ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ 2: ಮೀಸಲಾತಿ ಭಿಕ್ಷೆಯಲ್ಲ ಸಂವಿಧಾನ ಬದ್ಧ ಹಕ್ಕು- ನಾಗಮೋಹನ್‌ದಾಸ್

Last Updated 9 ಮಾರ್ಚ್ 2022, 21:15 IST
ಅಕ್ಷರ ಗಾತ್ರ

ಭಾರತ ದೇಶದಲ್ಲಿ ಅನೇಕ ಮತಗಳು, 4,635 ಜಾತಿಗಳು ಮತ್ತು ಉಪ ಜಾತಿಗಳಿವೆ. ಹುಟ್ಟುತ್ತಾ ಒಂದು ಜಾತಿಯನ್ನು ಕಟ್ಟಲಾಯಿತು ಮತ್ತು ಜಾತಿಗೊಂದು ಕಸುಬನ್ನು ಕಡ್ಡಾಯಗೊಳಿಸಲಾಯಿತು. ಜಾತಿ ಬದಲಾಯಿಸುವಂತಿಲ್ಲ. ಜಾತಿ ಜಾತಿಯ ನಡುವೆ ಸಂಬಂಧ ಬೆಳೆಸುವಂತಿಲ್ಲ ಮತ್ತು ಪಂಕ್ತಿ ಭೋಜನ ಮಾಡುವಂತಿಲ್ಲ. ಸಾಲದೆಂದು ಜಾತಿ ಮತ್ತು ಕಸುಬನ್ನು ವಂಶ ಪಾರಂಪರ್ಯ ಮಾಡಲಾಗಿದೆ.

ಜಾತಿ ವ್ಯವಸ್ಥೆಯಲ್ಲಿ ಒಂದು ವಿಧವಾದ ಕೆಲಸದ ವಿಭಜನೆಯನ್ನು ಕಾಣಬಹುದು. ವಿದ್ಯೆ ಬುದ್ಧಿಯ ಗುತ್ತಿಗೆದಾರರನ್ನಾಗಿ ಬ್ರಾಹ್ಮಣರನ್ನು, ಯುದ್ಧ ಮತ್ತು ಆಡಳಿತ ನಡೆಸುವುದಕ್ಕೆ ಕ್ಷತ್ರಿಯರನ್ನು, ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ನಡೆಸುವುದಕ್ಕೆ ವೈಶ್ಯರನ್ನು ನೇಮಿಸಲಾಯಿತು. ಸಾಮಾಜಿಕ ವ್ಯವಸ್ಥೆಯ ಕೊನೆಯಲ್ಲಿರುವ ಶೂದ್ರರನ್ನು ಅತ್ಯಂತ ಕಷ್ಟ ಮತ್ತು ಕೊಳಕಿನ ಕೆಲಸ ಮಾಡುವ ಗುಲಾಮರನ್ನಾಗಿ ಮಾಡಲಾಯಿತು. ಈ ರೀತಿಯಾಗಿ ಶ್ರಮ ವಿಭಜನೆಯಿಂದ ಮೊದಲ ಮೂರು ವರ್ಣಗಳು ಆಳುವವರಾಗಿಯೂ, ನಾಲ್ಕನೆಯವರಾದ ಶೂದ್ರರು ಆಳಲ್ಪಡುವವರಾಗಿಯೂ ರೂಪುಗೊಂಡರು. ಚಾತುರ್ವರ್ಣ್ಯದ ಹೊರಗೆ ಅಸ್ಪೃಶ್ಯರೆಂಬ ಸಾಮಾಜಿಕ ವರ್ಗಗಳನ್ನು ನಿರ್ಮಿಸಲಾಯಿತು.

ಜಾತಿ– ಜಾತಿಗಳ ನಡುವೆ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸಮಾನತೆ ಕಾಣಬಹುದು. ಪ್ರಬಲ ಜಾತಿಗಳು, ಮೇಲ್ವರ್ಗಗಳು, ತುಳಿತಕ್ಕೆ ಒಳಗಾದ ಜಾತಿಗಳು, ತಳವರ್ಗಗಳು, ಜಾತಿ ಮತ್ತು ವರ್ಗ ಬೆರೆತುಹೋಗಿರುವ ಒಂದು ಅಸಮಾನ ಸಾಮಾಜಿಕ ವ್ಯವಸ್ಥೆ ನಮ್ಮದು.

ಜಾತಿ ಅಸಮಾನತೆಯನ್ನು ನಿವಾರಿಸಲೆಂದು ನಮ್ಮ ಸಂವಿಧಾನದಲ್ಲಿ ರಾಜಕೀಯ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಒದಗಿಸಲಾಗಿದೆ. ಮೀಸಲಾತಿ ಎಂಬುದು ಬಡತನ ನಿರ್ಮೂಲನಾ ಕಾರ್ಯಕ್ರಮ ಅಲ್ಲ ಅಥವಾ ಜಾತಿಗಳ ವಿನಾಶದ ಕಾರ್ಯಕ್ರಮವೂ ಅಲ್ಲ. ಪ್ರಾತಿನಿಧ್ಯ ವಂಚಿತರಿಗೆ ಪ್ರಾತಿನಿಧ್ಯವನ್ನು ನೀಡುವುದು ಮೀಸಲಾತಿ. ಇದೊಂದು ಭಿಕ್ಷೆಯಲ್ಲ, ಬದಲಿಗೆ ಅದೊಂದು ಮಾನವ ಹಕ್ಕು ಮತ್ತು ಸಂವಿಧಾನದ ಹಕ್ಕು.

ಕಳೆದ 73 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಶಾಸಕಾಂಗ, ಶೈಕ್ಷಣಿಕ ಮತ್ತು ಸಾರ್ವಜನಿಕ ವಲಯದ ಉದ್ಯೋಗದಲ್ಲಿ ಮೀಸಲಾತಿಯನ್ನು ಅನುಭವಿಸಿಕೊಂಡು ಬರುತ್ತಿವೆ. ಕೇಂದ್ರ ಸರ್ಕಾರ ಮಂಡಲ್‌ ವರದಿಯನ್ನು ಆಧರಿಸಿ 1990ರಲ್ಲಿ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಿತು. ಆದರೆ, ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ನೀಡಲಿಲ್ಲ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳು ಶೇ 32ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಪಡೆಯುತ್ತಿದ್ದಾರೆ.

ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗೆ ಅನುಗುಣವಾಗಿ ‘ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ–1993’ ಅನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯಲ್ಲಿ ಮೂರು ಹಂತದ ಅಂದರೆ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಎಂಬ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. ಈ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಯಿತು.

ಕೇವಲ ಈ ಸಂಸ್ಥೆಗಳ ಸ್ಥಾನಗಳಿಗೆ ಮಾತ್ರವಲ್ಲ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೂ ಮೀಸಲಾತಿ ನೀಡಲಾಗಿದೆ. ಮುಂದುವರೆದು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪ‍ಂಚಾಯಿತಿಗಳಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಈ ರೀತಿಯಾಗಿ ಹಿಂದುಳಿದ ವರ್ಗಗಳು ಸಹ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿಯನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಶೇ 18, ಪರಿಶಿಷ್ಟ ಪಂಗಡ ಶೇ 5 ಮತ್ತು ಹಿಂದುಳಿದ ವರ್ಗಗಳಿಗೆ ಶೇ 33ರಷ್ಟು ಮೀಸಲಾತಿ ನೀಡಲಾಗಿತ್ತು. ಸುಪ್ರೀಂ ಕೋರ್ಟ್‌ 2010ರಲ್ಲಿ ಕೆ.ಕೃಷ್ಣಮೂರ್ತಿ ಪ್ರಕರಣದಲ್ಲಿ ವಿಧಿಸಿರುವ ಶೇ 50ರ ಮಿತಿಯನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ನೀಡಿರುವ ಒಟ್ಟು ಶೇ 56ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿತು. ಅದರ ಪರಿಣಾಮವಾಗಿ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿಯನ್ನು ಶೇ 33ರಿಂದ ಶೇ 27ಕ್ಕೆ ಇಳಿಸಿತು.

ಮೀಸಲಾತಿಯ ಜೊತೆಗೆ ಇತರೆ ಕಾನೂನುಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಪರಿಣಾಮವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜನರ ಸ್ಥಿತಿಗಳಲ್ಲಿ ಅನೇಕ ಸುಧಾರಣೆಗಳನ್ನು ಹಾಗೂ ಅಭಿವೃದ್ಧಿಯನ್ನು ಕಾಣಬಹುದು. ಇಂದು ಈ ವರ್ಗದ ಜನ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಹಾಗೂ ರಂಗಗಳಲ್ಲಿ ಪ್ರವೇಶಿಸಿದ್ದಾರೆ. ಒಂದಷ್ಟು ಜನರಿಗೆ ಶಿಕ್ಷಣ, ಉದ್ಯೋಗ, ಆಡಳಿತದಲ್ಲಿ ಪ್ರಾತಿನಿಧ್ಯ, ಮನೆ, ಜಮೀನು ಇತ್ಯಾದಿಗಳು ಲಭ್ಯವಾಗಿ ಈ ವರ್ಗಗಳಿಗೆ ಜೀವನದಲ್ಲಿ ಸ್ವಲ್ಪಮಟ್ಟದ ಸುಧಾರಣೆಯನ್ನು ಕಾಣಬಹುದು. ಆದರೂ ಸಾಧಿಸಬೇಕಾದ್ದು ಬೆಟ್ಟದಷ್ಟಿದೆ.

ಪರಿಸ್ಥಿತಿ ಹೀಗಿರುವಾಗ ಸುಪ್ರೀಂ ಕೋರ್ಟ್‌ 2021ರಲ್ಲಿ ವಿಕಾಸ್ ಕೃಷ್ಣರಾವ್ ಗಾವಳಿ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಗೊಳಿಸಿದೆ. ಮುಂದುವರೆದು ಯಾರು ಹಿಂದುಳಿದವರು ಎಂಬುದನ್ನು ಪರಿಶೀಲಿಸಿ ಗುರುತಿಸುವ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಅಲ್ಲಿಯವರೆಗೆ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟಿರುವ ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳೆಂದು ಪರಿಗಣಿಸಿ ಚುನಾವಣೆಗಳನ್ನು ನಡೆಸಲೂ ಆದೇಶಿಸಿದೆ.

ತದನಂತರ ರಾಹುಲ್ ರಮೇಶ್‌ ವಾಘ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ವಿಕಾಸ್ ಕೃಷ್ಣರಾವ್‌ ಪ್ರಕರಣದಲ್ಲಿ ನೀಡಿರುವ ತೀರ್ಪು ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತದೆ ಎಂಬುದಾಗಿ ಸ್ಪಷ್ಟಪಡಿಸಿದೆ.

ಇಂದು ಕರ್ನಾಟಕ ರಾಜ್ಯದ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ‍ಪಂಚಾಯಿತಿಗಳ ಅವಧಿ ಮುಗಿದು ಒಂದು ವರ್ಷಕ್ಕಿಂತ ಹೆಚ್ಚು ಸಮಯವಾಗಿದೆ. ಈ ಸಂಸ್ಥೆಗಳಲ್ಲಿ ಕೋವಿಡ್ ಕಾರಣ ಚುನಾವಣೆ ಮುಂದೂಡಲಾಗುತ್ತಿದೆ. ಚುನಾವಣೆ ನಡೆಸೋಣವೆಂದರೆ ಸುಪ್ರೀಂ ಕೋರ್ಟ್‌ ತೀರ್ಪು ಅಡ್ಡಿ ಬರುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಬಿಸಿ ಮೀಸಲಾತಿ ಚರ್ಚೆಗೆ ಒಳಗಾಗಿದೆ.

ಫಲಾನುಭವಿಗಳು ನಿಜವಾಗಿಯೂ ಹಿಂದುಳಿದವರೇ, ಯಾವ ಜಾತಿಯನ್ನು ಯಾವ ಪಟ್ಟಿಗೆ ಸೇರಿಸಬೇಕು, ಯಾವ ಜಾತಿಯನ್ನು ಯಾವ ಪ್ರವರ್ಗಕ್ಕೆ ಸೇರಿಸಬೇಕು ಮತ್ತು ಯಾವ ಜಾತಿಗಳನ್ನು ಹಿಂದುಳಿದ ಪಟ್ಟಿಯಿಂದ ತೆಗೆಯಬೇಕು ಎಂಬ ವಿಷಯದಲ್ಲಿ ವೈಜ್ಞಾನಿಕ ಮಾನದಂಡಗಳನ್ನು ರೂಪಿಸಬೇಕಾದರೆ ಅಗತ್ಯವಾಗಿ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ.

ಆದರೆ, ಇಂದು ನಮ್ಮಲ್ಲಿ ಅಗತ್ಯ ಮಾಹಿತಿ ಇಲ್ಲ. ಬ್ರಿಟಿಷರ ಆಡಳಿತದಲ್ಲಿ ಭಾರತ ದೇಶದಲ್ಲಿ ಜನಗಣತಿ ಪ‍್ರಾರಂಭವಾಯಿತು. 1881ರಿಂದ 1931ರವರೆಗೆ ಜನಗಣತಿ ಹಾಗೂ ಜಾತಿ ಗಣತಿ ನಡೆಸಲಾಯಿತು. ಸ್ವಾತಂತ್ರ್ಯ ಬಂದ ನಂತರ 1951ರಿಂದ 2011ರವರೆಗೆ ನಡೆದಿರುವ ಜನಗಣತಿಯ ಜೊತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಜಾತಿ ಗಣತಿಯನ್ನು ನಡೆಸಲಾಗಿದೆ. ಆದರೆ ಹಿಂದುಳಿದ ವರ್ಗಗಳ ಹಾಗೂ ಇತರೆ ಜಾತಿಗಳ ಗಣತಿಯನ್ನು ನಡೆಸಲಿಲ್ಲ.

ಮಂಡಲ್ ವರದಿ ಜಾರಿಗೆ ಬಂದ ನಂತರ ಹಿಂದುಳಿದ ವರ್ಗಗಳ ಜಾತಿ ಗಣತಿ ನಡೆಸಬೇಕೆಂಬ ಧ್ವನಿ ಕೇಳಿಬಂತು. ಆದರೆ, ಕೇಂದ್ರ ಸರ್ಕಾರ ಒಂದಲ್ಲ ಒಂದು ನೆಪವೊಡ್ಡಿ ಜಾತಿ ಗಣತಿ ನಡೆಸಿಲ್ಲ. 2011ರಲ್ಲಿ ಕೇಂದ್ರ ಸರ್ಕಾರ ಸುಮಾರು ₹5,000 ಕೋಟಿ ಹಣ ಖರ್ಚು ಮಾಡಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಿದೆ.

ಆದರೆ, ಕೇಂದ್ರ ಸರ್ಕಾರ ಹಲವು ನೆಪಗಳನ್ನು ನೀಡಿ ಈ ಸಮೀಕ್ಷೆಯನ್ನು ಬಿಡುಗಡೆ ಮಾಡಲಿಲ್ಲ. 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿಯನ್ನು ಕೋವಿಡ್‌ ಕಾರಣದಿಂದ ಮುಂದೂಡಲಾಗಿದೆ. ಮುಂದೆ ನಡೆಯಬೇಕಾಗಿರುವ ಜನಗಣತಿಯ ಜೊತೆಗೆ ಜಾತಿ ಗಣತಿಯ ನಡೆಸಬೇಕೆಂದು ಜನರ ಒತ್ತಡವಿದೆ. ಆದರೆ, ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹಿಂದುಳಿದ ವರ್ಗಗಳಿಗೆ ಈ ಹಿಂದೆ ನೀಡಿರುವ ಮೀಸಲಾತಿಯನ್ನು ಮುಂದುವರಿಸಬೇಕಾಗಿದೆ.ಮಾಹಿತಿ ಸಂಗ್ರಹವಾಗುವವರೆಗೂ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಈ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ಪುನರ್‌ ಪರಿಶೀಲಿಸಬೇಕಾಗಿದೆ.

ನಮ್ಮ ಸಂವಿಧಾನದ ಅನುಚ್ಛೇದ 246ರಲ್ಲಿ ಜನಗಣತಿ ನಡೆಸುವುದನ್ನು ಕೇಂದ್ರ ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಒಳಪಡಿಸಲಾಗಿದೆ. ರಾಜ್ಯ ಸರ್ಕಾರಗಳಿಗೆ ಜನಗಣತಿ ಮತ್ತು ಜಾತಿ ಗಣತಿ ನಡೆಸುವ ಅಧಿಕಾರವಿಲ್ಲ. ಆದರೆ, ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಇದುವರೆಗೂ ಸರ್ಕಾರ ಸ್ವೀಕರ ಮಾಡಲೇ ಇಲ್ಲ. ಕೂಡಲೇ ಈ ಸಮೀಕ್ಷೆ ವರದಿಯನ್ನು ಸ್ವೀಕಾರ ಮಾಡಿ, ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿ, ಹಿಂದುಳಿದ ವರ್ಗಗಳ ಹಿತ ಕಾಪಾಡುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

ಅಧಿಕಾರ ವಿಕೇಂದ್ರೀಕರಣ ಭಾರತ ಸಂವಿಧಾನದ ಮೂಲ ತತ್ವ. ಅಧಿಕಾರ ವಿಕೇಂದ್ರೀಕರಣದಿಂದ ಪಾರದರ್ಶಕತೆಯನ್ನು ಸಾಧಿಸಬಹುದು ಮತ್ತು ಗ್ರಾಮಾಂತರ ಪ್ರದೇಶದ ಪ್ರಗತಿಯನ್ನು ಸಾಧಿಸಬಹುದು ಎಂಬ ಸತ್ಯವನ್ನು ಅನುಭವದಿಂದ ಕಂಡುಕೊಳ್ಳಲಾಯಿತು. ಜನರು ಸರ್ಕಾರದ ಎಲ್ಲ ಹಂತದ ತೀರ್ಮಾನಗಳ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಬಲಿಷ್ಠವಾದ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ‘ಕಾಲ ಕಾಲಕ್ಕೆ ಚುನಾವಣೆಗಳು ನಡೆಯಬೇಕು ಮತ್ತು ಅದು ಸಂವಿಧಾನದ ಮೂಲ ತತ್ವ’ ಎಂದು ಇಂದಿರಾಗಾಂಧಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಘೋಷಿಸಿದೆ. ಇಲ್ಲವೆಂದರೆ ಅತಿವೃಷ್ಟಿ, ಅನಾವೃಷ್ಟಿ, ಯುದ್ಧ, ತುರ್ತು ಪರಿಸ್ಥಿತಿ ಇತ್ಯಾದಿಗಳನ್ನು ನೆಪ ಮಾಡಿ, ಚುನಾವಣೆಗಳನ್ನು ಮುಂದೂಡಲಾಗುತ್ತಿತ್ತು.

ವಿಕಾಸ್‌ ಕೃಷ್ಣರಾವ್ ಪ್ರಕರಣದ ತೀರ್ಪನ್ನು ನೆಪಮಾಡಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುವುದು ಅಥವಾ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದೆ, ಸಾಮಾನ್ಯ ಕ್ಷೇತ್ರಗಳೆಂದು ಪರಿಗಣಿಸಿ ಚುನಾವಣೆಗಳನ್ನು ನಡೆಸುವುದು ಸಂವಿಧಾನದ ಮೂಲ ತತ್ವವಾದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ದ್ರೋಹ ಬಗೆದಂತೆ. ಕರ್ನಾಟಕ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಮತ್ತು ಹಿಂದುಳಿದ ವರ್ಗಗಳ ಹಿತವನ್ನು ಕಾಪಾಡುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

––––––

ಏನಿದು ಮೂರು ಹಂತದ ಪರಿಶೀಲನೆ?

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮೊದಲು ಮೂರು ಹಂತದ ಪರಿಶೀಲನೆ ನಡೆಸುವಂತೆ ಕೆ. ಕೃಷ್ಣಮೂರ್ತಿ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ 2010ರ ಮೇ 11ರಂದು ನಿರ್ದೇಶನ ನೀಡಿತ್ತು. ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಸುಪ್ರೀಂಕೋರ್ಟ್‌ 2022ರ ಜನವರಿ 19ರಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾಕೀತು ಮಾಡಿದೆ. ನ್ಯಾಯಾಲಯ ಹೇಳಿರುವ ಮೂರು ಹಂತದ ಪರಿಶೀಲನೆಯು ಹೀಗಿದೆ...


1) ಪ್ರತ್ಯೇಕವಾದ ಆಯೋಗವೊಂದನ್ನು ನೇಮಕ ಮಾಡಿ, ಅದರ ಮೂಲಕ ಆ ಸಮಯದಲ್ಲಿ ರಾಜ್ಯದೊಳಗಿನ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ನಿಖರ ಅಂಕಿಅಂಶಗಳೊಂದಿಗೆ ವಿಸ್ತೃತವಾದ ವಿಚಾರಣೆ ನಡೆಸಿ, ವರದಿ ಪಡೆಯುವುದು

2) ಆಯೋಗದ ಶಿಫಾರಸುಗಳನ್ನು ಆಧರಿಸಿ ಸ್ಥಳೀಯ ಸಂಸ್ಥೆಗಳವಾರು ಪ್ರತ್ಯೇಕವಾಗಿ ವಿವಿಧ ಸಮುದಾಯಗಳಿಗೆ ಮೀಸಲಾತಿಯನ್ನು ನಿಗದಿ ಮಾಡುವುದು

3) ಇಂತಹ ಯಾವುದೇ ಪ್ರಕರಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿಡುವ ಒಟ್ಟು ಸ್ಥಾನಗಳ ಸಂಖ್ಯೆಯು ಶೇಕಡ 50ರಷ್ಟನ್ನು ಮೀರದಂತೆ ನಿಯಂತ್ರಿಸುವುದು

ಲೇಖಕರು: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT