ಆಳ–ಅಗಲ: ಸಾಲು ಸಾಲು ಹಗರಣ, ಜಾನ್ಸನ್ ಜನಪ್ರಿಯತೆಗೆ ಗ್ರಹಣ

ಮೂರು ವರ್ಷಗಳ ಹಿಂದೆ ಭಾರಿ ಬಹುಮತದಿಂದ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಬೋರಿಸ್ ಜಾನ್ಸನ್ ಅವರ ಪತನಕ್ಕೆ ಹಲವು ಪ್ರಮುಖ ಕಾರಣಗಳನ್ನು ರಾಜಕೀಯ ತಜ್ಞರು ಗುರುತಿಸಿದ್ದಾರೆ. ಜಾನ್ಸನ್ ವಿರುದ್ಧ ಇರುವ ಆರೋಪಗಳೆಲ್ಲವೂ ಸಾಮಾಜಿಕ ನಡವಳಿಕೆಗಳನ್ನು ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದ್ದಾಗಿವೆ. ಲಾಕ್‌ಡೌನ್ ನಿಯಮಗಳ ಉಲ್ಲಂಘನೆ, ಲಾಬಿ ಕಾನೂನು ದುರುಪಯೋಗ ಪಡಿಸಿಕೊಂಡವರಿಗೆ ಬೆಂಬಲ, ತೆರಿಗೆ ಏರಿಕೆ, ಕೆಲಸದಲ್ಲಿ ಸ್ಪಷ್ಟ ಗುರಿ ಇಲ್ಲದಿರುವುದು ಮತ್ತು ಪಾರ್ಟಿಯಲ್ಲಿ ಅಸಭ್ಯವಾಗಿ ವರ್ತಿಸಿದವರಿಗೆ ಉಪಸಚೇತಕ ಹುದ್ದೆ ನೀಡಿದ್ದು ಜಾನ್ಸನ್ ಅವರ ಪತನಕ್ಕೆ ಪ್ರಮುಖ ಕಾರಣಗಳು ಎಂದು ಗುರುತಿಸಲಾಗಿದೆ. ಈ ಸಂಬಂಧ ಆರೋಪ ಮತ್ತು ಜನಪ್ರತಿನಿಧಿ ಸಭೆಯಲ್ಲಿ ತನಿಖೆ ಎದುರಿಸುತ್ತಿರುವುದರಿಂದಲೇ ಪಕ್ಷದ ನಾಯಕರು ಜಾನ್ಸನ್ ಅವರಿಂದ ದೂರ ಸರಿದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಜಾನ್ಸನ್ ಅವರ ಪತನದ ಸುತ್ತಲಿನ ವಿದ್ಯಮಾನಗಳ ವಿವರ ಇಲ್ಲಿದೆ.
ಪಿಂಚರ್ ಹಗರಣ
ಸಂಸದ ಕ್ರಿಸ್ಟೋಫರ್ ಪಿಂಚರ್ ಅವರನ್ನು ಕನ್ಸರ್ವೇಟಿವ್ ಪಕ್ಷದ ಉಪ ಮುಖ್ಯ ಸಚೇತಕರನ್ನಾಗಿ ಇದೇ ಫೆಬ್ರುವರಿಯಲ್ಲಿ ನೇಮಕ ಮಾಡಲಾಗಿತ್ತು. ವರ್ಷಗಳ ಹಿಂದೆ ಕ್ಲಬ್ ಒಂದರಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಪಿಂಚರ್ ಅಸಭ್ಯವಾಗಿ ವರ್ತಿಸಿದ್ದರು ಎಂಬ ಆರೋಪದಡಿ ದೂರು ದಾಖಲಾಗಿತ್ತು. ಜತೆಗೆ ಇಬ್ಬರು ಪುರುಷರ ಜತೆ ಲೈಂಗಿಕವಾಗಿ ಅಸಭ್ಯವಾಗಿ ವರ್ತಿಸಿದ್ದರು ಎಂಬ ದೂರೂ ಪಿಂಚರ್ ಮೇಲಿತ್ತು. ಈ ಆರೋಪಗಳನ್ನು ಮುಚ್ಚಿಟ್ಟು, ಅವರನ್ನು ಉಪ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ ಎಂಬ ಆರೋಪ ಜಾನ್ಸನ್ ಮೇಲಿದೆ.
ಈ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದು ಜಾನ್ಸನ್ ಹೇಳಿದ್ದರು. ಆದರೆ, ‘ಪಿಂಚರ್ ವಿರುದ್ಧ ದೂರು ದಾಖಲಾಗಿರುವ ಬಗ್ಗೆ 2019ರಲ್ಲೇ ಜಾನ್ಸನ್ ಅವರಿಗೆ ಮಾಹಿತಿ ನೀಡಲಾಗಿತ್ತು’ ಎಂದು ಜುಲೈ 4ರಂದು ‘ಬಿಬಿಸಿ’ ವರದಿ ಮಾಡಿತ್ತು. ಅದರ ಮರುದಿನವೇ ಪ್ರಧಾನಿಯ ಮಾಜಿ ಸಹಾಯಕ ಲಾರ್ಡ್ ಮೆಕ್‌ಡೊನಾಲ್ಡ್ ಅವರು, ‘ಪಿಂಚರ್ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ನಾನೇ ಖುದ್ದಾಗಿ ಜಾನ್ಸನ್ ಅವರಿಗೆ ವಿವರವಾಗಿ ಮಾಹಿತಿ ನೀಡಿದ್ದೆ’ ಎಂದು ಹೇಳಿಕೆ ನೀಡಿದರು. ಈ ಬಗ್ಗೆ ತಮಗೆ ಮಾಹಿತಿ ಇತ್ತು ಎಂದು ಜಾನ್ಸನ್ ಒಪ್ಪಿಕೊಂಡರು. ಜತೆಗೆ ಕ್ಷಮೆಯಾಚಿಸಿದರು. ಆದರೆ, ಅಷ್ಟರಲ್ಲಾಗಲೇ ಹಾನಿಯಾಗಿತ್ತು. ಜಾನ್ಸನ್ ಅವರು ಪಕ್ಷದ ಸಂಸದರ ವಿಶ್ವಾಸ ಕಳೆದುಕೊಂಡಿದ್ದರು. ಇದು ಜಾನ್ಸನ್ ಅವರ ಪದತ್ಯಾಗಕ್ಕೆ ತಕ್ಷಣದ ಕಾರಣವಾಗಿದ್ದರೂ, ಇದೇ ಸ್ವರೂಪದ ಹಲವು ಆರೋಪಗಳು ಮತ್ತು ಪ್ರಕರಣಗಳು ಅವರ ಜನಪ್ರಿಯತೆ ಮತ್ತು ಬೆಂಬಲ ಕುಸಿಯಲು ಕಾರಣವಾಗಿವೆ.
ಕಂಟಕವಾದ ಪಾರ್ಟಿಗಳು
ಕೋವಿಡ್ ಲಾಕ್‌ಡೌನ್ ಮಧ್ಯೆ ಹಲವು ಪಾರ್ಟಿಗಳನ್ನು ಆಯೋಜಿಸಿದ ಮತ್ತು ಭಾಗಿಯಾದ ಆರೋಪ ಜಾನ್ಸನ್ ಮೇಲಿದೆ. 2020ರ ಜೂನ್‌ನಲ್ಲಿ ಬ್ರಿಟನ್‌ನಲ್ಲಿ ಕೋವಿಡ್‌ನ ಕಠಿಣ ಲಾಕ್‌ಡೌನ್ ಜಾರಿಯಲ್ಲಿತ್ತು. ತಮ್ಮ ಜನ್ಮದಿನ ಪ್ರಯುಕ್ತ ಡೌನಿಂಗ್ ಸ್ಟ್ರೀಟ್ ಗಾರ್ಡನ್‌ನಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ, ಪಾರ್ಟಿ ಆಯೋಜಿಸಿದ್ದರು. ಇದರಲ್ಲಿ ಹಲವು ಸಂಸದರು, ಉದ್ಯಮಿಗಳು ಭಾಗಿಯಾಗಿದ್ದರು.
ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಜಾನ್ಸನ್ ಅವರಿಗೆ ದಂಡ ವಿಧಿಸಲಾಗಿತ್ತು ಮತ್ತು ಪ್ರಕರಣ ದಾಖಲಿಸಲಾಗಿತ್ತು. ತಾವು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಜಾನ್ಸನ್ ಹೇಳಿದ್ದರು. ಆದರೆ, ಪ್ರಕರಣವು ಜನಪ್ರತಿನಿಧಿ ಸಭೆಯವರೆಗೂ ಹೋಯಿತು. ಈಗಲೂ ಪ್ರಕರಣದ ತನಿಖೆ ನಡೆಯುತ್ತಿದೆ.
ಜಾನ್ಸನ್ ಅವರ ಕಚೇರಿಯ ಸಿಬ್ಬಂದಿಗಳೂ ಹಲವು ಪಾರ್ಟಿಗಳನ್ನು ಆಯೋಜಿಸಿದ್ದರು. ಪಾರ್ಟಿ ನಡೆಸಿದ್ದನ್ನು ಖಂಡಿಸಿ ಮಾಧ್ಯಮಗಳು ವರದಿ ಪ್ರಕಟಿಸಿದವು. ಜಾನ್ಸನ್ ಅವರ ಈ ನಡವಳಿಕೆಯನ್ನು ಬ್ರಿಟನ್ ಜನರು ಟೀಕಿಸಿದರು. ಇಲ್ಲಿಂದ ಅವರ ಪತನ ಆರಂಭವಾಯಿತು ಎಂದು ವಿಶ್ಲೇಷಿಸಲಾಗಿದೆ.
ಲೈಂಗಿಕ ಹಗರಣಗಳು
ಕನ್ಸರ್ವೇಟಿವ್ ಪಕ್ಷದ ಸಂಸದರಾಗಿದ್ದ ಅಹ್ಮದ್ ಖಾನ್ ಮತ್ತು ನೀಲ್ ಪರಿಷ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. 15 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅಹ್ಮದ್ ಖಾನ್ ಮೇಲಿತ್ತು. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜನಪ್ರತಿನಿಧಿಗಳ ಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ನೀಲ್ ಅವರು, ಸ್ಮಾರ್ಟ್‌ಫೋನ್‌ನಲ್ಲಿ ನೀಲಿಚಿತ್ರ ವೀಕ್ಷಿಸಿದ್ದರು. ಇದಕ್ಕೆ ಭಾರಿ ಆಕ್ಷೇಪ ಮತ್ತು ಖಂಡನೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ನೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕನ್ಸರ್ವೇಟಿವ್ ಪಕ್ಷದ ಮತ್ತೊಬ್ಬ ಸಂಸದನನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ಈ ವರ್ಷದ ಆರಂಭದಲ್ಲಿ ಬಂಧಿಸಲಾಗಿತ್ತು. ಇದೇ ಮೇನಲ್ಲಿ ಅವರಿಗೆ ಜಾಮೀನು ದೊರೆತಿತ್ತು. ಈ ಮೂರೂ ಪ್ರಕರಣಗಳು ಜಾನ್ಸನ್ ಅವರ ಸರ್ಕಾರದ ಜನಪ್ರಿಯತೆಯನ್ನು ತೀವ್ರವಾಗಿ ಬಾಧಿಸಿದ್ದವು.
ಪಾರ್ಟರ್‌ಸನ್ ಪ್ರಕರಣ
ಕನ್ಸರ್ವೇಟಿವ್ ಪಕ್ಷದ ಸಂಸದ ಮತ್ತು ಜಾನ್ಸನ್ ಅವರ ಆಪ್ತ ಒವೆನ್ ಪಾರ್ಟರ್‌ಸನ್ ಅವರು, ಲಾಬಿ ಕಾನೂನುಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದರು. ಪಾರ್ಟರ್‌ಸನ್ ಅವರನ್ನು ಜನಪ್ರತಿನಿಧಿ ಸಭೆಯಿಂದ 30 ದಿನಗಳವರೆಗೆ ಅಮಾನತು ಮಾಡುವ ಶಿಫಾರಸನ್ನು ಜನಪ್ರತಿನಿಧಿ ಸಭೆಯ ಸಮಿತಿ 2021ರ ಅಕ್ಟೋಬರ್‌ನಲ್ಲಿ ಮಾಡಿತ್ತು.
ಈ ಶಿಫಾರಸಿಗೆ ಸಂಬಂಧಿಸಿದ ನಿರ್ಣಯವನ್ನು ಜನಪ್ರತಿನಿಧಿಗಳ ಸಭೆಯಲ್ಲಿ ಮತಕ್ಕೆ ಹಾಕಲಾಗಿತ್ತು. ಜಾನ್ಸನ್ ಅವರು ಆ ನಿರ್ಣಯಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದರು. ಇದರಿಂದ, ಜಾನ್ಸನ್ ಮತ್ತು ಅವರ ಸರ್ಕಾರವು ಭ್ರಷ್ಟರನ್ನು ಬೆಂಬಲಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಪಾರ್ಟರ್‌ಸನ್ ಅವರ ವಿರುದ್ಧ ನಡೆದ ತನಿಖೆಯನ್ನೇ ಪರಿಶೀಲಿಸಿಲು ಸಮಿತಿ ರಚಿಸಲಾಯಿತು. ನಂತರ ಪಾರ್ಟರ್‌ಸನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಅಷ್ಟರಲ್ಲಿ ಜಾನ್ಸನ್ ಅವರ ಜನಪ್ರಿಯತೆಗೆ ತೀವ್ರ ಹಾನಿಯಾಗಿತ್ತು.
ಉತ್ತರಾಧಿಕಾರಿ ಯಾರು?
ಬೋರಿಸ್ ಜಾನ್ಸನ್ ಅವರ ರಾಜೀನಾಮೆಯಿಂದ ಕನ್ಸರ್ವೇಟಿವ್ ಪಕ್ಷದ ನಾಯಕ ಹಾಗೂ ಬ್ರಿಟನ್‌ನ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬ ಬಗ್ಗೆ ಬಿರುಸಿನ ಚರ್ಚೆ ಶುರುವಾಗಿದೆ. ಜಾನ್ಸನ್ ಸಂಪುಟಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ, ಭಾರತ ಮೂಲದ ರಿಷಿ ಸುನಕ್ ಅವರು ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅಟಾರ್ನಿ ಜನರಲ್ ಆಗಿರುವ ಭಾರತ ಮೂಲದ ಸುಯಿಲಾ ಬ್ರೇವರ್ಮನ್ ಅವರ ಹೆಸರೂ ಉನ್ನತ ಹುದ್ದೆಗೆ ಕೇಳಿಬರುತ್ತಿದೆ. ಜೊತೆಗೆ ಮೈಕೆಲ್ ಗೋವ್, ಪೆನಿ ಮೋರ್ಡಂಟ್, ಲಿಜ್ ಟ್ರಸ್, ಟಾಮ್ ಟೂಗೆನ್‌ಹ್ಯಾಟ್, ಬೆನ್ ವಾಲೆಸ್, ನದೀಮ್ ಜಹಾವಿ ಅವರೂ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.
42 ವರ್ಷದ ರಿಷಿ ಸುನಕ್ ಅವರು ಬ್ರಿಟನ್‌ನ ಸೌತಾಂಪ್ಟನ್‌ನಲ್ಲಿ ಜನಿಸಿದವರು. ಅವರ ಪೋಷಕರು ಪಂಜಾಬ್‌ನಿಂದ ಬ್ರಿಟನ್‌ಗೆ ವಲಸೆ ಹೋದವರು. ರಿಷಿ ಅವರು ವಿನ್‌ಚೆಸ್ಟರ್ ಕಾಲೇಜ್, ಆಕ್ಸ್‌ಫರ್ಡ್ ಹಾಗೂ ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ರಿಷಿ ಪತ್ನಿ ಅಕ್ಷತಾ ಮೂರ್ತಿ ಅವರು ಇನ್ಫೊಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳು. ಈ ದಂಪತಿ ಸದ್ಯ ನಾರ್ತ್‌ಅಲರ್ಟನ್ ನಿವಾಸಿಗಳು. ಕ್ಯಾಲಿಫೋರ್ನಿಯಾದಲ್ಲಿ ಓದುತ್ತಿದ್ದಾಗ ಅಕ್ಷತಾ ಹಾಗೂ ರಿಷಿ ಪರಸ್ಪರ ಪರಿಚಿತರು. ಕೃಷ್ಣ ಹಾಗೂ ಅನೌಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.
ರಿಚ್‌ಮಂಡ್‌ನ ನಾರ್ತ್ ಯಾರ್ಕ್‌ಶೈರ್ ಕ್ಷೇತ್ರದಿಂದ 2015ರಲ್ಲಿ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ರಿಷಿ ಆಯ್ಕೆಯಾದರು. 2017 ಮತ್ತು 2019ರಲ್ಲೂ ಅವರು ಮರು ಆಯ್ಕೆಯಾದರು. ಹಣಕಾಸು ಖಾತೆಯ ಸಹ ಸಚಿವರಾಗಿ 2019ರ ಜುಲೈನಲ್ಲಿ ನೇಮಕವಾದರು. ವೆಸ್ಟ್‌ಮಿನ್‌ಸ್ಟರ್ ಹೊರಗಿನ ಕೆಲವರಿಗೆ ಮಾತ್ರ ಪರಿಚಯವಿದ್ದ ರಿಷಿ ಅವರಿಗೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಸಂಪುಟದ ಮಹತ್ವದ ಹಣಕಾಸು ಖಾತೆಯನ್ನು ವಹಿಸಿ ಅಚ್ಚರಿ ಮೂಡಿಸಿದ್ದರು. ಅವರು 2020ರ ಫೆಬ್ರುವರಿಯಲ್ಲಿ ಹಣಕಾಸು ಇಲಾಖೆಯ ಜವಾಬ್ದಾರಿ ವಹಿಸಿಕೊಂಡರು. ಕೋವಿಡ್ ಸಮಯದಲ್ಲಿ ಆರ್ಥಿಕತೆಯನ್ನು ಸರಿದಾರಿಗೆ ತರಲು ಹರಸಾಸಹ ಪಟ್ಟಿದ್ದರು. ವ್ಯಾಪಾರಿಗಳು ಹಾಗೂ ಉದ್ಯಮಗಳಿಗೆ ಸಾವಿರಾರು ಕೋಟಿಯ ಪ್ಯಾಕೇಜ್ ಪ್ರಕಟಿಸಿದ್ದರು.
ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ರಿಷಿ ಆಯ್ಕೆಯಾಗಲಿದ್ದಾರೆ ಎಂಬ ಸೂಚನೆಗಳಿದ್ದರೂ, ಅವರ ವರ್ಚಸ್ಸು ಕುಂದಿಸುವ ಕೆಲವು ವಿದ್ಯಮಾನಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ. ಪತ್ನಿ ಅಕ್ಷತಾ ಮೂರ್ತಿ ಅವರು ತೆರಿಗೆ ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದರು. ಕೋವಿಡ್ ತಡೆಗೆ ವಿಧಿಸಲಾದ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ರಿಷಿ ಮೇಲೆ ದಂಡ ವಿಧಿಸಲಾಗಿತ್ತು. ಡೌನಿಂಗ್ ಸ್ಟ್ರೀಟ್‌ನ ಪ್ರಧಾನಿ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಭಾಗಿಯಾಗಿ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರು. ರಿಷಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಜೀವನವೆಚ್ಚ ದುಬಾರಿಯಿತ್ತು ಎಂದು ಹೇಳಲಾಗುತ್ತಿದೆ.
ಯಾರಿಗೆ ಮಣೆ?: ರಿಷಿ ಸುನಕ್ ಹಾಗೂ ಸಾಜಿದ್ ಜಾವಿದ್ ಅವರು ಸಂಪುಟದಿಂದ ಹೊರಬಂದಾಗ, ಜಾನ್ಸನ್ ಅವರ ಬೆಂಬಲಕ್ಕೆ ನಿಂತಿದ್ದವರು ವಿದೇಶಾಂಗ ಸಚಿವೆ ಲಿಜ್ ಟ್ರಸ್. ಜಾನ್ಸನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಟ್ರಸ್ ಪ್ರಧಾನಿ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿಲ್ಲದ ಅವರು ರಾಜತಾಂತ್ರಿಕವಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಜಾನ್ಸನ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸಾಜಿದ್ ಜಾವಿದ್ ಅವರು ರಿಷಿ ಅವರ ಜೊತೆ ರಾಜೀನಾಮೆ ನೀಡಿದವರು. ಪಾಕಿಸ್ತಾನದ ನಿರಾಶ್ರಿತ ವಲಸೆ ಕುಟುಂಬಕ್ಕೆ ಸೇರಿದ ಜಾವಿದ್, ಏರುತ್ತಿರುವ ಹಣದುಬ್ಬರದ ಬಗ್ಗೆ ದನಿ ಎತ್ತಿ ಸುದ್ದಿಯಾಗಿದ್ದರು. ಪತ್ರಿಕಾ ಕಾರ್ಯದರ್ಶಿಯಾಗಿ, ಡೇವಿಡ್ ಕ್ಯಾಮರೂನ್ ಸರ್ಕಾರದಲ್ಲಿ ಸಶಸ್ತ್ರ ಪಡೆಗಳ ಸಚಿವೆಯಾಗಿ ಕೆಲಸ ಮಾಡಿದ್ದ ಪೆನಿ ಮೋರ್ಡಂಟ್ ಜತೆಗೆ ಮೈಕೆಲ್ ಗೋವ್, ಟಾಮ್ ಟೂಗೆನ್‌ಹ್ಯಾಟ್, ಬೆನ್ ವಾಲೆಸ್, ನದೀಮ್ ಜಹಾವಿ ಸಹ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ನಾಯಕನ ಆಯ್ಕೆಗೆ ಹಲವು ಹಂತದ ಪ್ರಕ್ರಿಯೆ
ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ಜಾನ್ಸನ್ ರಾಜೀನಾಮೆ ನೀಡಿದ್ದರಿಂದಾಗಿ ನೂತನ ನಾಯಕನ ಆಯ್ಕೆಗೆ ಚುನಾವಣೆ ನಡೆಯಲಿದೆ. ಇದಕ್ಕೆ ವಿವಿಧ ಹಂತಗಳ ಪ್ರಕ್ರಿಯೆ ಇದೆ. ಪಕ್ಷದ ನಾಯಕನಾಗುವ ಆಕಾಂಕ್ಷೆಯುಳ್ಳ ಅಭ್ಯರ್ಥಿಯನ್ನು ಪಕ್ಷದ ಎಂಟು ಸಂಸದರು ಅನುಮೋದಿಸಬೇಕು.
ಅಭ್ಯರ್ಥಿಯು ಮೊದಲ ಹಂತದಲ್ಲಿ ಶೇ 5ರಷ್ಟು ಅಥವಾ 18 ಸಂಸದರ ಮತಗಳನ್ನು ಪಡೆಯಬೇಕು. ಎರಡನೇ ಹಂತದಲ್ಲಿ ಶೇ 10ರಷ್ಟು ಅಥವಾ 36 ಸಂಸದರು ಮತ ಹಾಕಿರಬೇಕು. ಇದಕ್ಕಿಂತ ಕಡಿಮೆ ಮತಗಳನ್ನು ಪಡೆದವರು ಸ್ಪರ್ಧೆಯಿಂದ ಹೊರಬೀಳುತ್ತಾರೆ. ಕೊನೆಯಲ್ಲಿ ಉಳಿಯುವ ಇಬ್ಬರು ಸ್ಪರ್ಧಿಗಳಲ್ಲಿ ನಾಯಕ ಯಾರಾಗಬೇಕು ಎಂದು ಚುನಾವಣೆ ನಡೆಯುತ್ತದೆ. ಈ ಹಂತದಲ್ಲಿ ಕೇವಲ ಸಂಸದರು ಮಾತ್ರ ಮತ ಹಾಕುವುದಿಲ್ಲ. ಕನ್ಸರ್ವೇಟಿವ್ ಪಕ್ಷದ ಎಲ್ಲ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಇಲ್ಲಿ ವಿಜೇತರಾದ ಅಭ್ಯರ್ಥಿಯು ಪಕ್ಷವನ್ನು ಮುನ್ನಡೆಸುವ ನಾಯಕನಾಗಿ ಆಯ್ಕೆಯಾಗುತ್ತಾರೆ. ಸಂಸತ್ತಿನಲ್ಲಿಯೂ ಅವರು ನಾಯಕತ್ವ ವಹಿಸಿಕೊಳ್ಳುತ್ತಾರೆ. ಹೆಚ್ಚು ಸಂಸದರ ಬೆಂಬಲ ಪಡೆಯುವ ನಾಯಕನಿಗೆ ಸರ್ಕಾರ ರಚಿಸುವಂತೆ ರಾಣಿ ಸೂಚಿಸುತ್ತಾರೆ.
(ಆಧಾರ: ಬಿಬಿಸಿ, ರಾಯಿಟರ್ಸ್)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.