ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಆಗಲ: ಹಿಮಮಾರುತಕ್ಕೆ ನಡುಗುತ್ತಿದೆ ಅಮೆರಿಕ

Last Updated 25 ಡಿಸೆಂಬರ್ 2022, 23:00 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಈಗ ತೀವ್ರ ಹಿಮ, ಚಳಿ, ವೇಗದ ಗಾಳಿ ಮತ್ತು ಮಳೆಯನ್ನು ಉಂಟುಮಾಡುತ್ತಿರುವ ಹಿಮ ಮಾರುತಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದನ್ನು ವಿಜ್ಞಾನಿಗಳು ವಿವರಿಸಿದ್ದಾರೆ. ಭೂಮಿಯ ವಾತಾವರಣದಲ್ಲಿನ ಸಾಮಾನ್ಯ ಪ್ರಕ್ರಿಯೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇಂತಹ ಸ್ಥಿತಿ ಬಂದೊದಗುತ್ತದೆ. ಇಂತಹ ವ್ಯತ್ಯಾಸದ ಕಾರಣದಿಂದಲೇ ಸಾಮಾನ್ಯ ಚಳಿಗಾಳಿಯು, ಹಿಮಮಾರುತದಂತಹ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಸಮುದ್ರ ಮತ್ತು ವಾತಾವರಣ ಅಧ್ಯಯನ ಸಂಸ್ಥೆಯ (ಎನ್‌ಒಎಎ) ವಿಜ್ಞಾನಿಗಳು ವಿವರಿಸಿದ್ದಾರೆ.

ಪ್ರತಿವರ್ಷ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ತಂಪಿನ ವಾತಾವರಣ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ವಾಯುಭಾರ ಕುಸಿಯುತ್ತದೆ. ಆಗ ಧ್ರುವ ಪ್ರದೇಶದ ಮೇಲ್ಮೈನಿಂದ 15–30 ಕಿ.ಮೀ. ಎತ್ತರದಲ್ಲಿ ಗಾಳಿಯು ಒಂದು ಪಟ್ಟಿಯ ಸ್ವರೂಪದಲ್ಲಿ ಸುರುಳಿ ಸುತ್ತಲಾರಂಭಿಸುತ್ತದೆ. ಇವನ್ನು ಜೆಟ್‌ ಸ್ಟ್ರೀಮ್ ಎಂದು ಕರೆಯಲಾಗಿದೆ. ಚಳಿಗಾಲವು ತೀವ್ರತೆ ಪಡೆಯುವ ಸಂದರ್ಭದಲ್ಲಿ ಈ ಮಾರುತವು ಭೂಮಧ್ಯರೇಖೆಯತ್ತ ಚಲಿಸುತ್ತವೆ. ಹೀಗೆ ಚಲಿಸುವಾಗ, ಅವುಗಳ ವ್ಯಾಪ್ತಿ ಹಿಗ್ಗುತ್ತದೆ ಮತ್ತು ತೀವ್ರತೆ ಕಡಿಮೆಯಾಗುತ್ತದೆ. ಈ ಕಾರಣದಿಂದಲೇ ಚಳಿಗಾಲ ಉಂಟಾಗುತ್ತದೆ.

ಹಲವು ಸಂದರ್ಭದಲ್ಲಿ ಭೂಮಿಯಿಂದ 30ಕಿ.ಮೀ.ನಿಂದ 90 ಕಿ.ಮೀ.ನಷ್ಟು ಎತ್ತರದಲ್ಲಿ ಮತ್ತಷ್ಟು ತೀವ್ರವಾದ ಸುಳಿಗಾಳಿ ಉಂಟಾಗುತ್ತದೆ. ವಾತಾವರಣದಲ್ಲಿ ಉಷ್ಣಾಂಶ ತೀವ್ರವಾಗಿ ಕುಸಿದಾಗ ಇದು ಉಂಟಾಗುತ್ತದೆ. ಈ ಸುಳಿಗಾಳಿಯು ಭೂಮಿಯ ಮೇಲ್ಮೈನಲ್ಲಿರುವ ಜಲಮೂಲಗಳಿಂದ, ನೀರಿನ ಕಣಗಳನ್ನು ಆವಿ ಸ್ವರೂಪದಲ್ಲಿ ಮೇಲಕ್ಕೆ ಎತ್ತುತ್ತದೆ. ಇದರಿಂದ ತೀವ್ರ ಸಾಂದ್ರತೆಯ ಮೋಡಗಳು ರೂಪುಗೊಳ್ಳುತ್ತವೆ. ಹೀಗೆ ಮೇಲೆ ಹೋದ ನೀರಿನ ಕಣಗಳು, ವಾತಾವರಣದ ಉಷ್ಣಾಂಶವನ್ನು ಮತ್ತಷ್ಟು ಕಡಿಮೆ ಮಾಡುತ್ತವೆ. ಆಗ ಇವು ಹಿಮದ ಸ್ವರೂಪ ಪಡೆದುಕೊಳ್ಳುತ್ತವೆ. ಇವುಗಳ ಸಾಂದ್ರತೆ ಮತ್ತಷ್ಟು ಹೆಚ್ಚಾದರೆ, ಹಿಮ ಸುರಿಯುತ್ತದೆ. ಇದು ಪ್ರತಿ ವರ್ಷ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ.

ಈ ಸುಳಿಗಾಳಿಯ ಕೇಂದ್ರಬಿಂದು ಅಸ್ಥಿರವಾದರೆ, ಇಡೀ ವಾತಾವರಣದ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ಸುಳಿಗಾಳಿಯ ಕೇಂದ್ರಬಿಂದುವು ಅಸ್ಥಿರವಾದರೆ, ಸುಳಿಗಾಳಿಯು ಅಡ್ಡಾದಿಡ್ಡಿ ತಿರುಗುತ್ತದೆ. ಇಂತಹ ಸುಳಿಗಾಳಿಯ ವ್ಯಾಸವು ಸಾವಿರಾರು ಕಿ.ಮೀ.ನಷ್ಟು ದೊಡ್ಡದಾಗಿರುತ್ತವೆ. ಅದರ ಕೇಂದ್ರಬಿಂದು ಅಸ್ಥಿರವಾದಾಗ ಈ ವ್ಯಾಸದಲ್ಲಿ ಬದಲಾವಣೆ ಉಂಟಾಗುತ್ತದೆ. ಸುಳಿಗಾಳಿಯು ಮೊಟ್ಟೆಯಾಕಾರ ಪಡೆಯಬಹುದು ಅಥವಾ ಎರಡು ಸುಳಿಗಾಳಿಗಳಾಗಿ ಮಾರ್ಪಾಡಾಗಬಹುದು. ಇದರ ಜತೆಯಲ್ಲಿ ಅವುಗಳ ವ್ಯಾಪ್ತಿ ಭಾರಿ ಪ್ರಮಾಣದಲ್ಲಿ ಹಿಗ್ಗುತ್ತದೆ. ಸ್ಥಿರ ಸುಳಿಗಾಳಿಯ ವ್ಯಾಪ್ತಿಯು ಉತ್ತರ ಅಥವಾ ದಕ್ಷಿಣ ಧ್ರುವದಲ್ಲೇ ಕೇಂದ್ರಿತವಾಗಿರುತ್ತದೆ. ಅಸ್ಥಿರವಾದಾಗ ಸುಳಿಗಾಳಿಯ ವ್ಯಾಪ್ತಿಯು ಉತ್ತರ ಧ್ರುವದಿಂದ ದಕ್ಷಿಣ ಮತ್ತು ಪೂರ್ವದ ಕಡೆಗೆ ಹಿಗ್ಗುತ್ತದೆ.

ಹೀಗೆ ದಕ್ಷಿಣ ಮತ್ತು ಪೂರ್ವದತ್ತ ಈ ಸುಳಿಗಾಳಿ ಚಲಿಸುವಾಗ ಅವು ತಮ್ಮ ಕೆಳಗೆ ಇರುವ ಜೆಟ್‌ಸ್ಟ್ರೀಮ್ ಅನ್ನೂ ಪ್ರಭಾವಿಸುತ್ತವೆ. ಆಗ ಜೆಟ್‌ಸ್ಟ್ರೀಮ್‌ಗಳೂ ವೃತ್ತಾಕಾರವನ್ನು ಬಿಟ್ಟು, ಮೊಟ್ಟೆಯಾಕಾರದಲ್ಲಿ ಚಲಿಸುತ್ತವೆ. ಆಗ ಸುಳಿಗಾಳಿ ಮತ್ತು ಜೆಟ್‌ ಸ್ಟ್ರೀಮ್ ಎರಡರ ವ್ಯಾಪ್ತಿಯೂ ಹಿಗ್ಗುತ್ತದೆ. ಹೀಗೆ ಹಿಗ್ಗುವಾಗ ಅವುಗಳ ಹಾದಿಯಲ್ಲಿರುವ ಸರೋವರ, ಸಾಗರಗಳಲ್ಲಿನ ಮತ್ತಷ್ಟು ನೀರನ್ನು ಆವಿ ಮಾಡುತ್ತವೆ. ಇದರಿಂದ ಈ ಸುಳಿಗಾಳಿಯಲ್ಲಿ ಇರುವ ಮೋಡಗಳ ಸಾಂದ್ರತೆ ಮತ್ತಷ್ಟು ಹೆಚ್ಚುತ್ತದೆ ಹಾಗೂ ಅವು ಹಿಮವಾಗಿ ಬೀಳಲಾರಂಭಿಸುತ್ತವೆ. ಈಗ ಅಮೆರಿಕದಲ್ಲೂ ಆಗಿರುವುದೇ ಇದೇ.

ಉತ್ತರ ಧ್ರುವದಿಂದ ದಕ್ಷಿಣದತ್ತ ಸುಳಿಗಾಳಿ ಮತ್ತು ಜೆಟ್‌ಸ್ಟ್ರೀಮ್‌ಗಳು ಬಂದಿವೆ. ಹೀಗೆ ಬರುವಾಗ ಅಮೆರಿಕದ ಉತ್ತರ ಭಾಗದಲ್ಲಿರುವ ಐದು ಮಹಾ ಸರೋವರಗಳಿಂದ (ಇವನ್ನು ಗ್ರೇಟ್‌ ಲೇಕ್ಸ್‌ ಎಂದು ಕರೆಯಲಾಗುತ್ತದೆ) ಭಾರಿ ಪ್ರಮಾಣದ ನೀರನ್ನು ಆವಿ ಮಾಡಿವೆ. ಇದರಿಂದ ಈ ಮಾರುತಗಳಲ್ಲಿನ ನೀರಿನ ಸಾಂದ್ರತೆ ಹೆಚ್ಚಾಗಿದೆ. ಇದರಿಂದ ವಾತಾವರಣ ತೀರಾ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜತೆಗೆ ಹಿಮಪಾತವಾಗುತ್ತಿದೆ. ಸುಳಿಗಾಳಿ ಮತ್ತು ಜೆಟ್ ಸ್ಟ್ರೀಮ್‌ ಒಟ್ಟಿಗೇ ಬೀಸುತ್ತಿರುವ ಕಾರಣ ಕೆಲವು ಪ್ರದೇಶದಲ್ಲಿ 100 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಗಾಳಿ ಬೀಡುತ್ತಿದೆ. ಈ ಗಾಳಿಯು ಹಿಮವನ್ನೂ ತೂರುತ್ತಿರುವ ಕಾರಣ, ಹಿಮಮಾರುತ ಉಂಟಾಗಿದೆ. ಇಡೀ ವಿದ್ಯಮಾನವನ್ನು ಒಟ್ಟಾಗಿ ‘ಬಾಂಬ್‌ ಸೈಕ್ಲೋನ್‌’ ಎಂದೂ ಕರೆಯಲಾಗುತ್ತದೆ ಎಂದುಎನ್‌ಒಎಎ ವಿವರಿಸಿದೆ.

ಇದರ ಮಧ್ಯೆ ದಕ್ಷಿಣ ಭಾಗದಿಂದ ಅಮೆರಿಕದತ್ತ ಬಿಸಿಗಾಳಿ ಬೀಸುತ್ತಿದೆ. ಶೀತಮಾರುತ ಮತ್ತು ಬಿಸಿಗಾಳಿ ಪರಸ್ಪರ ಎದುರಾಗುತ್ತಿರುವ ಪ್ರದೇಶದಲ್ಲಿ ಹಿಮ ಮಾರುತದ ಜತೆಗೆ ಮಳೆಯೂ ಆಗುತ್ತಿದೆ.

ಒಟ್ಟಾರೆ, ಅಮೆರಿಕದ 12ಕ್ಕೂ ಹೆಚ್ಚು ರಾಜ್ಯಗಳ ಮೇಲ್ಮೈ ಹಲವು ಅಡಿಗಳ ಹಿಮರಾಶಿಯಿಂದ ಮುಚ್ಚಿಹೋಗಿವೆ. ವಾತಾವರಣದಲ್ಲೂ ಹಿಮ ಇರುವ ಕಾರಣ, ಮಂದಬೆಳಕು ಉಂಟಾಗಿದೆ. ಹಿಮದ ಕಾರಣ ಜಲವಿದ್ಯುತ್ ಸ್ಥಾವರಗಳು, ಸೌರವಿದ್ಯುತ್ ಮತ್ತು ಪವನ ವಿದ್ಯುತ್ ಸ್ಥಾವರಗಳು ಸ್ಥಗಿತವಾಗಿವೆ. ಭಾರಿ ವೇಗದ ಗಾಳಿ ಬೀಸುತ್ತಿರುವ ಕಾರಣ ವಿದ್ಯುತ್ ಕಂಬಗಳು ಉರುಳಿವೆ. ಹೀಗಾಗಿ ದೇಶದ ಬಹುಪಾಲು ವಿದ್ಯುತ್ ಜಾಲವೇ ಕುಸಿದುಬಿದ್ದಿದೆ. ಹೊರಗೆ ಓಡಾಡಲೂ ಸಾಧ್ಯವಿಲ್ಲದ ಕಾರಣ, ಜನರು ಮನೆಗಳಲ್ಲೇ ಉಳಿಯಬೇಕಾಗಿದೆ. ಒಟ್ಟಾರೆ ಅಮೆರಿಕನ್ನರ ಕ್ರಿಸ್‌ಮಸ್‌ ರಜೆಯ ಮೇಲೆ ಹಿಮ ಮುಸುಕಿದೆ.

ದೀರ್ಘಾವಧಿ ಪರಿಣಾಮ

ಈ ಸ್ವರೂಪದ ಹಿಮ ಮತ್ತು ಶೀತ ಮಾರುತಗಳು ತಕ್ಷಣಕ್ಕೆ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ. ಆದರೆ, ದೀರ್ಘಾವಧಿಯಲ್ಲಿ ಪರಿಸರದ ಮೇಲೆ ಜೀವವೈವಿಧ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಕೆಲವು ಪ್ರದೇಶಗಳಲ್ಲಿ ಡಿಸೆಂಬರ್ ಎರಡನೇ ವಾರದಲ್ಲಿ ವರ್ಷದ ಅತ್ಯಂತ ಬಿಸಿ ದಿನಗಳು ದಾಖಲಾಗಿದ್ದವು. ಆದರೆ, ಒಂದೇ ವಾರದಲ್ಲಿ ಅಂತಹ ಪ್ರದೇಶಗಳಲ್ಲಿನ ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ. ಹೀಗೆ ಭಾರಿ ಪ್ರಮಾಣದ ಉಷ್ಣಾಂಶ ಕುಸಿತವು ದಿಢೀರ್ ಎಂದು ಸಂಭವಿಸಿದರೆ ಅದರಿಂದ ಪ್ರಾಣಿ ಪಕ್ಷಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೆಚ್ಚು ಚಳಿ ಇರುವ ಕಾರಣ ಪ್ರಾಣಿ ಪಕ್ಷಿಗಳು ದೇಹದ ಉಷ್ಣಾಂಶವನ್ನು ಕಾಯ್ದುಕೊಳ್ಳಲು ಸಾಮಾನ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸಬೇಕಾಗುತ್ತದೆ. ಆದರೆ, ಹಿಮ ಮುಸುಕಿರುವ ಕಾರಣ ಆಹಾರ ಲಭ್ಯತೆಯೂ ಕ್ಷೀಣಿಸಿದೆ. ಇದರಿಂದ ಹಲವು ಪ್ರಾಣಿ ಪಕ್ಷಿಗಳು ಸಾವನ್ನಪ್ಪುವ ಅಪಾಯವಿರುತ್ತದೆ. ಕೆಲವು ಪಕ್ಷಿಗಳು ಚಳಿಗಾಲದಲ್ಲಿ ಆಹಾರ ಲಭ್ಯತೆಯ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಅಮೆರಿಕಕ್ಕೂ ನೂರಾರು ಪ್ರಭೇದದ ಪಕ್ಷಿಗಳು ಈ ರೀತಿ ವಲಸೆ ಬರುತ್ತವೆ. ಆ ಪಕ್ಷಿಗಳಿಗೆ ಈಗ ಆಹಾರ ದೊರೆಯದೇ ಇರುವ ಅಪಾಯವಿದೆ. ಜತೆಗೆ ಹಲವು ಪಕ್ಷಿಗಳು ವಲಸೆಯನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಉತ್ತರ ಭಾರತಕ್ಕೂ ಶೀತ

ದೇಶದ ಉತ್ತರ ಭಾಗ ಹಾಗೂ ವಾಯವ್ಯ ಭಾಗದ ರಾಜ್ಯಗಳು ವಿಪರೀತ ಚಳಿಯಿಂದ ನಡುಗುತ್ತಿವೆ. ದೆಹಲಿ, ಚಂಡೀಗಢ, ಪಂಜಾಬ್, ಹರಿಯಾಣ ಹಾಗೂ ರಾಜಸ್ಥಾನದ ಕೆಲವು ಭಾಗಗಳಲ್ಲಿ ಉಷ್ಣಾಂಶ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಹಲವು ಕಡೆ ದಟ್ಟ ಮಂಜು ಆವರಿಸಿದೆ.

ಕ್ರಿಸ್‌ಮಸ್ ಹಬ್ಬ ಹಾಗೂ ವರ್ಷಾಂತ್ಯದ ರಜೆಯ ಹುಮ್ಮಸ್ಸಿನಲ್ಲಿದ್ದ ಜನರಿಗೆ ತೀವ್ರ ಚಳಿ ಹಾಗೂ ಮಂಜಿನ ವಾತಾವರಣವು ತಣ್ಣೀರೆರಚಿದೆ. ಮುಂದಿನ ನಾಲ್ಕು ದಿನಗಳವರೆಗೆ ಈ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ 5.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದ್ದು, ಇದು ಈ ಋತುವಿನ ಅತಿಕಡಿಮೆ ಉಷ್ಣಾಂಶವಾಗಿದೆ. ನಗರದ ಆಗಸದಲ್ಲಿ ದಟ್ಟ ಮಂಜು ಆವರಿಸಿದ್ದು, 14 ರೈಲುಗಳ ಸಂಚಾರ ವಿಳಂಬವಾಗಿದೆ ಎಂದು ಉತ್ತರ ರೈಲ್ವೆ ವಿಭಾಗ ತಿಳಿಸಿದೆ.

ಜಮ್ಮು ಕಾಶ್ಮೀರದಾದ್ಯಂತ ಉಷ್ಣಾಂಶ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಶ್ರೀನಗರದಲ್ಲಿ ಮೈನಸ್ 5.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಜಸ್ಥಾನದ ಸಿಕಾರ್‌ನಲ್ಲಿ 0.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ವರದಿಯಾಗಿದೆ. ಚುರು, ಅಲ್ವಾರ್, ಬಿಕಾನೇರ್‌ಗಳಲ್ಲಿ 5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣಾಂಶ ವರದಿಯಾಗಿದೆ. ದೆಹಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಮಂಜು ಆವರಿಸಿದ್ದು, ಅದು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಚಂಡೀಗಢ, ಪಂಜಾಬ್‌ನಲ್ಲೂ ಆವರಿಸಿರುವ ಮಂಜಿನ ಹೊದಿಕೆ ಇನ್ನಷ್ಟು ದಟ್ಟವಾಗುವ ಸಾಧ್ಯತೆಯಿದೆ. ಡಿ.27ರವರೆಗೆ ಇದೇ ಪರಿಸ್ಥಿತಿ ಇರಲಿದೆ ಎಂದು ತಿಳಿಸಿದೆ.ಇಷ್ಟೇ ಅಲ್ಲದೆ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಗೋವಾ, ಅಸ್ಸಾಂ, ತ್ರಿಪುರಾ ರಾಜ್ಯಗಳ ಕೆಲವು ಭಾಗಗಳಲ್ಲೂ ಮಂಜು ಆವರಿಸಿದೆ.

ಉತ್ತರ ಪ್ರದೇಶ ಮತ್ತು ರಾಜಸ್ಥಾನದ ವಾಯವ್ಯ ಭಾಗದ ಜನರು ಚಳಿ ಗಾಳಿಯನ್ನು ಎದುರಿಸಲಿದ್ದಾರೆ. ರಾಜಸ್ಥಾನದ ಉತ್ತರ ಭಾಗದಲ್ಲಿ ತೀವ್ರ ಸ್ವರೂಪದ ಚಳಿ ಇನ್ನೂ ಕೆಲವು ದಿನ ಇರಲಿದೆ ಎಂದು ಇಲಾಖೆ ತಿಳಿಸಿದೆ.ಪಂಜಾಬ್, ಹರಿಯಾಣ, ದೆಹಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಸೋಮವಾರದವರೆಗೂ ತೀವ್ರ ಚಳಿ ಮುಂದುವರಿಯಲಿದ್ದು, ಉಷ್ಣಾಂಶ ಇನ್ನಷ್ಟು ಕುಸಿತ ಕಾಣಲಿದೆ ಎಂದು ಅಂದಾಜಿಸಿದೆ. ದಟ್ಟ ಮಂಜು ಹಾಗೂ ತೀವ್ರ ಚಳಿಗೆ ಮೆಡಿಟರೇನಿಯನ್ ಸಮುದ್ರ ಪ್ರದೇಶದ ಹವಾಮಾನ ವಿದ್ಯಮಾನಗಳು ಕಾರಣ ಎಂದು ತಜ್ಞರು ಹೇಳಿದ್ದಾರೆ.

ಅಂಕಿ–ಅಂಶ

–48 ಡಿಗ್ರಿ ಸೆಲ್ಸಿಯಸ್

ಅಮೆರಿಕದ ವಿವಿಧ ನಗರಗಳಲ್ಲಿ ದಾಖಲಾಗಿರುವ ಸರಾಸರಿ ಉಷ್ಣಾಂಶ

17

ಶೀತಗಾಳಿ ಹಾಗೂ ಹಿಮಪಾತದಿಂದ ಮೃತಪಟ್ಟವರ ಸಂಖ್ಯೆ

60%

ಶೀತಗಾಳಿಯಿಂದ ಬಾಧಿತರಾಗಿರುವ ಅಮೆರಿಕ ಜನರ ಪ್ರಮಾಣ

20 ಕೋಟಿ

ಅಮೆರಿಕನ್ನರಿಗೆ ಎಚ್ಚರಿಕೆಯ ಸಂದೇಶ ರವಾನೆ

14 ಲಕ್ಷ

ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ವಿದ್ಯುತ್ ಸ್ಥಗಿತದಿಂದ ಕತ್ತಲು

3,300

ವಿಮಾನಗಳ ಸಂಚಾರ ರದ್ದು (ಶನಿವಾರ)

7,500

ವಿಮಾನಗಳ ಸಂಚಾರ ವಿಳಂಬ (ಶನಿವಾರ)

113 ಕಿ.ಮೀ/ಗಂಟೆ

ಅಮೆರಿಕದ ಮೇನ್‌ನಲ್ಲಿ ಬೀಸುತ್ತಿರುವ ಗಾಳಿಯ ಸರಾಸರಿ ವೇಗ

ಆಧಾರ: ಎನ್‌ಒಎಎ, ಗಾರ್ಡಿಯನ್‌, ರಾಯಿಟರ್ಸ್‌, ಎಎಫ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT