯಗಳು 

 

ದಾರಿದೀವಿಗೆಯಾಗಲಿ....


ಶ್ರೀನಿವಾಸ ಕಕ್ಕಿಲ್ಲಾಯ

ನೂರು ವರ್ಷಗಳ ಹಿಂದೆ ಕಾರ್ಮಿಕರ ಶಿಕ್ಷಣ, ಸಂಘಟನೆ ಮತ್ತು ಸಂಘರ್ಷ ಎಂಬ ಧ್ಯೇಯಗಳಿಗಾಗಿ ಸ್ಥಾಪಿಸಲ್ಪಟ್ಟು, 1922ರಲ್ಲಿ ಸಂಪೂರ್ಣ ಸ್ವಾತಂತ್ರ್ಯದ ಘೋಷಣೆಯನ್ನು ಮೊಳಗಿಸಿದ ಮೊದಲ ಕಾರ್ಮಿಕ ಸಂಘಟನೆ ಎಐಟಿಯುಸಿ. ಎಂಟು ಗಂಟೆಗಳಷ್ಟೇ ಕೆಲಸ, ಕನಿಷ್ಠ ಕೂಲಿ, ತುಟ್ಟಿಭತ್ಯೆ ಇತ್ಯಾದಿಗಳಿಗಾಗಿ ಜಾತಿ, ಮತ, ಭಾಷೆಗಳ ಭೇದವಿಲ್ಲದೆ ನೇಯ್ಗೆ, ಹಂಚು, ಬೀಡಿ, ಮೂರ್ತೆ, ಮುದ್ರಣ, ಗಣಿ ಮತ್ತು ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪೌರ ಕಾರ್ಮಿಕರನ್ನು, ನಂತರದಲ್ಲಿ ಉದ್ದಿಮೆ, ಸಾರಿಗೆ, ಬ್ಯಾಂಕ್ ಮುಂತಾದ ನೌಕರರನ್ನು ಹೋರಾಟಗಳಿಗೆ ಸಂಘಟಿಸಿ ನೇತೃತ್ವ ನೀಡಿದ್ದು ಎಐಟಿಯುಸಿ. ಇಂದು ಜಾತಿ-ಮತಗಳ ಹೆಸರಲ್ಲಿ ಕಾರ್ಮಿಕರನ್ನು ಒಡೆದು ಅವರು ಹೋರಾಡಿ ಗಳಿಸಿದ್ದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವಾಗ ಎಐಟಿಯುಸಿಯ ಧೀರೋದಾತ್ತ ಹೋರಾಟಗಳು ದಾರಿದೀವಿಗೆಯಾಗಬೇಕು.

– ಡಾ.ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯ, ಸಾಮಾಜಿಕ ಹೋರಾಟಗಾರ

***

ಹೊಸ ಕಾರ್ಯತಂತ್ರ ಅಗತ್ಯ


ಮುನೀರ್‌ ಕಾಟಿಪಳ್ಳ

ಕಾರ್ಮಿಕ ಚಳವಳಿ ಕಟ್ಟಿದ ಕಮ್ಯುನಿಸ್ಟರು, ದಲಿತರು, ದಲಿತೇತರರು, ಹಿಂದೂಗಳು ಹಾಗೂ ಮುಸ್ಲಿಮರು ಜೊತೆಯಾಗಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವಂತೆ ಮಾಡಿದ್ದರು. ಹಕ್ಕುಗಳನ್ನು ಪಡೆದಿದ್ದರು. ಅದರಿಂದ ಸ್ವಾತಂತ್ರ್ಯ ಪೂರ್ವದ ಆ ದಿನಗಳಲ್ಲಿ ನಡೆದ ತೀವ್ರ ಕೋಮುಗಲಭೆಗಳಿಂದ ಕಾರ್ಮಿಕ ಕಾಲೊನಿಗಳು ಮುಕ್ತವಾಗಿದ್ದವು. ಈ ದಿನಗಳಲ್ಲಿ ಸಂಘ ಕಟ್ಟುವ, ಮುಷ್ಕರ ನಡೆಸುವ ಹಕ್ಕುಗಳ ಸಹಿತ ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ಕಸಿಯುವ, ಧರ್ಮ, ಜಾತಿಗಳ ಹೆಸರಿನಲ್ಲಿ ಒಗ್ಗಟ್ಟನ್ನು ಮುರಿಯುವ ಯತ್ನದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ‌ ಆಯ್ಕೆಯಾದ ಸರ್ಕಾರಗಳು ಯಶಸ್ವಿಯಾಗುತ್ತಿವೆ‌. ಇದು ಶತಮಾನ ತುಂಬುತ್ತಿರುವ ಭಾರತದ ಕಾರ್ಮಿಕ ಚಳವಳಿಯ ಮುಂದಿರುವ ಗಂಭೀರ ಸವಾಲು. ಹಾಗಾಗಿ, ಈ ಕಾಲದ ಕಾರ್ಮಿಕರನ್ನು ಆಕರ್ಷಿಸುವ ಹೊಸತನ, ಕಾರ್ಯತಂತ್ರ ರೂಪಿಸಿಕೊಳ್ಳಬೇಕಿದೆ.

– ಮುನೀರ್‌ ಕಾಟಿಪಳ್ಳ, ಡಿವೈಎಫ್‍ಐ ರಾಜ್ಯ ಘಟಕದ ಅಧ್ಯಕ್ಷ

***

ಇನ್ನೂ ಇದೆ ಸವಾಲು


ಆದಿಮೂರ್ತಿ

ಸಂಘಟನೆಗೆ ನೂರು ವರ್ಷ ತುಂಬಿದ್ದಕ್ಕೆ ಸಂಭ್ರಮ‌ ಪಡುವ ಹೊತ್ತಲ್ಲೇ ಕೊರೊನಾ ಕಾಲಘಟ್ಟ ತಂದಿಟ್ಟಿರುವ ಹೊಸ ಬಗೆಯ ಸವಾಲು ಮತ್ತು ಜವಾಬ್ದಾರಿಗಳ ಗಂಭೀರ ವಿಶ್ಲೇಷಣೆಯೂ ನಡೆಯಬೇಕಾಗಿದೆ. ಸಂಘಟನೆಯ ಹುಟ್ಟಿನ ಕಾಲಘಟ್ಟವೇ ಬೇರೆ. ಈಗಿನ ಕಾಲಘಟ್ಟವೇ ಬೇರೆ. ಹಿಂದಣ ಹೆಜ್ಜೆ ಗುರುತುಗಳು‌ ಸ್ಪಷ್ಟವಾಗಿವೆ. ಆದರೆ, ಕಾರ್ಮಿಕ ಸಂಘಟನೆಗಳ ಒಗ್ಗಟ್ಟು ಮುರಿಯುವ, ಪ್ರಜಾಪ್ರಭುತ್ವದ ಆಶಯಗಳನ್ನು ತುಳಿಯಬೇಕೆಂಬ ಹಂಬಲದೊಂದಿಗೇ ರಚನೆಗೊಳ್ಳುವ ಸರ್ಕಾರಗಳ ನಡುವೆ ಮುಂದಿನ ಹೋರಾಟದ ಹೆಜ್ಜೆಗಳನ್ನು ರೂಪಿಸುವುದು ಬೃಹತ್ ಸವಾಲು. ಸಂಘಟನೆಗಳ ಹೋರಾಟಗಳು ಜನರ ಹೋರಾಟಗಳಾಗಿ ಬದಲಾಗಬೇಕೆಂಬ ಆಶಯದೊಂದಿಗೆ ತಳಮಟ್ಟದಲ್ಲಿ ಕೆಲಸ ನಡೆದಿದೆ.

- ಆದಿಮೂರ್ತಿ, ಎ.ಐ.ಯು.ಟಿ.ಸಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ

***

ಕಾರ್ಮಿಕರ ಪ್ರತಿನಿಧಿ


ವರಲಕ್ಷ್ಮಿ

ಇಡೀ ದೇಶದ ಕಾರ್ಮಿಕರ ಪ್ರತಿನಿಧಿಯಾಗಿ ಎಐಟಿಯುಸಿ ಜನ್ಮತಳೆಯಿತು. ಇದರ ಸ್ಥಾಪನೆ ಹಿಂದೆ ಒಂದು ಇತಿಹಾಸವಿದೆ. 1917ರಲ್ಲಿ ಸೋವಿತ್ ರಷ್ಯಾದಲ್ಲಿ ಕ್ರಾಂತಿ ನಡೆದು ದುಡಿಯುವ ವರ್ಗಗಳ ಕೈಗೆ ಅಧಿಕಾರ ಸಿಕ್ಕಿತು. ಇದು ಭಾರತವೂ ಸೇರಿ ಹಲವು ದೇಶಗಳಿಗೆ ಪ್ರೇರಣೆಯಾಯಿತು. ಇದರ ಭಾಗವಾಗಿಯೇ ಭಾರತದಲ್ಲಿ ಸಂಘಟನೆ ತಲೆಎತ್ತಿತು.

ಅತ್ತ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ) 1919ರಲ್ಲಿ ಶುರುವಾಯಿತು. ಇತ್ತ ಭಾರತದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟದ ನೆಲೆಯಲ್ಲಿ ಎಐಟಿಯುಸಿ ರೂಪುಗೊಂಡಿತು. ಸರ್ಕಾರ ಹಾಗೂ ಬಂಡವಾಳಶಾಹಿಗಳ ಶೋಷಣೆಯನ್ನು ವಿರೋಧಿಸುವುದು ಒಕ್ಕೂಟದ ಉದ್ದೇಶವಾಗಿತ್ತು. ಆರಂಭದಲ್ಲಿ ಎಲ್ಲ ಸಿದ್ಧಾಂತಗಳ ಜನರೂ ಸಂಘಟನೆಯಲ್ಲಿದ್ದರು. ಆದರೆ 1970ರಲ್ಲಿ ಸಂಘಟನೆ ಇಬ್ಭಾಗವಾಯಿತು. ಸಂಘಟನೆಯನ್ನು ಒಡೆಯಲು ಅಂದು ಬಂಡವಾಳಶಾಹಿಗಳು ಯತ್ನಿಸಿದ್ದರು. ಆ ಯತ್ನ ಈಗಲೂ ನಡೆಯುತ್ತಿದೆ. ಕಾರ್ಮಿಕರಿಗೆ ಹಕ್ಕುಗಳೇ ಬೇಡ ಎಂಬ ಮನೋಭಾವ ಇದ್ದು, 100 ವರ್ಷಗಳ ಹಿಂದಿನ ಗುಲಾಮಗಿರಿಗೆ ಕರೆದೊಯ್ಯಲಾಗುತ್ತಿದೆ. ಇದರ ವಿರುದ್ಧ ಕಾರ್ಮಿಕ ವರ್ಗ ಪುಟಿದೇಳಬೇಕಿದೆ.

– ವರಲಕ್ಷ್ಮಿ, ಹೋರಾಟಗಾರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು