ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಅಗಲ | ಮೊಬೈಲ್‌ ಸೇವೆ ದುಬಾರಿ

Last Updated 20 ನವೆಂಬರ್ 2020, 1:39 IST
ಅಕ್ಷರ ಗಾತ್ರ

ದೇಶದ ಖಾಸಗಿ ವಲಯದ ಎರಡು ಪ್ರಮುಖ ದೂರಸಂಪರ್ಕ ಸೇವಾ ಕಂಪನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ವೊಡಾಪೋನ್ ಐಡಿಯಾ ಲಿಮಿಟೆಡ್‌ಗಳು (ವಿಐಎಲ್‌) ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ಮೊಬೈಲ್ ಸೇವಾ ಶುಲ್ಕವನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಜಿಯೊ ಸಹ ಈ ಕಂಪನಿಗಳನ್ನು ಅನುಸರಿಸಲಿದೆ ಎನ್ನಲಾಗುತ್ತಿದೆ. ‘ಸೇವಾಶುಲ್ಕ ಏರಿಕೆ ಮಾಡಲು ನಾವು ಹಿಂದೇಟು ಹಾಕುವುದಿಲ್ಲ’ ಎಂದು ವಿಐಎಲ್‌ ಬಹಿರಂಗವಾಗಿಯೇ ಹೇಳಿದೆ. ಆದರೆ ಶುಲ್ಕ ಏರಿಕೆ ಯಾವಾಗ ಆಗಲಿದೆ ಮತ್ತು ಏರಿಕೆ ಪ್ರಮಾಣ ಎಷ್ಟಿರಲಿದೆ ಎಂಬುದನ್ನು ಕಂಪನಿಗಳು ಬಹಿರಂಗಪಡಿಸಿಲ್ಲ.

ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಭಾಗವಾಗಿ ಸರ್ಕಾರಕ್ಕೆ ವಿಐಎಲ್‌ ಮತ್ತು ಏರ್‌ಟೆಲ್‌ ಸಾವಿರಾರು ಕೋಟಿ ರೂಪಾಯಿ ಪಾವತಿಸಬೇಕಿದೆ. ಮೊಬೈಲ್‌ ಸೇವೆ ನೀಡಲು ಅಗತ್ಯವಾದ ಪರವಾನಗಿಗೆ ನೀಡಬೇಕಿದ್ದ ಶುಲ್ಕಕ್ಕೆ ಬದಲಾಗಿ ಕಂಪನಿಗಳು ತಮ್ಮ ಆದಾಯದ ಒಂದು ಭಾಗವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಿತ್ತು. ಈ ಮೊತ್ತವೇ ಎಜಿಆರ್‌.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಈ ನಿಯಮ ಜಾರಿಯಾದ ನಂತರ ಎಜಿಆರ್‌ ಅನ್ವಯವಾಗುವ ಸೇವೆಗಳ ಕುರಿತಾಗಿ ಕಂಪನಿಗಳು ಮತ್ತು ಸರ್ಕಾರದ ಮಧ್ಯೆ ತಕರಾರು ಇತ್ತು. ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 10 ವರ್ಷ ವ್ಯಾಜ್ಯ ನಡೆಯಿತು. ಎಜಿಆರ್ ಹಣವನ್ನು ಕಂಪನಿಗಳು ಪಾವತಿ ಮಾಡಲೇಬೇಕು ಎಂದು ಸುಪ್ರೀಂ ಕೋರ್ಟ್ 2019ರ ಅಕ್ಟೋಬರ್‌ನಲ್ಲಿ ಆದೇಶಿಸಿತು. ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬಾಕಿ ಇದ್ದ ಎಜಿಒಆರ್‌ ಹಣವನ್ನು ಪಾವತಿ ಮಾಡಲು, ಕಂಪನಿಗಳು 2019ರ ಡಿಸೆಂಬರ್‌ನಲ್ಲಿಯೇ ಸೇವಾ ಶುಲ್ಕವನ್ನು ಏರಿಕೆ ಮಾಡಿದ್ದವು. ಈಗ, ಮತ್ತೆ ಏರಿಕೆ ಮಾಡಲು ನಿರ್ಧರಿಸಿವೆ. ಎಜಿಆರ್ ಪಾವತಿ, ಸಾಲ ಮರುಪಾವತಿ, ಸಾಲದ ಮೇಲಿನ ಬಡ್ಡಿ ಪಾವತಿ ಮತ್ತು 5ಜಿ ತಂತ್ರಜ್ಞಾನ ಅಳವಡಿಕೆ ಮಾಡಲು ಈ ಕಂಪನಿಗಳಿಗೆ ಭಾರಿ ಮೊತ್ತದ ಅಗತ್ಯವಿದೆ.ಈ ಹಣವನ್ನು ಹೊಂದಿಸಲು ಕಂಪನಿಗಳು ಅನಿವಾರ್ಯವಾಗಿ ಸೇವಾಶುಲ್ಕ ಏರಿಕೆ ಮಾಡಬೇಕಿದೆ.

ಏರಿಕೆ ಯಾವಾಗ...

ಈ ಕಂಪನಿಗಳ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಡಿಸೆಂಬರ್ ಅಂತ್ಯದ ವೇಳೆಗೆ ಶುಲ್ಕ ಏರಿಕೆ ಮಾಡಬಹುದು. ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕು ಎಂಬುದನ್ನು ಕಂಪನಿಗಳು ಈಗಾಗಲೇ ನಿರ್ಧರಿಸಿವೆ. ವೊಡಾಫೋನ್ ಐಡಿಯಾ ಮೊದಲು ಶುಲ್ಕ ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ವೊಡಾಫೋನ್‌ ಐಡಿಯಾ ಏರಿಕೆ ಮಾಡಿದ ನಂತರ, ಭಾರ್ತಿ ಏರ್‌ಟೆಲ್‌ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಇದೆ. ಶುಲ್ಕ ಏರಿಕೆ ಮಾಡುವ ವಿಚಾರದಲ್ಲಿ ಜಿಯೊ ಕಂಪನಿಯು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಶುಲ್ಕ ಏರಿಕೆ ಸಂಬಂಧ ಕಂಪನಿಯು ತನ್ನ ನಿಲುವು ಏನು ಎಂಬುದನ್ನು ಈವರೆಗೆ ಸ್ಪಷ್ಟಪಡಿಸಿಲ್ಲ.

ಎಜಿಆರ್‌, ಸಾಲ ಮತ್ತು ನಷ್ಟದ ಹೊರೆ ಇರುವ ಕಾರಣ ವೊಡಾಫೋನ್ ಐಡಿಯಾ ಶುಲ್ಕ ಏರಿಕೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಇದೆ. ಕಂಪನಿಯು ಬಹುತೇಕ ಎಲ್ಲಾ ಪ್ಯಾಕೇಜ್‌ಗಳ ಶುಲ್ಕದಲ್ಲಿ ಶೇ 15-20ರಷ್ಟು ಏರಿಕೆ ಸಾಧ್ಯತೆ ಇದೆ. ಆದರೆ ಒಮ್ಮೆಗೇ ಈ ಪ್ರಮಾಣದಲ್ಲಿ ಏರಿಕೆ ಮಾಡುವ ಸಾಧ್ಯತೆ ಅತ್ಯಂತ ಕಡಿಮೆ. ಬದಲಿಗೆ 6-8 ತಿಂಗಳ ಅವಧಿಯಲ್ಲಿ ಹಂತಹಂತವಾಗಿ ಶುಲ್ಕ ಏರಿಕೆ ಮಾಡಲಿದೆ. ಏರ್‌ಟೆಲ್ ಸಹ ಇದೇ ಮಾದರಿ ಅನುಸರಿಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ, ಅಂದರೆ ಡಿಸೆಂಬರ್ ವೇಳೆಗೆ ಶೇ 2-3ರಷ್ಟು ಏರಿಕೆ ಆಗಲಿದೆ. ಈ ಏರಿಕೆಗೆ ಗ್ರಾಹಕರಿಂದ ವ್ಯಕ್ತವಾಗುವ ಪ್ರತಿಕ್ರಿಯೆಯನ್ನು ಆಧರಿಸಿ ಮತ್ತೆ ಶುಲ್ಕ ಏರಿಕೆ ಮಾಡಲಿವೆ.

ಡಿಸೆಂಬರ್‌ನಲ್ಲಿ ಶುಲ್ಕ ಏರಿಕೆ ಮಾಡಿದಾಗ, ಪ್ರತಿ ಬಳಕೆದಾರರ ಸರಾಸರಿ ಆದಾಯದಲ್ಲಿ (ಎಪಿಯುಆರ್‌)₹ 200-300ರಷ್ಟು ಏರಿಕೆಯನ್ನು ಕಂಪನಿಗಳು ನಿರೀಕ್ಷಿಸಿದ್ದವು. ಈಗ ಮಾಡಲಿರುವ ಏರಿಕೆಯಲ್ಲಿ ಎಪಿಯುಆರ್‌ನಲ್ಲಿ₹ 180-220ರಷ್ಟು ಏರಿಕೆಯ ಗುರಿಯನ್ನು ಕಂಪನಿಗಳು ಹಾಕಿಕೊಂಡಿವೆ.

ಡೇಟಾಗೆ ಕನಿಷ್ಠ ದರ?

ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡುವುದರಿಂದ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಆಗುವ ಅಪಾಯವಿದೆ ಎಂದು ಕಂಪನಿಗಳು ಅಂದಾಜಿಸಿವೆ. ಈಗ ಕಂಪನಿಗಳು ನೀಡುತ್ತಿರುವ 4ಜಿ ಡೇಟಾ ಪ್ಯಾಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವೂ ದೊರೆಯುತ್ತಿದೆ. ಕರೆ ಸೌಲಭ್ಯಕ್ಕಿಂತ 4ಜಿ ಡೇಟಾ ಬಳಕೆ ಹೆಚ್ಚು ಇದೆ. ಅತ್ಯಂತ ಕಡಿಮೆ ದರದಲ್ಲಿ ಡೇಟಾ ಲಭ್ಯವಿರುವ ಕಾರಣ, ಪ್ರತಿ ಜಿಬಿ ಮೇಲೆ ಕಂಪನಿಗಳು ಗಳಿಸುತ್ತಿರುವ ಆದಾಯ ಅತ್ಯಂತ ಕಡಿಮೆ ಇದೆ. ಹೀಗಾಗಿ ಪ್ರತಿ 1 ಜಿಬಿ ಡೇಟಾಗೆ ಕನಿಷ್ಠ ದರವನ್ನು ವಿಧಿಸಬೇಕು ಎಂದು ಕಂಪನಿಗಳು ಟ್ರಾಯ್‌ಗೆ ಅರ್ಜಿ ಸಲ್ಲಿಸಿವೆ.

ಆದರೆ, ಡೇಟಾಗೆ ಕನಿಷ್ಠ ದರ ವಿಧಿಸುವ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಮೂಲಗಳ ಪ್ರಕಾರ ಪ್ರತಿ 1 ಜಿಬಿ ಡೇಟಾಗೆ ಕನಿಷ್ಠ₹ 32 ದರ ವಿಧಿಸಬೇಕು ಎಂದು ಕಂಪನಿಗಳು ಒತ್ತಾಯಿಸಿವೆ. ಇದು ಜಾರಿಗೆ ಬಂದರೆ, ದೇಶದಲ್ಲಿ ಮೊಬೈಲ್ ಡೇಟಾ ದರ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಲಿದೆ. 30 ಜಿಬಿ ಡೇಟಾಗೆ₹ 900ಕ್ಕೂ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಈ ಪ್ರಮಾಣದಲ್ಲಿ ಶುಲ್ಕ ಏರಿಕೆಯಾದರೆ, ಮೊಬೈಲ್ ಡೇಟಾ ಬಳಕೆದಾರರ ಸಂಖ್ಯೆ ಇಳಿಕೆಯಾಗಲಿದೆ. ಹೀಗಾಗಿ ಈ ನಿಯಮ ಜಾರಿಗೂ ಮುನ್ನವೇ ಕಂಪನಿಗಳು ಹಂತಹಂತವಾಗಿ ಡೇಟಾ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ.

ಭಾರತದಲ್ಲಿ ಡೇಟಾ ಅಗ್ಗ

ವಿಶ್ವದ ಬೇರೆ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಅಗ್ಗದ ದರದಲ್ಲಿ ಮೊಬೈಲ್ ಡೇಟಾ ಲಭ್ಯವಿದೆ. ಜಾಗತಿಕ ಸರಾಸರಿಯಲ್ಲಿ 1 ಜಿಬಿ ಮೊಬೈಲ್ ಡೇಟಾಗೆ₹ 633 ಪಾವತಿಸಬೇಕಿದೆ. ಆದರೆ, ಭಾರತದಲ್ಲಿ 1 ಜಿಬಿ ಮೊಬೈಲ್ ಡೇಟಾಗೆ₹ 6.68 ತೆರಬೇಕಿದೆ. ಭಾರತದಲ್ಲಿ ಕಡಿಮೆ ದರಕ್ಕೆ ಡೇಟಾ ಲಭ್ಯವಿರುವ ಕಾರಣದಿಂದಲೇ ದೇಶದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಏರಿಕೆಯಾಗಿದೆ ಮತ್ತು ಡೇಟಾ ಬಳಕೆ ಏರಿಕೆಯಾಗಿದೆ.

₹6.68 (#0.09)-ಭಾರತ

₹ 633 (#8.53)-ಜಾಗತಿಕ ಸರಾಸರಿ

₹ 495 (#6.66)-ಬ್ರಿಟನ್‌

₹ 918 (#12.37)-ಅಮೆರಿಕ

₹ 5,566 (#75)-ಜಿಂಬಾಬ್ವೆ

ಟೆಲಿಕಾಂ ಕಂಪನಿಗಳ ಈಗಿನ ಸ್ಥಿತಿಗತಿ

2016ರಲ್ಲಿ ರಿಲಯನ್ಸ್ ಜಿಯೊ ಕಂಪನಿಯು ಅಡಿಯಿಟ್ಟಾಗ ದೇಶ ದಲ್ಲಿ ಎಂಟು ಕಂಪನಿಗಳು ಅಸ್ತಿತ್ವದಲ್ಲಿದ್ದವು. ಈಗ ಅವುಗಳ ಸಂಖ್ಯೆ ಕೇವಲ ನಾಲ್ಕು. ಈ ಪೈಕಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹಾಗೂ ವೊಡಾಫೋನ್ ಐಡಿಯಾ ಕಂಪನಿಗಳ ಸ್ಥಿತಿ ಡೋಲಾಯಮಾನವಾಗಿದೆ. ಹೀಗಾಗಿ ಜಿಯೊ ಮತ್ತು ಏರ್‌ಟೆಲ್‌ ಮಾತ್ರ ಟೆಲಿಕಾಂ ವಲಯವನ್ನು ಆಳುತ್ತಿರುವುದು ಸ್ಪಷ್ಟವಾಗುತ್ತಿದೆ.

ಆಗಸ್ಟ್ ತಿಂಗಳಿನಲ್ಲಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೊ ಕಂಪನಿಗಳ ಬಳಕೆದಾರರ ಸಂಖ್ಯೆ ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ಏರ್‌ಟೆಲ್ ಬಳಕೆದಾರರ ಸಂಖ್ಯೆ 28.99 ಲಕ್ಷದಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಜಿಯೊ ಬಳಕೆದಾರರ ಸಂಖ್ಯೆ 18.64 ಲಕ್ಷದಷ್ಟು ಏರಿಕೆಯಾಗಿದೆ. ಬಿಎಸ್‌ಎನ್‌ಎಲ್ ಮೊಬೈಲ್ ಬಳಕೆದಾರರ ಸಂಖ್ಯೆ 2.14 ಲಕ್ಷದಷ್ಟು ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ಹೆಚ್ಚು ಹೊಸ ಬಳಕೆದಾರರನ್ನು ಪಡೆದ ಕಂಪನಿಗಳ ಸಾಲಿನಲ್ಲಿ ಏರ್‌ಟೆಲ್ ಮೊದಲ ಸ್ಥಾನದಲ್ಲಿದೆ. ಆದರೆ, ಇದೇ ಅವಧಿಯಲ್ಲಿ ವೊಡಾಫೋನ್ ಐಡಿಯಾ ಕಂಪನಿ 12.28 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯಲ್ಲಿ ರಿಲಯನ್ಸ್ ಮುಂದಿದೆ. ಆಗಸ್ಟ್‌ನ ದತ್ತಾಂಶಗಳ ಪ್ರಕಾರ, ಜಿಯೊ ಇನ್ಫೊಕಾಮ್‌ 40.39 ಕೋಟಿ ಬಳಕೆದಾರರನ್ನು ಹೊಂದಿದ್ದು ಮುಂಚೂಣಿಯಲ್ಲಿದೆ. ಏರ್‌ಟೆಲ್ 15.89 ಕೋಟಿ, ವೊಡಾಫೋನ್‌ ಐಡಿಯಾ 11.99 ಕೋಟಿ ಹಾಗೂ ಬಿಎಸ್‌ಎನ್‌ಎಲ್ 2.37 ಕೋಟಿ ಚಂದಾದಾರನ್ನು ಹೊಂದಿವೆ.

ಆರ್ಥಿಕ ನಷ್ಟ: ಟೆಲಿಕಾಂ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ಹಲವು ಕಾರಣಗಳಿವೆ. ತರಂಗಾಂತರ ಶುಲ್ಕ, ಸೇವಾ ಶುಲ್ಕ, ಎಜಿಆರ್ ಪಾವತಿ, ನಿರ್ವಹಣೆ ವೆಚ್ಚ, ಅತಿಕಡಿಮೆ ದರದಲ್ಲಿ ಸೇವೆ ಪೂರೈಕೆಯಂತಹ ಕಾರಣಗಳು ಕಂಪನಿಗಳನ್ನು ತೀವ್ರತರವಾದ ನಷ್ಟಕ್ಕೆ ಸಿಲುಕಿದವು.

ಜಿಯೊ ಕಂಪನಿ ಆರಂಭದಲ್ಲಿ ಉಚಿತ ಮತ್ತು ಅನಿಯಮಿತ ಕರೆ ಘೋಷಿಸಿತು. ಬಹುತೇಕ ಕಂಪನಿಗಳು ಇಕ್ಕಟ್ಟಿಗೆ ಸಿಲುಕಿದ್ದು ಇಲ್ಲಿಯೇ. ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕಡಿಮೆ ಮೊತ್ತದ ದರಪಟ್ಟಿಗಳನ್ನು ಪ್ರಕಟಿಸಿ ಮಾರುಕಟ್ಟೆಯಲ್ಲಿ ಉಳಿಯುವ ಯತ್ನ ಮಾಡಿದವು. ಎಜಿಆರ್ ಪಾವತಿ ವಿಚಾರವು ಟೆಲಿಕಾಂ ಸಂಸ್ಥೆಗಳನ್ನು ಇನ್ನಷ್ಟು ಬಿಕ್ಕಟ್ಟಿಗೆ ಸಿಲುಕಿಸಿತು. ಇದನ್ನು ಬಾಕಿ ಉಳಿಸಿಕೊಂಡಿದ್ದರಿಂದ ಎಲ್ಲ ಕಂಪನಿಗಳ ಸಾಲದ ಮೊತ್ತವೇ ₹1.47 ಲಕ್ಷ ಕೋಟಿಗೆ ಮುಟ್ಟಿತು. ವೊಡಾಫೋನ್ ಐಡಿಯಾ ಹೆಚ್ಚು ಸಂಕಷ್ಟದಲ್ಲಿದ್ದು, ₹50,921.9 ಕೋಟಿ, ಏರ್‌ಟೆಲ್ ₹25,976 ಕೋಟಿ ಪಾವತಿಸಬೇಕಿವೆ. ವೊಡಾಫೋನ್‌ ಕಂಪನಿ ಬಹುತೇಕ ಮುಚ್ಚುವ ಹಂತದಲ್ಲಿತ್ತು. ಸುಪ್ರೀಂ ಕೋರ್ಟ್‌ಗೆ ಮತ್ತೆ ಮನವಿ ಮಾಡಿ ಗಡುವು ವಿಸ್ತರಣೆಗೆ ಮೊರೆ ಇಟ್ಟಿತು. ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಮತ್ತೆ 10 ವರ್ಷ ಕಾಲಾವಕಾಶವನ್ನು ನೀಡಿದ್ದು ಕೊಂಚ ನಿರಾಳ ಭಾವ ಮೂಡಿಸಿದೆ.

ದೇಶದಲ್ಲಿ ಬಳಕೆದಾರರ ಪ್ರಮಾಣ

ಜಿಯೊ;37 ಕೋಟಿ

ವೊಡಾಫೋನ್ ಐಡಿಯಾ;33.6 ಕೋಟಿ

ಏರ್‌ಟೆಲ್;32.2 ಕೋಟಿ

ಬಿಎಸ್‌ಎನ್‌ಎಲ್;11.8 ಕೋಟಿ

5ಜಿ ಎಲ್ಲಿಗೆ ಬಂತು?

ಐದನೇ ತಲೆಮಾರಿನ (5ಜಿ) ಸೇವೆ ದೇಶದಲ್ಲಿ ಸದ್ಯ ಲಭ್ಯವಿಲ್ಲ. 2021ರಲ್ಲಿ 5ಜಿ ತರಂಗಾಂತರ ಹರಾಜು ನಡೆಯುವ ನಿರೀಕ್ಷೆಯಿದೆ. ಟೆಲಿಕಾಂ ಸಚಿವಾಲಯವು ಸದ್ಯದಲ್ಲೇ ಪರೀಕ್ಷೆ ಆರಂಭಿಸುವ ಸಾಧ್ಯತೆಯಿದ್ದು, ಚೀನಾ ದೇಶದ ಕಂಪನಿಗಳನ್ನು ಬಿಟ್ಟು ಇತರ ಕಂಪನಿಗಳಿಗೆ ಆದ್ಯತೆ ಇರಲಿದೆ ಎನ್ನಲಾಗಿದೆ. ಕಂಪನಿಗಳು 5ಜಿ ಸೇವೆ ಉತ್ತಮಪಡಿಸಿಕೊಳ್ಳಲು ಪೂರ್ವ ಪ್ರಯೋಗಗಳನ್ನು ನಡೆಸುವ ಅಗತ್ಯವಿದೆ. ನಿಜವಾದ 5ಜಿ ಸೇವೆ ಸಿಗಬೇಕಾದರೆ, ಭಾರತಕ್ಕೆ ಗಣನೀಯ ಪ್ರಮಾಣದ ಫೈಬರ್ ಆಪ್ಟಿಕ್ ಕೇಬಲ್‌ಗಳ ಅವಶ್ಯಕತೆ ಇದೆ. ಆದರೆ ಈ ದಿಸೆಯಲ್ಲಿ ಮೊದಲ ಹೆಜ್ಜೆ ಇರಿಸಿರುವ ಜಿಯೊ, ದೇಶದಲ್ಲಿ 5ಜಿ ಸೇವೆ ನೀಡಲು ಸಜ್ಜಾಗಿದೆ. ಸೆಕೆಂಡ್‌ಗೆ 1 ಜಿಬಿ ವೇಗದ ನೆಟ್‌ವರ್ಕ್‌ ಪರೀಕ್ಷೆಯನ್ನು ಕ್ವಾಲ್ಕಂ ಚಿಪ್‌ಸೆಟ್ ಮೂಲಕ ಯಶಸ್ವಿಯಾಗಿ ಮಾಡಲಾಗಿದೆ ಎಂದು ಘೋಷಿಸಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಸೇವೆ ನೀಡುವುದಾಗಿ ತಿಳಿಸಿದೆ.

ವರದಿ: ಜಯಸಿಂಹ ಆರ್., ಅಮೃತಕಿರಣ್ ಬಿ.ಎಂ.

ಆಧಾರ: ಪಿಟಿಐ, ಟ್ರಾಯ್, ವಿಐಎಲ್‌, ಸ್ಪೆಂಡ್ಆನ್‌ಡೇಟಾ.ಕಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT