ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ನಾಯಕತ್ವ ಬದಲು; ಕಾಂಗ್ರೆಸ್‌ನ ಸವಾಲು

Last Updated 19 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

2014ರ ಲೋಕಸಭಾ ಚುನಾವಣೆಯ ಸೋಲಿನ ಆಘಾತವನ್ನು ಅರಗಿಸಿಕೊಂಡು, ಮೈಕೊಡವಿ ಎದ್ದು ನಿಲ್ಲಲು ಕಾಂಗ್ರೆಸ್‌ ಪಕ್ಷಕ್ಕೆ ಸಾಧ್ಯವಾಗಲೇ ಇಲ್ಲ ಎನ್ನಬಹುದು. ಸಮರ್ಥವಾದ ನಾಯಕತ್ವ ಇಲ್ಲದೇ ಇರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಕಾಂಗ್ರೆಸ್‌ನ ಮುಖಂಡರೇ ವಿಶ್ಲೇಷಿಸುತ್ತಿದ್ದಾರೆ.

ಪಕ್ಷದ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣ 2017ರಲ್ಲಿ ಅಧ್ಯಕ್ಷ ಸ್ಥಾನವನ್ನು ರಾಹುಲ್‌ ಗಾಂಧಿ ಅವರಿಗೆ ವಹಿಸಲಾಯಿತು. ಆದರೆ, ಅವರ ನಾಯಕತ್ವದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ 52 ಕ್ಷೇತ್ರಗಳಲ್ಲಿ ಗೆಲ್ಲಲು ಮಾತ್ರ ಕಾಂಗ್ರೆಸ್‌ಗೆ ಸಾಧ್ಯವಾಗುತ್ತದೆ. ಸ್ವಕ್ಷೇತ್ರ ಅಮೇಠಿಯಲ್ಲಿ ರಾಹುಲ್‌ ಅವರೇ ಸೋತರು. ಪಕ್ಷದ ಸೋಲಿನ ಹೊಣೆ ಹೊತ್ತು 2019ರ ಜುಲೈನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ಕೊಡುತ್ತಾರೆ. ಅದಾದ ಬಳಿಕ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರೇ ಇಲ್ಲ.

ಈಗಿನ ನಾಯಕತ್ವ ರಹಿತ ಸ್ಥಿತಿಯು ಪಕ್ಷವನ್ನು ನಿಷ್ಕ್ರಿಯಗೊಳಿಸಿದೆ. ಅದು ಪಕ್ಷವು ಅಧಿಕಾರದಲ್ಲಿರುವ ರಾಜ್ಯಗಳ ನಾಯಕತ್ವದ ಮೇಲೆಯೂ ಪರಿಣಾಮ ಬೀರಿದೆ. ಕೇಂದ್ರದ ನಾಯಕತ್ವವು ದುರ್ಬಲವಾದ ಕಾರಣ ರಾಜ್ಯ ಮಟ್ಟದ ನಾಯಕರನ್ನು ಹಿಡಿತದಲ್ಲಿ ಇರಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯ ಪ್ರದೇಶ ಸರ್ಕಾರ ಪತನವಾಗಲು ಕಾರಣವಾಗಿದ್ದು ಅದಕ್ಕೆ ಒಂದು ಉದಾಹರಣೆ.

ಗೋವಾ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆ ಯಲ್ಲಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್‌ ಹೊರ ಹೊಮ್ಮಿತ್ತು. 40 ಕ್ಷೇತ್ರಗಳ ಪೈಕಿ 17ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಹಾಗಿದ್ದರೂ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. 10 ಶಾಸಕರು 2019ರ ಜುಲೈಯಲ್ಲಿ ಬಿಜೆಪಿ ಸೇರ್ಪಡೆಯಾದರು. 2017ರಲ್ಲಿ ಅತಿದೊಡ್ಡ ಪಕ್ಷ ಎನಿಸಿಕೊಂಡಿದ್ದ ಕಾಂಗ್ರೆಸ್‌ ಈಗ ಅಲ್ಲಿ ಅಸ್ತಿತ್ವಕ್ಕಾಗಿ ತಡಕಾಡುತ್ತಿದೆ.

ಪಕ್ಷಕ್ಕೆ ಸಕ್ರಿಯ ಅಧ್ಯಕ್ಷರು ಬೇಕು ಎಂದು ಪಕ್ಷದ 23 ಮುಖಂಡರು ಸೋನಿಯಾ ಅವರಿಗೆ ಪತ್ರ ಬರೆದದ್ದೇ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿತ್ತು. ಈ ಪತ್ರದ ಬಳಿಕ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸಭೆಗಳು ನಡೆದರೂ ಅಧ್ಯಕ್ಷರ ಆಯ್ಕೆಯ ದಿಸೆಯಲ್ಲಿ ದೃಢವಾದ ಯಾವ ಕ್ರಮವೂ ಆಗಿಲ್ಲ. ‘ಪಕ್ಷಕ್ಕೆ ಹೊಸ ಅಧ್ಯಕ್ಷರ ಆಯ್ಕೆ ತಕ್ಷಣವೇ ಆಗಬೇಕು. ಈ ವಿಚಾರದಲ್ಲಿ ವಿಳಂಬ ಸಲ್ಲದು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಇರುವುದೇ ಇಲ್ಲ’ ಎಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ರಾಹುಲ್‌ ಹೇಳಿದ್ದರು. ಅದಾಗಿ ಎರಡು ವರ್ಷಗಳಾದರೂ ಅಧ್ಯಕ್ಷ ಸ್ಥಾನ ಖಾಲಿಯೇ ಇದೆ. ಪಕ್ಷದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೆ ಪರಿಹಾರಕ್ಕಾಗಿ ರಾಹುಲ್‌ ಅವರತ್ತಲೇ ನೋಡಲಾಗುತ್ತದೆ. ಆದರೆ, ಅವರು ಪಕ್ಷದ ಯಾವುದೇ ಹುದ್ದೆಯಲ್ಲಿ ಇಲ್ಲ.

ಅಧ್ಯಕ್ಷರಿಲ್ಲ ಎಂಬುದೇ ಪಕ್ಷದಲ್ಲಿ ಹತ್ತಾರು ಬಣಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಈ ಪರಿಸ್ಥಿತಿಯು ಪಕ್ಷದ ಸರ್ಕಾರಗಳು ದುರ್ಬಲಗೊಳ್ಳಲು, ಅಧಿಕಾರಕ್ಕೆ ಮರಳುವ ಸಾಧ್ಯತೆ ಕಮರಿ ಹೋಗಲು ಕಾರಣವಾಗುತ್ತಿವೆ.

ರಾಜಕೀಯವಾಗಿ ಅತ್ಯಂತ ಮುಖ್ಯವಾದ ಉತ್ತರ ಪ್ರದೇಶ, ಕಾಂಗ್ರೆಸ್‌ ಅಧಿಕಾರದಲ್ಲಿರುವ ಪಂಜಾಬ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತವರು ರಾಜ್ಯ ಗುಜರಾತ್‌ನಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿಯನ್ನು ಎದುರಿಸಲು ಸಜ್ಜಾಗುವ ಬದಲಿಗೆ ಕಾಂಗ್ರೆಸ್‌ ಪಕ್ಷವು ಒಳಜಗಳದಲ್ಲಿ ಮುಳುಗಿ ಹೋಗಿದೆ.

‘ಕಾಂಗ್ರೆಸ್‌ ಪಕ್ಷವು ಪುಟಿದೇಳಬೇಕಿದ್ದರೆ, ನಾಯಕತ್ವ ಬದಲಾವಣೆ ತಕ್ಷಣವೇ ಆಗಬೇಕು’ ಎಂದು ಪಕ್ಷದ ಸಂಸದ ಶಶಿ ತರೂರ್‌ ಅವರು ಹೇಳಿದ್ದಾರೆ. ಗಟ್ಟಿ ನಾಯಕತ್ವ ಬೇಕು ಎಂಬ ಬೇಡಿಕೆ ಕಾಂಗ್ರೆಸ್‌ನಲ್ಲಿ ಮೊಳಗುತ್ತಲೇ ಇದೆ.

ಗಾಯಕ್ಕೆ ಮದ್ದು ಅರೆಯದ ಕಾಂಗ್ರೆಸ್
ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಅವರು, ‘ಸಮಸ್ಯೆಯು ಬೃಹದಾಕಾರ ತಾಳುವ ಮುನ್ನವೇ ಪರಿಹಾರ ಕ್ರಮ ಕೈಗೊಳ್ಳಬೇಕು’ ಎಂಬ ಅರ್ಥ ಬರುವ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ, ಕಾಂಗ್ರೆಸ್‌ ಪಕ್ಷವು ಬಿಕ್ಕಟ್ಟುಗಳನ್ನು ಬೆಳೆಯಲು ಬಿಟ್ಟು, ಪರಿಸ್ಥಿತಿ ಕೈಮೀರುವಂತೆ ಮಾಡಿಕೊಳ್ಳುತ್ತಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಪಂಜಾಬ್‌ ಬಿಕ್ಕಟ್ಟನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಲಾಗಿದೆ ಎಂಬ ಭಾವನೆ ಕಾಂಗ್ರೆಸ್‌ನ ಹಲವು ಮುಖಂಡರಲ್ಲಿ ಇದೆ. ಸಿಬಲ್‌ ಅವರ ಹೇಳಿಕೆಯು ಅದರ ಸೂಚನೆ ಮಾತ್ರ.

<em><strong>ರಾಹುಲ್ ಗಾಂಧಿ</strong></em>
ರಾಹುಲ್ ಗಾಂಧಿ

ಮೋದಿ ಅಲೆಯ ನಡುವೆಯೂ ಕಾಂಗ್ರೆಸ್ ಪಕ್ಷವು ಪಂಜಾಬ್, ಛತ್ತೀಸಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಅಧಿಕಾರ ಹಿಡಿಯಿತು. ಆದರೆ ಎಲ್ಲ ಕಡೆಯೂ ಬಿಕ್ಕಟ್ಟುಗಳು ಮೇಲುಗೈ ಸಾಧಿಸಿವೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದು ದಿಢೀರ್ ಎದುರಾದ ಬೆಳವಣಿಗೆಯಲ್ಲ ಎಂಬುದು ಸ್ಪಷ್ಟ. ಹಾಗಿದ್ದರೂ ಸಂಕಷ್ಟ ಶಮನಕ್ಕೆ ಗಂಭೀರ ಪ್ರಯತ್ನ ನಡೆದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಬಿಕ್ಕಟ್ಟು ಪರಿಹಾರಕ್ಕಾಗಿ ಕಾಂಗ್ರೆಸ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿಯು ಬಿಕ್ಕಟ್ಟನ್ನು ಹೆಚ್ಚಿಸಿತೇ ವಿನಾ ನಯಾಪೈಸೆಯಷ್ಟು ಕಡಿಮೆ ಮಾಡಲಿಲ್ಲ ಎಂದೂ ಹೇಳಲಾಗುತ್ತಿದೆ.

ಮಧ್ಯಪ್ರದೇಶ ಸರ್ಕಾರವನ್ನು ಪಕ್ಷವು ಕೈಯಾರೇ ಬಲಿಕೊಟ್ಟಿತು. ಪಕ್ಷದೊಳಗಿನ ಭಿನ್ನಮತವನ್ನು ಅರಿತು, ಅದಕ್ಕೆ ಮದ್ದು ಅರೆಯುವ ಕೆಲಸವನ್ನು ಮಾಡಲಿಲ್ಲ. ಬಂಡಾಯ ಎದ್ದಿದ್ದ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಹಿಡಿದಿಟ್ಟುಕೊಳ್ಳಲು ಸ್ವತಃ ರಾಹುಲ್ ಗಾಂಧಿ ಅವರಿಗೇ ಆಗಲಿಲ್ಲ.

ರಾಜಸ್ಥಾನದ ಸರ್ಕಾರವು ಪತನದ ಅಂಚಿಗೆ ಹೋಗಿತ್ತು. ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ತಮ್ಮ ಚಾಣಾಕ್ಷತನದಿಂದ ಸರ್ಕಾರ ಉಳಿಸಿಕೊಂಡರು. ಸರ್ಕಾರ ಉಳಿಯುವಲ್ಲಿ ಪಕ್ಷದ ಹೈಕಮಾಂಡ್‌ನ ಪಾತ್ರ ದೊಡ್ಡದೇನೂ ಇರಲಿಲ್ಲ. ಭಿನ್ನಮತ ನಿಲ್ಲಿಸಿದ ಸಚಿನ್‌ ಅವರಿಗೆ ಕೆಲವು ಭರವಸೆಗಳನ್ನು ಪಕ್ಷದ ನಾಯಕತ್ವವು ನೀಡಿತ್ತು. ವರ್ಷವಾದರೂ ಅವು ಯಾವುವೂ ಈಡೇರಿಲ್ಲ ಎಂದು ಸಚಿನ್‌ ಅವರು ಬಹಿರಂಗವಾಗಿಯೇ ಅತೃಪ್ತಿ ಹೊರ ಹಾಕಿದ್ದಾರೆ. ಪಕ್ಷ ಇನ್ನಷ್ಟು ತಡ ಮಾಡಿದರೆ ರಾಜಸ್ಥಾನದಲ್ಲೂ ಕಾಂಗ್ರೆಸ್ ಬುಡ ಅಲುಗಾಡುವ ದಿನ ದೂರವಿಲ್ಲ ಎನ್ನುತ್ತಾರೆ ವಿಶ್ಲೇಷಕರು.

ಛತ್ತೀಸಗಡದಲ್ಲಿಯೂ ನಾಯಕತ್ವ ಕಿತ್ತಾಟ ಇದೆ. ಆದರೆ, ಪರಿಹಾರ ಸೂತ್ರವೇನೂ ಸಿದ್ಧವಾದಂತೆ ಕಾಣಿಸುತ್ತಿಲ್ಲ.

ಪಂಜಾಬ್‌: ಅಮರಿಂದರ್‌–ಸಿಧು ಗುದ್ದಾಟ
ಪಂಜಾಬ್‌ ಮುಖ್ಯಮಂತ್ರಿಯಾಗಿದ್ದ ಅಮರಿಂದರ್‌ ಸಿಂಗ್‌ ಮತ್ತು 2017ರ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ನವಜೋತ್‌ ಸಿಂಗ್‌ ಸಿಧು ನಡುವೆ ಮೊದಲಿನಿಂದಲೂ ಹಗ್ಗಜಗ್ಗಾಟ ಇತ್ತು. ಈ ಕಿತ್ತಾಟವು ಅಮರಿಂದರ್‌ ತಲೆದಂಡಕ್ಕೆ ಕಾರಣವಾಗುವ ಸ್ಥಿತಿ ತೀರಾ ಇತ್ತೀಚಿನವರೆಗೆ ಇರಲಿಲ್ಲ. ಆದರೆ, 117 ಶಾಸಕರಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 80 ಶಾಸಕರ ಪೈಕಿ 40 ಮಂದಿ ಅಮರಿಂದರ್ ವಿರುದ್ಧ ಸೋನಿಯಾ ಗಾಂಧಿಗೆ ಕಳೆದ ವಾರ ಪತ್ರ ಬರೆದು ತೀವ್ರ ಅಸಮಾಧಾನ ತೋರಿದ್ದಾರೆ. ಈ ಭಿನ್ನಮತವು ಅಮರಿಂದರ್‌ ರಾಜೀನಾಮೆಗೆ ಕಾರಣವಾಗಿದೆ.

<em><strong>ಸಿಧು–ಅಮರಿಂದರ್‌</strong></em>
ಸಿಧು–ಅಮರಿಂದರ್‌

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷವು ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆ ಇತ್ತು. ಆದರೆ, ಅಮರಿಂದರ್‌ ಅವರು ಪಕ್ಷದ ವಿರುದ್ಧ ಬಂಡಾಯ ಎದ್ದರೆ ಈ ಸಾಧ್ಯತೆ ಕಮರಬಹುದು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಮರಿಂದರ್‌ ಅವರು ಸಿಧು ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಸೇನಾ ಮುಖ್ಯಸ್ಥ ಕಮರ್‌ ಜಾವೇದ್‌ ಬಾಜ್ವಾ ಜತೆಗೆ ನಿಕಟ ಸಂಪರ್ಕವನ್ನು ಸಿಧು ಹೊಂದಿದ್ದಾರೆ. ಈ ಸಂಬಂಧವು ದೇಶದ ಭದ್ರತೆಗೆ ಮಾರಕವಾಗಬಹುದು ಎಂದು ಹೇಳಿದ್ದಾರೆ. ಈ ಆರೋಪದಿಂದಾಗಿ ಸಿಧು ಅವರನ್ನು ಮುನ್ನೆಲೆಗೆ ತರುವುದು ಕಾಂಗ್ರೆಸ್‌ಗೆ ಕಷ್ಟವಾಗಬಹುದು.

ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಮತ್ತು ಬಿಜೆಪಿ ಅವಕಾಶಗಳಿಗಾಗಿ ಎದುರು ನೋಡುತ್ತಿವೆ. ಅಮರಿಂದರ್‌ ಅವರು ಸ್ವಂತ ಪಕ್ಷ ಕಟ್ಟಿ, ಈ ಎರಡರಲ್ಲಿ ಒಂದು ಪಕ್ಷದ ಜತೆಗೆ ಸೇರಿಕೊಳ್ಳಬಹುದು. ಇಲ್ಲವೇ, ನೇರವಾಗಿ ಇದರಲ್ಲಿ ಒಂದು ಪಕ್ಷಕ್ಕೆ ಸೇರಬಹುದು. ಇಂತಹ ಯಾವುದೇ ನಡೆಯು ಕಾಂಗ್ರೆಸ್‌ನ ಗೆಲುವಿನ ಸಾಧ್ಯತೆಗೆ ಭಾರಿ ತೊಡಕು ಉಂಟು ಮಾಡಬಹುದು.

ಛತ್ತೀಸಗಡ: ನಾಯಕತ್ವ ಬದಲಾವಣೆ ಅನಿವಾರ್ಯವೇ?
ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಮತ್ತು ಪ್ರಭಾವಿ ನಾಯಕ ಟಿ.ಎಸ್‌. ಸಿಂಗ್‌ದೇವ್‌ ನಡುವೆ ಮುಖ್ಯಮಂತ್ರಿ ಗಾದಿಗಾಗಿ ತಿಕ್ಕಾಟ ಆರಂಭವಾಗಿದೆ. ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಯಿಸಲಾಗುವುದು ಎಂದು ಸಿಂಗ್‌ದೇವ್‌ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ಛತ್ತೀಸಗಡದಲ್ಲಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಭರವಸೆ ನೀಡಿತ್ತು ಎಂದು ಹೇಳಲಾಗುತ್ತಿದೆ. ಈ ಮಾತನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಬಯಸಿದೆ ಎನ್ನಲಾಗಿದೆ.

<strong><em>ಭೂಪೇಶ್‌ ಬಘೆಲ್‌</em></strong>
ಭೂಪೇಶ್‌ ಬಘೆಲ್‌

ಆದರೆ, ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆಯ ಒಪ್ಪಂದವೇ ಆಗಿಲ್ಲ ಎಂದು ಬಘೆಲ್‌ ಬಣದವರು ಹೇಳುತ್ತಿದ್ದಾರೆ. 90 ಸದಸ್ಯ ಬಲದ ಛತ್ತೀಸಗಡ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 68. ಇವರಲ್ಲಿ 40ಕ್ಕೂ ಹೆಚ್ಚು ಮಂದಿ ಬಘೆಲ್‌ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಬಘೆಲ್‌ ಅವರು ತಮ್ಮ ಬೆಂಬಲಿಗ ಶಾಸಕರನ್ನು ದೆಹಲಿಗೆ ಕಳುಹಿಸಿ ಬಲಪ್ರದರ್ಶನವನ್ನೂ ನಡೆಸಿದ್ದಾರೆ.

ಬಘೆಲ್‌ ಅವರು ರಾಜೀನಾಮೆ ನೀಡುವ ಸಾಧ್ಯತೆ ಇಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಬದಲಾವಣೆಯ ಕಸರತ್ತು ಕಾಂಗ್ರೆಸ್‌ಗೆ ಭಾರಿ ಹೊಡೆತ ನೀಡುವ ಅಪಾಯ ಇದೆ.

ಪೈಲಟ್–ಗೆಹಲೋತ್ ಬಣ ರಾಜಕಾರಣ
ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಯಕ ಸಚಿನ್ ಪೈಲಟ್ ಅವರ ನೇತೃತ್ವದಲ್ಲಿ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ, ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಹಿರಿಯ ನಾಯಕ ಅಶೋಕ್ ಗೆಹಲೋತ್. ಹೈಕಮಾಂಡ್ ನಿರ್ಧಾರವನ್ನು ಪೈಲಟ್ ಆರಂಭದಲ್ಲಿ ಒಪ್ಪಿಕೊಂಡರೂ, ತಮ್ಮ ಬಣಕ್ಕೆ ಅನ್ಯಾಯವಾಗುತ್ತಿದೆ ಎಂದು 2020ರಲ್ಲಿ ಅವರು ಭಿನ್ನಮತ ಶುರು ಮಾಡಿದರು. ಬೆಂಬಲಿಗ ಶಾಸಕರನ್ನು ಹರಿಯಾಣ ಹಾಗೂ ದೆಹಲಿಯ ಹೋಟೆಲ್‌ಗಳಲ್ಲಿ ಇರಿಸಿ ಒತ್ತಡ ತಂತ್ರ ಶುರು ಮಾಡಿದರು. ತಿಂಗಳವರೆಗೆ ನಡೆದ ಈ ಜಟಾಪಟಿಯಲ್ಲಿ ಗೆಹಲೋತ್ ಕೈ ಮೇಲಾಯಿತು. ಪೈಲಟ್ ಬಣವನ್ನು ಸಮಾಧಾನಪಡಿಸಿ, ತಾತ್ಕಾಲಿಕವಾಗಿ ಮುನಿಸು ಶಮನ ಮಾಡಲಾಯಿತು.

<em><strong>ಗೆಹಲೋತ್‌–ಪೈಲಟ್‌</strong></em>
ಗೆಹಲೋತ್‌–ಪೈಲಟ್‌

ಈ ಮಧ್ಯೆ ಪಕ್ಷೇತರ ಶಾಸಕರು ಹಾಗೂ ಬಿಎಸ್‌ಪಿ ಶಾಸಕರಿಗೆ ಗೆಹಲೋತ್ ಗಾಳ ಹಾಕಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಬಿಎಸ್‌ಪಿಯಿಂದ ಗೆದ್ದಿದ್ದ ಆರು ಶಾಸಕರು ಕಾಂಗ್ರೆಸ್ ಜೊತೆ ವಿಲೀನವಾಗಿದ್ದೇವೆ ಎಂಬ ಪತ್ರ ನೀಡಿ, ಗೆಹಲೋತ್ ಬೆನ್ನಿಗೆ ನಿಂತರು. ಪೈಲಟ್ ಬೇಡಿಕೆಗಳ ಬಗ್ಗೆ ಪರಾಮರ್ಶೆ ನಡೆಸಲು ಕಾಂಗ್ರೆಸ್‌ ಮೂವರು ಸದಸ್ಯರ ಸಮಿತಿ ರಚಿಸಿತು. ವರ್ಷ ಕಳೆದರೂ ಬೇಡಿಕೆ ಈಡೇರಿಲ್ಲ ಎಂದು ಪೈಲಟ್ ಮತ್ತೆ ಬುಸುಗುಡುತ್ತಿದ್ದಾರೆ. ಅವರ ಬಣಕ್ಕೆ ಸೂಕ್ತ ಸ್ಥಾನಮಾನ ನೀಡಿ, ಸಮಾಧಾನಪಡಿಸುವ ಯಾವ ಖಚಿತ ಯತ್ನವನ್ನೂ ಕಾಂಗ್ರೆಸ್ ಮಾಡಿದಂತಿಲ್ಲ. ಪೈಲಟ್–ಗೆಹಲೋತ್ ಬಣ ಜಗಳ ಮತ್ತೊಂದು ಸುತ್ತಿನ ಭಿನ್ನಮತಕ್ಕೆ ಯಾವ ಕ್ಷಣದಲ್ಲಿ ಬೇಕಾದರೂ ದಾರಿ ಮಾಡಿಕೊಡುವ ಸಾಧ್ಯತೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT