ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳ ಪ್ರಮುಖ ಬೆಳೆ, ಕರ್ನಾಟಕದ ಹೆಮ್ಮೆ ಎನಿಸಿರುವ ‘ಕಾಫಿ’, ಇನ್ನು ಮೂರು ದಶಕಗಳಲ್ಲಿ ಅಂದರೆ, 2050ರ ವೇಳೆಗೆ ಸಂಪೂರ್ಣವಾಗಿ ನಾಶವಾಗಲಿದೆಯಂತೆ...

ಹೌದು. ಪರಿಸರ ವಿಜ್ಞಾನಿಗಳು ಇಂಥ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ. ಕಾಫಿಯು ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ವಿನಿಮಯ ತಂದುಕೊಡುವ ಬೆಳೆಗಳಲ್ಲಿ ಒಂದು. ಇದು ಭಾರತದಿಂದಲೇ ನಾಶವಾಗಲಿದೆ ಎಂದು ಪರಿಸರ ವಿಜ್ಞಾನಿಗಳು ಹೇಳಿದ್ದಾರೆ.

ಹಾಗೆಂದು, ಕುಡಿಯಲು ಕಾಫಿಯೇ ಸಿಗಲಾರದೆಂದು ಕಾಫಿಪ್ರಿಯರು ಚಿಂತಿಸಬೇಕಾಗಿಲ್ಲ. ಮೂಲ ಕಾಫಿಗೆ ಬದಲಾಗಿ, ಹೈಬ್ರಿಡ್ ಕಾಫಿಯನ್ನು ಕುಡಿಯುವ ದಿನಗಳು ಬರಬಹುದು ಅಷ್ಟೇ. 1950ರ ದಶಕದಲ್ಲಿ ರೋಗದಿಂದಾಗಿ ಬಾಳೆಯ ತಳಿಯು ಜಗತ್ತಿನಿಂದಲೇ ನಾಶವಾಗಿತ್ತು. ಈಗ ನಾವು ಸೇವಿಸುತ್ತಿರುವ ಬಾಳೆ ತಳಿಗಳೆಲ್ಲವೂ ಆನಂತರ ಅಭಿವೃದ್ಧಿಪಡಿಸಿದ ಹೈಬ್ರಿಡ್ ತಳಿಗಳು. ಅಂಥದ್ದೇ ದಿನಗಳು ಮೂರು– ನಾಲ್ಕು ದಶಕಗಳಲ್ಲಿ ಕಾಫಿಗೂ ಬರಬಹುದು ಎಂಬುದು ಪರಿಸರ ವಿಜ್ಞಾನಿಗಳು ನೀಡಿರುವ ಎಚ್ಚರಿಕೆ.ಮಲೆನಾಡಿನ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಏಲಕ್ಕಿಯು ಕಟ್ಟೆರೋಗದಿಂದ ನಶಿಸಿಹೋದ ಉದಾಹರಣೆ ನಮ್ಮ ಕಣ್ಣಮುಂದೆ ಇದೆ.

ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಈಚಿನ ಕೆಲವು ವರ್ಷಗಳಿಂದ ಆಗುತ್ತಿರುವ ಹವಾಮಾನ ವೈಪರೀತ್ಯವು ಹೀಗೆಯೇ ಮುಂದುವರಿದರೆ ತಜ್ಞರ ಮಾತು ನಿಜವಾಗಿ, ಕಾಫಿ ಬೆಳೆಗಾರರ ಬದುಕು ಮೂರಾಬಟ್ಟೆಯಾಗುವುದರಲ್ಲಿ ಅನುಮಾನ ಇಲ್ಲ. ಸಕಾಲದಲ್ಲಿ ಮಳೆಯಾಗುತ್ತಿಲ್ಲ ಎಂಬುದು ಒಂದು ಸಮಸ್ಯೆಯಾದರೆ, ಮೂರು ತಿಂಗಳು ಹದವಾಗಿ ಸುರಿಯಬೇಕಾದ ಮಳೆ 8-10 ದಿನಗಳಲ್ಲಿ ಧೋ.. ಎಂದು ಸುರಿದರೆ ಕಾಫಿ ಗಿಡದಲ್ಲಿರುವ ಎಳೆಯ ಕಾಯಿಗಳೆಲ್ಲ ಉದುರಿಹೋಗುತ್ತವೆ. ಉಳಿದ ಹಸಿರು ಬಣ್ಣದ ಕಾಯಿಗಳುಕ್ರಮೇಣ ಹಳದಿ ಬಣ್ಣ ತಾಳುತ್ತವೆ. ಗಿಡಗಳ ಮೇಲೆ ಕೀಟಗಳು ದಾಳಿ ಇಡುತ್ತವೆ. ಗಿಡಗಳು ರೋಗಕ್ಕೀಡಾಗಿ ಪರಾವಲಂಬಿ ಸಸ್ಯಗಳು ಮತ್ತು ಬೇರು ಬಳ್ಳಿಗಳು ಗಿಡಕ್ಕೆ ಹಬ್ಬಿಕೊಳ್ಳುತ್ತವೆ.

ವಾಡಿಕೆಗಿಂತ ಹೆಚ್ಚು ಬಿಸಿಲು ಮತ್ತು ಮಳೆಯಾದರೆ ಕಾಫಿನಾಡಿನ ಮಣ್ಣಿನ ಗುಣ ಬದಲಾಗುತ್ತದೆ. ಅಂತಹ ಮಣ್ಣಿನಲ್ಲಿ ಹಳದಿ ಬಣ್ಣದ, ಕಹಿಯಾದ ರುಚಿ ಇರುವ, ಕುಡಿಯಲಾಗದ ಕಾಫಿ ಬೆಳೆಯಲಾರಂಭ ವಾಗುತ್ತದೆ. ಕ್ರಮೇಣ ಕಾಫಿಯ ಪ್ರಭೇದವೇ ನಾಶ ವಾಗುತ್ತದೆ. ಅಂತಹ ದಿನ ಬಂದರೆ, ಪ್ರಪಂಚದ ಅತ್ಯಂತ ಸುಂದರ ತಾಣಗಳಲ್ಲೊಂದಾದ ಪಶ್ಚಿಮ ಘಟ್ಟದಲ್ಲಿ ಸ್ವಾಭಿಮಾನದಿಂದ ಕಾಫಿ ತೋಟಗಳನ್ನೇ ನಂಬಿ ಬದುಕುತ್ತಿರುವ ಸಹಸ್ರಾರು ಬೆಳೆಗಾರರ ಬದುಕು ಮೂರಾಬಟ್ಟೆಯಾಗುತ್ತದೆ.

ಜಗತ್ತಿನ ಕಾಫಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇ 5ರಷ್ಟು ಮಾತ್ರ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಕಾಫಿ ಬೆಳೆಯಲಾಗುತ್ತದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಈ ರಾಜ್ಯಗಳ ಪಾಲು ಕ್ರಮವಾಗಿ ಶೇ 71, ಶೇ 21 ಹಾಗೂ ಶೇ 5ರಷ್ಟಿದೆ. ಒರಿಸ್ಸಾದಲ್ಲೂ ಸ್ವಲ್ಪ ಕಾಫಿಯನ್ನು ಬೆಳೆಯಲಾಗುತ್ತದೆ. ಅಂದರೆ ದೇಶದಲ್ಲಿ ಕಾಫಿ ಉತ್ಪಾದನೆಯಲ್ಲಿ ದೊಡ್ಡ ಪಾಲಿರುವುದು ಕರ್ನಾಟಕದ್ದೇ.

ಕಾಡು ಮತ್ತು ಮಳೆ ಆಧಾರಿತ ಪ್ರದೇಶಗಳಲ್ಲಿ ಬೆಳೆಯುವುದರಿಂದ ನಮ್ಮ ದೇಶದ ಕಾಫಿ ‘ಇಂಡಿಯನ್ ಮಾನ್ಸೂನ್ಡ್ಕಾಫಿ’ ಎಂದು ವಿದೇಶಗಳಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ 65ರಿಂದ ಶೇ 70ರಷ್ಟು ಕಾಫಿಯನ್ನು ರಫ್ತು ಮಾಡಲಾಗುತ್ತದೆ. ಇಟಲಿ, ಜರ್ಮನಿ, ರಷ್ಯಾ, ಸ್ಪೇನ್, ಬೆಲ್ಜಿಯಂ, ಸ್ಲೊವೇನಿಯಾ, ಜಪಾನ್, ಗ್ರೀಸ್, ನೆದರ್ಲೆಂಡ್ಸ್, ಫ್ರಾನ್ಸ್ ಮತ್ತು ಅಮೆರಿಕ ದೇಶಗಳು ಭಾರತದಿಂದ ಕಾಫಿಯನ್ನು ಆಮದು ಮಾಡಿಕೊಳ್ಳುತ್ತವೆ.

ಕುಡಿಯುವ ಕಾಫಿಯಲ್ಲಿ ಕಾಫಿ ಎಷ್ಟು?

ಹೋಟೆಲ್, ಮನೆಗಳಲ್ಲಿ ನಾವು ಕುಡಿಯುತ್ತಿರುವುದು ನಿಜವಾದ ಕಾಫಿಯೇ ಅಲ್ಲ. ಮಾರುಕಟ್ಟೆಯಲ್ಲಿ ಲಭಿಸುವ ಕಾಫಿ ಪುಡಿಗೆ ಸುಮಾರು ಶೇ 50ರವರೆಗೆ ಚಿಕೋರಿಯನ್ನು ಮಿಶ್ರಣ ಮಾಡಿರುತ್ತಾರೆ. ರುಚಿಗಾಗಿ ಚಿಕೋರಿ ಬೆರೆಸಲಾಗಿದೆ ಎಂದು ಇಂಥವರು ವಾದಿಸುತ್ತಾರೆ. ಆದರೆ ಇದು ವಾಸ್ತವ ಅಲ್ಲ. ಶುದ್ಧ ಕಾಫಿ ಪುಡಿಯ ಬೆಲೆ ಕಿಲೋ ಒಂದಕ್ಕೆ ಸುಮಾರು ₹300 ಇರುತ್ತದೆ. ಆದರೆ ಚಿಕೋರಿ ₹50ಕ್ಕೆ ಲಭಿಸುತ್ತದೆ. ಶೇ 50ರಷ್ಟು ಚಿಕೋರಿ ಮಿಶ್ರಣಮಾಡಿದ ಕಾಫಿಯನ್ನೂ ಶುದ್ಧ ಕಾಫಿ ಪುಡಿಯ ಬೆಲೆಗೇ ಮಾರಾಟ ಮಾಡಲಾಗುತ್ತದೆ.

ಅಂಕಿ ಅಂಶ

8.57 ಲಕ್ಷ ಎಕರೆ -ಭಾರತದಲ್ಲಿ ಕಾಫಿ ಬೆಳೆಯುವ ಪ್ರದೇಶ

2.50 ಲಕ್ಷ (98%) - ಕಾಫಿ ಉತ್ಪಾದನೆಯಲ್ಲಿ ಸಣ್ಣ ಹಿಡುವಳಿದಾರರ ಪಾಲು

3.19 ಲಕ್ಷ ಟನ್ -ಕಳೆದ ವರ್ಷ ಉತ್ಪಾದನೆಯಾದ ಕಾಫಿ

2.19 ಲಕ್ಷ ಟನ್ -ಒಟ್ಟು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು

₹ 5500 ಕೋಟಿ -2019–20ರಲ್ಲಿ ರಫ್ತಾಗಿರುವ ಕಾಫಿಯ ಮೌಲ್ಯ

ಬೆಳೆಗಾರರ ಸಮಸ್ಯೆ

- ಹವಾಮಾನ ಬದಲಾವಣೆಯಿಂದಾಗಿ ಸಕಾಲದಲ್ಲಿ ಮಳೆಯಾಗದೆ ಕಾಫಿ ಹೂವುಗಳು ಸರಿಯಾಗಿ ಅರಳುತ್ತಿಲ್ಲ

- ಜೂನ್– ಜುಲೈಯಲ್ಲಿ ಹದಮಳೆ ಬಾರದೆ, ಆಗಸ್ಟ್– ಸೆಪ್ಟೆಂಬರ್ನಲ್ಲಿ ವಿಪರೀತ ಮಳೆಯಾಗಿ ಬೆಳೆಗೆ ಕೊಳೆ ರೋಗ ಬರುತ್ತದೆ

- ಸ್ಪ್ರಿಂಕ್ಲರ್ ಬಳಸಿ ಬೆಳೆಯನ್ನು ಉಳಿಸಲು ವೆಚ್ಚ ಹೆಚ್ಚು, ಅದಕ್ಕೆ ತಕ್ಕನಾಗಿ ಬೆಲೆ ಲಭಿಸುತ್ತಿಲ್ಲ

- ದಿನಗೂಲಿ ಸತತ ಏರಿಕೆ, ರಾಜ್ಯದ ಮೂರು ಜಿಲ್ಲೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ದಿನಗೂಲಿ ನೌಕರರು ದುಡಿಯುತ್ತಾರೆ

- ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ ₹ 400–500 ಕೂಲಿ ನೀಡಬೇಕು. ನೆರಳುಮರಹತ್ತಿ ಕೊಂಬೆ ಕಡಿಯುವವರಿಗೆ ₹ 800 ಕೊಡಬೇಕು. ಕಾರ್ಮಿಕರನ್ನು ಅವರ ಮನೆಯಿಂದ ವಾಹನಗಳಲ್ಲಿ ಕರೆತರಬೇಕು. ಇವೆಲ್ಲವೂ ದುಬಾರಿಯಾಗುತ್ತಿವೆ

- ದೇಶೀಯವಾಗಿ ಕಾಫಿಯ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವಾಗಲಿ, ಕಾಫಿ ಮಂಡಳಿಯಾಗಲಿ ಸರಿಯಾದ ಯೋಜನೆ ರೂಪಿಸಿಲ್ಲ

ಆನಂದ ಕುಮಾರ್

(ಲೇಖಕ ಕಾಫಿ ಕೃಷಿಕ ಮತ್ತು ವಕೀಲ)

ನಶಿಸುವತ್ತ ಅರೇಬಿಕಾ ತಳಿ...

2050ರ ವೇಳೆಗೆ ಕರ್ನಾಟಕದಲ್ಲಿ ಅರೇಬಿಕಾ ಕಾಫಿ ಬೆಳೆ ನಾಶವಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ವಿಶ್ವದಾದ್ಯಂತ ಕಾಫಿ ಬೆಳೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಪರಿಶೀಲಿಸಿ 2015ರಲ್ಲೇ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ವಿಜ್ಞಾನಿಗಳ ಪ್ರಕಾರ 2050ರ ವೇಳೆಗೆ ವಿಶ್ವದಾದ್ಯಂತ ಅರೇಬಿಕಾ ಕಾಫಿ ಬೆಳೆಯುವ ಪ್ರದೇಶವು ಶೇ 88ರಷ್ಟು ಕಡಿಮೆಯಾಗಲಿದೆ. 2080ರ ವೇಳೆಗೆ ಅರೇಬಿಕಾ ಕಾಫಿ ಸಂಪೂರ್ಣವಾಗಿ ನಾಮಾವಶೇಷವಾಗಲಿದೆ. ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.

2012 ಮತ್ತು 2013ರಲ್ಲಿ ಗ್ವಾಟೆಮಾಲಾ ಮತ್ತು ಸುತ್ತಮುತ್ತಲಿನ ದೇಶಗಳ ಕಾಫಿತೋಟಗಳಲ್ಲಿನ ಕಾಫಿ ಗಿಡಗಳು ಎಲೆ ತುಕ್ಕು ರೋಗದಿಂದ ನಾಶವಾಗಿದ್ದವು. ಈ ರೋಗ ಇದ್ದಕ್ಕಿಂದ್ದಂತೆ ಹೆಚ್ಚಾಗಲು ಮತ್ತು ಇದರ ಪರಿಣಾಮಗಳೇನು ಎಂಬುದನ್ನು ಪತ್ತೆಮಾಡಲು ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಈ ಅಂಶ ಪತ್ತೆಯಾಗಿದೆ. ಎಲೆ ತುಕ್ಕು ರೋಗವು ಕಾಫಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ವಿಪರೀತ ಮಳೆ ಮತ್ತು ಉಷ್ಣಾಂಶದಲ್ಲಿನ ಏರಿಕೆ ಎಲೆ ತುಕ್ಕು ರೋಗಕ್ಕೆ ಕಾರಣವಾಗುವ ಶಿಲೀಂಧ್ರಗಳ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹೆಚ್ಚು ಮಳೆಯಾದ ನಂತರ, ಉಷ್ಣಾಂಶದಲ್ಲಿ ಏರಿಕೆ ಆಗುತ್ತಿರುವುದರಿಂದಲೇ ಶಿಲೀಂಧ್ರಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿ, ಗಿಡಗಳು ನಾಶವಾಗುತ್ತವೆ. ಹವಾಮಾನ ವೈಪರೀತ್ಯ ಬಿಗಡಾಯಿಸಿದ ಹಾಗೆ, ಗಿಡಗಳು ನಾಶವಾಗುತ್ತಾ ಹೋಗುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದಕ್ಕಿಂತ ಮುಖ್ಯವಾಗಿ ಉಷ್ಣಾಂಶ ಏರಿಕೆಯಿಂದ ಜೇನುನೊಣಗಳು ಸಾಯುತ್ತವೆ. ಕಾಫಿಗಿಡಗಳ ಪರಾಗಸ್ಪರ್ಶ ಕ್ರಿಯೆ ನಡೆಸುವಲ್ಲಿ ಜೇನುನೊಣಗಳು ಪ್ರಮುಖ ಪಾತ್ರವಹಿಸುತ್ತವೆ. ಜೇನುನೊಣಗಳ ಸಂಖ್ಯೆ ಕಡಿಮೆಯಾದರೆ, ಕಾಫಿ ಗಿಡವು ಕಾಯಿಕಟ್ಟು ವುದಿಲ್ಲ. ಕಾಫಿ ಇಳುವರಿ ಕಡಿಮೆ ಯಾಗುವುದರ ಜತೆಗೆ, ಎಲೆ ತುಕ್ಕು ರೋಗದ ಕಾರಣ ಗಿಡವೂ ನಾಶವಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಪತ್ತೆಮಾಡಿದ್ದಾರೆ.

ಶ್ರೀಲಂಕಾದಲ್ಲಿ ಸಂಪೂರ್ಣ ನಾಶ

ಎಲೆ ತುಕ್ಕು ರೋಗವನ್ನು 1861ರಲ್ಲಿ ಮೊದಲ ಬಾರಿ ಗುರುತಿಸಲಾಗಿತ್ತು. ಆ ಅವಧಿಯಲ್ಲಿ ಶ್ರೀಲಂಕಾದಲ್ಲಿ ಅರೇಬಿಕಾ ಕಾಫಿಯನ್ನು ಬೆಳೆಯಲಾಗುತ್ತಿತ್ತು. ವಾರ್ಷಿಕ 45,000 ಟನ್ನಷ್ಟು ಕಾಫಿ ಉತ್ಪಾದನೆಯಾಗುತ್ತಿತ್ತು. ಆಗ ವಿಶ್ವದಲ್ಲಿ ಶ್ರೀಲಂಕಾವು ಅತಿಹೆಚ್ಚು ಕಾಫಿ ಬೆಳೆಯುವ ಪ್ರದೇಶವಾಗಿತ್ತು. ಆದರೆ, 1861ರಲ್ಲಿ ಎಲೆ ತುಕ್ಕು ರೋಗವನ್ನು ಪತ್ತೆ ಮಾಡಿ, ಇದೊಂದು ವಿನಾಶಕಾರಿ ರೋಗ ಎಂದು ವರ್ಗೀಕರಿಸಲಾಗಿತ್ತು. ರೋಗವನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಆದರೆ ಮಾನವ ಪ್ರಯತ್ನವನ್ನು ಮೀರಿಸಿ ರೋಗವು ವ್ಯಾಪಕವಾಗಿ ಹರಡಿತು. 1871ರ ವೇಳೆಗೆ ಶ್ರೀಲಂಕಾದಲ್ಲಿ ಅರೇಬಿಕಾ ಕಾಫಿಯು ಶೇ 100ರಷ್ಟು ನಾಶವಾಯಿತು. ಈ ರೋಗಕ್ಕೆ ಕಾರಣವಾಗಿದ್ದ ಶಿಲೀಂಧ್ರವು ಗಾಳಿಯಲ್ಲೇ ಖಂಡಗಳನ್ನು ದಾಟಿತು. ಶಿಲೀಂಧ್ರದ ಬೆಳವಣಿಗೆಗೆ ಪೂರಕವಾದ ವಾತಾವರಣ ಇಲ್ಲದ ಕಾರಣ, ಅದರ ಹಾವಳಿ ಹೆಚ್ಚಿರಲಿಲ್ಲ. ಆದರೆ, ಶಿಲೀಂಧ್ರವೂ ನಾಶವಾಗಿರಲಿಲ್ಲ. ಈಗ ಹವಾಮಾನ ವೈಪರೀತ್ಯದ ಕಾರಣ ಶಿಲೀಂಧ್ರಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಶಿಲೀಂಧ್ರದ ಹಾವಳಿ ಹೆಚ್ಚಾಗುತ್ತಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

'ರಾಜ್ಯದಲ್ಲಿ ಹೈಬ್ರಿಡ್ ತಳಿಯೇ ಗತಿ'

ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಕಾಫಿಯನ್ನು ಸಮುದ್ರಮಟ್ಟದಿಂದ 400 ಮೀಟರ್-1,500 ಮೀಟರ್ ಎತ್ತರದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಉಷ್ಣಾಂಶ ಏರಿಕೆಯಿಂದ ಜೇನುನೊಣಗಳ ಸಂಖ್ಯೆ ಕಡಿಮೆಯಾದರೆ, ಕಾಫಿಯನ್ನು ಇನ್ನೂ ಎತ್ತರದ ಪ್ರದೇಶದಲ್ಲಿ ಬೆಳೆಯಬೇಕಾಗುತ್ತದೆ. ಎತ್ತರ ಹೆಚ್ಚಿದಂತೆ ಉಷ್ಣಾಂಶ ಕಡಿಮೆ ಇರುತ್ತದೆ. ಹೀಗಾಗಿ ಕಾಫಿಗಿಡ ಮತ್ತು ಜೇನುನೊಣಕ್ಕೆ ಸೂಕ್ತವಾದ ವಾತಾವರಣಕ್ಕೆ ಕಾಫಿ ಬೆಳೆ ಪ್ರದೇಶವನ್ನು ಬದಲಾಯಿಸಬೇಕಾಗುತ್ತದೆ. ಹೀಗೆ ಎತ್ತರದ ಪ್ರದೇಶಕ್ಕೆ ಬೆಳೆಯನ್ನು ಸ್ಥಳಾಂತರಿಸುತ್ತಾ ಹೋದರೆ, 2050ರ ಹೊತ್ತಿಗೆ ಕರ್ನಾಟಕದಲ್ಲಿ ಕಾಫಿ ಬೆಳೆಗೆ ಸೂಕ್ತವಾಗುವ ಪ್ರದೇಶದ ಎತ್ತರ 700 ಮೀಟರ್ನಿಂದ-1,800 ಮೀಟರ್ ಎತ್ತರಕ್ಕೆ ಸ್ಥಳಾಂತರವಾಗಲಿದೆ. ಗರಿಷ್ಠಮಟ್ಟವನ್ನು ಮುಟ್ಟಿದ ಮೇಲೆ, ಬೆಳೆ ಸ್ಥಳಾಂತರಕ್ಕೆ ಅಗತ್ಯವಾದ ಪ್ರದೇಶ ಇಲ್ಲವಾಗುತ್ತದೆ. ಕಾಫಿ ಬೆಳೆ ನಾಶವಾಗುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಆದರೆ, 2050ರ ವೇಳೆಗೆ ಅರೇಬಿಕಾ ಕಾಫಿ ಬೆಳೆಯಲು ಸೂಕ್ತವಾದ ಪ್ರದೇಶದ ವಿಸ್ತೀರ್ಣವು ಅಪಾಯಕಾರಿ ಪ್ರಮಾಣದಲ್ಲಿ ಕುಗ್ಗಲಿದೆ. ಬೆಳೆಗಾರರು ರೊಬೊಸ್ಟಾ ಕಾಫಿಯನ್ನು ಬೆಳೆಯಬೇಕಾಗುತ್ತದೆ. ಅರೇಬಿಕಾ ಕಾಫಿ ಬೆಳೆಯನ್ನು ಬೆಳೆಗಾರರು ತ್ಯಜಿಸಬೇಕಾಗುತ್ತದೆ. ಅರೇಬಿಕಾ ಕಾಫಿಯ ರುಚಿ ಮತ್ತು ರೊಬೊಸ್ಟಾ ಕಾಫಿ ಗಿಡಗಳ ರೋಗನಿರೋಧಕ ಗುಣವನ್ನು ಹೊಂದಿರುವ ಹೈಬ್ರಿಡ್ ತಳಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆ ಹೈಬ್ರಿಡ್ ತಳಿಯನ್ನು ರೈತರು ಬೆಳೆಯಬೇಕಾಗುತ್ತದೆ. ಆದರೆ ಅರೇಬಿಕಾ ಕಾಫಿ ಸಂಪೂರ್ಣ ನಾಶವಾಗುದರಲ್ಲಿ ಸಂದೇಹವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

-ಜಯಸಿಂಹ. ಆರ್

ಆಧಾರ: ಅಂತರರಾಷ್ಟ್ರೀಯ ಕಾಫಿ ಸಂಘಟನೆ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಇಂಟರ್ನ್ಯಾಷನಲ್ ಸೆಂಟರ್ ಫಾರ್ ಟ್ರಾಫಿಕಲ್ ಅಗ್ರಿಕಲ್ಚರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.