ಬುಧವಾರ, ಆಗಸ್ಟ್ 10, 2022
24 °C

ಆಳ–ಅಗಲ: ದೇಶದ ಎಲ್ಲೆಲ್ಲೂ ‘ಆಪರೇಷನ್‌ ಕಮಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿ ಇದ್ದ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿಯ ಮಹಾ ವಿಕಾಸ ಆಘಾಡಿ ಸರ್ಕಾರವು ಪತನವಾಗಿದೆ. ಶಿವಸೇನಾದ ಬಹುಸಂಖ್ಯಾತ ಶಾಸಕರ ಬೆಂಬಲ ಹೊಂದಿರುವ ಏಕನಾಥ ಶಿಂಧೆ ನಾಯಕತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆಯದಿದ್ದರೂ ‘ಆಪರೇಷನ್‌ ಕಮಲ’ ಮೂಲಕ (ಬೇರೆ ಪಕ್ಷಗಳ ಶಾಸಕರನ್ನು ಬಿಜೆಪಿಗೆ ಸೆಳೆದುಕೊಂಡು ಬಹುಮತ ಸೃಷ್ಟಿ) ಬಿಜೆಪಿ ಹಲವು ರಾಜ್ಯಗಳ ಆಡಳಿತ ಚುಕ್ಕಾಣಿ ಹಿಡಿದಿದೆ.

ಮೊತ್ತ ಮೊದಲಿಗೆ, ಕರ್ನಾಟಕದಲ್ಲಿ 2008ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ‘ಆಪರೇಷನ್ ಕಮಲ’ ಮಾದರಿಯನ್ನು ಆರಂಭಿಸಿದ್ದರು. ನಂತರ ವಿವಿಧ ರಾಜ್ಯಗಳಲ್ಲಿ ಈ ತಂತ್ರ ಬಳಸಿ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸಲಾಗಿದೆ. ಕೆಲವೆಡೆ ಫಲಿತಾಂಶ ಬರುತ್ತಿದ್ದಂತೆಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷದ ಶಾಸಕರು, ಪ್ರಾದೇಶಿಕ ಪಕ್ಷಗಳ ಶಾಸಕರು ಮತ್ತು ಪಕ್ಷೇತರ ಶಾಸಕರನ್ನು ತನ್ನತ್ತ ಸೆಳೆದು ಬಿಜೆಪಿ ಸರ್ಕಾರ ರಚಿಸಿದೆ. ಕರ್ನಾಟಕ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದ್ದ ಬೇರೆ ಪಕ್ಷಗಳು/ಮೈತ್ರಿಕೂಟಗಳ ಸರ್ಕಾರವನ್ನು ಉರುಳಿಸಿ ಸರ್ಕಾರ ರಚಿಸಿದೆ. ರಾಜಸ್ಥಾನದಲ್ಲಿ ಬಿಜೆಪಿ ನಡೆಸಿದ ಇಂತಹದ್ದೇ ಪ್ರಯತ್ನ ಫಲ ನೀಡಲಿಲ್ಲ.

ಆಪರೇಶನ್ ಕಮಲ ಕರ್ನಾಟಕದಲ್ಲೇ ಶುರು

ಚುನಾಯಿತ ಸರ್ಕಾರಗಳನ್ನು ಉರುಳಿಸಿ ‘ಕೇಸರಿ ಪತಾಕೆ’ ಹಾರಿಸಲು ಬಿಜೆಪಿ ವರಿಷ್ಠರು ಬಳಸುತ್ತಿರುವ ‘ಆಪರೇಷನ್‌ ಕಮಲ’ದ ಕತ್ತರಿಯನ್ನು ಕೊಟ್ಟಿದ್ದೇ ಕರ್ನಾಟಕದ ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ.

2008ರಲ್ಲಿ 110 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಅಧಿಕಾರದ ಅಂಚಿಗೆ ಬಂದಿತ್ತು. ಅಂದು ಪಕ್ಷೇತರ ಶಾಸಕರನ್ನು ಕರೆತಂದು ಸರ್ಕಾರ ರಚಿಸಿದ್ದು ಆಗ ಗಣಿ ಉದ್ಯಮಿಯಾಗಿದ್ದ ಗಾಲಿ ಜನಾರ್ದನ ರೆಡ್ಡಿ. ಅತಂತ್ರ ಸರ್ಕಾರ ಉರುಳಿಸಲು ಆಗ ಯಡಿಯೂರಪ್ಪ ಅವರು ಆಪರೇಷನ್‌ ಕಮಲ ನಡೆಸಿ ಕಾಂಗ್ರೆಸ್‌–ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಸೆಳೆದರು. ಹೀಗಾಗಿ 14 ಉಪಚುನಾವಣೆಗಳು ಎರಡೇ ವರ್ಷದ ಅವಧಿಯಲ್ಲಿ ನಡೆದು ಹೋದವು. ಯಡಿಯೂರಪ್ಪ ಬಹುಮತ ಪಡೆದರಾದರೂ ಲೋಕಾಯುಕ್ತ ವರದಿಯ ಕಾರಣಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಆಗಲಿಲ್ಲ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿತ್ತು. ಅಧಿಕಾರ ಹಿಡಿಯಲೇಬೇಕು ಎಂಬ ಹಪಾಹಪಿಯಲ್ಲಿದ್ದ ಯಡಿಯೂರಪ್ಪ, ಆಪರೇಷನ್ ಕಮಲವನ್ನೇ ನೆಚ್ಚಿಕೊಂಡು ಅಧಿಕಾರದ ಗಾದಿಯನ್ನೂ ಹಿಡಿದರು. ಆದರೆ, ಮುಂದುವರಿಯಲು ಸಾಧ್ಯವಾಗದೇ ರಾಜೀನಾಮೆ ಕೊಟ್ಟರು. ಹೀಗಾಗಿ, ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಆದರೂ ಛಲ ಬಿಡದ ಯಡಿಯೂರಪ್ಪ, ‘ಆಪರೇಷನ್ ಕಮಲ’ ಕಾರ್ಯಾಚರಣೆಯ ಜಾಡನ್ನು ಬಿಡಲೇ ಇಲ್ಲ. ಶಾಸಕರನ್ನು ಸೆಳೆಯುವ ತಂತ್ರಗಾರಿಕೆಯನ್ನು ಹಗಲು–ರಾತ್ರಿಯೆನ್ನದೇ ನಡೆಸುತ್ತಲೇ ಇದ್ದರು.

2019ರಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದಂತೆ ಆಪರೇಷನ್‌ ಕಮಲ ಹುರಿಗಟ್ಟಿತು. ಒಂದೆಡೆ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಮತ್ತೊಂದೆಡೆ ಬಿಜೆ‍ಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷರಿಂದ ನಿಯೋಜಿತರಾಗಿದ್ದ ಸಿ.ಪಿ. ಯೋಗೇಶ್ವರ್‌, ಮೈತ್ರಿ ಸರ್ಕಾರಕ್ಕೆ ಮರ್ಮಾಘಾತ ಕೊಟ್ಟೇ ಬಿಟ್ಟರು.

ಆರು–ಏಳು–ಎಂಟು ಶಾಸಕರು ಕಾಂಗ್ರೆಸ್–ಜೆಡಿಎಸ್ ತೊರೆಯಲಿದ್ದಾರೆ ಎಂಬ ವದಂತಿ ಹರಿದಾಡುತ್ತಲೇ ಇತ್ತು. ಯಾವಾಗ, ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ, ಜೆಡಿಎಸ್‌ನ ಎಚ್.ವಿಶ್ವನಾಥ್ ಅವರು ಆಪರೇಷನ್‌ಗೆ ಕೊರಳೊಡ್ಡಿದರೋ ಆಗ ಪಕ್ಷ ತೊರೆಯುವ ಶಾಸಕರ ಬಲ 17ಕ್ಕೆ ಏರಿತು. ದೇವೇಂದ್ರ ಫಡಣವೀಸ್ ನೇತೃತ್ವದ ಬಿಜೆಪಿ ಸರ್ಕಾರ ಮಹಾರಾಷ್ಟ್ರದಲ್ಲಿತ್ತು. ಎಲ್ಲ ಅತೃಪ್ತ ಶಾಸಕರನ್ನು ಆಗ ಏರ್‌ಲಿಫ್ಟ್ ಮಾಡಿ, ಮುಂಬೈಗೆ ಕರೆದೊಯ್ಯಲಾಯಿತು. ಕ್ಷಣಕ್ಷಣದ ನಾಟಕೀಯ ಬೆಳವಣಿಗೆ, ಅಹೋರಾತ್ರಿ ಕೋರ್ಟ್ ವಿಚಾರಣೆ ಎಲ್ಲವೂ ಮುಗಿದು, ಆಪರೇಷನ್‌ ಕಮಲಿಗರ ಕೈ ಮೇಲಾಯಿತು. ಕುಮಾರಸ್ವಾಮಿ ಸರ್ಕಾರ ಪತನಗೊಂಡಿತು. ಆದರೆ, ಆಪರೇಷನ್‌ ಕಮಲ ಅಸ್ತ್ರವನ್ನು ಬಿಜೆಪಿ ವರಿಷ್ಠರಿಗೆ ಕೊಟ್ಟ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯಲಾಗಲಿಲ್ಲ. ಅದೇ ‘ಕತ್ತರಿ’ ಬಳಸಿದ ವರಿಷ್ಠರು, ಯಡಿಯೂರಪ್ಪ ಅವರನ್ನು ಖೆಡ್ಡಾಕ್ಕೆ ಕೆಡವಿ, ಪದಚ್ಯುತಗೊಳಿಸಿದ್ದು ಇತಿಹಾಸ.

ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ 60 ಸ್ಥಾನಗಳಿದ್ದು, ಸ್ಪಷ್ಟ ಬಹುಮತಕ್ಕೆ 31 ಸದಸ್ಯಬಲದ ಅಗತ್ಯವಿದೆ. 2014ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 44 ಸ್ಥಾನಗಳಲ್ಲಿ ಆರಿಸಿ ಬಂದು ಸರ್ಕಾರ ರಚಿಸಿತ್ತು. ಸರ್ಕಾರ ರಚನೆಯಾದ ಕೆಲವೇ ತಿಂಗಳಲ್ಲಿ ಕಾಂಗ್ರೆಸ್‌ ಶಾಸಕ ಪೆಮಾ ಖಂಡು ಪಕ್ಷವನ್ನು ತೊರೆದು ಪಿಪಿಎ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದರು. ಅವರ ಜತೆಯಲ್ಲಿ ಕಾಂಗ್ರೆಸ್‌ನಿಂದ ಹೊರನಡೆದಿದ್ದ ಕೆಲವು ಶಾಸಕರೊಂದಿಗೆ ಬಿಜೆಪಿ ನೇತೃತ್ವದ ‘ಎನ್‌ಎಡಿಎ’ ಮೈತ್ರಿಕೂಟವನ್ನು ಸೇರಿದರು.

2016ರ ಜುಲೈನಲ್ಲಿ ಮತ್ತದೇ ಶಾಸಕರೊಂದಿಗೆ ಕಾಂಗ್ರೆಸ್‌ಗೆ ವಾಪಸಾದ ಖಂಡು ಮುಖ್ಯಮಂತ್ರಿ ಹುದ್ದೆ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಅದೇ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ನಲ್ಲಿದ್ದ 44 ಶಾಸಕರ ಪೈಕಿ 43 ಜನರೊಂದಿಗೆ ಪಕ್ಷವನ್ನು ತೊರೆದು, ಮತ್ತೆ ಪಿಪಿಎ ಸೇರಿದರು. ಅಲ್ಲೂ ಉಳಿಯದ ಖಂಡು ಅಕ್ಟೋಬರ್‌ನಲ್ಲಿ 33 ಶಾಸಕರೊಂದಿಗೆ ಬಿಜೆಪಿಗೆ ಹೋದರು. ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಸರ್ಕಾರ ರಚಿಸಿದರು. ಬಿಜೆಪಿ ಪಕ್ಷಾಂತರಿಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತು. 

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನಗಳಲ್ಲಿ ಆರಿಸಿಬಂದು, ಸರ್ಕಾರ ರಚಿಸಿದೆ.

ಮಣಿಪುರ

ಅರವತ್ತು ಸ್ಥಾನಗಳಿರುವ ಮಣಿಪುರ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತಕ್ಕೆ 31 ಸ್ಥಾನಗಳ ಅಗತ್ಯವಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 21 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಲಿಲ್ಲ. 

ಎನ್‌ಪಿಪಿಯ ನಾಲ್ವರು ಶಾಸಕರು ಮತ್ತು ಐವರು ಪಕ್ಷೇತರ ಶಾಸಕರನ್ನು ಎನ್‌ಡಿಎ ಮಿತ್ರ‍ಪಕ್ಷಗಳಾಗಿ ಸೇರಿಸಿಕೊಂಡಿತು. ಹೀಗಿದ್ದೂ ಸ್ಪಷ್ಟ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇತ್ತು. ಕಾಂಗ್ರೆಸ್‌ ಶಾಸಕರೊಬ್ಬರನ್ನು ತನ್ನತ್ತ ಸೆಳೆದುಕೊಂಡು ಸರ್ಕಾರ ರಚಿಸಿತು. ಕಾಂಗ್ರೆಸ್‌ನಿಂದ ಮೊದಲೇ ಹೊರಬಂದಿದ್ದ ಬಿರೆನ್‌ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿತು. ನಂತರದ ದಿನಗಳಲ್ಲಿ ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿ ಸೇರಿದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ.

ಮೇಘಾಲಯ

ಮೇಘಾಲಯ ವಿಧಾನಸಭೆಯಲ್ಲಿ 60 ಸ್ಥಾನಗಳಿವೆ. ಸರ್ಕಾರ ರಚಿಸಲು 31 ಸದಸ್ಯರ ಬೆಂಬಲದ ಅಗತ್ಯವಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ. 21 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌, ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 19 ಸ್ಥಾನಗಳನ್ನು ಗೆದ್ದಿದ್ದ ಎನ್‌ಪಿಪಿ ಎರಡನೇ ಅತಿದೊಡ್ಡ ಪಕ್ಷವಾಗಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಆರಿಸಿ ಬಂದಿದ್ದು ಎರಡು ಕ್ಷೇತ್ರಗಳಲ್ಲಿ ಮಾತ್ರ. ಆದರೆ, 19 ಸ್ಥಾನಗಳನ್ನು ಗೆದ್ದಿದ್ದ ಎನ್‌ಪಿಪಿಯನ್ನು ಬಿಜೆಪಿಯು ಎನ್‌ಡಿಎಯ ಭಾಗವಾಗಿ ಸೇರಿಸಿಕೊಂಡಿತು. ಜತೆಗೆ ಪಕ್ಷೇತರ ಶಾಸಕರ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿತು. ಎನ್‌ಪಿಪಿ ಅಧ್ಯಕ್ಷ ಕಾನ್ರಾಡ್‌ ಸಂಗ್ಮಾ ಮುಖ್ಯಮಂತ್ರಿಯಾದರು. ಬಿಜೆಪಿಯ ಒಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡಲಾಯಿತು. ನಂತರದಲ್ಲಿ ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿ ಸೇರಿದರು.

ಗೋವಾ

ಗೋವಾ ವಿಧಾನಸಭೆಗೆ 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ. 40 ಸ್ಥಾನಗಳ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿತ್ತು. 17 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿದ್ದರೆ, 13 ಕ್ಷೇತ್ರಗಳಲ್ಲಿ ಆರಿಸಿ ಬಂದಿದ್ದ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ನಾಲ್ಕು ಶಾಸಕರ ಬೆಂಬಲದ ಕೊರತೆ ಇತ್ತು. ಬಿಜೆಪಿಗೆ ಎಂಟು ಶಾಸಕರ ಕೊರತೆ ಇತ್ತು. ಆದರೆ ತಲಾ ಮೂರು ಸ್ಥಾನಗಳಲ್ಲಿ ಆರಿಸಿ ಬಂದಿದ್ದ ಎಂಜಿಪಿ, ಜಿಎಫ್‌ಪಿ ಪಕ್ಷಗಳ ಬೆಂಬಲವನ್ನು ಬಿಜೆಪಿ ಪಡೆಯಿತು. ಜತೆಗೆ ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚಿಸಿತು. 2022ರಲ್ಲಿ ವಿಧಾನಸಭೆಯ ಅವಧಿ ಮುಗಿಯುವಷ್ಟರಲ್ಲಿ ಕಾಂಗ್ರೆಸ್‌ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಶಾಸಕರಲ್ಲಿ ಹಲವರು ಬಿಜೆಪಿ ಸೇರಿದ್ದರು. 2022ರ ಚುನಾವಣೆಯ ಹೊತ್ತಿಗೆ ಗೋವಾ ವಿಧಾನಸಭೆಯಲ್ಲಿ ಬಿಜೆಪಿಯ ಸ್ವಂತ ಬಲ 27ಕ್ಕೆ ಏರಿತ್ತು. 17 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ 15 ಶಾಸಕರು ಪಕ್ಷ ಬದಲಿಸಿದ್ದರು. ಕಾಂಗ್ರೆಸ್‌ನ ಬಲ ಎರಡಕ್ಕೆ ಕುಸಿದಿತ್ತು. 2022ರ ಚುನಾವಣೆಯಲ್ಲಿ ಬಿಜೆಪಿಯ ಸ್ವಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿತು.

ಮಧ್ಯಪ್ರದೇಶ

2018ರಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರ ಹಿಡಿಯಿತು. ಪಕ್ಷೇತರರು ಹಾಗೂ ಇತರರು ಸೇರಿದಂತೆ 114 ಶಾಸಕರ ಬೆಂಬಲದಿಂದ ಅಸ್ತಿತ್ವಕ್ಕೆ ಬಂದಿದ್ದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಕ್ಷದ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ 22 ಶಾಸಕರು ಬಂಡಾಯ ಎದ್ದರು. ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನವಾಯಿತು. ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಅವರು ಸರ್ಕಾರ ರಚನೆಗೆ ಹಕ್ಕುಮಂಡಿಸಿ, ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಎಸ್‌ಪಿ ಹಾಗೂ ಎಸ್‌ಪಿಯ ತಲಾ ಇಬ್ಬರು ಶಾಸಕರು ಸರ್ಕಾರವನ್ನು ಬೆಂಬಲಿಸಿದ್ದರಿಂದ ಚೌಹಾಣ್ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿತು. 28 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 19 ಕಡೆಗಳಲ್ಲಿ ಗೆದ್ದ ಬಿಜೆಪಿ, ಸರ್ಕಾರದ ಬುಡವನ್ನು ಗಟ್ಟಿ ಮಾಡಿಕೊಂಡಿತು. ಸಿಂಧಿಯಾ ಅವರು ಕೇಂದ್ರದಲ್ಲಿ ಸಚಿವರಾಗಿ ನೇಮಕವಾದರು. 

ಪುದುಚೇರಿ

ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು 2021ರ ವಿಧಾನಸಭಾ ಚುನಾವಣೆಯಲ್ಲಿ. ಅಚ್ಚರಿಯೆಂದರೆ, 2016ರ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಕ್ಷೇತ್ರವನ್ನು ಬಿಜೆಪಿ ಗೆದ್ದಿರಲಿಲ್ಲ. 33 ಸದಸ್ಯ ಬಲದ ವಿಧಾನಸಭೆಯಲ್ಲಿ ವಿ. ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 2021ರ ಚುನಾವಣೆಗೂ ಮುನ್ನವೇ ಆಡಳಿತ ಪಕ್ಷದ ಶಾಸಕರನ್ನು ಬಿಜೆಪಿ ಸೆಳೆಯಿತು. ಸರ್ಕಾರ ಅಲ್ಪಮತಕ್ಕೆ ಕುಸಿಯಿತು. ಮೂವರು ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ವಲಸೆ ಹೋದರು. ಚುನಾವಣೆಯ ಹೊಸ್ತಿಲಲ್ಲಿ ಇನ್ನೂ ಕೆಲವು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಸರ್ಕಾರ ಪತನವಾಯಿತು.  

ಕಾಂಗ್ರೆಸ್‌ನಿಂದ ಜಿಗಿದು ಬಂದ ಆರು ಶಾಸಕರು 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಬಂದರು. ಎನ್‌ಆರ್ ಕಾಂಗ್ರೆಸ್ ಎಂಬ ಪ್ರಾದೇಶಿಕ ಪಕ್ಷದೊಂದಿಗೆ ಬಿಜೆಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿತ್ತು. ಈ ಪಕ್ಷದಿಂದ 10 ಶಾಸಕರು ಆರಿಸಿಬಂದರು. ಕೇಂದ್ರ ಸರ್ಕಾರವು ಮೂವರು ಬಿಜೆಪಿ ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಿತು. ಹೀಗಾಗಿ ವಿಧಾನಸಭೆಯಲ್ಲಿ ಬಿಜೆಪಿಯ ಬಲ 9ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರ

ಚುನಾವಣಾಪೂರ್ವ ಮೈತ್ರಿಯೊಂದಿಗೆ 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಿದ್ದ ಬಿಜೆಪಿ ಹಾಗೂ ಶಿವಸೇನಾ ಮಧ್ಯೆ ಸರ್ಕಾರ ರಚನೆಗೆ ಒಮ್ಮತ ಮೂಡಲಿಲ್ಲ. ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಶಿವಸೇನಾ ಪಟ್ಟು ಹಿಡಿಯಿತು. ಇದಕ್ಕೆ ಒಪ್ಪದ ಬಿಜೆಪಿ, ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಅವರ ಬೆಂಬಲದೊಂದಿಗೆ ತರಾತುರಿಯಲ್ಲಿ ಸರ್ಕಾರ ರಚನೆಗೆ ಮುಂದಾಯಿತು. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್ ಹಾಗೂ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದರು. ಆದರೆ ಎನ್‌ಸಿಪಿ ಬೆಂಬಲ ಸಿಗದೇ ಸರ್ಕಾರ ಪತನವಾಯಿತು.

ಅಖಾಡಕ್ಕೆ ಇಳಿದ ಎನ್‌ಸಿಪಿ ವರಿಷ್ಠ ಶರದ್ ಪವಾರ್, ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್ ಮೈತ್ರಿಕೂಟ ರಚಿಸಿದರು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಎರಡೂವರೆ ವರ್ಷಗಳ ಬಳಿಕ ಶಿವಸೇನಾ ನಾಯಕ ಏಕನಾಥ ಶಿಂಧೆ ಅವರು ಪಕ್ಷದ ವಿರುದ್ಧ ಬಂಡಾಯ ಸಾರಿದ್ದರಿಂದ, ಠಾಕ್ರೆ ಸರ್ಕಾರ ಪತನವಾಗಿದ್ದು, ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿದೆ. ಶಿವಸೇನಾ ಪಕ್ಷವನ್ನು ಎರಡು ಹೋಳಾಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಶಿಂಧೆ ಅವರಿಗೆ ಸೇನಾದ 39 ಶಾಸಕರ ಬೆಂಬಲ ಇದೆ. ಶಿವಸೇನಾ ಮುಖ್ಯಸ್ಥ ಉದ್ಧವ್‌ ಜತೆಯಲ್ಲಿ ಕೆಲವೇ ಶಾಸಕರು ಮಾತ್ರ ಉಳಿದಿದ್ದಾರೆ.

 

ಆಧಾರ: ಚುನಾವಣಾ ಆಯೋಗದ ಫಲಿತಾಂಶಗಳು, ಪಿಟಿಐ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು