ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪು | ಪುನೀತ್‌ ರಾಜ್‌ಕುಮಾರ್‌ ಮೊದಲ ಪುಣ್ಯಸ್ಮರಣೆ ಇಂದು: ಸದಾ ಮಿನುಗುವ ತಾರೆ

Last Updated 28 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ತಾನೇ ಉರಿದು ಮನೆಗೆ ಬೆಳಕು ಕೊಟ್ಟ ದೀಪವಿಂದು ನಂದಾದೀಪವಾಗಿ, ಗಗನದಲ್ಲಿರುವ ತಾರೆಯಂತೆ ಮಿನುಗುತ್ತಿದೆ... ಅದರ ಕಾಂತಿ ಕುಂದಿಲ್ಲ; ಕುಂದುವುದೂ ಇಲ್ಲ. ಅಭಿಮಾನಿಗಳ ನೆಚ್ಚಿನ ‘ಅಪ್ಪು’, ಚಂದನವನದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿ ವರ್ಷ ಉರುಳಿದೆ. ಆದರೆ, ಅವರ ನೆನಪು ಇನ್ನೂ ಹಸಿರು.

‘ಪವರ್‌ ಸ್ಟಾರ್‌’ ಬಿರುದಿದ್ದರೂ ಅಭಿಮಾನಿಗಳ ನಡುವೆ ಈ ಪಟ್ಟವನ್ನು ಕೆಳಗಿಟ್ಟು ‘ನಾನೂ ನಿಮ್ಮಲ್ಲೊಬ್ಬ’ ಎಂಬಂತಿದ್ದ ‘ರಾಜಕುಮಾರ’ ಕಳೆದೊಂದು ವರ್ಷದಲ್ಲಿ ನಟನಾಗಿ ಅಷ್ಟೇ ಉಳಿದಿಲ್ಲ. ಕ್ಷಣಕ್ಷಣವೂ ಅವರನ್ನು ಜೀವಂತವಾಗಿರಿಸುವ ಹೆಜ್ಜೆಯನ್ನು ಇಟ್ಟವರು ಅಭಿಮಾನಿಗಳು. ಹಲವರಿಗೆ ‘ಅಪ್ಪು’ ದೇವರಾದರು, ಅವರಿಟ್ಟಿದ್ದ ಪುನೀತ ಹೆಜ್ಜೆ ಸಮಾಜಸೇವೆಗೆ ಮಾರ್ಗದರ್ಶನವಾಯಿತು, ಅದೆಷ್ಟೋ ಕಣ್ಣುಗಳು ಬೆಳಕು ಕಂಡವು, ಸಮಾಧಿಯ ಸುತ್ತ ಅದೆಷ್ಟೋ ಜೀವಗಳು ಬದುಕು ಕಟ್ಟಿಕೊಂಡವು! ಹೀಗೊಮ್ಮೆ ಹಿಂದಿರುಗಿ ನೋಡಿದರೆ ಈ ಅವಧಿಯಲ್ಲಿ ಭೌತಿಕವಾಗಿ ಪುನೀತ್‌ ಅವರನ್ನು ಕಾಣಲು ಅಸಾಧ್ಯವಾಗಿದ್ದರೂ, ಪ್ರತಿಯೊಬ್ಬರೂ ಪ್ರತಿ ಹೆಜ್ಜೆಯಲ್ಲೂ ‘ಪರಮಾತ್ಮ’ನನ್ನು ಕಂಡರು, ಅನುಭವಿಸಿದರು.

ಅರಗಿಸಿಕೊಳ್ಳಲಾಗದ ನೋವಿನ ನಡುವೆಯೇ ಪುನೀತ್‌ ಅವರನ್ನು ಅಭಿಮಾನಿಗಳು, ಅಷ್ಟೇ ಯಾಕೆ ಸಾಮಾನ್ಯರೂ ಸಂಭ್ರಮಿಸಿದ್ದಾರೆ. ಹೀಗೆನ್ನುವಾಗ, ಬಸ್‌ ಮೇಲಿನ ಜಾಹೀರಾತಿನಲ್ಲಿದ್ದ ಪುನೀತ್‌ ಅವರ ಭಾವಚಿತ್ರವನ್ನು ಸ್ವಚ್ಛಗೊಳಿಸಿ, ಮುತ್ತಿಕ್ಕುವ ಕೊಪ್ಪಳದ ಅಜ್ಜಿ ನೆನಪಾಗುತ್ತಾಳೆ. ಅದು ಪುನೀತ್‌ ಅವರ ಮುಗ್ಧತೆ, ಸರಳತೆಗೆ ಪುರಾವೆ. ಹೀಗೆ ಅಭಿಮಾನಿಗಳ ಕಣ್ಣಹನಿಗಳು ನೂರು ಕಥೆಗಳನ್ನು ಹೇಳುತ್ತಿವೆ. ರಾಜ್‌ಕುಮಾರ್‌ ಅವರ ಮಡಿಲಲ್ಲೇ ಮಲಗಿರುವ ರಾಜರತ್ನನ ಸಮಾಧಿಗೆ ನಮಿಸಲು ಇಂದಿಗೂ ಪ್ರತಿನಿತ್ಯ ಸಾವಿರಾರು ಮಂದಿ ಕಂಠೀರವ ಸ್ಟುಡಿಯೊಕ್ಕೆ ಹೋಗುತ್ತಿದ್ದಾರೆ. ವರ್ಷ ಉರುಳಿದರೂ, ಈ ಸಂಖ್ಯೆ ಕಡಿಮೆಯಾಗಿಲ್ಲ. ಪ್ರತಿದಿನ ಸುಮಾರು ಐದರಿಂದ ಹತ್ತುಸಾವಿರ ಜನರು ಪುನೀತ್‌ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಪುನೀತ್‌ ಜನ್ಮದಿನದಂದು ಈ ಸಂಖ್ಯೆ ಐದಾರು ಪಟ್ಟು ಹೆಚ್ಚಿತ್ತು. ಸಮಾಧಿ ಸುತ್ತ ಸದಾ ಪುನೀತ ಧ್ಯಾನ. ಟಿ–ಶರ್ಟ್‌ ಮೇಲೆ, ಮೊಬೈಲ್‌ ಕವರ್‌ಗಳಲ್ಲಿ ಹೀಗೆ ಎಲ್ಲೆಲ್ಲೂ ‘ದೊಡ್ಮನೆ ಹುಡ್ಗ’ನದ್ದೇ ದರ್ಬಾರು! ನೆಚ್ಚಿನ ನಟ ಸದಾ ಎದೆಯ ಬಳಿಯೇ ಇರಬೇಕು ಎನ್ನುವುದು ಅಭಿಮಾನಿಗಳ ‘ಅಭಿ’ಲಾಷೆ!

ಇಂದು ಪ್ರತೀ ಕನ್ನಡ ಚಲನಚಿತ್ರವೂ ಪುನೀತ್‌ ಭಾವಚಿತ್ರದೊಂದಿಗೇ ತೆರೆದುಕೊಳ್ಳುತ್ತಿದೆ. ಚಿತ್ರರಂಗದ ಕಾರ್ಯಕ್ರಮಗಳಲ್ಲಿ ‘ಅಪ್ಪು’ವಿನ ಸ್ಮರಣೆ ಮುಂದುವರಿದಿದೆ. ಪುನೀತ್‌ ಅಗಲಿದ್ದಾರೆ ಎನ್ನುವುದು ಮನಸ್ಸಿಗೆ ತಿಳಿದಿದ್ದರೂ, ಆ ನೋವು ಎದೆಗೆ ತಾಕದಂತೆ ಅಭಿಮಾನಿಗಳು ‘ಅಪ್ಪು’ವನ್ನು ಸಂಭ್ರಮಿಸುತ್ತಿದ್ದಾರೆ. ಸಿನಿಪಯಣದ ಕೊನೆಯಲ್ಲಿ ಕಾಡು ಮೇಡೆಲ್ಲಾ ಸುತ್ತಿ ಪುನೀತ್‌ ‘ಗಂಧದಗುಡಿ’ ಸೇರಿದ್ದಾರೆ. ಆ ಗಂಧ ತೇದಷ್ಟೂ ಪರಿಮಳ ನೀಡುತ್ತಿದೆ. ಪುನೀತ್‌ ಅವರನ್ನು ಬೆಳ್ಳಿತೆರೆಯ ಮೇಲೆ ಸಂಭ್ರಮಿಸಲು ಇನ್ನು ಯಾವುದೇ ಹೊಸ ಚಿತ್ರಗಳಿಲ್ಲ. ಹೀಗಿದ್ದರೂ, ಯಾವುದಾದರೂ ಒಂದು ನೆಪವನ್ನಿಟ್ಟುಕೊಂಡು ಪುನೀತ್‌ ಅವರನ್ನು ನೆನಪಿಸಿಕೊಳ್ಳುವುದು, ಸಂಭ್ರಮಿಸುವುದು ಮುಂದುವರಿದಿದೆ. ಜೊತೆಗಿರದ ಅಪ್ಪು ಇಂದಿಗೂ ಜೀವಂತ!

ಸದಾ ಹರಿಯುವ ನೀರಿನಂತೆ ಕಂಠೀರವ ಸ್ಟುಡಿಯೊಗೆ ಭೇಟಿ ನೀಡುತ್ತಲೇ ಇದ್ದಾರೆ ಅಭಿಮಾನಿಗಳು
ಸದಾ ಹರಿಯುವ ನೀರಿನಂತೆ ಕಂಠೀರವ ಸ್ಟುಡಿಯೊಗೆ ಭೇಟಿ ನೀಡುತ್ತಲೇ ಇದ್ದಾರೆ ಅಭಿಮಾನಿಗಳು

ಮತ್ತೆ ಉಸಿರಾಡಿದ ಅಪ್ಪು

2021ರ ಅ.29ರಂದು ಪುನೀತ್‌ ಅವರ ಅಕಾಲಿಕ ನಿಧನ ಇಡೀ ಕನ್ನಡ ಚಿತ್ರರಂಗವನ್ನು ಆಘಾತಕ್ಕೆ ದೂಡಿತ್ತು. ಈ ಆಘಾತದಿಂದ ಹೊರಕ್ಕೆ ಬರಲು ತಿಂಗಳುಗಳೇ ಬೇಕಾದವು. ಈ ಸಂದರ್ಭದಲ್ಲಿ ಪುನೀತ್‌ ಅವರ ಮೂರು ಪ್ರಾಜೆಕ್ಟ್‌ಗಳು ಅಂತಿಮ ಹಂತದಲ್ಲಿದ್ದವು. ಅವರು ಹೀರೊ ಆಗಿ ಕಾಣಿಸಿಕೊಂಡ ಕೊನೆಯ ಕಮರ್ಷಿಯಲ್‌ ಸಿನಿಮಾ, ಚೇತನ್‌ ಕುಮಾರ್‌ ನಿರ್ದೇಶನದ ‘ಜೇಮ್ಸ್‌’ 2022ರಲ್ಲಿ ಪುನೀತ್‌ ಅವರ ಜನ್ಮದಿನದಂದು (ಮಾರ್ಚ್‌ 17) ತೆರೆಕಂಡಿತ್ತು. ಕರ್ನಾಟಕ ಸೇರಿದಂತೆ ವಿಶ್ವವ್ಯಾಪಿ ಒಟ್ಟು 4 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದ್ದು ದಾಖಲೆ. ಬಾಕ್ಸ್‌ ಆಫೀಸ್‌ನಲ್ಲೂ ಸಿನಿಮಾ ₹100 ಕೋಟಿ ಕ್ಲಬ್‌ ಸೇರಿತ್ತು. ಡಬ್ಬಿಂಗ್‌ ಪೂರ್ಣಗೊಳ್ಳುವ ಮೊದಲೇ ಪುನೀತ್‌ ಅವರು ನಿಧನರಾದ ಕಾರಣ ನಟ ಶಿವರಾಜ್‌ಕುಮಾರ್‌ ಅವರು ಪುನೀತ್‌ ಅವರ ಪಾತ್ರಕ್ಕೆ ಧ್ವನಿ ನೀಡಿದ್ದರು. ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಪುನೀತ್‌ ಅವರ ಧ್ವನಿಯನ್ನೇ ಪುನರ್‌ರೂಪಿಸಿ, ಏಪ್ರಿಲ್‌ನಲ್ಲಿ ಈ ಸಿನಿಮಾ ರಿ–ರಿಲೀಸ್‌ ಕಂಡಿತು.

ಇದಾದ ಬಳಿಕ ಡಾರ್ಲಿಂಗ್‌ ಕೃಷ್ಣ ನಾಯಕನಾಗಿ ನಟಿಸಿದ ‘ಲಕ್ಕಿಮ್ಯಾನ್‌’ ಸಿನಿಮಾ ತೆರೆಕಂಡಿತು. ಇದರಲ್ಲಿ ದೇವರ ಪಾತ್ರದಲ್ಲೇ ಪುನೀತ್‌ ಅವರು ಕಾಣಿಸಿಕೊಂಡಿದ್ದು ಕಾಕತಾಳೀಯ! ಅಪ್ಪುವಿನಲ್ಲಿ ದೇವರನ್ನು ಕಂಡಿದ್ದ ಅಭಿಮಾನಿಗಳು ಈ ಚಿತ್ರವನ್ನು ದೇವರೇ ಎದುರಿಗೆ ಬಂದಂತೆ ಸ್ವೀಕರಿಸಿದರು.

ಪುನೀತ್‌ ಅವರ ನೈಜ ಬದುಕೇ ತೆರೆ ಮೇಲೆ ಕಂಡಿದ್ದು ‘ಗಂಧದಗುಡಿ’ಯ ಮೂಲಕ. ಅಮೋಘವರ್ಷ ನಿರ್ದೇಶನದ ಈ ಡಾಕ್ಯೂಫಿಲಂ ವೀಕ್ಷಕರ ಕಣ್ಣನ್ನು ತೇವಗೊಳಿಸಿದೆ. ಕರುನಾಡಿನ ಸೌಂದರ್ಯದ ಜೊತೆಗೆ ಪುನೀತ್‌ ಅವರ ವ್ಯಕ್ತಿತ್ವದ ಸೌಂದರ್ಯವೂ ಇಲ್ಲಿ ತಂಗಾಳಿಯಂತೆ ಸೂಸಿದೆ.

‘ಯುವರತ್ನ’ನಿಗೆ ಕರ್ನಾಟಕರತ್ನ ಗರಿ

ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನ. 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರದಾನ ಮಾಡಲಿದೆ. ಇಲ್ಲಿಯವರೆಗೆ ಎಂಟು ಜನರು ಈ ಪ್ರಶಸ್ತಿಗೆ ಭಾಜನರಾಗಿದ್ದು, 2009ರ ನಂತರ ಯಾರಿಗೂ ಇದನ್ನು ನೀಡಲಾಗಿರಲಿಲ್ಲ. ಕನ್ನಡ ಚಿತ್ರರಂಗ, ಭಾಷೆ, ಸಂಸ್ಕೃತಿಗೆ ಪುನೀತ್ ರಾಜ್‌ಕುಮಾರ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಈ ಪ್ರಶಸ್ತಿ ನೀಡಲಿದೆ.

ಅಪ್ಪು ಆಂಬುಲೆನ್ಸ್‌
ಅಪ್ಪು ಆಂಬುಲೆನ್ಸ್‌

ಕಂಡರಿಯದ ಸಂಭ್ರಮ!

ಪುನೀತ್‌ ರಾಜ್‌ಕುಮಾರ್‌ ಅವರನ್ನು ಕರುನಾಡು ಸಂಭ್ರಮಿಸಿದ್ದು ‘ಪುನೀತ ನಮನ’ ಹಾಗೂ ‘ಪುನೀತಪರ್ವ’ದಲ್ಲಿ. ಪುನೀತ ನಮನ ಕಾರ್ಯಕ್ರಮ ಖಾಸಗಿಯಾಗಿ ನಡೆದರೆ, ‘ಗಂಧದಗುಡಿ’ ಪ್ರಿ–ರಿಲೀಸ್‌ ನೆಪದಲ್ಲಿ ನಡೆದ ಪುನೀತಪರ್ವದಲ್ಲಿ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಒಂದೆಡೆ ಸೇರಿ ಅಪ್ಪುವನ್ನು ನೆನೆದರು. ಚಿತ್ರರಂಗದ ಕಲಾವಿದರೂ ಪುನೀತ್‌ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಳ್ಳಲು ಇದು ವೇದಿಕೆಯಾಯಿತು.

ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್‌:ನಟ ಪ್ರಕಾಶ್‌ ರಾಜ್‌ ಅವರು ತಮ್ಮ ಫೌಂಡೇಷನ್‌ ವತಿಯಿಂದ ಮೈಸೂರಿನಲ್ಲಿ ‘ಅಪ್ಪು ಎಕ್ಸ್‌ಪ್ರೆಸ್‌’ ಹೆಸರಿನಲ್ಲಿ ಆಂಬುಲೆನ್ಸ್‌ ಒಂದನ್ನು ಆಗಸ್ಟ್‌ನಲ್ಲಿ ಸೇವೆಗೆ ನೀಡಿದರು. ಈ ಕನಸನ್ನು ಪುನೀತಪರ್ವ ಕಾರ್ಯಕ್ರಮದಲ್ಲಿಪ್ರಕಾಶ್‌ ರಾಜ್‌ ಬಿಚ್ಚಿಟ್ಟಾಗ, ತಮಿಳು ನಟ ಸೂರ್ಯ, ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌, ತೆಲುಗು ನಟ ಚಿರಂಜೀವಿ ಅವರೂ ಇದಕ್ಕೆ ಕೈಜೋಡಿಸುವುದಾಗಿ ಹೇಳಿದರು. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಈ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್‌ ನೀಡಲು ಬೇಕಾಗುವ ಧನಸಹಾಯವನ್ನು ಯಶೋಮಾರ್ಗ ಫೌಂಡೇಷನ್‌ ಮೂಲಕ ನೀಡುವುದಾಗಿ ನಟ ಯಶ್‌ ಕೂಡಾ ಘೋಷಿಸಿದರು.

‘ಅಪ್ಪು’ಗೆ ಗೌರವ ಡಾಕ್ಟರೇಟ್‌

ಮೈಸೂರು ವಿಶ್ವವಿದ್ಯಾಲಯವು 102ನೇ ಘಟಿಕೋತ್ಸವದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್‌ ಪದವಿಯನ್ನುಕಳೆದ ಮಾರ್ಚ್‌ನಲ್ಲಿ ನೀಡಿತು. 1976ರಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಇದೇ ವಿ.ವಿ ಗೌರವ ಡಾಕ್ಟರೇಟ್‌ ನೀಡಿತ್ತು. ಅದನ್ನು ಸ್ವೀಕರಿಸುವಾಗ ರಾಜ್‌ಕುಮಾರ್‌ ಅವರಿಗೆ 47 ವರ್ಷ. ಪುನೀತ್‌ ಅವರಿಗೂ ಈ ಗೌರವ ದೊರಕಿದಾಗ 47 ವರ್ಷ!

ನಟಸಾರ್ವಭೌಮ ಹೀಗೆ ‘ಅಮರ’

*ಶಕ್ತಿಧಾಮದ ಪ್ರತಿ ಚಟುವಟಿಕೆಯಲ್ಲೂ ಪುನೀತ್‌ ಸಾನ್ನಿಧ್ಯ ಕಾಣುತ್ತಿದೆ. ಪುನೀತ್‌ ಕನಸುಗಳನ್ನು ನಟ ಶಿವರಾಜ್‌ಕುಮಾರ್‌ ದಂಪತಿ ಈಡೇರಿಸುತ್ತಿದ್ದಾರೆ. ತಮಿಳು ನಟ ವಿಶಾಲ್‌ ಕೂಡಾ ಇಲ್ಲಿನ ಯೋಜನೆಗಳಿಗೆ ಕೈಜೋಡಿಸಲು ಉತ್ಸುಕರಾಗಿ, ಶಕ್ತಿಧಾಮಕ್ಕೂ ಭೇಟಿ ನೀಡಿದ್ದಾರೆ.

*ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಡಾ.ರಾಜ್, ಪುನೀತ್ ರಾಜ್‌ಕುಮಾರ್‌ ಪರಿಕಲ್ಪನೆ ಆಧಾರಿತ ಫಲಪುಷ್ಪ ಪ್ರದರ್ಶನ ಕಳೆದ ಆಗಸ್ಟ್‌ನಲ್ಲಿ ನಡೆಯಿತು. ಈ ಬಾರಿಯ ದಸರಾ ಹಬ್ಬ ಹಾಗೂ ಯುವ ದಸರಾಗೂ ಪುನೀತ್‌ ಅವರ ಸ್ಪರ್ಶವಿತ್ತು.

*ಕಳೆದ ನವೆಂಬರ್‌ನಿಂದ ಇತ್ತೀಚಿನವರೆಗೆ ಬಿಡುಗಡೆಯಾದ ಎಲ್ಲ ಕನ್ನಡ ಸಿನಿಮಾಗಳಲ್ಲಿ (ಅಂದಾಜು 200) ಪುನೀತ್‌ ಅವರನ್ನು ಚಿತ್ರತಂಡವು ನೆನಪಿಸಿಕೊಂಡಿದೆ. ಪುನೀತ್‌ ಅವರ ಭಾವಚಿತ್ರದೊಂದಿಗೇ ಪ್ರತಿ ಸಿನಿಮಾ ಆರಂಭಗೊಂಡಿದೆ. ರಾಜ್‌ಕುಮಾರ್‌ ಅವರು ನಿಧನರಾದ ಸಂದರ್ಭದಲ್ಲೂ ಈ ರೀತಿ ಚಿತ್ರರಂಗವು ಹಲವು ತಿಂಗಳು ನೆನಪಿಸಿಕೊಂಡಿತ್ತು. ಆದರೆ ವರ್ಷ ಉರುಳಿದರೂ, ಪುನೀತ್‌ ಅವರನ್ನು ಚಿತ್ರರಂಗ ಕಿಂಚಿತ್ತೂ ಮರೆತಿಲ್ಲ.

*ನಿರ್ದೇಶಕರಾದ ಯೋಗರಾಜ್‌ ಭಟ್‌ ಹಾಗೂ ಪವನ್‌ ಒಡೆಯರ್‌ ಅವರು ಪುನೀತ್ ನಿಧನರಾದ ಬಳಿಕ ನಿರ್ಮಾಣ ಮಾಡಿ, ಪುನೀತ್‌ ಅವರಿಗೆ ಅರ್ಪಿಸಿದ್ದ ಹಾಡುಗಳು ಇಂದೂ ಹಸಿರಾಗಿವೆ.

*ಪುನೀತ್‌ ಅವರ ನೆಚ್ಚಿನ ತಾಣ ಹೊಸಪೇಟೆಯಲ್ಲಿ ರಾರಾಜಿಸುತ್ತಿದೆ ಪುನೀತ್‌ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿ.

*ಪವನ್‌ ಕುಮಾರ್‌ ನಿರ್ದೇಶನದ ‘ದ್ವಿತ್ವ’ ಸಿನಿಮಾದಲ್ಲಿ ಪುನೀತ್‌ ನಟಿಸಬೇಕಿತ್ತು. ಇದು ನನಸಾಗಲಿಲ್ಲ. ಹೀಗಿದ್ದರೂ, ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ದ್ವಿತ್ವ ಸಿನಿಮಾದಲ್ಲಿ ಪುನೀತ್‌ ಅವರ ಪಾತ್ರವನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬೇರೆಯವರ ನಟನೆಯಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲು ಪವನ್‌ ಅವರಿಗೂ ಇಷ್ಟವಿಲ್ಲ. ಪುನೀತ್ ಅವರ ವೈಬ್‌ ಇರುವ ಬೇರೊಬ್ಬ ನಟ ಸಿಗುವುದಿಲ್ಲ ಎನ್ನುವುದು ಅವರ ಅಂಬೋಣ. ಹೀಗಾಗಿ ಸದ್ಯಕ್ಕೆ ಈ ಪ್ರಾಜೆಕ್ಟ್‌ ಅನ್ನು ಅವರು ಪಕ್ಕಕ್ಕಿಟ್ಟಿದ್ದಾರೆ.

ಹೊಸಪೇಟೆಯಲ್ಲಿ ಭಾನುವಾರ ಅನಾವರಣಗೊಳ್ಳಲಿರುವ ಪುನೀತ್‌ ರಾಜಕುಮಾರ್‌ ಕಂಚಿನ ಪುತ್ಥಳಿ
ಹೊಸಪೇಟೆಯಲ್ಲಿ ಭಾನುವಾರ ಅನಾವರಣಗೊಳ್ಳಲಿರುವ ಪುನೀತ್‌ ರಾಜಕುಮಾರ್‌ ಕಂಚಿನ ಪುತ್ಥಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT