ಸೋಮವಾರ, ಆಗಸ್ಟ್ 15, 2022
22 °C

2.1 ಕೋಟಿ ಉದ್ಯೋಗ ನಷ್ಟ: ವೇತನದಾರರಿಗೆ ದೊಡ್ಡ ಕುತ್ತು, ನಷ್ಟದ ಹಲವು ಮುಖಗಳು

ಅಮೃತ ಕಿರಣ ಬಿ.ಎಂ./ಹಮೀದ್ ಕೆ./ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ದೇಶದ ಒಟ್ಟು ಉದ್ಯೋಗ ನಷ್ಟದಲ್ಲಿ ವೇತನ ಪಡೆಯುವ ವರ್ಗದ ಪ್ರಮಾಣ ಅಧಿಕ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ದತ್ತಾಂಶ ಒದಗಿಸಿದೆ. ಉಳಿದ ಉದ್ಯೋಗಗಳು ಕೊಂಚ ಮಟ್ಟಿಗೆ ಚೇತರಿಕೆ ಕಂಡರೂ, ಈ ವರ್ಗ ಮಾತ್ರ ಆಗಸ್ಟ್ ವೇಳೆಗೆ 2.1 ಕೋಟಿ ಉದ್ಯೋಗಗಳನ್ನು ಕಳೆದುಕೊಂಡಿದೆ. 2018ರಲ್ಲಿ 8.2 ಕೋಟಿ ಇದ್ದ ಉದ್ಯೋಗಗಳ ಸಂಖ್ಯೆ 2020ರ ಆಗಸ್ಟ್ ವೇಳೆಗೆ 6.5 ಕೋಟಿಗೆ ಕುಸಿದಿದೆ

***

2.1 ಕೋಟಿ ಉದ್ಯೋಗ ನಷ್ಟ: ನಿರುದ್ಯೋಗ ಸಮಸ್ಯೆಗೆ ಸರ್ಕಾರ ನಿರುತ್ತರ

ಉದ್ಯೋಗ ಸೃಷ್ಟಿ ಎಂಬುದು ಸಾಮಾಜಿಕ ಮತ್ತು ಆರ್ಥಿಕ ಅಗತ್ಯ, ಹಾಗೆಯೇ ಅದು ರಾಜಕೀಯ ಉಪಕರಣ ಕೂಡ. ಭಾರತದ ಆರ್ಥಿಕ ಪ್ರಗತಿ ಮತ್ತು ಅದರಿಂದ ಆದ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿಯಲ್ಲಿನ ಹಿನ್ನಡೆಯ ಪರಿಣಾಮದಿಂದಾದ ಉದ್ಯೋಗ ನಷ್ಟದ ಬಗ್ಗೆ ಭಾರಿ ಚರ್ಚೆ ಈ ದಶಕದಲ್ಲಿ ನಡೆದಿದೆ. ಉದ್ಯೋಗದ ಲಭ್ಯತೆ ಅಥವಾ ನಿರುದ್ಯೋಗವು ಒಂದು ಅರ್ಥ ವ್ಯವಸ್ಥೆಯ ಆರೋಗ್ಯ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಹಾಗಾಗಿಯೇ ನಿರುದ್ಯೋಗದ ಪ್ರಮಾಣವು ನಿಯಂತ್ರಣ ಮೀರದಂತೆ ನೋಡಿಕೊಳ್ಳುವುದು ಯಾವುದೇ ಸರ್ಕಾರಕ್ಕೆ ಅಥವಾ ಆಡಳಿತ ಪಕ್ಷಕ್ಕೆ ಅತ್ಯಂತ ಮುಖ್ಯ. ಆದರೆ, ಭಾರತದಲ್ಲಿ ಆರ್ಥಿಕ ಪ್ರಗತಿಯ ಹಿನ್ನಡೆ ಮತ್ತು ನಿರುದ್ಯೋಗ ಹೆಚ್ಚಳದ ಸಮಸ್ಯೆಯನ್ನು ಮರೆಮಾಚುವಲ್ಲಿ ಆಡಳಿತ ಪಕ್ಷಗಳು ಯಶಸ್ವಿಯಾದ ನಿದರ್ಶನಗಳು ಇವೆ. ಆರ್ಥಿಕ ಪ್ರಗತಿಯಲ್ಲಿನ ಹಿನ್ನಡೆ ಅಥವಾ ನಿರುದ್ಯೋಗಕ್ಕಿಂತ ಮುಖ್ಯವಾದ ವಿಚಾರಗಳು ಇವೆ ಎಂದು ಮತದಾರರಿಗೆ ಮನವರಿಕೆ ಮಾಡುವ ಚಾತುರ್ಯದಿಂದ ಇದು ಸಾಧ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನವು (ಸೆಪ್ಟೆಂಬರ್‌ 17) ನಿರುದ್ಯೋಗದ ಚರ್ಚೆಗೆ ವೇದಿಕೆ ಸೃಷ್ಟಿ ಮಾಡಿಕೊಟ್ಟಿದೆ. ಈ ದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಕಾಂಗ್ರೆಸ್‌ ಬಣ್ಣಿಸಿದೆ. ‘ಉದ್ಯೋಗ ಎಂಬುದು ಘನತೆ. ಕೇಂದ್ರ ಸರ್ಕಾರವು ಇದನ್ನು ಇನ್ನೆಷ್ಟು ಕಾಲ ನಿರಾಕರಿಸಲಿದೆ’ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. ಆದರೆ, ದೇಶದ ಯುವ ಜನರು ‘ನಿರುದ್ಯೋಗ ದಿನ’ವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನದ ರೀತಿಯಲ್ಲಿ ನಡೆಸಿದ್ದಾರೆ. 

ಕಳೆದ ಎರಡು ದಶಕಗಳ ಬಹುಪಾಲು ವರ್ಷಗಳಲ್ಲಿ ಭಾರತದ ನಿರುದ್ಯೋಗ ಪ್ರಮಾಣವು ಶೇ 4–5ರ ಆಸುಪಾಸಿನಲ್ಲಿತ್ತು. ಆದರೆ, 2006ರ ಬಳಿಕ ಉದ್ಯೋಗ ಸೃಷ್ಟಿಯು ಚುರುಕು ಪಡೆದುಕೊಂಡಿತ್ತು. 2012ರಲ್ಲಿ ನಿರುದ್ಯೋಗ ಪ್ರಮಾಣವು ಶೇ 3.8ರಷ್ಟು ಮಾತ್ರ ಇತ್ತು. ಆದರೆ, ನಂತರದ ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯು ಸ್ವಲ್ಪ ಮಂದವಾಗಿತ್ತು. 2014ರಲ್ಲಿ ನಿರುದ್ಯೋಗ ಪ್ರಮಾಣವು ಶೇ 4.9ಕ್ಕೆ ಏರಿತ್ತು (ಕೇಂದ್ರದ ಕಾರ್ಮಿಕ ಖಾತೆಯ ಮಾಹಿತಿ). ಹಾಗಾಗಿಯೇ, 2014ರ ಲೋಕಸಭಾ ಚುನಾವಣೆಯಲ್ಲಿ ನಿರುದ್ಯೋಗ ಸಮಸ್ಯೆಯೇ ಬಿಜೆಪಿಯ ಪ್ರಮುಖ ಪ್ರಚಾರ ವಿಚಾರವಾಗಿತ್ತು. ವರ್ಷಕ್ಕೆ ಎರಡು ಕೋಟಿ ಹೊಸ ಉದ್ಯೋಗ ಸೃಷ್ಟಿಸುವುದಾಗಿ ಆಗ, ಬಿಜೆಪಿಯ ಪ್ರಧಾನಿ
ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಭರವಸೆ ಕೊಟ್ಟಿದ್ದರು. 

ಇದು ಯುವ ಸಮೂಹದಲ್ಲಿ ಅತ್ಯಂತ ಉತ್ಸಾಹ ಮೂಡಿಸಿದಂತಹ ಭರವಸೆ. ಭಾರತದ ಜನಸಂಖ್ಯೆಯ ಏರಿಕೆಯ ಪ್ರಮಾಣವು ಶೇ 1ಕ್ಕಿಂತ ಸ್ವಲ್ಪ ಹೆಚ್ಚಿದೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ಜನಸಂಖ್ಯೆಯ ಏರಿಕೆ ಪ್ರಮಾಣವು ಶೇ 1.02ರಷ್ಟು. ಅಂದರೆ, ಆ ವರ್ಷ ಜನಸಂಖ್ಯೆಯು 1.38 ಕೋಟಿಯಷ್ಟು ಹೆಚ್ಚಿತ್ತು. ಪ್ರತಿ ವರ್ಷ ಹುಟ್ಟುವ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎಂಬುದು ಮೋದಿಯವರು ಕೊಟ್ಟ ಭರವಸೆಯಾಗಿತ್ತು. ಈ ಲೆಕ್ಕಾಚಾರದಲ್ಲಿ ನೋಡಿದರೆ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಆಗಿದ್ದಿದ್ದರೆ ಕೆಲವೇ ವರ್ಷಗಳಲ್ಲಿ ಭಾರತದ ನಿರುದ್ಯೋಗ ಸಮಸ್ಯೆಯು ನಿರ್ಮೂಲನೆ ಆಗಬಹುದಾಗಿತ್ತು. ಆದರೆ, ಹಾಗೆ ಆಗಲಿಲ್ಲ. 

2019ರ ಲೋಕಸಭೆ ಚುನಾವಣೆಯ ಹೊತ್ತಿಗೂ ನಿರುದ್ಯೋಗವು ದೇಶದ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿಯೇ ಉಳಿದಿತ್ತು. ವರ್ಷದ ಆರಂಭದಲ್ಲಿಯೇ, ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಯು (ಎನ್‌ಎಸ್‌ಎಸ್‌ಒ) ನಿರುದ್ಯೋಗಕ್ಕೆ ಸಂಬಂಧಿಸಿ ತಯಾರಿಸಿದ ವರದಿಯು ಸೋರಿಕೆಯಾಯಿತು. ಅದರ ಪ್ರಕಾರ, ನಿರುದ್ಯೋಗ ಪ್ರಮಾಣವು ಶೇ 6.1ಕ್ಕೆ ಏರಿಕೆ ಆಗಿತ್ತು. ಇದು 1972–73ರ ನಂತರದಲ್ಲಿ ದೇಶ ಕಂಡ ಅತಿ ಹೆಚ್ಚಿನ ನಿರುದ್ಯೋಗ ಪ್ರಮಾಣ. 19–29ರ ವಯೋಮಾನದವರಲ್ಲಿಯೇ ಅತಿ ಹೆಚ್ಚು ನಿರುದ್ಯೋಗಿಗಳು ಎಂಬ ವಿಚಾರವು ಸಮಸ್ಯೆಯ ತೀವ್ರತೆ ಇನ್ನೂ ಹೆಚ್ಚು ಎಂಬುದನ್ನು ಬಿಂಬಿಸಿತ್ತು. 

2019ರ ಚುನಾವಣಾ ಪ್ರಚಾರದಲ್ಲಿ ನಿರುದ್ಯೋಗದ ವಿಚಾರ ದೊಡ್ಡದಾಗಿಯೇ ಪ್ರಸ್ತಾಪವಾಗಿತ್ತು. ಆದರೆ, ‘ಪ್ರಬಲ ಮತ್ತು ರಾಷ್ಟ್ರೀಯವಾದಿ’ ನಾಯಕತ್ವವೇ ದೇಶಕ್ಕೆ ಎಲ್ಲಕ್ಕಿಂತ ಮುಖ್ಯವಾದುದು ಎಂಬ ಸಂದೇಶವನ್ನು ಮತದಾರರಿಗೆ ಮನದಟ್ಟು ಮಾಡುವಲ್ಲಿ ಬಿಜೆಪಿ ಯಶಸ್ವಿಯಾಯಿತು ಎಂಬುದನ್ನು ಆ ಚುನಾವಣೆಯ ಫಲಿತಾಂಶವು ತೋರಿಸಿಕೊಟ್ಟಿತು. 

ನಿರುದ್ಯೋಗದ ಬಾಣಲೆಯಿಂದ ಜನರು ಬೆಂಕಿಗೆ ಬೀಳುವಂತೆ ಮಾಡಿದ್ದು ಕೋವಿಡ್‌–19 ಎಂಬ ಸಾಂಕ್ರಾಮಿಕ. 2020ರ ಮಾರ್ಚ್‌ನಿಂದ ಆಗಿರುವ ಉದ್ಯೋಗನಷ್ಟದ ಪ್ರಮಾಣವು ಏಪ್ರಿಲ್‌ನಲ್ಲಿ ಶೇ 23.52ರಷ್ಟಕ್ಕೆ ಏರಿಕೆಯಾಗಿತ್ತು. ಕೋವಿಡ್‌ ಮತ್ತು ಲಾಕ್‌ಡೌನ್‌ ಜನರ ಉದ್ಯೋಗ ಮತ್ತು ಜೀವನೋಪಾಯಗಳನ್ನು ಕಸಿದಿದೆ. ಈಚಿನ ದಿನಗಳಲ್ಲಿ, ಪುನಶ್ಚೇತನದ ಸುಳಿವುಗಳು ಅಲ್ಲಲ್ಲಿ ಕಂಡಿವೆ. ಆದರೆ, ಉದ್ಯೋಗ ಸೃಷ್ಟಿಯು ಕೋವಿಡ್‌ನ ಹಿಂದಿನ ಸ್ಥಿತಿಗೆ ಮರಳಬಹುದು ಎಂಬ ಭರವಸೆ ಅಲ್ಲಿ ಕಾಣಿಸುತ್ತಿಲ್ಲ. 

***

ಉದ್ಯೋಗನಷ್ಟದ ಹಲವು ಮುಖಗಳು

ಕೋವಿಡೋತ್ತರ ಅವಧಿಯಲ್ಲಿ ಭಾರತದ ಯುವಜನರಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ 30ರಷ್ಟಕ್ಕೆ ಏರಬಹುದು ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ತನ್ನ ಔದ್ಯೋಗಿಕ ಟ್ರೆಂಡ್ ವರದಿಯಲ್ಲಿ ಅಂದಾಜಿಸಿದೆ. ಭಾರತದಲ್ಲಿ ಕೋವಿಡ್‌ ಪೂರ್ವದಲ್ಲೇ ನಿರುದ್ಯೋಗದ ಸಮಸ್ಯೆ ಇತ್ತು. ಕೋವಿಡ್‌ ಬಂದ ನಂತರ ನಿರುದ್ಯೋಗದ ಸಮಸ್ಯೆ ತೀವ್ರತರವಾಗಿದೆ. ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲಿ ವಿಶ್ವದಾದ್ಯಂತ ಶೇ 18ರಷ್ಟು ಯುವಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಯುವಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಹೇಳಿದೆ.

ಸಮೀಕ್ಷೆಯನ್ನು ನಡೆಸಿ, ಐಎಲ್‌ಒ ಈ ವರದಿಯನ್ನು ಸಿದ್ಧಪಡಿಸಿದೆ. ನಿರುದ್ಯೋಗ ಮತ್ತು ಉದ್ಯೋಗ ನಷ್ಟದ ಸ್ವರೂಪವನ್ನು ವಿವರಿಸುವ ಪ್ರಯತ್ನವನ್ನು ಈ ವರದಿಯಲ್ಲಿ ಐಎಲ್‌ಒ ಮಾಡಿದೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಬಿಡಿ) ಬಿಡುಗಡೆ ಮಾಡಿರುವ ವರದಿಯಲ್ಲೂ ಇದೇ ಸ್ವರೂಪದ ವಿಶ್ಲೇಷಣೆ ಇದೆ.

ಭಾರತದಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿದ 18–24 ವರ್ಷದ ಯುವಜನರಲ್ಲಿ ಶೇ 23.1ರಷ್ಟು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಹೀಗೆ ಉದ್ಯೋಗ ಕಳೆದುಕೊಂಡ ಪ್ರತಿ ಹತ್ತು ಯುವಜನರಲ್ಲಿ ನಾಲ್ವರನ್ನು ಶಾಶ್ವತವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ. ಪ್ರತಿ ಹತ್ತರಲ್ಲಿ ಆರು ಮಂದಿಯನ್ನು ವೇತನರಹಿತ ದೀರ್ಘರಜೆಯ ಮೇಲೆ ಕಳುಹಿಸಲಾಗಿದೆ. ಈ ಅವಧಿಯಲ್ಲಿ ನಮಗೆ ಬೇರೆ ಉದ್ಯೋಗ ದೊರೆತಿಲ್ಲ ಎಂದು ಸಮೀಕ್ಷೆ ವೇಳೆ ಅವರು ಮಾಹಿತಿ ನೀಡಿದ್ದಾರೆ ಎಂದು ಐಎಲ್‌ಒ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ಕೃಷಿವಲಯದಲ್ಲಿ ಹೆಚ್ಚಿನ ಉದ್ಯೋಗ ನಷ್ಟವಾಗಿದೆ ಎಂದು ಐಎಲ್‌ಒ ಮತ್ತು ಎಬಿಡಿ ವರದಿಗಳು ವಿವರಿಸಿವೆ. ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ ತಯಾರಿಕೆ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೃಷಿ ಯಂತ್ರೋಪಕರಣಗಳ ಖರೀದಿ ಪ್ರಮಾಣ ಕುಸಿದಿರುವ ಕಾರಣ, ಉದ್ಯೋಗ ನಷ್ಟವಾಗಿದೆ. ಕೃಷಿ ಕಾರ್ಮಿಕರೂ ಕೆಲಸ ಕಳೆದುಕೊಂಡಿದ್ದಾರೆ. ಕೃಷಿ ಉತ್ಪನ್ನಗಳ ಸಾಗಣೆ ವಲಯದಲ್ಲಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಕೃಷಿ ಮಾರುಕಟ್ಟೆಗಳಲ್ಲಿ ಕೆಲಸ ಕಳೆದುಕೊಂಡ ಹಮಾಲಿಗಳ ಸಂಖ್ಯೆಯೂ ದೊಡ್ಡದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಕೃಷಿಯನ್ನು ಹೊರತುಪಡಿಸಿದರೆ ನಿರ್ಮಾಣ ವಲಯದಲ್ಲಿ ಉದ್ಯೋಗವನ್ನು ಕಳೆದುಕೊಂಡವರ ಪ್ರಮಾಣ ಹೆಚ್ಚು. ಲಾಕ್‌ಡೌನ್‌ನ ಕಾರಣದಿಂದ ನಿರ್ಮಾಣ ವಲಯವು ಸಂಪೂರ್ಣ ಸ್ಥಗಿತವಾಗಿತ್ತು. ಈಗ ಲಾಕ್‌ಡೌನ್‌ ತೆರವಾಗಿದ್ದರೂ ಹಣಕಾಸು ಮತ್ತು ಕಚ್ಚಾವಸ್ತುಗಳ ಕೊರತೆಯ ಕಾರಣ ನಿರ್ಮಾಣ ಚಟುವಟಿಕೆಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ. ಹೀಗಾಗಿ ಕೆಲಸ ಕಳೆದುಕೊಂಡಿದ್ದವರಿಗೆ ಮತ್ತೆ ಕೆಲಸ ದೊರೆತಿಲ್ಲ. ನಿರ್ಮಾಣ ಚಟುವಟಿಕೆಗಳಿಗೆ ಅಗತ್ಯವಾದ ಸಿಮೆಂಟ್, ಕಬ್ಬಿಣ, ಪ್ಲಾಸ್ಟಿಕ್ ವಸ್ತುಗಳ ತಯಾರಿಕಾ ವಲಯಗಳೂ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಇಲ್ಲಿ ನಷ್ಟವಾದ ಎಲ್ಲಾ ಉದ್ಯೋಗಗಳ ಮರುಸೃಷ್ಟಿ ಈವರೆಗೆ ಆಗಿಲ್ಲ. ಇನ್ನೂ ಕೆಲವು ತಿಂಗಳು ಇದೇ ಪರಿಸ್ಥಿತಿ ಇರಲಿದೆ ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಉದ್ಯೋಗ ಕಳೆದುಕೊಂಡ 18–29 ವರ್ಷದ ಯುವಜನರಲ್ಲಿ ಬಹುಪಾಲು ಮಂದಿ ದಿನಸಿ ಅಂಗಡಿ, ಸಣ್ಣ ಹೋಟೆಲ್‌ಗಳು, ಮೊಬೈಲ್‌–ಎಲೆಕ್ಟ್ರಾನಿಕ್ಸ್‌ ಅಂಗಡಿಗಳು, ಆಡಿಟಿಂಗ್‌, ಇವೆಂಟ್ ಮ್ಯಾನೇಜ್‌ಮೆಂಟ್, ಟ್ಯಾಕ್ಸಿ ಚಾಲನೆ ವಲಯದಲ್ಲಿ ಉದ್ಯೋಗದಲ್ಲಿದ್ದವರು. ಕೆಲಸ ಕಳೆದುಕೊಂಡವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ, ‘ನಮ್ಮ ಮಾಲೀಕರು ಉದ್ದಿಮೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ’ ಎಂದು ಉತ್ತರಿಸಿದ್ದಾರೆ. ತಮಗೆ ಮುಂದೆ ಉದ್ಯೋಗ ದೊರೆಯುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಇವರಲ್ಲಿ ಯಾವುದೇ ಸ್ಪಷ್ಟನೆ ಇಲ್ಲ. ಇವರ ಭವಿಷ್ಯ ಅತಂತ್ರವಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಪ್ರತಿ ಐವರಲ್ಲಿ ನಾಲ್ವರು ತಮ್ಮ ಆದಾಯದ ಬಹುಪಾಲು ಕಡಿಮೆ ಆಗಿದೆ ಎಂದು ಹೇಳಿದ್ದಾರೆ. ಆದಾಯದಲ್ಲಿನ ಇಳಿಕೆಯು ಇವರ ದೈನಂದಿನ ಜೀವನದ ಮೇಲೆ ಕೆಟ್ಟಪರಿಣಾಮ ಬೀರಿದೆ. ಇದು ಅವರ ಕುಟುಂಬದವರ ಮೇಲೂ ಪರಿಣಾಮ ಬೀರಿದೆ. ಈ ಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮೊದಲೇ, ಆರ್ಥಿಕತೆಗೆ ಮರುಚಾಲನೆ ನೀಡಬೇಕಿದೆ. ಇದಕ್ಕಾಗಿ ಸರ್ಕಾರಗಳು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದು ಐಎಲ್‌ಒ ತನ್ನ ವರದಿಯಲ್ಲಿ ಒತ್ತಾಯಿಸಿದೆ.

***

ವೇತನದಾರರಿಗೆ ದೊಡ್ಡ ಕುತ್ತು

ವೇತನದಾರ ನೌಕರ ವರ್ಗವು ದೇಶದಲ್ಲಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡಮಟ್ಟದ ನಷ್ಟ ಎದುರಿಸಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ತಿಳಿಸಿದೆ. ಐದು ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದವರು ವೇತನದಾರರು. ಇತರೆ ಉದ್ಯೋಗಗಳು ಆರಂಭದ ಒಂದಿಷ್ಟು ನಷ್ಟದ ಬಳಿಕ ಚೇತರಿಕೆ ಕಂಡವು. ಆದರೆ ವೇತನ ಪಡೆಯುವ ಮಂದಿಯ ಉದ್ಯೋಗ ನಷ್ಟದ ಪ್ರವೃತ್ತಿ ಮುಂದುವರಿಯಿತು.

ಲಾಕ್‌ಡೌನ್ ಕಾರಣ ಉದ್ಯೋಗ ಕಳೆದುಕೊಂಡವರ ಒಟ್ಟು ಸಂಖ್ಯೆ 12.1 ಕೋಟಿ. ಈ ಪೈಕಿ  9.1 ಕೋಟಿ ಕಳೆದುಹೋಗಿದ್ದು ಏಪ್ರಿಲ್ ತಿಂಗಳಿನಲ್ಲಿ. ಆದರೆ ಈ ಅವಧಿಯಲ್ಲಿ, ವೇತನದಾರರ ಉದ್ಯೋಗ ನಷ್ಟದ ಪ್ರಮಾಣ ಕಡಿಮೆಯಿತ್ತು. ಈ ವರ್ಗವು ಶೇ 15ಕ್ಕಿಂತ ಕಡಿಮೆ ನಷ್ಟ ಅನುಭವಿಸಿತ್ತು. ಆದರೆ ಆಗಸ್ಟ್‌ನಲ್ಲಿ ಈ ವರ್ಗ ಹೆಚ್ಚು ನಷ್ಟ ಅನುಭವಿಸಬೇಕಾಯಿತು. ಬಾಧಿತರ ಸಂಖ್ಯೆ 2.1 ಕೋಟಿಗೆ ತಲುಪಿತು. ಹೀಗಾಗಿ ಉದ್ಯೋಗಗಳ ಸಂಖ್ಯೆ 8.2 ಕೋಟಿಯಿಂದ 6.5 ಕೋಟಿಗೆ ಕುಸಿದವು. ಕೈಗಾರಿಕಾ ಕಾರ್ಮಿಕರು ಮತ್ತು ಕಚೇರಿ ಕೆಲಸಗಾರರು ಹೆಚ್ಚು ಬಾಧಿತರಾಗಿದ್ದು, ಈ ನಷ್ಟ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 

ಲಾಕ್‌ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡ ಬಹುತೇಕರಿಗೆ ಆಸರೆಯಾಗಿದ್ದು ಕೃಷಿ. ಈ ಅವಧಿಯಲ್ಲಿ ಕೃಷಿ ಉದ್ಯೋಗಿಗಳ ಸಂಖ್ಯೆ 1.4 ಕೋಟಿ  ಹೆಚ್ಚಳವಾಯಿತು. ಉದ್ಯಮಶೀಲತೆಯು ಆರಂಭದಲ್ಲಿ ನಷ್ಟ ಎದುರಿಸಿದರೂ, ಆಗಸ್ಟ್ ಹೊತ್ತಿಗೆ 70 ಲಕ್ಷ ಉದ್ಯೋಗ ಸೃಷ್ಟಿಯಾಗಿ ಚೇತರಿಸಿಕೊಂಡಿತು. 

ದೇಶದಲ್ಲಿ ದುಡಿಯುವ ವರ್ಗದಲ್ಲಿ ಮೂರನೇ ಎರಡರಷ್ಟು ಭಾಗ ರೈತರು ಮತ್ತು ದಿನಗೂಲಿಗಳು ಇದ್ದಾರೆ. ವೇತನದಾರರ ಪ್ರಮಾಣ ಶೇ 21ರಿಂದ 22ರಷ್ಟಿದೆ. 

ಉದ್ಯಮಶೀಲತೆ ಬೆಳದರೂ ನೌಕರಿ ಹುಟ್ಟುತ್ತಿಲ್ಲ: ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಹೊರತಾಗಿಯೂ ವೇತನದಾರ ಉದ್ಯೋಗಗಳ ಬೆಳವಣಿಗೆ ದರ ನಿಶ್ಚಲವಾಗಿದೆ. 2016–17ರಲ್ಲಿ ಶೇ 13ರಷ್ಟಿದ್ದ ಉದ್ಯೋಗಿಗಳ ಪ್ರಮಾಣ 2019–20ರಲ್ಲಿ ಶೇ 19ಕ್ಕೆ ಏರಿದೆ. 

ಆದರೆ ಉದ್ಯಮ ವಲಯದ ಈ ಹೆಚ್ಚಳವು ವೇತನದಾರ ಉದ್ಯೋಗಗಳ ಏರಿಕೆಗೆ ಕಾರಣವಾಗಿಲ್ಲ. ಉದ್ಯಮಗಳ ಸಂಖ್ಯೆ 2016–17ರಲ್ಲಿ 5.4 ಕೋಟಿ ಇತ್ತು. ಅದು 2019–20ರವೇಳೆಗೆ 7.8 ಕೋಟಿಗೆ ತಲುಪಿದೆ. ಆದರೆ ಇದೇ ಅವಧಿಯಲ್ಲಿ ಸಂಬಳ ಪಡೆಯುವ ನೌಕರಿಗಳ ಸಂಖ್ಯೆ 8.6 ಕೋಟಿಗೆ ಸ್ಥಿರವಾಗಿದೆ. ಬಹುತೇಕವು ಸ್ವ ಉದ್ಯಮಗಳು ಆಗಿರುವುದೇ ಇದಕ್ಕೆ ಕಾರಣ. ಅವು ಯಾರಿಗೂ ಕೆಲಸ ನೀಡಿಲ್ಲ. ಅವು ಚಿಕ್ಕ ಉದ್ಯಮ ಸಂಸ್ಥೆಗಳು.. ಉದ್ಯೋಗಾಕಾಂಕ್ಷೆಗಿಂತ ಹೆಚ್ಚಾಗಿ ಜನರು ಉದ್ಯೋಗ ನೀಡುವಂತಾಗಬೇಕು ಎಂಬ ಪರಿಕಲ್ಪನೆಯನ್ನು ಸರ್ಕಾರ ಮುಂದಿಟ್ಟಿತ್ತು. ಈ ಉದ್ದೇಶವು ಯಶಸ್ವಿಯಾಗಿದೆ ಎಂದು ತೋರಿದರೂ, ಉದ್ದೇಶಿತ ರೀತಿಯಲ್ಲಿ ಅಲ್ಲ. 

ಆಧಾರ: ಸಿಎಂಐಇ, ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ವರದಿ, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಔದ್ಯೋಗಿಕ ಟ್ರೆಂಡ್‌ ವರದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು