ಗುರುವಾರ , ಜುಲೈ 7, 2022
20 °C

ಆಳ–ಅಗಲ | 2021–22ರ ಆರ್ಥಿಕ ಸಮೀಕ್ಷೆ: ಕೋವಿಡ್‌ನ ದಟ್ಟ ಛಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೈಗಾರಿಕೆ ಮತ್ತು ಮೂಲಸೌಕರ್ಯ: ಕುಂಠಿತ ಬೆಳವಣಿಗೆ

2021-22ನೇ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ಕೈಗಾರಿಕಾ ವಲಯವು ಸಾಧಾರಣ ಮಟ್ಟದ ಪ್ರಗತಿ ಸಾಧಿಸಿದೆ. ಆರ್ಥಿಕ ವರ್ಷದ ಆರಂಭದಲ್ಲೇ ಕೋವಿಡ್‌ನ ಎರಡನೇ ಅಲೆ ತಲೆದೋರಿದ ಕಾರಣ ಕೈಗಾರಿಕಾ ವಲಯವು ಬಹುತೇಕ ಸ್ಥಗಿತವಾಗಿತ್ತು. ಹೀಗಾಗಿ ಬೆಳವಣಿಗೆ ಸಾಧಾರಣ ಮಟ್ಟದಲ್ಲಿ ಇದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ಈ ಆರ್ಥಿಕ ವರ್ಷದ ಮೊದಲ ಮೂರು–ನಾಲ್ಕು ತಿಂಗಳು ಬಹುತೇಕ ಎಲ್ಲಾ ವಲಯದ ಕೈಗಾರಿಕೆಗಳು ಸ್ಥಗಿತವಾಗಿದ್ದವು. ಅಲ್ಲದೆ, ಈ ಅವಧಿಯಲ್ಲಿ ಈ ಎಲ್ಲಾ ವಲಯದ ಕೈಗಾರಿಕೆಗಳು ಋಣಾತ್ಮಕ ಪ್ರಗತಿ ಸಾಧಿಸಿದ್ದವು. ಎರಡನೇ ಅಲೆ ಇಳಿದ ಬಳಿಕ ಚಟುವಟಿಕೆಗಳು ಆರಂಭವಾದ್ದರಿಂದ ಬೆಳವಣಿಗೆ ಕಂಡವು. ನಂತರದ ದಿನಗಳಲ್ಲಿ ಚೇತರಿಕೆ ಕಂಡವು. ಹೀಗಾಗಿ ಮೂರನೇ ತ್ರೈಮಾಸಿಕ ಅಂತ್ಯದ ವೇಳೆಗೆ, ಒಟ್ಟಾರೆ ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 17.6ರಷ್ಟು ಪ್ರಗತಿ ಸಾಧಿಸಿದೆ.

ಗಣಿ, ತಯಾರಿಕಾ ವಲಯ, ಮೂಲಸೌಕರ್ಯ ಅಭಿವೃದ್ಧಿ ವಲಯ ಮತ್ತು ಗ್ರಾಹಕ ಬಳಕೆಯ ವಸ್ತುಗಳ ವಲಯವು ಆರ್ಥಿಕ ವರ್ಷದ ಆರಂಭದಲ್ಲಿ ಭಾರಿ ಹಿನ್ನಡೆ ಅನುಭವಿಸಿವೆ. ನಂತರದ ದಿನಗಳಲ್ಲಿ ಸಾಧಾರಣ ಮಟ್ಟದ ಪ್ರಗತಿ ಸಾಧಿಸಿವೆ. ಗ್ರಾಹಕ ಬಳಕೆಯ ವಸ್ತುಗಳ ಕೈಗಾರಿಕಾ ಉತ್ಪಾದನೆ ಸೂಚ್ಯಂಕವು ವರ್ಷವಿಡೀ ಕುಂಠಿತ ಬೆಳವಣಿಗೆಯನ್ನು ದಾಖಲಿಸಿದೆ. ಈ ವಲಯದ ಬೆಳವಣಿಗೆಯು ಶೇ 1ರಷ್ಟನ್ನೂ ದಾಟಿಲ್ಲ. 

ರಸ್ತೆ ನಿರ್ಮಾಣ ಕುಸಿತ: ಈ ಹಿಂದಿನ ಆರ್ಥಿಕ ವರ್ಷಗಳಲ್ಲಿ ಪ್ರತಿದಿನ 30–39 ಕಿ.ಮೀ. ಉದ್ದದ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿತ್ತು. ಐದಾರು ಆರ್ಥಿಕ ವರ್ಷಗಳಲ್ಲಿ ರಸ್ತೆ ನಿರ್ಮಾಣದಲ್ಲಿ ನಿರಂತರ ಬೆಳವಣಿಗೆಯನ್ನು ದಾಖಲಿಸಲಾಗಿತ್ತು. ಆದರೆ 2021–22ನೇ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಈ ವಲಯವು ಕುಂಠಿತ ಪ್ರಗತಿ ದಾಖಲಿಸಿದೆ. ಈ ಅವಧಿಯಲ್ಲಿ ಪ್ರತಿ ದಿನ ಕೇವಲ 10.8 ಕಿ.ಮೀ.ನಷ್ಟು ಉದ್ದದ ಹೆದ್ದಾರಿಯನ್ನು ನಿರ್ಮಿಸಲಾಗಿದೆ.

ದೇಶದ ಎಲ್ಲಾ ಬಂದರುಗಳಲ್ಲಿ ನಿರ್ವಹಿಸಲಾಗುವ ಸರಕುಗಳ ಪ್ರಮಾಣದಲ್ಲಿ ಈ ಬಾರಿ ಸ್ವಲ್ಪ ಕುಸಿತವಾಗಿದೆ. ಹಿಂದಿನ ಎಂಟು ಆರ್ಥಿಕ ವರ್ಷಗಳಲ್ಲಿ ಈ ವಲಯವು ಗಮನಾರ್ಹ ಪ್ರಗತಿ ಸಾಧಿಸಿತ್ತು. ಆದರೆ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಎಲ್ಲಾ ಬಂದರುಗಳು ನಿರ್ವಹಿಸಿದ ಸರಕು 59 ಕೋಟಿ ಟನ್‌ಗಳಷ್ಟಾಗಿದೆ. 2020–21ನೇ ಆರ್ಥಿಕ ವರ್ಷದಲ್ಲಿ ಒಟ್ಟು 61 ಕೋಟಿ ಟನ್‌ ಸರಕನ್ನು ನಿರ್ವಹಿಸಲಾಗಿತ್ತು. ದೇಶದ ಎಲ್ಲಾ ಬಂದರುಗಳಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದ್ದರೂ, ಜಾಗತಿಕ ವಿದ್ಯಮಾನಗಳ ಕಾರಣ ಸರಕು ಸಾಗಣೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ಸಾಮಾನ್ಯ ಸ್ಥಿತಿಗೆ ಸೇವಾ ವಲಯ

ಈ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ಸೇವಾ ವಲಯವು ಒಟ್ಟಾರೆ ಶೇ 10.8ರಷ್ಟು ಬೆಳವಣಿಗೆ ಸಾಧಿಸಿದೆ. ಈ ಆರ್ಥಿಕ ವರ್ಷದ ಆರಂಭದಲ್ಲಿ ಕೋವಿಡ್‌ ಎರಡನೇ ಅಲೆಯಿಂದ ಈ ವಲಯವು ಬಹುತೇಕ ಸ್ಥಗಿತವಾಗಿದ್ದರೂ, ನಂತರದ ದಿನಗಳಲ್ಲಿ ಚೇತರಿಕೆ ಕಂಡಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ವ್ಯಾಪಾರ, ಪ್ರವಾಸ, ಹೋಟೆಲ್, ಸಾರಿಗೆ ಮತ್ತು ಸಂವಹನ ವಲಯವು ಎರಡು ತ್ರೈಮಾಸಿಕದಲ್ಲಿ ಶೇ 18.4ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಈ ಹಿಂದಿನ ಆರ್ಥಿಕ ವರ್ಷದಲ್ಲಿ ಕೋವಿಡ್‌ನ ಕಾರಣ ಈ ವಲಯವು ಶೇ 18.2ರಷ್ಟು ಋಣಾತ್ಮಕ ಪ್ರಗತಿ ಸಾಧಿಸಿತ್ತು. ಈ ಅವಧಿಯಲ್ಲಿ ಹಣಕಾಸು ಸೇವೆಗಳು, ರಿಯಲ್ ಎಸ್ಟೇಟ್ ಮತ್ತು ಇತರ ಸೇವೆಗಳು ಪ್ರಗತಿ ದಾಖಲಿಸಿದ್ದರೂ, ಶೇ 5.8ರಷ್ಟು ಬೆಳವಣಿಗೆ ಕಂಡಿದೆ. ಸಾರ್ವಜನಿಕ ಸೇವೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಶೇ 12ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಈ ಮೂಲಕ ಸೇವಾ ವಲಯವು ಕೋವಿಡ್‌ ಮೊದಲಿನ ಅವಧಿಯಲ್ಲಿ ಇದ್ದ ಸ್ಥಿತಿಗೆ ಮರಳಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ಕೃಷಿ ಆದಾಯ ಬಾಧಿಸದ ಕೋವಿಡ್

ಕೋವಿಡ್‌ ಸಾಂಕ್ರಾಮಿಕದ ತೀವ್ರ ಹೊಡೆತಕ್ಕೆ ಅಷ್ಟಾಗಿ ಸಿಲುಕದ ಕ್ಷೇತ್ರ ಎನಿಸಿಕೊಂಡಿರುವ ಕೃಷಿ ವಲಯವು ಈ ಆರ್ಥಿಕ ವರ್ಷದಲ್ಲಿ ಶೇ 3.9ರಷ್ಟು ಬೆಳವಣಿಗೆ ದಾಖಲಿಸಬಹುದು ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಬೆಳೆ ವೈವಿಧ್ಯ ಹಾಗೂ ಕೃಷಿ ಸಂಬಂಧಿತ ವಲಯಗಳಿಗೆ ಆದ್ಯತೆ ನೀಡಬೇಕು. ಜೊತೆಗೆ ನ್ಯಾನೊ ಯೂರಿಯಾದಂತಹ ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದೆ. 

ಕಳೆದ ಎರಡು ವರ್ಷಗಳಲ್ಲಿ ಕೃಷಿ ವಲಯವು ಗಮನಾರ್ಹ ಬೆಳವಣಿಗೆ ದಾಖಲಿಸಿದ್ದು, ಕಳೆದ ವರ್ಷದಲ್ಲಿ ಶೇ 3.6ರಷ್ಟು ಪ್ರಗತಿ ಕಂಡುಬಂದಿತ್ತು. ಈ ಪ್ರಗತಿ ದರ ಮುಂದುವರಿಯಬೇಕಾದರೆ, ಡ್ರೋನ್‌ಗಳಂತಹ ಹೊಸ ತಂತ್ರಜ್ಞಾನಗಳ ಬಳಕೆಯ ಜೊತೆಗೆ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸಾವಯವ ಕೃಷಿಯನ್ನು ಹೆಚ್ಚಿಸುವಂತೆ ಸೂಚಿಸಿದೆ. 

ಕೃಷಿ ಸಂಬಂಧಿತ ಕ್ಷೇತ್ರಗಳತ್ತಲೂ ಸಮಾನ ಆದ್ಯತೆ ನೀಡಬೇಕಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ರೈತರ ಬೆಳವಣಿಗೆ ಮತ್ತು ಆದಾಯದಲ್ಲಿ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಸಂಬಂಧಿತ ವಲಯಗಳಿಗೆ ಪ್ರಾಮುಖ್ಯ ನೀಡಬೇಕಿದೆ. ಈ ಕ್ಷೇತ್ರಗಳನ್ನು ಸದುಪಯೋಗಪಡಿಸಿಕೊಳ್ಳುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ತಿಳಿಸಿದೆ. 

ವಸ್ತುಸ್ಥಿತಿ ಮೌಲ್ಯಮಾಪನ ಸಮೀಕ್ಷೆಯ (ಎಸ್‌ಎಎಸ್) ಇತ್ತೀಚಿನ ವರದಿ ಪ್ರಕಾರ, ಕೃಷಿಯನ್ನು ನಂಬಿಕೊಂಡಿರುವ ಕುಟುಂಬಗಳಿಗೆ ಸಂಬಂಧಿತ ವಲಯಗಳು ಸ್ಥಿರ ಆದಾಯ ತಂದುಕೊಡುತ್ತಿವೆ. ರೈತರ ಸರಾಸರಿ ಮಾಸಿಕ ಆದಾಯದಲ್ಲಿ ಈ ವಲಯಗಳ ಪಾಲು ಶೇ 15ರಷ್ಟಿದೆ. ಸಣ್ಣ ಹಿಡುವಳಿಗಳಿಗೆ ನೆರವಾಗುವ ಕೃಷಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಬೇಕು ಎಂದು ವರದಿ ತಿಳಿಸಿದೆ. ಈ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರ ಉತ್ಪಾದಕತೆಯನ್ನು ಸುಧಾರಿಸಬೇಕಾದ ಅಗತ್ಯವೂ ಇದೆ ಎಂದು ಸಮೀಕ್ಷೆ ಹೇಳಿದೆ. 

ಕಬ್ಬು, ಭತ್ತ ಮತ್ತು ಗೋಧಿ ಕೃಷಿಗೆ ಅಂತರ್ಜಲದ ಬಳಕೆ ಹೆಚ್ಚಿರುವ ಕಾರಣ, ದೇಶದ ಅನೇಕ ಭಾಗಗಳಲ್ಲಿ ಸ್ವಚ್ಛ ಅಂತರ್ಜಲದ ಮಟ್ಟವು ಆತಂಕಪಡುವಷ್ಟು ಕುಸಿದಿದೆ. ಹೀಗಾಗಿ ಬೆಳೆ ವೈವಿಧ್ಯಕ್ಕೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಬೆಳೆ ವೈವಿಧ್ಯವು ಸುಸ್ಥಿರ ಕೃಷಿಯನ್ನು ‌ಪ್ರೋತ್ಸಾಹಿಸಿ, ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ. ಜೊತೆಗೆ ರೈತರ ಆದಾಯವನ್ನೂ ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಎಣ್ಣೆಬೀಜಗಳು, ದ್ವಿದಳ ಧಾನ್ಯಗಳು ಹಾಗೂ ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ನೀಡುವುದರಿಂದ ಬೆಳೆ ವೈವಿಧ್ಯ ಉಂಟಾಗಿ, ಕೃಷಿಯ ಮೂಲಭೂತ ಸಮಸ್ಯೆಗಳಾದ ನೀರಾವರಿ, ಹೂಡಿಕೆ, ಬೆಳೆಗಳಿಗೆ ಮಾರುಕಟ್ಟೆ, ಸಾಲ ಮೊದಲಾದವುಗಳಿಗೆ ಪರಿಹಾರ ದೊರಕಿದಂತಾಗುತ್ತದೆ ಎಂದಿದೆ. 

ಔಷಧ ವಲಯಕ್ಕೆ ಸಂಜೀವಿನಿಯಾದ ಎಫ್‌ಡಿಐ

ಭಾರತದ ಔಷಧ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಿದ ಬಳಿಕ 2020–21ರ ಸಾಲಿನಲ್ಲಿ ಈ ವಲಯದಲ್ಲಿ ಭಾರಿ ಸಂಚಲನ ಕಂಡುಬಂದಿದೆ. ಕೋವಿಡ್‌ ಸಂಬಂಧಿತ ಔಷಧ ಹಾಗೂ ಲಸಿಕೆಗಳ ಬೇಡಿಕೆಯಲ್ಲಿ ಗುರಿ ಮುಟ್ಟಲು ಇದರಿಂದ ಸಾಧ್ಯವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

2021ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಈ ಕ್ಷೇತ್ರಕ್ಕೆ ₹4,413 ಕೋಟಿ ಎಫ್‌ಡಿಐ ಒಳಹರಿವು ಇತ್ತು. ಶೇ 53ರ ಬೆಳವಣಿಗೆ ದರ ದಾಖಲಿಸಿತ್ತು. ಬೆಲೆಯ ಸ್ಪರ್ಧಾತ್ಮಕತೆ ಮತ್ತು ಉತ್ತಮ ಗುಣಮಟ್ಟವು ಸ್ವದೇಶಿ ಔಷಧ ಉತ್ಪಾದಕರನ್ನು ವಿಶ್ವ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆ ಒಡ್ಡುವಂತೆ ಮಾಡಿತು. ಈ ಮೂಲಕ ದೇಶವು ‘ಜಾಗತಿಕ ಔಷಧ ಕೇಂದ್ರ’ವಾಗಿ ಹೊರಹೊಮ್ಮಿತು. ಆದರೆ ಭಾರತವು ಔಷಧ ತಯಾರಿಗೆ ಬಳಸುವ ಮೂಲವಸ್ತುಗಳ ಆಮದಿನ ಮೇಲೆ ಬಹುವಾಗಿ ಅವಲಂಬಿತವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಜಾಗತಿಕವಾಗಿ ಔಷಧ ಉತ್ಪಾದನೆಯಲ್ಲಿ (ಪ್ರಮಾಣ) ಭಾರತದ ಔಷಧ ಉದ್ಯಮವು ಮೂರನೇ ಸ್ಥಾನದಲ್ಲಿದೆ. 2020–21ರ ಆರ್ಥಿಕ ವರ್ಷದಲ್ಲಿ ₹1.83 ಲಕ್ಷ ಕೋಟಿ ಮೌಲ್ಯದ ಔಷಧ ರಫ್ತು ಮಾಡಲಾಗಿತ್ತು. ಇದೇ ಅವಧಿಯಲ್ಲಿ ಭಾರತ ಆಮದು ಮಾಡಿಕೊಂಡ ಔಷಧಗಳ ಮೌಲ್ಯ ₹52,000 ಕೋಟಿ. ಭಾರತವು ಜನರಿಕ್ ಔಷಧಗಳ ಅತಿದೊಡ್ಡ ಪೂರೈಕೆ ದೇಶವಾಗಿದ್ದು, ಜಾಗತಿಕವಾಗಿ ಶೇ 20ರಷ್ಟು ಪಾಲು ಹೊಂದಿದೆ ಎಂದು ಸಮೀಕ್ಷೆ ಮಾಹಿತಿ ನೀಡಿದೆ.

ಕಾರ್ಮಿಕ ಸಂಹಿತೆ: ರಾಜ್ಯಗಳ ನಿರಾಸಕ್ತಿ

ಸಂಸತ್ತು ಅನುಮೋದಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ದೇಶದ 16 ರಾಜ್ಯಗಳು ಮಾತ್ರ ಈವರೆಗೆ ಕರಡು ನಿಯಮಾವಳಿಗಳನ್ನು ಪ್ರಕಟಿಸಿವೆ ಎಂದು ಆರ್ಥಿಕ ಸಮೀಕ್ಷೆ ಮಾಹಿತಿ ನೀಡಿದೆ. ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ನಾಲ್ಕರ ಪೈಕಿ ಒಂದು ಸಂಹಿತೆಗೂ ಕರಡು ನಿಯಮಗಳನ್ನು ಪ್ರಕಟಿಸಿಲ್ಲ. ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು – ಎಂಬ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಪರಿಚಯಿಸಿತ್ತು. ಈ ಎಲ್ಲ ನಾಲ್ಕೂ ಸಂಹಿತೆಗಳಿಗೆ ಕೇಂದ್ರ ಕರಡು ನಿಯಮಗಳನ್ನು ಪ್ರಕಟಿಸಿದೆ. 

26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವೇತನದ ಸಂಹಿತೆ, 22 ರಾಜ್ಯಗಳು ಕೈಗಾರಿಕಾ ಸಂಬಂಧಗಳ ಸಂಹಿತೆ, 20 ರಾಜ್ಯಗಳು ಸಾಮಾಜಿಕ ಭದ್ರತೆ ಮತ್ತು ಉದ್ಯೋಗ ಸುರಕ್ಷತೆ, 17 ರಾಜ್ಯಗಳು ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ ಕುರಿತು ಕರಡು ನಿಯಮಗಳನ್ನು ಪ್ರಕಟಿಸಿವೆ. ಎಲ್ಲ ನಾಲ್ಕು ಸಂಹಿತೆಗಳಿಗೆ ಕೇಂದ್ರ ಕರಡು ನಿಯಮಗಳನ್ನು ಮೊದಲೇ ಪ್ರಕಟಿಸಿದೆ. 

ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ವ್ಯಯ

ಕೇಂದ್ರ ಸರ್ಕಾರವು ಈ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ಸಾಮಾಜಿಕ ಕಾರ್ಯಗಳ ವಲಯಕ್ಕೆ ಹೆಚ್ಚಿನ ಹಣವನ್ನು ವೆಚ್ಚ ಮಾಡಿದೆ. ಈ ಹಣದಲ್ಲಿ ಹೆಚ್ಚಿನ ಪಾಲು ಆರೋಗ್ಯ ಸೇವೆಗಳಿಗೆ ವ್ಯಯವಾಗಿದೆ ಎನ್ನುತ್ತವೆ ಆರ್ಥಿಕ ಸಮೀಕ್ಷೆಯ ದತ್ತಾಂಶಗಳು.

2019–20ರಲ್ಲಿ ಸಮಾಜಿಕ ಸೇವಾ ವಲಯಕ್ಕೆ ಕೇಂದ್ರ ಸರ್ಕಾರವು ₹2.73 ಲಕ್ಷ ಕೋಟಿಯಷ್ಟು ಅನುದಾನವನ್ನು ನೀಡಿತ್ತು. 2021–22ರಲ್ಲಿ ಪರಿಷ್ಕೃತ ಅಂದಾಜೂ ಸೇರಿ, ₹4.72 ಲಕ್ಷ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರವು ಈ ವಲಯಕ್ಕಾಗಿ ತೆಗೆದಿರಿಸಿದೆ. ಇದು ಶೇ 73ರಷ್ಟು ಏರಿಕೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ಈ ಅನುದಾನದಲ್ಲಿ ಶಿಕ್ಷಣಕ್ಕಾಗಿ ಶೇ 36.6ರಷ್ಟು ಮೊತ್ತವನ್ನು ಮೀಸಲಿರಿಸಲಾಗಿದ್ದರೆ, ಆರೋಗ್ಯ ಕ್ಷೇತ್ರಕ್ಕೆ ಶೇ 24.7ರಷ್ಟು ಮೊತ್ತವನ್ನು ಮೀಸಲಿರಿಸಲಾಗಿದೆ. ಈ ಎರಡೂ ಕ್ಷೇತ್ರಗಳಿಗೆ ನೀಡಲಾದ ಮೊತ್ತವು, ಒಟ್ಟು ಅನುದಾನದ ಶೇ 61ಕ್ಕೂ ಹೆಚ್ಚು.

ಆಧಾರ: ಆರ್ಥಿಕ ಸಮೀಕ್ಷೆ 2021–22

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು