ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಐಪಿಒ ನೀಡೀತೇ ಫಸಲು?

Last Updated 3 ಫೆಬ್ರುವರಿ 2021, 19:44 IST
ಅಕ್ಷರ ಗಾತ್ರ

ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಲಾಂಛನದ ಬುಡದಲ್ಲಿ, ಭಗವದ್ಗೀತೆಯಲ್ಲಿ ಬರುವ ಒಂದು ಮಾತು ಇದೆ. ‘ಯೋಗಕ್ಷೇಮಂ ವಹಾಮ್ಯಹಂ’ ಎನ್ನುವುದು ಆ ಮಾತು. ಗೀತೆಯ ಒಂಬತ್ತನೆಯ ಅಧ್ಯಾಯದ 22ನೆಯ ಶ್ಲೋಕದಲ್ಲಿ ಬರುವ ಮಾತು ಇದು. ‘ನನ್ನನ್ನು ನಂಬಿದವರ ಬಳಿ ಏನು ಇಲ್ಲವೋ ಅದನ್ನು ನಾನು ಅವರಿಗೆ ಕೊಡುತ್ತೇನೆ. ನನ್ನನ್ನು ನಂಬಿದವರ ಬಳಿ ಏನು ಇದೆಯೋ, ಅದನ್ನು ರಕ್ಷಿಸುವ ಕೆಲಸವನ್ನೂ ಮಾಡುತ್ತೇನೆ’ ಎಂದು ಗೀತಾಚಾರ್ಯ ಶ್ರೀಕೃಷ್ಣ ನೀಡುವ ಅಭಯ ಅದು.

ಭಾರತದ ಅತಿದೊಡ್ಡ ಜೀವ ವಿಮಾ ಕಂಪನಿ ಆಗಿರುವ ಎಲ್‌ಐಸಿಯಲ್ಲಿ ವಿಮೆಯನ್ನು ಹೊಂದಿರದ ಮಧ್ಯಮ ಅಥವಾ ಮೇಲ್ಮಧ್ಯಮ ವರ್ಗದ ವ್ಯಕ್ತಿ ಇರಲಿಕ್ಕಿಲ್ಲ. ‘ಯೋಗಕ್ಷೇಮಂ ವಹಾಮ್ಯಹಂ’ ಎಂಬ ಮಾತನ್ನು, ‘ನಾವು ದುಡಿದ ಹಣವನ್ನು ಎಲ್‌ಐಸಿ ರಕ್ಷಿಸಿಡುತ್ತದೆ. ಆ ಹಣವನ್ನು ಬೆಳೆಸಿಕೊಡುತ್ತದೆ’ ಎಂದು ಅರ್ಥೈಸಿಕೊಂಡು ಎಲ್‌ಐಸಿಯ ವಿಮಾ ಉತ್ಪನ್ನಗಳನ್ನು ಖರೀದಿಸಿದವರ ಸಂಖ್ಯೆ ದೊಡ್ಡದು. ವಿಮೆಯನ್ನು ಖರೀದಿಸುವುದು ಹೂಡಿಕೆ ಮಾಡುವುದಕ್ಕೆ ಸಮ ಎಂಬ ನಂಬಿಕೆಯನ್ನು ಹಲವರಲ್ಲಿ ಬಿತ್ತಿದೆ ಎಲ್‌ಐಸಿ. ಎಲ್‌ಐಸಿಯ ಆಸ್ತಿಗಳ ಒಟ್ಟು ಮೌಲ್ಯ ₹ 30 ಲಕ್ಷ ಕೋಟಿಗಿಂತ ಹೆಚ್ಚು ಎಂಬ ಅಂದಾಜು ಇದೆ. ಈ ಮೊತ್ತವೇ, ದೇಶದ ಜನ ಈ ಕಂಪನಿಯ ಮೇಲೆ ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುವಂತೆ ಇದೆ.

ಎಲ್‌ಐಸಿಯ ಷೇರುಗಳನ್ನು ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಪ್ರಸ್ತಾವಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರ ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಇತ್ತು. ಆದರೆ, 2020ರಲ್ಲಿ ಆ ಕೆಲಸ ಆಗಲಿಲ್ಲ. ಈಗ ನಿರ್ಮಲಾ ಅವರು, 2021–22ನೆಯ ಹಣಕಾಸು ವರ್ಷದಲ್ಲಿ ಎಲ್‌ಐಸಿ ಐಪಿಒ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. ಅಕ್ಟೋಬರ್‌ ನಂತರ ಐಪಿಒ ಪ್ರಕ್ರಿಯೆ ನಡೆಯಲಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ಕೂಡ ಹೇಳಿದೆ. ಈಗಿನ ಹಂತದಲ್ಲಿ ಎಲ್‌ಐಸಿಯ ಶೇಕಡ 100ರಷ್ಟು ಮಾಲೀಕತ್ವ ಕೇಂದ್ರ ಸರ್ಕಾರದ ಬಳಿ ಇದೆ. ಐಪಿಒ ಮೂಲಕ ಸಾರ್ವಜನಿಕರಿಗೆ ಈ ಕಂಪನಿಯ ಷೇರುಗಳನ್ನು ಮಾರಾಟ ಮಾಡುವ ಮೂಲಕ ಒಂದಿಷ್ಟು ಆದಾಯ ತಂದುಕೊಳ್ಳಬಹುದು ಎಂಬುದು ಕೇಂದ್ರದ ಲೆಕ್ಕಾಚಾರ.

ಸಂಪತ್ತು ಸೃಷ್ಟಿಯ ವಿಚಾರದಲ್ಲಿ ತನಗೆ ತಾನೇ ಸಾಟಿ ಎಂಬಂತೆ ಬೆಳೆದು ನಿಲ್ಲುವ ಶಕ್ತಿಎಲ್‌ಐಸಿಗೆ ಇದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಮತ. ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಂತಹ (ಆರ್‌ಐಎಲ್‌) ಕಂಪನಿಗಳನ್ನು ಮೀರಿಸಿ, ದೇಶದ ಅತಿದೊಡ್ಡ ಕಂಪನಿಯಾಗುವ ಶಕ್ತಿ ಕೂಡ ಎಲ್‌ಐಸಿಗೆ ಇದೆ ಎಂದು ಅವರು ಹೇಳುತ್ತಾರೆ. ‘2004ರ ಆಗಸ್ಟ್‌ನಲ್ಲಿ ಟಿಸಿಎಸ್‌ನ ಷೇರು ಮೌಲ್ಯ ₹120 ಆಗಿತ್ತು. ಈಗ ಅದರ ಮೌಲ್ಯ ₹3,200. ಸಣ್ಣ ಹೂಡಿಕೆದಾರರ ಪಾಲಿಗೆ ಟಿಸಿಎಸ್‌ನಂತಹ ಕಂಪನಿಗಳು ತಂದುಕೊಟ್ಟ ಸಂಪತ್ತಿನ ಮೊತ್ತ ಅಗಾಧ. ಇದೇ ರೀತಿಯಲ್ಲಿ ಸಂಪತ್ತು ತಂದುಕೊಡುವ ಸಾಮರ್ಥ್ಯ ಎಲ್‌ಐಸಿಗೆ ಇದೆ. ಹಾಗಾಗಿ, ಮಧ್ಯಮ ವರ್ಗದವರು, ಸಣ್ಣ ಹೂಡಿಕೆದಾರರು ಎಲ್‌ಐಸಿ ಐಪಿಒ ಬಗ್ಗೆ ಆಸಕ್ತಿ ತಾಳಬೇಕು. ಅವರು ಎಲ್‌ಐಸಿ ಷೇರು ಖರೀದಿಯತ್ತ ಮನಸ್ಸು ಮಾಡಬೇಕು’ ಎಂಬ ಕಿವಿಮಾತನ್ನು ವೈಯಕ್ತಿಕ ಹಣಕಾಸು ಸಲಹೆಗಾರರೊಬ್ಬರು ಹೇಳಿದರು.

‘ಎಲ್‌ಐಸಿಯು ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿ ಆದ ನಂತರ, ಅದರ ಕಾರ್ಯಚಟುವಟಿಕೆಗಳಲ್ಲಿ ಇನ್ನಷ್ಟು ಹೆಚ್ಚಿನ ಪಾರದರ್ಶಕತೆ ಬರುತ್ತದೆ. ಸಣ್ಣ ಹೂಡಿಕೆದಾರರ ಹಿತವನ್ನು ಕಾಯಲು ಎಲ್‌ಐಸಿಯ ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರು ಇರುತ್ತಾರೆ. ಇದು ಕಂಪನಿಯ ವಿಶ್ವಾಸಾರ್ಹತೆಯನ್ನು ಈಗಿನ ಮಟ್ಟಕ್ಕಿಂತ ಮೇಲಕ್ಕೆ ಒಯ್ಯುತ್ತದೆ. ಐಪಿಒ ನಂತರವೂ ಕೇಂದ್ರ ಸರ್ಕಾರವೇ ಎಲ್‌ಐಸಿಯಲ್ಲಿ ಹೆಚ್ಚಿನ ಪ್ರಮಾಣದ ಷೇರುಗಳನ್ನು ಹೊಂದಿರಲಿದೆ. ಹಾಗಾಗಿ ವಿಮೆ ಹೊಂದಿರುವವರು ಆತಂಕಕ್ಕೆ ಒಳಗಾಗುವ ಅಗತ್ಯವೇ ಇಲ್ಲ. ಆದರೆ, ಎಲ್‌ಐಸಿಯ ಸಂಪತ್ತು ಬೆಳೆದಂತೆಲ್ಲ, ಸಣ್ಣ ಹೂಡಿಕೆದಾರರ ಸಂಪತ್ತು ಕೂಡ ಬೆಳೆಯುತ್ತದೆ. ಎಲ್‌ಐಸಿ ವಿಮೆ ಖರೀದಿಸಿ, ಜೀವನ ಭದ್ರವಾಯಿತು ಎಂದು ಭಾವಿಸುವವರು ಇದ್ದಾರೆ. ವಿಮೆಗಿಂತ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸುವ ಸಾಮರ್ಥ್ಯ ಕಂಪನಿಯ ಷೇರುಗಳಿಗೆ ಇರುತ್ತದೆ. ಎಲ್‌ಐಸಿಯಲ್ಲಿ ಹೂಡಿಕೆ ಅಂದರೆ ಜೀವಮಾನದ ಹೂಡಿಕೆ ಇದ್ದಂತೆ’ ಎಂದು ಅವರು ವಿವರಿಸುತ್ತಾರೆ.

ಐಪಿಒ ಅಂದರೆ...

ಸಾಮಾನ್ಯವಾಗಿ ಕಂಪನಿಯ ಪ್ರವರ್ತಕರು ಹೆಚ್ಚಿನ ಬಂಡವಾಳ ಸಂಗ್ರಹಿಸುವ ಉದ್ದೇಶದಿಂದ ಐಪಿಒ ಮಾರ್ಗ ಹಿಡಿಯುತ್ತಾರೆ.

‘ಐಪಿಒ’ಗೆ ಮುಂದಾಗುವ ಕಂಪನಿ, ಆ ಬಗ್ಗೆ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತದೆ. ಷೇರುಗಳಿಗೆ ಹೆಚ್ಚಿನ ಮೌಲ್ಯ ದೊರೆತು, ಕಂಪನಿಗೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹರಿದುಬರಬೇಕು ಎಂದಾದರೆ ಹೀಗೆ ಮಾಡುವುದು ಅಗತ್ಯವಾಗುತ್ತದೆ.

ಕಂಪನಿಯು ತನ್ನ ಮಾರುಕಟ್ಟೆ ಬಂಡವಾಳವನ್ನು ಅಂದಾಜಿಸಿ, ತನ್ನ ಷೇರಿನ ಬೆಲೆಯನ್ನು ನಿಗದಿ ಮಾಡುತ್ತದೆ. ನಂತರ, ಆ ಷೇರುಗಳನ್ನು ಎಷ್ಟು ದರಕ್ಕೆ ಬಿಡ್ ಮಾಡಬಹುದು ಎಂಬುದನ್ನೂ ಸಾರ್ವಜನಿಕರಿಗೆ ತಿಳಿಸುತ್ತದೆ. ಈಚೆಗೆ ಐಪಿಒ ಮೂಲಕ ಹಣ ಸಂಗ್ರಹಿಸಿದ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಎಫ್‌ಸಿ) ಕಂಪನಿಯು ಪ್ರತಿ ಷೇರಿಗೆ ₹25ರಿಂದ ₹26ರವರೆಗೆ ಬಿಡ್ ಮಾಡಬಹುದು ಎಂದು ಹೇಳಿತ್ತು.

ಬಿಡ್‌ ಸಲ್ಲಿಸಲು ಸಾರ್ವಜನಿಕರಿಗೆ ಸಾಮಾನ್ಯವಾಗಿ ಮೂರು ದಿನಗಳ ಅವಕಾಶ ನೀಡಲಾಗುತ್ತದೆ. ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರದಲ್ಲಿ, ಷೇರುಗಳನ್ನು ಸಾರ್ವಜನಿಕರ ಡಿ–ಮ್ಯಾಟ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇದಾದ ನಂತರದಲ್ಲಿ, ಕಂಪನಿಯು ಷೇರು ಮಾರುಕಟ್ಟೆಗೆ ಸೇರ್ಪಡೆ ಆಗುತ್ತದೆ. ಷೇರುಗಳನ್ನು ಸಾರ್ವಜನಿಕರು ಅಲ್ಲಿ ಮಾರಾಟ ಮಾಡಬಹುದು, ಬೇರೆಯವರಿಂದ ಖರೀದಿ ಕೂಡ ಮಾಡಬಹುದು.

ಭಾರತದ ಅತಿ ದೊಡ್ಡ ಕಂಪನಿ

1956ರಲ್ಲಿ ಭಾರತೀಯ ಜೀವವಿಮಾ ಕಾಯ್ದೆಯನ್ನು ಜಾರಿಗೊಳಿಸಿ, ವಿಮಾ ಕ್ಷೇತ್ರದ 245 ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ‘ಭಾರತೀಯ ಜೀವವಿಮಾ ನಿಗಮ’ವನ್ನು ಸ್ಥಾಪಿಸಲಾಗಿತ್ತು. ಕಳೆದ ಆರು ದಶಕಗಳಲ್ಲಿ ಈ ಸಂಸ್ಥೆ ದೇಶದ ಅತ್ಯಂತ ಬಲಿಷ್ಠ ವಿಮಾ ಕಂಪನಿಯಾಗಿ ಬೆಳೆಯುವುದರ ಜತೆಗೆ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ ಎಂಬ ಹಿರಿಮೆಯನ್ನೂ ಗಳಿಸಿಕೊಂಡಿದೆ.

ಜನರು ಯಾವುದೇ ಸಂಸ್ಥೆಯಿಂದ ಜೀವವಿಮೆ ಮಾಡಿಸಿದರೂ ಬಾಯಿಮಾತಿನಲ್ಲಿ ಹೇಳುವಾಗ ‘ಎಲ್‌ಐಸಿ ಮಾಡಿಸಿದ್ದೇನೆ’ ಎಂದು ಹೇಳುವಷ್ಟರ ಮಟ್ಟಿಗೆ ಈ ಸಂಸ್ಥೆಯು ಭಾರತೀಯರ ಮನಸ್ಸಿನೊಳಗೆ ಸ್ಥಾನ ಪಡೆದಿದೆ.

ಮುಂಬೈಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಎಲ್ಐಸಿಯ ಒಟ್ಟು ಆಸ್ತಿಯು ಸುಮಾರು ₹31 ಲಕ್ಷ ಕೋಟಿ ಎಂದು ಅಂದಾಗಿಸಲಾಗಿದೆ. ಸುಮಾರು 1.10 ಲಕ್ಷ ನೌಕರರು, 12 ಲಕ್ಷ ಏಜೆಂಟರುಗಳನ್ನು ಹೊಂದಿರುವ ಈ ಸಂಸ್ಥೆ 2019–20ನೇ ಸಾಲಿನಲ್ಲಿ ₹3,79,000 ಕೋಟಿ ಲಾಭವನ್ನು ದಾಖಲಿಸಿತ್ತು. ನಷ್ಟ ಅನುಭವಿಸುತ್ತಿದ್ದ ಕೆಲವು ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಅವುಗಳ ಪುನಶ್ಚೇತನಕ್ಕೂ ಎಲ್‌ಐಸಿ ಕಾರಣವಾಗಿದೆ. ಇದಲ್ಲದೆ, ಹೆದ್ದಾರಿ ನಿರ್ಮಾಣ, ಮೂಲಸೌಲಭ್ಯ ಅಭಿವೃದ್ಧಿ ಮುಂತಾದ ಇನ್ನೂ ಹಲವು ಸರ್ಕಾರಿ ಯೋಜನೆಗಳಲ್ಲೂ ಹೂಡಿಕೆ ಮಾಡುತ್ತಾ ಬಂದಿದೆ.

ದೇಶದ ವಿಮಾ ಕ್ಷೇತ್ರವನ್ನು ಖಾಸಗಿಯವರಿಗೂ ತೆರೆದ ಪರಿಣಾಮ, ಕಳೆದ ಒಂದೆರಡು ದಶಕಗಳಲ್ಲಿ ಅನೇಕ ಖಾಸಗಿ ವಿಮಾ ಸಂಸ್ಥೆಗಳು ದೇಶದಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಹೀಗಿದ್ದರೂ ಈವರೆಗೆ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ 70ಕ್ಕೂ ಹೆಚ್ಚಿನ ಪಾಲನ್ನು ಎಲ್‌ಐಸಿ ತನ್ನಲ್ಲಿಯೇ ಉಳಿಸಿಕೊಂಡಿದೆ.

ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯು ಹೂಡಿಕೆದಾರರಿಗೆ ಹಣಕ್ಕೆ ಶೇ 100ರಷ್ಟು ಖಾತರಿಯನ್ನು ನೀಡುವ ಭಾರತದ ಏಕೈಕ ವಿಮಾ ಸಂಸ್ಥೆಯಾಗಿದೆ. ಆ ಕಾರಣದಿಂದಲೇ ಎಲ್‌ಐಸಿಯ ಕಂತಿನ ಮೊತ್ತವು ಇತರ ಸಂಸ್ಥೆಗಳ ಕಂತಿನ ಮೊತ್ತಕ್ಕಿಂತ ಸ್ವಲ್ಪ ಅಧಿಕವೇ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT