ಸೋಮವಾರ, ಮಾರ್ಚ್ 1, 2021
29 °C

ಕೆಂಪು ಕೋಟೆಯ ರೋಚಕ ಇತಿಹಾಸವಿದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1947ರ ಆಗಸ್ಟ್‌ 15ರಂದು ಸ್ವತಂತ್ರ ಭಾರತದ ಮೊದಲ ರಾಷ್ಟ್ರಧ್ವಜಾರೋಹಣ ನಡೆದದ್ದು ಕೆಂಪುಕೋಟೆಯ ಮೇಲೆ. ಆ ನಂತರ ಕೆಂಪು ಕೋಟೆಯ ಮೇಲೆ ದಾಳಿಗಳು ನಡೆದಿಲ್ಲವಾದರೂ ಈ ಕೋಟೆಯ ಇತಿಹಾಸ ಮಾತ್ರ ರೋಚಕವಾಗಿದೆ.

ತನ್ನ ರಾಜಧಾನಿಯನ್ನು ದೆಹಲಿಗೆ ಸ್ಥಳಾಂತರಿಸಲು ನಿರ್ಧರಿಸಿದ ಮೊಘಲ್‌ ದೊರೆ ಶಾಜಹಾನನು 1639–48ರ ಅವಧಿಯಲ್ಲಿ ಈ ಕೋಟೆಯನ್ನು ನಿರ್ಮಿಸಿದ್ದನು. ಭವ್ಯ ಅರಮನೆ, ಚಿನ್ನಾಭರಣ, ಕಲಾಕೃತಿ ಮುಂತಾದ ವೈಭವಗಳಿಂದ ಅದು ಕೂಡಿತ್ತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚಿನ ಅವಧಿಗೆ ಇದು ಮೊಘಲರ ಆಳ್ವಿಕೆಯಲ್ಲೇ ಇತ್ತು.

1747ರಲ್ಲಿ ದೆಹಲಿ ಮೇಲೆ ಇರಾನ್‌ನ ನಾದಿರ್ ಶಾ ದಾಳಿ ನಡೆಸಿ, ಕೋಟೆಯನ್ನು ವಶಪಡಿಸಿಕೊಂಡ. ಅಲ್ಲಿನ ಅತ್ಯಂತ ದುಬಾರಿ ವಸ್ತುಗಳೊಂದಿಗೆ ಆತ ಇರಾನ್‌ಗೆ ಮರಳಿದ್ದ. ಆನಂತರ ಮರಾಠರು ದೆಹಲಿಯ ಮೇಲೆ ದಾಳಿ ಮಾಡಿದರು. ಕೋಟೆ ಕೆಲವು ವರ್ಷಗಳ ಕಾಲ ಅವರ ವಶದಲ್ಲಿತ್ತು. ಅಲ್ಲಿನ ಕೆಲವು ಅಮೂಲ್ಯ ವಸ್ತುಗಳನ್ನು ಮರಾಠರೂ ನಾಶಪಡಿಸಿದ್ದರು. ಸ್ವಲ್ಪ ಕಾಲ ಸಿಖ್ಖರು ಕೋಟೆಯ ಮೇಲೆ ಹಿಡಿತ ಸಾಧಿಸಿದರು. 1803ರಲ್ಲಿ ಆಂಗ್ಲರು– ಮರಾಠರ ನಡುವೆ ನಡೆದ ಎರಡನೇ ಯುದ್ಧದ ಬಳಿಕ ಕೋಟೆಯ ಮೇಲೆ ಬ್ರಿಟಿಷರ ಹಿಡಿತ ಬಲವಾಯಿತು.

1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ದಂಗೆಯ ಸಂದರ್ಭದಲ್ಲಿ ಕೋಟೆಗೆ ಇನ್ನಷ್ಟು ಹಾನಿಯಾಯಿತು. ದಂಗೆ ವಿಫಲವಾದ ನಂತರ, ಎರಡನೆಯ ಬಹದ್ದೂರ್ ಶಾ ಕೋಟೆಯನ್ನು ತೊರೆದು ಪರಾರಿಯಾಗುವ ಪ್ರಯತ್ನ ನಡೆಸಿದ. ಬ್ರಿಟಿಷ್ ಪಡೆಗಳು ಆತನನ್ನು ಬಂಧಿಸಿದವು. 1858ರಲ್ಲಿ ವಿಚಾರಣೆ ನಡೆದು, ಅದೇ ವರ್ಷ ಆತನನ್ನು ರಂಗೂನ್‌ಗೆ ಗಡಿಪಾರು ಮಾಡಲಾಯಿತು. ಕೋಟೆಯ ಹಿಡಿತ ಸಂಪೂರ್ಣ ಬ್ರಿಟಿಷರ ಕೈಗೆ ಲಭಿಸಿತು. ಬ್ರಿಟಿಷರು ಕೋಟೆಯ ಅರಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಲು ಅನುಮತಿ ನೀಡಿದರು. ಎಲ್ಲಾ ಪೀಠೋಪಕರಣಗಳನ್ನು ತೆಗೆದುಹಾಕಲಾಯಿತು ಅಥವಾ ನಾಶಪಡಿಸಲಾಯಿತು. ದುಬಾರಿ ವಸ್ತುಗಳನ್ನು ಲೂಟಿ ಮಾಡಿ ಮಾರಾಟ ಮಾಡಲಾಯಿತು.

ಭಾರತಕ್ಕೆ ಸ್ವಾತಂತ್ರ್ಯ ಲಭಿಸುವವರೆಗೂ ಬ್ರಿಟಿಷರು ಅಲ್ಲಿನ ಸಂಪತ್ತನ್ನು ಲೂಟಿಮಾಡುತ್ತಾ, ಅರಮನೆಯನ್ನು ಕೆಡವುವ ಮತ್ತು ನವೀಕರಿಸುವ ಕೆಲಸವನ್ನು ಮಾಡುತ್ತಲೇ ಇದ್ದರು. ಸ್ವಾತಂತ್ರ್ಯಾ ನಂತರ ಮೊದಲ ಧ್ವಜಾರೋಹಣವನ್ನು ಇಲ್ಲಿಯೇ ನಡೆಸುವ ಮೂಲಕ ಭಾರತ ಸರ್ಕಾರವು ಕೆಂಪು ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು.

2000ನೇ ಸಾಲಿನಲ್ಲಿ ಕೆಂಪುಕೋಟೆ ಯನ್ನು ಯುನೆಸ್ಕೊ ‘ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಗೆ ಸೇರಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು