ಭಾನುವಾರ, ನವೆಂಬರ್ 28, 2021
20 °C

ಆಳ–ಅಗಲ: ಮುಂಗಾರು ವಿದಾಯಕ್ಕೆ ಮುನ್ನ ಆಕಾಶಕ್ಕೆ ಕನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದ ಬಹುತೇಕ ಪ್ರದೇಶಗಳಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಭಾರಿ ಮಳೆಯಾಗಿದೆ. 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ವಾಡಿಕೆಗಿಂತ ಹಲವು ಪಟ್ಟು ಹೆಚ್ಚು ಮಳೆಯಾಗಿದೆ. ಹೆಚ್ಚು ಮಳೆಯ ಕಾರಣ ಹಲವೆಡೆ ಪ್ರವಾಹ ಸ್ಥಿತಿ ತಲೆದೋರಿದೆ. ಕೇರಳದಲ್ಲಿ ಒಂದು ವಾರದಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ. ಸಾವು ನೋವೂ ಸಂಭವಿಸಿದೆ. ದೇಶದಾದ್ಯಂತ ಅಕ್ಟೋಬರ್ ತಿಂಗಳ ಮೊದಲ 18 ದಿನಗಳಲ್ಲಿ ವಾಡಿಕೆಗಿಂತ ಶೇ 21ರಷ್ಟು ಹೆಚ್ಚು ಮಳೆಯಾಗಿದೆ.

ಈ ಬಾರಿ ಮುಂಗಾರು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಾಡಿಕೆಯಷ್ಟೇ ಇತ್ತು. ಸಾಮಾನ್ಯವಾಗಿ ಅಕ್ಟೋಬರ್ 10ರ ವೇಳೆಗೆ ಮುಂಗಾರು ಕೊನೆಯಾಗುತ್ತದೆ. ಆದರೆ ಈ ಬಾರಿ ಮುಂಗಾರು ಅಕ್ಟೋಬರ್ 18ರವರೆಗೂ ವಿಸ್ತರಿಸಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ, ಎರಡೂ ಕಡೆ ವಾಯಭಾರ ಕುಸಿತ ಉಂಟಾದ ಕಾರಣ ಮಳೆ ತೀವ್ರತೆ ಪಡೆದಿತ್ತು. ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಬೇರೆಲ್ಲಾ ರಾಜ್ಯಗಳಲ್ಲಿ ಭಾರಿ ಮಳೆಯಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಪಂಜಾಬ್‌ನಲ್ಲಿ ವಿಪರೀತ ಪ್ರಮಾಣದ ಮಳೆಯಾಗಿದೆ.

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಗುಜರಾತ್‌ನಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ಭಾರಿ ಮಳೆಯಾಗಿತ್ತು. ಅಕ್ಟೋಬರ್ ಎರಡನೇ ವಾರದಲ್ಲಿ ಮಹಾರಾಷ್ಟ್ರದಲ್ಲಿ ಮತ್ತು ಈಗ ಮೂರನೇ ವಾರದಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದೆ.

ಹವಾಮಾನ ವೈಪರೀತ್ಯವೂ ಇದಕ್ಕೆ ಒಂದು ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ತೀವ್ರ ಸ್ವರೂಪದ ಮಳೆಯಾಗುವುದಿಲ್ಲ. ಆದರೆ 2016, 2017, 2019, 2020ರಲ್ಲಿ ಈ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. 2021ರಲ್ಲೂ ಇದು ಮುಂದುವರಿದಿದೆ. ಇದಕ್ಕೂ ಮುನ್ನ 2005 ಮತ್ತು 1997ರಲ್ಲಿ ಮಾತ್ರ ಅಕ್ಟೋಬರ್‌ನಲ್ಲಿ ಭಾರಿ ಮಳೆಯಾಗಿತ್ತು. ಹವಾಮಾನ ವೈಪರೀತ್ಯದ ಕಾರಣ ಮಳೆ ಮಾರುತಗಳ ವೇಗ, ದಿಕ್ಕು ಬದಲಾಗುತ್ತಿದೆ. ಈ ಕಾರಣದಿಂದಲೂ ಅಕ್ಟೋಬರ್‌ನಲ್ಲಿ ಹೆಚ್ಚು ಮಳೆಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ಭಾರಿ ಮಳೆ

ಭಾರಿ ಪ್ರಮಾಣದಲ್ಲಿ ಸುರಿಯುವ ಮಳೆಗೆ ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಲಾಗಿದೆ. ಮೊದಲನೆಯದ್ದು ಮೆಡಿಟರೇನಿಯನ್ ಪ್ರಾಂತ್ಯದಲ್ಲಿ ಉದ್ಭವಿಸುವ ಚಂಡಮಾರುತದ ಪ್ರಭಾವ. ಇದು ಭಾರತ ಉಪಖಂಡದ ಉತ್ತರ ಭಾಗಗಳಿಗೆ ಹಠಾತ್ ಮಳೆಯನ್ನು ತರುತ್ತದೆ. 

ಎರಡನೆಯದು ವಾಯುಭಾರ ಕುಸಿತ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ವರದಿಯಾಗಿದ್ದು, ಹೆಚ್ಚಿನ ಮಳೆಗೆ ಕಾರಣವಾಗಿದೆ. ಈ ಮಳೆ ಇದೇ 21ರವರೆಗೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅಕ್ಟೋಬರ್ 14ರಂದು ಅರಬ್ಬಿ ಸಮುದ್ರದಲ್ಲಿ ಶುರುವಾದ ವಾಯುಭಾರ ಕುಸಿತ ಕೇಂದ್ರವು ಕೇರಳ ಕರಾವಳಿಗೆ ಹತ್ತಿರವಿದೆ. ಹೀಗಾಗಿ ರಾಜ್ಯದ ದಕ್ಷಿಣದ ಭಾಗದ ಆರು ಜಿಲ್ಲೆಗಳು ಗುರುವಾರ 24 ಗಂಟೆಗಳಲ್ಲಿ 204 ಮಿಲಿಮೀಟರ್ ಮಳೆ ಎದುರಿಸುವಂತಾಯಿತು.

ಈ ಎರಡು ವಾಯುಭಾರ ಕುಸಿತ ಕೇಂದ್ರಗಳ ನಡುವೆ ಒಂದು ರೀತಿಯ ಸಂವಹನವಿದೆ ಎಂದು ಇಲಾಖೆ ಮಹಾನಿರ್ದೇಶಕ ಎಂ. ಮಹಾಪಾತ್ರಾ ಹೇಳಿದ್ದಾರೆ. ಈ ಪರಸ್ಪರ ಸಂವಹನ ಮತ್ತು ಭಾರಿ ಪ್ರಮಾಣದ ಗಾಳಿ ಬೀಸುವಿಕೆಗಳು ಕೇರಳದಲ್ಲಿ ಧಾರಾಕಾರ ಮಳೆ ಸುರಿಯಲು ಪ್ರಾಥಮಿಕ ಕಾರಣಗಳು ಎಂದು ಅವರು ವಿಶ್ಲೇಷಿಸಿದ್ದಾರೆ. 

ಮುಂಗಾರು ಹಿಂದೆ ಸರಿವ ಪ್ರಕ್ರಿಯೆ ತಡ

ಈ ವರ್ಷ ನೈರುತ್ಯ ಮುಂಗಾರು ಮಾರುತಗಳು ಹಿಂದೆ ಸರಿಯುವ ಪ್ರಕ್ರಿಯೆ ಗಮನಾರ್ಹವಾಗಿ ವಿಳಂಬವಾಗಿದೆ. ಪಶ್ಚಿಮ, ಉತ್ತರ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಈ ಪ್ರಕ್ರಿಯೆ ಈಗಾಗಲೇ ಮುಗಿದಿದ್ದರೆ, ದಕ್ಷಿಣ ಭಾಗದಲ್ಲಿ ಸಕ್ರಿಯವಾಗಿದೆ. ಹೀಗಾಗಿ ಕೇರಳ ಸೇರದಿಂತೆ ದಕ್ಷಿಣ ರಾಜ್ಯಗಳಲ್ಲಿ ಒಂದು ವಾರದಿಂದ ಗುಡುಗು ಸಹಿತ ಬಿರುಗಾಳಿ ಮಳೆ ಆಗುತ್ತಿದೆ.

ವಾಡಿಕೆಯಂತೆ ಪ್ರತೀ ವರ್ಷದ ಸೆಪ್ಟೆಂಬರ್ 17ಕ್ಕೆ ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಶುರುವಾಗಬೇಕು. ಆದರೆ ಈ ವರ್ಷ, ಅಕ್ಟೋಬರ್ 6ರಂದು ಆರಂಭವಾಗಿದೆ. ಹೀಗಾಗುತ್ತಿರುವುದು ಇದು ಸತತ 11ನೇ ವರ್ಷ. ಬದಲಾಗುತ್ತಿರುವ ಹವಾಮಾನದಿಂದಾಗಿ ದೇಶದಲ್ಲಿ ಮುಂಗಾರು ಹಿಂದೆ ಸರಿಯುವ ವೇಳಾಪಟ್ಟಿಯೂ ಬದಲಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಿಂದಿನ ಕೆಲವು ವರ್ಷಗಳ ದಾಖಲೆಗಳನ್ನು ಗಮನಿಸಿದರೆ, ಭಾರತದಲ್ಲಿ ಮುಂಗಾರು ಆರಂಭ ಮತ್ತು ವಾಪಸಾತಿಯು ನಿಗದಿತ ಅವಧಿಯಲ್ಲಿ ಆಗಿಲ್ಲ. 2017ರಲ್ಲಿ ವಾಡಿಕೆಗಿಂತ 22 ದಿನ ತಡವಾಗಿ ಮುಂಗಾರು ವಾಪಸಾಗಿತ್ತು.

ಪೆಸಿಫಿಕ್ ಮಹಾಸಾಗರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಎಲ್‌ನಿನೊ ವಿದ್ಯಮಾನ, ಹಿಂದೂ ಮಹಾಸಾಗರದ ದ್ವಿಧ್ರುವಿ (ಐಒಡಿ) ಮತ್ತು ಮ್ಯಾಡೆನ್ ಜೂಲಿಯನ್ ಆಸಿಲೇಷನ್‌ ಪರಿಸ್ಥಿತಿಗಳು ಅಕ್ಟೋಬರ್ ಮಳೆ ಮುಂದುವರಿಯಲು ಹಾಗೂ ಮುಂಗಾರು ತಡವಾಗಿ ವಾಪಸಾಗಲು ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಮಳೆ ಏಕೆ?

ಬೆಂಗಳೂರು: ‘ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರಿ ಮಳೆಯಾಯಿತು. ಇದರ ಪರಿಣಾಮ ರಾಜ್ಯದಲ್ಲೂ ಮಳೆ ನಿರಂತರವಾಗಿ ಸುರಿಯಿತು’ ಎಂದು ಹವಾಮಾನ ಇಲಾಖೆಯ ಹವಾಮಾನ ತಜ್ಞ ಸದಾನಂದ ಅಡಿಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡೂ ದಿಕ್ಕಿನಲ್ಲಿ ಸಂಭವಿಸಿದ ಹವಾಮಾನ ವೈಪರೀತ್ಯದಿಂದ ನೀರಾವಿ ಹೆಚ್ಚಾಗಿ, ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿತ್ತು. ಈ ವಾರದಲ್ಲಿ ವಾಯುಭಾರ ಕುಸಿತಗಳ ಚಲನೆ ನಿಧಾನಗತಿಯಲ್ಲಿ ಸಾಗಿದ್ದರಿಂದ ಸತತವಾಗಿ ಮಳೆಯಾಯಿತು. ರಾಜ್ಯದಲ್ಲಿ ಸದ್ಯಕ್ಕೆ ಮಳೆ ತಗ್ಗಿದ್ದು, ಮುಂದಿನ ಎರಡು ದಿನಗಳವರೆಗೆ ಮಳೆಯಾಗುವ ಸೂಚನೆಗಳಿಲ್ಲ’ ಎಂದು ಮಾಹಿತಿ ನೀಡಿದರು.

ಗಾಡ್ಗೀಲ್‌ ವರದಿ ಚರ್ಚೆ ಮುನ್ನೆಲೆಗೆ

ಕೇರಳದಲ್ಲಿ 2018ರಲ್ಲಿ ಸಂಭವಿಸಿದ್ದಂಥ ಪ್ರವಾಹವು ಮರುಕಳಿಸಬಹುದು ಎಂಬ ಭೀತಿಯಲ್ಲಿ ಕೇರಳದ ಜನರಿದ್ದಾರೆ. ಪರಿಸರ ತಜ್ಞ ಮಾಧವ್‌ ಗಾಡ್ಗೀಲ್‌ ನೇತೃತ್ವದ ಸಮಿತಿಯು 2011ರಲ್ಲಿ ನೀಡಿದ್ದ ವರದಿ ಅನುಷ್ಠಾನ ಮಾಡಿದ್ದಿದ್ದರೆ, ಈ ಮಟ್ಟದ ಪ್ರಾಕೃತಿಕ ವಿಕೋಪವನ್ನು ಕೇರಳ ಎದುರಿಸಬೇಕಿರಲಿಲ್ಲ ಎಂಬ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈಗ ಸಂಭವಿಸುತ್ತಿರುವ ವಿಪತ್ತುಗಳನ್ನು ಜನರೇ ‘ಆಮಂತ್ರಿಸಿದ ವಿಪತ್ತು’ ಎಂದು ಪರಿಸರ ತಜ್ಞರು ಕರೆದಿದ್ದಾರೆ.

ದೇಶದ ಪಶ್ಚಿಮ ಘಟ್ಟಗಳನ್ನು ಮೂರು ವಲಯಗಳನ್ನಾಗಿ ಮಾಧವ್‌ ಗಾಡ್ಗೀಲ್‌ ನೇತೃತ್ವದ ಸಮಿತಿ ವಿಂಗಡಿಸಿತ್ತು. ಅದರಲ್ಲಿ  ಶೇ 67ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿತ್ತು. ವರದಿಯ ಅನ್ವಯ ಕೇರಳದ ಶೇ 70ರಷ್ಟು ಭಾಗ ವಿವಿಧ ಪರಿಸರ ಸೂಕ್ಷ್ಮ ವಲಯಗಳ ಅಡಿ ಬರುತ್ತದೆ. ಈ ಹಿನ್ನೆಲೆಯಲ್ಲಿ, ಗಣಿಗಾರಿಕೆ, ಅರಣ್ಯ ನಾಶ, ಭೂಕಬಳಿಕೆ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಪ್ರವಾಸೋದ್ಯಮ ಚಟುವಟಿಕೆಗಳು, ಖಾಸಗಿ ಜನರಿಂದ ಅರಣ್ಯ ಖರೀದಿಯಂಥ ಚಟುವಟಿಕೆಗಳನ್ನು ಕೇರಳದಲ್ಲಿ ನಿಷೇಧಿಸುವಂತೆ ವರದಿಯಲ್ಲಿ ಹೇಳಲಾಗಿತ್ತು.

ಗಾಡ್ಗೀಲ್‌ ವರದಿಯಲ್ಲಿ ಪಟ್ಟಿಮಾಡಲಾಗಿದ್ದ ಪರಿಸರ ಸೂಕ್ಷ್ಮ ಪ್ರದೇಶಗಳ ವಲಯ–1ರಲ್ಲಿ ಇಡುಕ್ಕಿ ಮತ್ತು ವಯನಾಡು ಸ್ಥಾನ ಪಡೆದಿದ್ದವು. ಈ ತಾಲ್ಲೂಕುಗಳಲ್ಲೇ 2018ರ ಪ್ರವಾಹದಲ್ಲಿ ಅತಿ ಹೆಚ್ಚು ದುರಂತಗಳು ಸಂಭವಿಸಿದ್ದವು. 

ಕೇರಳದಲ್ಲಿ ಸಂಭವಿಸುತ್ತಿರುವ ಶೇ 67ರಷ್ಟು ಭೂಕುಸಿತಗಳು ಭೂಮಿಯ ಬಳಕೆಯ ಮಾದರಿಗಳಿಂದ ಎಂದು ಪರಿಸರ ತಜ್ಞ ಕೆ. ಸಹದೇವನ್‌ ಕೂಡಾ ಹೇಳಿದ್ದಾರೆ. ರಾಜ್ಯ ಸರ್ಕಾರವು 10 ವರ್ಷಗಳಷ್ಟು ಹಳೆಯದಾದ ಅಪಾಯ ವಲಯ ನಕ್ಷೆಯನ್ನು ಬಳಸುತ್ತಿದೆ. ಅತಿ ಸೂಕ್ಷ್ಮ ಅಪಾಯ ವಲಯಗಳನ್ನು ಈ ನಕ್ಷೆ ಗುರುತಿಸುವುದಿಲ್ಲ. ಪಶ್ಚಿಮ ಘಟ್ಟಗಳ ದುರ್ಬಳಕೆ ನಿರಂತರವಾಗಿ ನಡೆಯುತ್ತಿರುವುದರಿಂದ ಸದ್ಯದಲ್ಲೇ ಕೇರಳ ಪ್ರಾಕೃತಿಕ ವಿಕೋಪವನ್ನು ಎದುರಿಸಲಿದೆ ಎಂದು 2013ರಲ್ಲಿ ಗಾಡ್ಗೀಲ್‌ ಅವರು ಪುನರುಚ್ಚರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು