ಮಂಗಳವಾರ, ಮೇ 18, 2021
30 °C
2004ರಿಂದಲೂ ವಾದ, ಪ್ರತಿವಾದಗಳಿಂದ ರಾಜ್ಯದ ಗಮನ ಸೆಳೆದಿದ್ದ ದೇಗುಲ ಹಸ್ತಾಂತರ ವಿಚಾರ

ಆಳ-ಆಗಲ| ಮಹಾಬಲೇಶ್ವರ ದೇಗುಲ ನಿರ್ವಹಣೆ ಯಾರಿಗೆ ಸಲ್ಲಬೇಕು?

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದೊಂದಿಗೆ ಶಂಕರಾಚಾರ್ಯರ ಕಾಲದಿಂದಲೂ ರಾಮಚಂದ್ರಾಪುರ ಮಠಕ್ಕೆ ಪಾರಂಪರಿಕ ಸಂಬಂಧವಿದೆ. ಆದಿ ಶಂಕರರು 1,300 ವರ್ಷಗಳ ಹಿಂದೆ ರಾಮಚಂದ್ರಾಪುರ ಮಠಕ್ಕೆ ಶ್ರೀಕಾರ ಹಾಕಿದ್ದರು. ಆಗ ದೇವಸ್ಥಾನದ ನಿರ್ವಹಣೆಯ ಹೊಣೆಯನ್ನು ಮಠಕ್ಕೆ ನೀಡಿದ್ದರು. ಅಂದಿನಿಂದಲೂ ನಡೆದುಕೊಂಡು ಬಂದಿದ್ದ ಪರಂಪರೆಯು ಕಣ್ತಪ್ಪಿನಿಂದಾಗಿ ಮುಜರಾಯಿ ಇಲಾಖೆಗೆ ಸೇರಿತ್ತು ಎಂಬುದು ಮಠದ ವಾದವಾಗಿತ್ತು. ಈಗಲೂ ಇದೇ ಅಭಿಪ್ರಾಯವಿದೆ.

2004ರಲ್ಲಿ ಮುಜರಾಯಿ ಇಲಾಖೆಯ ಆಡಳಿತವಿದ್ದಾಗ ಆಗಿನ ಟ್ರಸ್ಟಿ ವಿ.ಡಿ.ದೀಕ್ಷಿತ್ ನಿಧನರಾದರು. 2004ರಿಂದ 2008ರ ಆ.14ರವರೆಗೆ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ಉಸ್ತುವಾರಿ ಆಡಳಿತ ನಡೆಸಿದ್ದರು. ಆದರೆ, ಟ್ರಸ್ಟಿಗಳ ಹುದ್ದೆ ಖಾಲಿ ಇದ್ದ ಕಾರಣ ದೇಗುಲದ ನಿರ್ವಹಣೆ ಜವಾಬ್ದಾರಿಯನ್ನು ತಮಗೆ ವಹಿಸುವಂತೆ 2008ರ ಮೇ ತಿಂಗಳಿನಲ್ಲಿ ರಾಮಚಂದ್ರಾಪುರದ ಮಠದವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಆಗ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವಿತ್ತು. ಅಧಿಕಾರಿಗಳು ನೀಡಿದ್ದ ಮಾಹಿತಿಗಳನ್ನು ಪರಾಮರ್ಶಿಸಿದ ರಾಜ್ಯಪಾಲರ ಅಧೀನ ಕಾರ್ಯದರ್ಶಿ, ಈ ಮನವಿಯನ್ನು ಪುರಸ್ಕರಿಸಲಿಲ್ಲ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2008ರ ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಮಠದಿಂದ ಪುನಃ ಮನವಿ ಸಲ್ಲಿಸಲಾಯಿತು. ಅದರಂತೆ 2008ರ ಆ.14ರಂದು ಸೂಚಿತ ಪಟ್ಟಿಯಿಂದ ದೇವಾಲಯವನ್ನು ರದ್ದುಪಡಿಸಿ, ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಲಾಯಿತು. ಹೀಗೆ ಹಿಂದೆ ಆಗಿದ್ದ ತಪ್ಪನ್ನು ಸರಿ ಪಡಿಸಲಾಯಿತು ಎಂಬುದು ರಾಮಚಂದ್ರಾಪುರ ಮಠದವರ ವಾದವಾಗಿದೆ.

‘ಕ್ಷೇತ್ರದಲ್ಲಿ ಅಭಿವೃದ್ಧಿಯ ಮಹಾಪರ್ವ’

‘ಗೋಕರ್ಣದ ಮಹಾಬಲೇಶ್ವರ ದೇಗುಲವನ್ನು ಎಂದಿಗೂ ಆದಾಯದ ಮೂಲ ಎಂದು ರಾಮಚಂದ್ರಾಪುರ ಮಠ ಕಂಡಿಲ್ಲ. ಇದನ್ನು ಸೇವೆಯ ಸಾಧನವಾಗಿ ಪರಿಗಣಿಸಿದ್ದೆವು. ಪರಂಪರೆಯ ಸಂಬಂಧ ಇರುವುದರಿಂದ ಮತ್ತು ಸಮಾಜ ಹಿತಕ್ಕಾಗಿ ಶ್ರೀಮಠವು ಗೋಕರ್ಣ ದೇವಾಲಯದ ಕಾನೂನು ಹೋರಾಟ ಕೈಗೆತ್ತಿಕೊಂಡಿತ್ತು. ಇದನ್ನು ಮುಂದುವರಿಸಲಿದೆ’ ಎಂದು ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದರು.

‘2008ರಲ್ಲಿ ದೇವಾಲಯವು ಮಠಕ್ಕೆ ಪುನಃ ಹಸ್ತಾಂತರವಾದ ನಂತರ ಶ್ರೀಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯ ಮಹಾಪರ್ವವೇ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ದೇವಾಲಯದ ಸುವ್ಯವಸ್ಥಿತ ಆಡಳಿತ, ಸಮರ್ಥ ನಿರ್ವಹಣೆ ಹಾಗೂ ಪಾರದರ್ಶಕತೆಯನ್ನು ಪ್ರಮಾಣೀಕರಿಸುವ ಐ.ಎಸ್‌.ಒ ಪ್ರಮಾಣಪತ್ರ ಸಿಕ್ಕಿದೆ. ಇದು ಮಠದ ಮಾದರಿ ಆಡಳಿತಕ್ಕೆ ಸಾಕ್ಷಿಯಾಗಿದೆ’ ಎಂದೂ ಅವರು ಹೇಳಿದ್ದರು.

‘2008ಕ್ಕೂ ಮೊದಲು ಲೆಕ್ಕ ಪತ್ರಗಳೇ ಇಲ್ಲದ ಸ್ಥಿತಿ ಇತ್ತು. ಮಠದ ಆಡಳಿತದಲ್ಲಿ ಪ್ರತಿ ರೂಪಾಯಿಗೂ ‍ಪರಿಶೋಧನಾ ಲೆಕ್ಕ ಪತ್ರ ಇದೆ. ಹಿಂದೆ ಭಕ್ತರ ಸುಲಿಗೆ ನಡೆಯುತ್ತಿದ್ದ ಕ್ಷೇತ್ರದಲ್ಲಿ ಈಗ ಬರುವ ಎಲ್ಲ ಭಕ್ತರಿಗೆ ಎರಡು ಹೊತ್ತು ಪ್ರಸಾದ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಚ್ಛತೆ, ಸೌಕರ್ಯಗಳ ಬಗ್ಗೆ ಸರ್ಕಾರ ನೇಮಕ ಮಾಡಿದ ಸಮಿತಿಯೇ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ವಿವರಿಸಿದ್ದರು.

‘ಮತ್ತೆ ಪಡೆಯುತ್ತೇವೆ ಎನ್ನುವುದರ ಔಚಿತ್ಯವೇನು?’

‘ರಾಮಚಂದ್ರಾಪುರ ಮಠವು ಮಹಾಬಲೇಶ್ವರ ದೇವಸ್ಥಾನದ ಉಸ್ತುವಾರಿ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗೆ (ಕುಮಟಾ) ತಕ್ಷಣವೇ ಹಸ್ತಾಂತರಿಸಬೇಕು. ಅವರೇ ಉಸ್ತುವಾರಿ ಸಮಿತಿಗೆ ಕಾರ್ಯದರ್ಶಿಯಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಿದ್ದಾಗ ಮಠದ ಜವಾಬ್ದಾರಿ ಏನು ಎಂದು ಈ ಆದೇಶದಲ್ಲಿ ಸ್ಪಷ್ಟವಾಗಿದೆ’ ಎನ್ನುತ್ತಾರೆ ಶ್ರೀ ಕ್ಷೇತ್ರ ಗೋಕರ್ಣ ರಕ್ಷಣಾ ಸಮಿತಿಯ ಅಧ್ಯಕ್ಷ ಗಣಪತಿ ಹಿರೇ.

‘ನ್ಯಾಯಾಲಯದ ಆದೇಶ ಪಾಲಿಸುವ ಇಚ್ಛೆ ವ್ಯಕ್ತಪಡಿಸದೇ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದು ಪೀಠಾಧಿಪತಿ ರಾಘವೇಶ್ವರ ಅವರ ಹೇಳಿಕೆ ನಿಜಕ್ಕೂ ಹಾಸ್ಯವೆನಿಸುತ್ತದೆ. ನಮಗೆ ಯಾವುದರಲ್ಲೂ ಆಸೆಯಿಲ್ಲ. ನಾವು ಸೇವೆಗೆ ಮಾತ್ರ ಮಹಾಬಲೇಶ್ವರ ದೇವಸ್ಥಾನ ತೆಗೆದುಕೊಂಡಿದ್ದು ಎಂದು ಹೇಳಿದವರು, ಈಗ ದೇವಸ್ಥಾನವನ್ನು ಮತ್ತೆ ತಿರುಗಿ ಪಡೆಯುತ್ತೇವೆ ಎನ್ನುವ ಹೇಳಿಕೆಯ ಔಚಿತ್ಯವೇನು’ ಎಂದು ಪ್ರಶ್ನಿಸುತ್ತಾರೆ.

‘ಮೂಲ ಉಪಾಧಿವಂತರಿಗೆ ಪೂಜೆಗೆ ಅವಕಾಶ ನೀಡುವ ಪ್ರಕರಣದಲ್ಲಿ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದೆ. ಆ ಪ್ರಕರಣದಲ್ಲಿ ನ್ಯಾಯಾಲಯದ ಆಜ್ಞೆಯನ್ನು ಅನುಷ್ಠಾನ ಮಾಡಿದರಷ್ಟೇ ಮುಂದಿನ ವಿಚಾರಣೆಗೆ ಅರ್ಜಿದಾರರು ಅರ್ಹತೆ ಗಿಟ್ಟಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ’ ಎಂದೂ ಅವರು ಹೇಳುತ್ತಾರೆ.
ದೇಗುಲ ಹಸ್ತಾಂತರ ವಿವಾದ: ಯಾವಾಗ ಏನಾಯಿತು?

ಯಾವಾಗ ಏನಾಯಿತು?

* 2004ರಲ್ಲಿ ಟ್ರಸ್ಟಿ ವಿ.ಡಿ.ದೀಕ್ಷಿತ್ ನಿಧನ

* ಅಂದಿನಿಂದ 2008ರ ಆ.14ರವರೆಗೆ ಪುತ್ರ ಬಾಲಚಂದ್ರ ದೀಕ್ಷಿತ್ ಉಸ್ತುವಾರಿ ಆಡಳಿತ

* 2008ರ ಮೇನಲ್ಲಿ ರಾಮಚಂದ್ರಾಪುರ ಮಠಕ್ಕೆ ದೇಗುಲ ಹಸ್ತಾಂತರಿಸುವಂತೆ ಅರ್ಜಿ

* 2008ರ ಆಗಸ್ಟ್‌ 14ರಂದು ಸೂಚಿತ ಪಟ್ಟಿಯಿಂದ ದೇಗುಲ ಹೊರಗಿಟ್ಟು ಸರ್ಕಾರದ ಆದೇಶ

* ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಬಾಲಚಂದ್ರ ದೀಕ್ಷಿತ ಹಾಗೂ ಇತರರು

* 2018 ಆಗಸ್ಟ್‌ 10ರಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ

* ದೇಗುಲ ಹಸ್ತಾಂತರವನ್ನು ರದ್ದುಗೊಳಿಸಿದ ಹೈಕೋರ್ಟ್

* 2018ರ ಸೆ‍ಪ್ಟೆಂಬರ್‌ 8ರಂದು ಮಠದಿಂದ ಸುಪ್ರೀಂ ಕೋರ್ಟಿಗೆ ಮೇಲ್ಮನವಿ

* 2018 ಸೆ‍ಪ್ಟೆಂಬರ್ 18ರಂದು ಉಸ್ತುವಾರಿ ವಹಿಸಿಕೊಂಡ ಜಿಲ್ಲಾಧಿಕಾರಿ

* ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ 2018ರ ಆಗಸ್ಟ್‌ 10ರಂದು ಹೈಕೋರ್ಟ್ ಆದೇಶ

* 2018 ಅಕ್ಟೋಬರ್‌ 9ರಂದು ಹಸ್ತಾಂತರ ಪ್ರಕ್ರಿಯೆ ಮೊಟಕು

* ಅಡ್ವೊಕೇಟ್ ಜನರಲ್ ಅಭಿಪ್ರಾಯ ಕೇಳಲು ಸರ್ಕಾರದ ನಿರ್ಧಾರ

* ಹಸ್ತಾಂತರ ರದ್ದುಗೊಳಿಸಿ, ಸಮಿತಿ ರಚಿಸಲು ಏಪ್ರಿಲ್‌ 19ರಂದು ಮಧ್ಯಂತರ ಆದೇಶ

ನ್ಯಾಯಾಲಯ ಹೇಳಿದ್ದೇನು?

ಗೋಕರ್ಣ ಮಹಾಬಲೇಶ್ವರ ದೇಗುಲದ ನಿರ್ವಹಣೆಯನ್ನು ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿಗೆ ಒಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ವಿ.ಬೊಬಡೆ ನೇತೃತ್ವದ ಮೂವರು ಸದಸ್ಯರ ಪೀಠವು ಈ ಮಧ್ಯಂತರ ಆದೇಶ ನೀಡಿದೆ.

ಸಮಿತಿಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗಾಧಿಕಾರಿ, ಇಬ್ಬರು ತಜ್ಞರು ಹಾಗೂ ರಾಜ್ಯ ಸರ್ಕಾರ ನೇಮಿಸುವ ಇಬ್ಬರು ಉಪಾಧಿವಂತರು ಇರಲಿದ್ದಾರೆ. ಸಮಿತಿ ರಚನೆ ಪ್ರಕ್ರಿಯೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಏ.19ರಂದು ನೀಡಿದ ಆದೇಶದಲ್ಲಿ ಹೇಳಿತ್ತು.

***

ದೇಗುಲ ಉಸ್ತುವಾರಿ ಸಮಿತಿ ರಚನೆಯ ಪ್ರಕ್ರಿಯೆ ಜಾರಿಯಲ್ಲಿದ್ದು, ಇನ್ನೊಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ದೇಗುಲದ ದೈನಂದಿನ ನಿರ್ವಹಣೆಯನ್ನು ಸಮಿತಿ ನೋಡಿಕೊಳ್ಳಲಿದೆ.
- ಅಜಿತ್, ಕುಮಟಾ ಉಪ ವಿಭಾಗಾಧಿಕಾರಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು