ಶನಿವಾರ, ಏಪ್ರಿಲ್ 1, 2023
23 °C

ಆಳ-ಅಗಲ: ಗಡಿನಾಡು ಕಾಸರಗೋಡಿನಲ್ಲಿ ಕನ್ನಡಕ್ಕೆ ಕುತ್ತು

ಚಿದಂಬರ ಪ್ರಸಾದ/ ಉದಯ ಯು. Updated:

ಅಕ್ಷರ ಗಾತ್ರ : | |

‘ಹೆಸರಿನಲ್ಲೇನಿದೆ ಬಿಡಿ...’ ಎಂದು ಕೆಲವೊಮ್ಮೆ ಲಘುವಾಗಿ ಹೇಳಿದರೂ ನಮ್ಮ ಹೆಸರನ್ನು ಯಾರಾದರೂ ತಪ್ಪಾಗಿ ಉಚ್ಚರಿಸಿದರೆ ಅದನ್ನು ತಿದ್ದದೆ ಬಿಡುವುದಿಲ್ಲ. ಅಂದಮೇಲೆ, ಹೆಸರಿನಲ್ಲಿ ಏನೋ ಇದೆ ಎಂಬುದು ಖಚಿತ. ನಮ್ಮಲ್ಲಿ ಸರ್ಕಾರಗಳು ಬದಲಾದಾಗ ಕೆಲವು ನಗರಗಳ, ಸಂಸ್ಥೆಗಳ ಹೆಸರು ಬದಲಾಗಿರುವುದು, ಅದರ ಪರ–ವಿರುದ್ಧ ತೀವ್ರ ಸ್ವರೂಪದ ಚರ್ಚೆಗಳು ನಡೆದಿರುವ ಉದಾಹರಣೆಗಳು ಸಾಕಷ್ಟಿವೆ. ಹೆಸರಿನೊಂದಿಗೆ ಬೆಸೆದುಕೊಂಡಿರುವ ಜನರ ಭಾವನೆಗಳು, ಸಾಂಸ್ಕೃತಿಕ ಹಿನ್ನೆಲೆಗಳು ಇದಕ್ಕೆಲ್ಲ ಕಾರಣ ಎಂದು ತಜ್ಞರು ಹೇಳುತ್ತಾರೆ.

ಆ ಕಾರಣಕ್ಕೇ ನಮ್ಮದಲ್ಲದ ಯಾವುದೋ ಹೆಸರನ್ನು ನಮ್ಮ ಮೇಲೆ ಹೇರಲು ಬಂದಾಗ ವಿರೋಧ ವ್ಯಕ್ತವಾಗುತ್ತದೆ. ಒಂದು ಕಾಲದಲ್ಲಿ ಅಚ್ಚ ಕನ್ನಡ ನಾಡಾಗಿದ್ದ, ಭಾಷಾವಾರು ರಾಜ್ಯ ವಿಂಗಡಣೆಯ ಸಂದರ್ಭದಲ್ಲಿ ಕೇರಳದ ಪಾಲಾದ ಕಾಸರಗೋಡು ಜಿಲ್ಲೆಯಲ್ಲಿ ಈಗ ‘ಹೆಸರಿನ ದಬ್ಬಾಳಿಕೆ’ ನಡೆಯುತ್ತಿದೆ ಎಂಬ ಚರ್ಚೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ.

ಕೇರಳದ ಉತ್ತರ ತುದಿಯ ಜಿಲ್ಲೆಯಾದ ಕಾಸರಗೋಡಿಗೆ ಹೆಚ್ಚು ನಂಟು ಇರುವುದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರಿನ ಜತೆಗೆ. ಶಿಕ್ಷಣ, ವ್ಯಾಪಾರ, ಆರೋಗ್ಯ ಸೇವೆಗಳು... ಹೀಗೆ ಕಾಸರಗೋಡಿನ ಹೆಚ್ಚಿನ ಜನರು ಅವಲಂಬಿಸುವುದು ಮಂಗಳೂರನ್ನೇ. ಸಂಸ್ಕೃತಿ ಮತ್ತು ಭಾಷೆಯ ಕೊಂಡಿಯೊಂದು ಐದು ದಶಕಕ್ಕೂ ಹೆಚ್ಚು ಕಾಲದಿಂದ ಈ ಸಂಬಂಧವನ್ನು ನಿರಂತರವಾಗಿ ಕಾಪಾಡಿಕೊಂಡು ಬಂದಿದೆ. ಆದ್ದರಿಂದ ಗಡಿಭಾಗದ ಅನೇಕ ಊರುಗಳ ಹೆಸರುಗಳು ಕನ್ನಡದವುಗಳೇ ಆಗಿವೆ. ಆದರೆ, ಈಗ ಕೇರಳ ಸರ್ಕಾರವು ಅವುಗಳನ್ನು ಬದಲಿಸುವ ಹುನ್ನಾರ ನಡೆಸುತ್ತಿದೆ ಎಂಬುದು ಚರ್ಚೆಯ ವಿಚಾರವಾಗಿದೆ.


ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್‌

ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕರ್ನಾಟಕದ ಅನೇಕ ಜನಪ್ರತಿನಿಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಡಿಜಿಲ್ಲೆಯಲ್ಲಿರುವ ಕನ್ನಡದ ಹೆಸರುಗಳನ್ನು ಬದಲಿಸದಂತೆ ಕೇರಳ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಅತ್ತ, ಹೆಸರುಗಳನ್ನು ಬದಲಿಸುವ ವಿಚಾರದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಅಂಥ ಪ್ರಸ್ತಾವವೂ ಸರ್ಕಾರದ ಮುಂದೆ ಇಲ್ಲ ಎಂದು ಕೇರಳದ ಆಡಳಿತ ಪಕ್ಷದ ಪ್ರತಿನಿಧಿಗಳು ಹೇಳಿದ್ದಾರೆ.

ಕೇರಳದ ಉತ್ತರ ತುದಿಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ.ಅಶ್ರಫ್‌ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ‘ಯಾವ ಹೆಸರನ್ನೂ ಬದಲಿಸುತ್ತಿಲ್ಲ’ ಎಂದಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿರುವ ಫಲಕದಲ್ಲಿ ಅವರದೇ ಊರಿನ ಹೆಸರನ್ನು ಮಂಜೇಶ್ವರ ಎನ್ನುವುದರ ಬದಲಾಗಿ ‘ಮಂಜೇಶ್ವರಂ’ ಎಂದು ಬರೆಯಲಾಗಿದೆ. ವಿಧಾನಸಭೆಯಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಹಾಗೂ ಕನ್ನಡಲ್ಲೇ ಮಾತನಾಡುವ ಮೂಲಕ ಅಶ್ರಫ್‌ ಅವರು ತಮ್ಮ ಕನ್ನಡ ಭಾಷಾ ಪ್ರೀತಿಯನ್ನು ಪ್ರದರ್ಶಿಸಿದ್ದರು. ಊರಿನ ಹೆಸರುಗಳ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವ ಹೋರಾಟದಲ್ಲೂ ಅವರು ಜತೆಯಾಗಬೇಕು ಎಂದು ಕಾಸರಗೋಡಿನ ಕನ್ನಡಿಗರು ಬಯಸುತ್ತಾರೆ.

ಹಿಂಬಾಗಿಲಿನಿಂದ ಬದಲಾವಣೆ
ಯಾವುದೇ ಊರಿನ ಹೆಸರನ್ನು ಬದಲಿಸಬೇಕಾದರೆ ಅದಕ್ಕೆ ಒಂದು ದೀರ್ಘ ಪ್ರಕ್ರಿಯೆ ಇದೆ. ಅದನ್ನು ಪಾಲಿಸಿದರೆ ವಿರೋಧ ಬರಬಹುದೆಂಬ ಕಾರಣಕ್ಕೆ ಕೇರಳ ಸರ್ಕಾರವು ಹಿಂಬಾಗಿಲಿನ ಮೂಲಕ ಹೆಸರು ಬದಲಾವಣೆ ನಡೆಸುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಸರ್ಕಾರಿ ದಾಖಲೆಗಳಲ್ಲಿ ಊರ ಹೆಸರುಗಳನ್ನು ಮಲಯಾಳೀಕರಣ ಮಾಡಿಯೇ ಬಳಸಲಾಗುತ್ತಿದೆ. ಸರ್ಕಾರಿ ಕಚೇರಿಗಳ ನಾಮ ಫಲಕಗಳಲ್ಲೂ ಮಲಯಾಳೀಕರಣಗೊಂಡ ಹೆಸರನ್ನು ಬಳಸಲಾಗುತ್ತದೆ. ಇದು ಯಾರ ಗಮನಕ್ಕೂ ಬಾರದಂತೆ ಆಗುವ ಬದಲಾವಣೆಯಾಗಿರುವುದರಿಂದ ಜನರೂ ತಲೆಕೆಡಿಸಿಕೊಳ್ಳುವುದಿಲ್ಲ. ಕಾಲಾಂತರದಲ್ಲಿ ಹೊಸ ಹೆಸರೇ ಉಳಿದುಕೊಂಡು ಹಳೆಯದು ಮಾಯವಾಗುತ್ತದೆ. ಅಲ್ಲಿಗೆ ಕನ್ನಡದ ನೆಲದ ಮಲಯಾಳೀಕರಣ ಪೂರ್ತಿಯಾಗುತ್ತದೆ ಎಂಬುದು ಸ್ಥಳೀಯರ ಆತಂಕ.

ಕನ್ನಡತನಕ್ಕೂ ಪೆಟ್ಟು
ಕನ್ನಡ ಹೆರುಗಳಷ್ಟೇ ಅಲ್ಲ, ಕನ್ನಡ ಭಾಷೆಯ ಮೇಲೂ ಸರ್ಕಾರ ದಾಳಿ ನಡೆಸುತ್ತಿದೆ ಎಂಬುದು ಕಾಸರಗೋಡಿನ ಕನ್ನಡಿಗರ ಹಳೆಯ ಆರೋಪವಾಗಿದೆ.

ಒಂದೆರಡು ದಶಕಗಳ ಹಿಂದಿನವರೆಗೂ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಕನ್ನಡದಲ್ಲೇ ಅರ್ಜಿಗಳನ್ನು ಬರೆದು ಸಲ್ಲಿಸಬಹುದಾಗಿತ್ತು. ಕನ್ನಡ ಬಲ್ಲ ಸಿಬ್ಬಂದಿ, ಅಧಿಕಾರಿಗಳು ಕಚೇರಿಯಲ್ಲಿ ಇರುತ್ತಿದ್ದರು. ಇಂದು ಆ ಪರಿಸ್ಥಿತಿ ಇಲ್ಲ. ಕನ್ನಡದ ಜ್ಞಾನವಿಲ್ಲದ ಸಿಬ್ಬಂದಿಯನ್ನು ಜಿಲ್ಲೆಗೆ ನೇಮಕ ಮಾಡಲಾಗುತ್ತದೆ. ಮಲಯಾಳ ಅಥವಾ ಇಂಗ್ಲಿಷ್‌ನಲ್ಲೇ ಅರ್ಜಿಗಳನ್ನು ಕೊಡಿ ಎಂದು ಅವರು ಒತ್ತಾಯಿಸುತ್ತಾರೆ. ಕನ್ನಡ ಮಾಧ್ಯಮ ಶಾಲೆಗಳಿಗೂ ಮಲಯಾಳಿ ಶಿಕ್ಷಕರನ್ನು ನೇಮಿಸಿದ ಉದಾಹರಣೆಗಳಿವೆ. ಆ ಬಗ್ಗೆ ಇತ್ತೀಚೆಗೆ ಪ್ರತಿಭಟನೆಗಳೂ ನಡೆದಿದ್ದವು. ಇವೆಲ್ಲವೂ ಕನ್ನಡದ ಮೇಲೆ ನಡೆಯುವ ದಬ್ಬಾಳಿಕೆಯೇ ಎಂದು ಸ್ಥಳೀಯರು ಹೇಳುತ್ತಾರೆ.

ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನೂ ಉಪಯೋಗವಾಗುವುದಿಲ್ಲ ಎಂಬುದು ಈ ಭಾಗದ ಜನರ ಇನ್ನೊಂದು ಅಳಲು. ಕೇರಳ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಲಯಾಳ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಉತ್ತರ ಬರೆಯಲು ಅವಕಾಶ ಇರುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಸರ್ಕಾರಿ ಉದ್ಯೋಗ ಪಡೆಯುವುದು ಕಷ್ಟವಾಗುತ್ತದೆ. ಮಕ್ಕಳಿಗೆ ಕರ್ನಾಟಕದಲ್ಲಾದರೂ ಉದ್ಯೋಗ ಲಭಿಸುತ್ತದೆ ಎಂಬ ಖಾತರಿ ಇಲ್ಲ. ಆದ್ದರಿಂದ ಮಲಯಾಳ ಭಾಷೆಯನ್ನೇ ಕಲಿಯಲಿ ಎಂದು ಪಾಲಕರು ಸಹ ಬಯಸುವಂತಾಗಿದೆ. ಪರಿಣಾಮ ಕನ್ನಡ ಮಾಧ್ಯಮ ಶಾಲೆಗಳು ನಿಧಾನಕ್ಕೆ ಆಂಗ್ಲಮಾಧ್ಯಮಗಳಾಗಿ ಪರಿವರ್ತನೆಯಾಗುತ್ತಿವೆ. ಅವುಗಳಲ್ಲಿ ಮಲಯಾಳ ಅನ್ನೂ ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ.

ಹೋರಾಟಗಾರರು ಕನ್ನಡಿಗರಲ್ಲ
ಕಾಸರಗೋಡಿನಲ್ಲಿ ದಶಕಗಳಿಂದ ನಡೆಯುತ್ತಿರುವ ಕನ್ನಡ ಪರ ಹೋರಾಟವು ಇತರ ಭಾಗಗಳ ಹೋರಾಟಕ್ಕಿಂತ ಭಿನ್ನವಾದುದು. ಯಾಕೆಂದರೆ ಅಲ್ಲಿ ಕನ್ನಡ ಭಾಷೆ– ಸಂಸ್ಕೃತಿಯ ಉಳಿವಿಗಾಗಿ ಹೋರಾಟ ಮಾಡುತ್ತಿರುವ ಬಹುತೇಕರಿಗೆ ಕನ್ನಡ ಮಾತೃಭಾಷೆಯಲ್ಲ.

ವಿವಿಧ ಸಮುದಾಯ, ಜಾತಿ– ಧರ್ಮಗಳ ಜನರು ಇಲ್ಲಿ ಒಟ್ಟಾಗಿ ಕನ್ನಡಪರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಮಲಯಾಳದ ಜತೆಗೆ ತುಳು, ಕೊಂಕಣಿ, ಹವ್ಯಕ, ಕರಾಡ, ಮರಾಠಿ ಮುಂತಾದ ಅನೇಕ ಭಾಷಿಕರು ಇಲ್ಲಿ ಕನ್ನಡದ ಪರ ಧ್ವನಿ ಎತ್ತಿದ್ದಾರೆ. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಹೋರಾಟದ ಧ್ವಜ ಹಿಡಿದಿದ್ದ ಕಯ್ಯಾರ ಕಿಞ್ಞಣ್ಣ ರೈ ಅವರ ಮಾತೃಭಾಷೆ ತುಳು. ಆದ್ದರಿಂದ ದಶಕಗಳಿಂದ ಇಲ್ಲಿ ಕನ್ನಡಪರ ಚಳವಳಿಯನ್ನು ಜೀವಂತವಾಗಿಟ್ಟವರು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಪಕ್ಕಾ ಅಭಿಮಾನಿಗಳೇ ಆಗಿದ್ದಾರೆ ಎಂಬುದು ಸ್ಪಷ್ಟ. ಇವರು ‘ಒಳನಾಡು’  ಕರ್ನಾಟಕದಿಂದಲೂ ಈ ಹೋರಾಟಕ್ಕೆ ಬೆಂಬಲವನ್ನು ನಿರೀಕ್ಷಿಸುವುದು ಸಹಜವಾಗಿದೆ.

'ಹೋರಾಟಕ್ಕೆ ಸಂಪನ್ಮೂಲದ ಕೊರತೆ'
ಕಾಸರಗೋಡಿನಲ್ಲಿ ಕನ್ನಡ ಪರ ಹೋರಾಟವು ಸಾಮಾಜಿಕ ಮಾಧ್ಯಮಕ್ಕೆ ಸೀಮಿತವಾಗುತ್ತಿದೆ. ಜನಬೆಂಬಲ ಮತ್ತು ಆರ್ಥಿಕ ಬಲ ಇಲ್ಲದೆ ಹೋರಾಟ ದುರ್ಬಲವಾಗುತ್ತಿದೆ ಎಂದು ಹಳೆಯ ಹೋರಾಟಗಾರರು ಹೇಳುತ್ತಿದ್ದಾರೆ.

ಮಲೆಯಾಳೀಕರಣ ವಿರುದ್ಧದ ಹೋರಾಟಕ್ಕೆ ಅತ್ತ ರಾಜಕೀಯ ಬಲವೂ ಇತ್ತ ಆರ್ಥಿಕ ಬಲವೂ ಇಲ್ಲದಂತಾಗಿದೆ. ಹೀಗಾಗಿ ಹೋರಾಟದ ಕಾವು, ಕೆಚ್ಚು ಮುಂದಿನ ಪೀಳಿಗೆಗೆ ಮುಂದುವರಿಯುವ ಲಕ್ಷಣ ಕಾಣಿಸುತ್ತಿಲ್ಲ ಎಂಬ ಆತಂಕ ಇಲ್ಲಿನ ಹಿರಿಯ ಹೋರಾಟಗಾರರ ಮಾತುಗಳಲ್ಲಿ ಕಾಣಿಸುತ್ತದೆ.

‘ಇತ್ತೀಚಿನ ಕೆಲವು ವರ್ಷಗಳಿಂದ ಕನ್ನಡ ಶಾಲೆಗಳು ಕನ್ನಡ ಮಾಧ್ಯಮ ವಿಷಯಗಳಿಗೂ ಕನ್ನಡ ಅರಿಯದ ಮಲಯಾಳ ಶಿಕ್ಷಕರನ್ನು ನೇಮಿಸುವ ಕುತಂತ್ರ (ಉಪ್ಪಳ, ಬೇಕಲ, ಉದುಮ ಶಾಲೆಗಳಲ್ಲಿ ಆಗಿವೆ) ನಡೆಯುತ್ತಿದೆ. ಇದನ್ನು ಪ್ರತಿಭಟಿಸಿದ್ದೇವೆ. ಇದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದೇವೆ. ಕಾನೂನು ಹೋರಾಟ ಪ್ರಗತಿಯಲ್ಲಿದೆ. ಆದರೆ ಬೀದಿಗಿಳಿದು ನಡೆಸುವ ಹೋರಾಟವಿರಲಿ, ಕಾನೂನು ಹೋರಾಟವಿರಲಿ ಖರ್ಚು–ವೆಚ್ಚ ಇರುತ್ತದೆ. ಇದನ್ನು ಮುಖಂಡರೇ ಭರಿಸಬೇಕಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡು ಘಟಕದ ಅಧ್ಯಕ್ಷ ಎಸ್‌. ವಿ. ಭಟ್‌ ಹೇಳಿದ್ದಾರೆ.

‘ಸಂಘಟನೆಗಳಲ್ಲಿ ಹಣವಿಲ್ಲ. ಕನ್ನಡ ಹೋರಾಟಗಾರರ ಮೇಲೆ ಈಗಾಗಲೇ ನಾಲ್ಕು ಪ್ರಕರಣಗಳು ನಡೆಯುತ್ತಿವೆ. ಈ ಕಾನೂನು ಹೋರಾಟದ ವೆಚ್ಚ ಭರಿಸುವುದಾದರೂ ಹೇಗೆ? ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗಳಲ್ಲಿ ಕನ್ನಡಿಗರ ಸಮಸ್ಯೆಯ ಬಗ್ಗೆ ಹೋರಾಟ ಮಾಡಬೇಕಿದ್ದರೆ ಲಕ್ಷಾಂತರ ರೂಪಾಯಿ ಇಡುಗಂಟು ಬೇಕಾಗುತ್ತದೆ. ಇದನ್ನು ನಾವು ಎಲ್ಲಿಂದ ತರೋಣ’ ಎಂದು ಅವರು ಪ್ರಶ್ನಿಸುತ್ತಾರೆ.

ಎಲ್ಲಾ ಸರ್ಕಾರಿ ಆದೇಶಗಳನ್ನೂ ಕನ್ನಡದಲ್ಲಿಯೂ ಕೊಡಬೇಕು ಎಂಬ ಆದೇಶಗಳು ಸಾಕಷ್ಟು ಬಾರಿ ಆಗಿವೆ. ಆದರೆ ಅದು ಪಾಲನೆಯಾಗುತ್ತಿಲ್ಲ. ಎಲ್ಲಾ ಫಲಕಗಳಲ್ಲೂ ಕನ್ನಡ ಇರಲೇ ಬೇಕೆಂಬ ಆದೇಶವೂ ಇದೆ, ಯಾವುದಕ್ಕೂ ಸರ್ಕಾರ ಬೆಲೆ ಕೊಡುತ್ತಿಲ್ಲ. ಅದೂ ಅಲ್ಲದೆ ಕಯ್ಯಾರ ಕಿಞ್ಞಣ್ಣ ರೈ ಅವರಂಥ ನಾಯಕರೂ ಈಗ ಇಲ್ಲ. ಯುವಕರಿಗೆ ಹೋರಾಟದಲ್ಲಿ ಆಸಕ್ತಿ ಇಲ್ಲ... ಹೀಗೆ ಹೋರಾಟಕ್ಕೆ ಸಮಸ್ಯೆಗಳು ಹಲವು ಇವೆ. ಆದರೂ ನಮ್ಮ ಪ್ರಯತ್ನವನ್ನು ಮಾಡಿಯೇ ತೀರುತ್ತೇವೆ ಎಂದು ಭಟ್‌ ಹೇಳುತ್ತಾರೆ.

‘ಗುರಿ ಸಾಧಿಸುವವರೆಗೂ ಕನ್ನಡಕ್ಕಾಗಿ ಜನಪರವಾದ ಹೋರಾಟವನ್ನು ನಡೆಸುತ್ತೇವೆ’ ಎಂದು ಕನ್ನಡಪರ ಹೋರಾಟಗಾರ ಶಿವರಾಮ ಕಾಸರಗೋಡು ಹೇಳುತ್ತಾರೆ. ಆದರೆ ಜನರು ಕೈಜೋಡಿಸುತ್ತಿಲ್ಲ ಎಂಬುದು ಅವರ ಅಳಲು. ‘ಹೋರಾಟಕ್ಕೆ ಜನರೇ ಸಿಗುತ್ತಿಲ್ಲ. ನಿವೃತ್ತ ಕನ್ನಡ ಸರ್ಕಾರಿ ನೌಕರರಲ್ಲಿ ಬಹುಪಾಲು ಮಂದಿ ಮಂಗಳೂರಿನಲ್ಲಿ ನೆಲೆಗೊಳ್ಳಲು ಪ್ರಯತ್ನಿಸುತ್ತಾರೆ. ಹೋರಾಟದ ಪ್ರಯೋಜನ ಪಡೆದವರೇ ಈಗ ಹೋರಾಟಕ್ಕೆ ಬರುತ್ತಿಲ್ಲ’ ಎಂಬ ನೋವನ್ನೂ ಅವರು ತೋಡಿಕೊಳ್ಳುತ್ತಾರೆ. ಇವರೊಬ್ಬರಲ್ಲ, ಕಾಸರಗೋಡಿನಲ್ಲಿ ದಶಕಗಳ ಕಾಲ ಕನ್ನಡಪರ ಹೋರಾಟ ನಡೆಸಿದ ಅನೇಕರ ಅಳಲು ಇದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.