ಬುಧವಾರ, ಜೂನ್ 29, 2022
25 °C

ಆಳ–ಅಗಲ: ನಮ್ಮ ಬಾಹ್ಯಾಕಾಶ ಆಗುತ್ತಿದೆಯಾ ತ್ಯಾಜ್ಯದ ಗೋಜಲು? ಆಲಿಸ್‌ ಗೋರ್ಮನ್ ಲೇಖನ

ಆಲಿಸ್‌ ಗೋರ್ಮನ್ Updated:

ಅಕ್ಷರ ಗಾತ್ರ : | |

Prajavani

1958ರಲ್ಲಿ ಅಮೆರಿಕದ ವ್ಯಾನ್‌ಗಾರ್ಡ್‌ ಉಪಗ್ರಹ ಹಾಗೂ ಅದನ್ನು ಹೊತ್ತು ಸಾಗಿದ್ದ ರಾಕೆಟ್‌ನ ಕೆಲವು ಭಾಗಗಳು ಬಾಹ್ಯಾಕಾಶ ಸೇರುವ ಮೂಲಕ ಹೊಸ ಅಧ್ಯಾಯ ಬರೆದಿದ್ದವು. ಅದು ಮನುಷ್ಯನು ಭೂಮಿಯಾಚೆಗೆ ಅಡಿಯಿಡುವ ಸಾಮರ್ಥ್ಯ ಪಡೆದ ಮೊದಲ ಹೆಗ್ಗುರುತಾಗಿತ್ತು. ಅಂತೆಯೇ ಇದು, ಬಾಹ್ಯಾಕಾಶ ತ್ಯಾಜ್ಯ ಸೃಷ್ಟಿಸಿದ ಮೊದಲ ವಿದ್ಯಮಾನವೂ ಆಗಿತ್ತು. 

ಬಾಹ್ಯಾಕಾಶದಲ್ಲಿ ಮಾನವ ನಿರ್ಮಿತವಾದ, 10 ಸೆಂಟಿಮೀಟರ್‌ಗೂ ಹೆಚ್ಚು ಗಾತ್ರದ ಸುಮಾರು 27,000 ವಸ್ತುಗಳಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ನಂಸ್ಥೆ ‘ನಾಸಾ’ ಅಂದಾಜಿಸಿದೆ. ಇವೆಲ್ಲವನ್ನೂ ಬಾಹ್ಯಾಕಾಶ ತ್ಯಾಜ್ಯ ಎಂದು ವರ್ಗೀಕರಿಸಲಾಗಿದೆ. ಇವುಗಳಿಂದ ಈಗಾಗಲೀ ಅಥವಾ ಭವಿಷ್ಯದಲ್ಲಾಗಲೀ ಯಾವುದೇ ಪ್ರಯೋಜನವಿಲ್ಲ. ಹಳೆಯ ಉಪಗ್ರಹಗಳು, ರಾಕೆಟ್‌ನ ಅವಶೇಷಗಳು, ಉಪಗ್ರಹಗಳ ಸ್ಫೋಟದ ಬಳಿಕ ಉಳಿದುಕೊಂಡಿರುವ ತುಣುಕುಗಳು ಸಾವಿರ ಸಂಖ್ಯೆಯಲ್ಲಿವೆ. ಇವಲ್ಲದೇ, ಲಕ್ಷಾಂತರ ಸಂಖ್ಯೆಯ ದೂಳಿನ ಗಾತ್ರದ ಕಣಗಳು ಬಾಹ್ಯಾಕಾಶದಲ್ಲಿ ಉಳಿದುಕೊಂಡಿವೆ. 

ವೇಗವಾಗಿ ಸಂಚರಿಸುವ ಎರಡು ಉಪಗ್ರಹಗಳು ಪರಸ್ಪರ ಡಿಕ್ಕಿ ಹೊಡೆದಾಗ ಆಗುವ ಅಪಾಯ ಅಧಿಕ. ಇಂತಹ ಘರ್ಷಣೆ ತೀವ್ರ ಸ್ವರೂಪದಲ್ಲಿದ್ದಾಗ ಅದನ್ನು ‘ಕೆಸ್ಲರ್ ಸಿಂಡ್ರೋಮ್’ ಎನ್ನಲಾಗುತ್ತದೆ. ಈ ವಿದ್ಯಮಾನಗಳು ಹೆಚ್ಚಾದರೆ, ಭೂ ಕಕ್ಷೆಯನ್ನು ಬಳಸುವುದೇ ಕಷ್ಟವಾಗಬಹುದು. 

‘ಸ್ಪೇಸ್‌ ಎಕ್ಸ್‌’ನಂತಹ ಖಾಸಗಿ ಸಂಸ್ಥೆಗಳು ಇತ್ತೀಚೆಗೆ ಬಾಹ್ಯಾಕಾಶ ಯೋಜನೆಗಳನ್ನು ಪೈಪೋಟಿಗೆ ಬಿದ್ದಂತೆ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಪೇಸ್‌ ಎಕ್ಸ್ ಸಂಸ್ಥೆಯು ಮುಂದಿನ 10 ವರ್ಷಗಳಲ್ಲಿ 1 ಲಕ್ಷ ಉಪಗ್ರಹಗಳನ್ನು ಉಡ್ಡಯನ ಮಾಡುವ ಯೋಜನೆ ಹಾಕಿಕೊಂಡಿದೆ. 2021ರಲ್ಲಿ ರಷ್ಯಾ ಪ್ರಯೋಗಿಸಿದ ಉಪಗ್ರಹ ನಿಗ್ರಹ ಕ್ಷಿಪಣಿಯು ಪ್ರತಿ ಬಾರಿ ಉಪಗ್ರಹವೊಂದನ್ನು ಸ್ಫೋಟಿಸಿದಾಗ ಸಾವಿರಾರು ತುಣುಕು ತ್ಯಾಜ್ಯ ಸೃಷ್ಟಿ ಆಗುತ್ತದೆ.   

ಬಾಹ್ಯಾಕಾಶ ತ್ಯಾಜ್ಯ ಎಂದರೇನು, ಎಷ್ಟಿದೆ, ಎಲ್ಲಿದೆ ಎಂಬ ಬಗ್ಗೆ ನಮಗೆ ಮಾಹಿತಿಯ ಕೊರತೆ ಇರುವುದೇ ದೊಡ್ಡ ಸಮಸ್ಯೆ. ಒಂದು ಬಾಹ್ಯಾಕಾಶ ತುಣುಕು ಮತ್ತೊಂದನ್ನು ಯಾವಾಗ ಸಂಧಿಸುತ್ತದೆ ಹಾಗೂ ಅದು ಕೆಸ್ಲರ್ ಸಿಂಡ್ರೋಮ್‌ ಆಗಿ ಪರಿವರ್ತನೆ ಆಗುವಂತಿದೆಯೇ ಎಂಬ ಮಾಹಿತಿ ನಮ್ಮಲ್ಲಿಲ್ಲ.

ಏನೂ ಮಾಡದೇ ಇರುವುದು
ಬಾಹ್ಯಾಕಾಶ ತ್ಯಾಜ್ಯವನ್ನು ವಿಲೇವಾರಿ ಮಾಡಲು ಏನೂ ಮಾಡದೇ ಇರುವುದೂ ಒಂದು ಕ್ರಮ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಡಿಮೆ ಎತ್ತರದ ಕಕ್ಷೆಗಳಲ್ಲಿ ಇರುವ ಬಾಹ್ಯಾಕಾಶ ತ್ಯಾಜ್ಯವು ಕಾಲಕ್ರಮೇಣ ಭೂಮಿಯ ವಾತಾವರಣವನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಹೀಗೆ ಪ್ರವೇಶಿಸುವಾಗ ಉಂಟಾಗುವ ಘರ್ಷಣೆಯಲ್ಲಿ ಅವು ಸುಟ್ಟುಹೋಗುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ನೈಸರ್ಗಿಕವಾಗಿ ನಡೆಯುವ ಈ ಕ್ರಿಯೆಯ ಮೂಲಕ ಬಾಹ್ಯಾಕಾಶ ತ್ಯಾಜ್ಯಗಳು ವಿಲೇವಾರಿಯಾಗುತ್ತವೆ. ಆದರೆ, ಇದರಲ್ಲಿ ಎರಡು ಸಮಸ್ಯೆಗಳಿವೆ. ಹೀಗೆ ತ್ಯಾಜ್ಯಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಲು ಸಾವಿರಾರು ವರ್ಷಗಳು ಬೇಕು. ಈ ಅವಧಿಯಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಮತ್ತೆ ಉಪಗ್ರಹಗಳನ್ನು ಮತ್ತು ರಾಕೆಟ್‌ಗಳನ್ನು ಕಳಿಸಬಾರದು. ಹೀಗೆ ಕಳುಹಿಸುತ್ತಿದ್ದರೆ ಬಾಹ್ಯಾಕಾಶ ಸೇರುವ ಕೃತಕ ವಸ್ತುಗಳ ಸಂಖ್ಯೆಯು, ಅಲ್ಲಿಂದ ವಿಲೇವಾರಿಯಾಗುವ ತ್ಯಾಜ್ಯದ ಸಂಖ್ಯೆಗಿಂತ ಅಧಿಕವಾಗಿರುತ್ತದೆ. ಇದರಿಂದ ತ್ಯಾಜ್ಯದ ಪ್ರಮಾಣ ಕಡಿಮೆಯಾಗುವುದೇ ಇಲ್ಲ. ಅಲ್ಲದೆ, ತ್ಯಾಜ್ಯಗಳು ವಾತಾವರಣವನ್ನು ಪ್ರವೇಶಿಸುವಾಗ ದಹನವಾಗಿ ಸೃಷ್ಟಿಯಾಗುವ ಅಪಾಯಕಾರಿ ಅನಿಲ ಮತ್ತು ಹೊಗೆಯು ಓಜೋನ್ ಪದರಕ್ಕೆ ನಿಯುಂಟುಮಾಡುತ್ತವೆ. ಈ ಎಲ್ಲಾ ಕಾರಣಗಳಿಗಾಗಿ ಈ ಮಾರ್ಗೋಪಾಯವು ಕಾರ್ಯಸಾಧುವಲ್ಲ ಎಂಬ ವಾದವಿದೆ.

ಮಸಣ ಕಕ್ಷೆಗೆ ದೂಡುವುದು
ಹೆಚ್ಚು ದಟ್ಟಣೆ ಇಲ್ಲದ ಕಕ್ಷೆಗಳಿಗೆ ಈ ತ್ಯಾಜ್ಯವನ್ನು ದೂಡುವುದೂ ಸಹ ಒಂದು ಪರಿಣಾಮಕಾರಿ ಮಾರ್ಗೋಪಾಯ ಎಂದು ಪ್ರತಿಪಾದಿಸಲಾಗಿದೆ. ಯಾವುದೇ ಕಾರ್ಯಾಚರಣೆಗೆ ಬಳಕೆಯಾಗದೇ ಇರುವ ಉಪಗ್ರಹಗಳು, ರಾಕೆಟ್‌ನ ಕವಚ ಮತ್ತು ಬಿಡಿಭಾಗಗಳು, ಛಿದ್ರವಾಗಿರುವ ಉಪಕರಣಗಳನ್ನು ಬಾಹ್ಯಾಕಾಶ ಬಲೆ, ಬಾಣಲೆಯಂತಹ ಪರಿಕರಗಳನ್ನು ಬಳಸಿ ಕಲೆ ಹಾಕುವುದು. ಆನಂತರ, ಹೆಚ್ಚು ಬಳಕೆಯಲ್ಲಿ ಇರದ ಕಕ್ಷೆಗಳತ್ತ ಅವನ್ನು ಒಯ್ದು ಬಿಡುಗಡೆ ಮಾಡುವುದು ಈ ಮಾರ್ಗೋಪಾಯದ ಕಾರ್ಯವಿಧಾನ. ಹೀಗೆ ತ್ಯಾಜ್ಯವನ್ನು ಬಿಡುಗಡೆ ಮಾಡುವ ಕ್ಷಕೆಗಳನ್ನು ಮಸಣ ಕಕ್ಷೆ ಎಂದು ಕರೆಯಲಾಗುತ್ತದೆ. ಈ ಕಾರ್ಯಾಚರಣೆಗೆ ಅಗತ್ಯವಿರುವ ಉಪಕರಣಗಳನ್ನು ಅಭಿವೃದ್ಧಿಪಡಿಸುವ ಕಾರ್ಯಗಳು ಜಗತ್ತಿನ ಹಲವೆಡೆ ನಡೆಯುತ್ತಿದೆ. ಸುರೇ ಸ್ಯಾಟಲೈಟ್ ಟೆಕ್ನಾಲಜಿ (ಎಸ್‌ಎಸ್‌ಟಿಎಲ್‌) ಎಂಬ ಕಂಪನಿ 2019ರಲ್ಲಿ ಬಾಹ್ಯಾಕಾಶದಲ್ಲಿನ ತ್ಯಾಜ್ಯವನ್ನು ತನ್ನತ್ತ ಸೆಳೆದುಕೊಳ್ಳುವ ಮುಳ್ಳುಗುದ್ದಲಿಯಂತಹ ಉಪಕರಣವನ್ನು ಅಭಿವೃದ್ಧಿಪಡಿಸಿತ್ತು. ಅದರ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತ್ತು. ಈ ಮುಳ್ಳುಗುದ್ದಲಿಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಮಸಣ ಕಕ್ಷೆಗೆ ಒಯ್ದು ಬಿಡುಗಡೆ ಮಾಡುವ ಉಪಕರಣವನ್ನು ಎಸ್‌ಎಸ್‌ಟಿಎಲ್‌ ಮತ್ತು ಸಿಂಗಪುರದ ಆಸ್ಟ್ರೋಸ್ಕೇಲ್‌ ಎಂಬ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿವೆ. ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಸಹಯೋಗದಲ್ಲಿ ಸ್ವಿಡ್ಜರ್ಲೆಂಡ್‌ನ ಕ್ಲಿಯರ್‌ಸ್ಪೇಸ್‌ ಎಂಬ ಕಂಪನಿಯು, ಇಂತಹದ್ದೇ ಉಪಕರಣವನ್ನು ಅಭಿವೃದ್ಧಿಪಡಿಸುತ್ತಿದೆ. 2025ರಲ್ಲಿ ಅದನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿ ಹಾಕಿಕೊಳ್ಳಲಾಗಿದೆ.

ಮರುಬಳಕೆ

ಬಾಹ್ಯಾಕಾಶ ತ್ಯಾಜ್ಯವನ್ನು ಮರುಬಳಕೆ ಮಾಡುವುದು ಸಹ ವಿಲೇವಾರಿಯ ಒಂದು ಸ್ವರೂಪ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈಗ ಬಳಕೆಯಲ್ಲಿ ಇರದೇ ಇರುವ ಉಪಗ್ರಹಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿರುವುದಿಲ್ಲ. ಅವುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಉದ್ದೇಶ ಈಡೇರಿರುತ್ತದೆ ಅಷ್ಟೆ. ಅಂತಹ ಉಪಗ್ರಹಗಳನ್ನು ಬೇರೆ ಉದ್ದೇಶಗಳಿಗೆ ಮತ್ತು ಕಾರ್ಯಾಚರಣೆಗಳಿಗೆ ಬಳಕೆ ಮಾಡಿಕೊಳ್ಳಬಹುದು. ಛಿದ್ರವಾಗಿರುವ ವಸ್ತುಗಳನ್ನು ಬಾಹ್ಯಾಕಾಶದಲ್ಲಿ ರಾಕೆಟ್‌ ಇಂಧನವಾಗಿ ಮರುಬಳಕೆ ಮಾಡಬಹುದು. ಈ ವಸ್ತುಗಳನ್ನು ಬಾಹ್ಯಾಕಾಶದಲ್ಲಿ ಗಗನಯಾನಿಗಳ ಸೂರುಗಳನ್ನು ನಿರ್ಮಿಸಲು ಬಳಸಬಹುದು. ರಾಕೆಟ್‌ನ ಕವಚಗಳನ್ನು ಈ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವ ಪ್ರಯೋಗವನ್ನು ಆಸ್ಟ್ರೇಲಿಯಾದ ನ್ಯೂಮನ್ ಸ್ಪೇಸ್‌ ನಡೆಸುತ್ತಿದೆ. ಬಾಹ್ಯಾಕಾಶದಲ್ಲೇ ದೀರ್ಘಾವಧಿಯಲ್ಲಿ ಕರಗಿಹೋಗುವ ವಸ್ತುಗಳನ್ನು ರಾಕೆಟ್‌ ಮತ್ತು ಉಪಗ್ರಹ ತಯಾರಿಕೆಯಲ್ಲಿ ಬಳಸುವ ಬಗ್ಗೆ ಜಪಾನ್‌ನಲ್ಲಿ ಸಂಶೋಧನೆ ನಡೆಯುತ್ತಿದೆ.

ದುರ್ಬಳಕೆಯ ಅಪಾಯ
ಬಾಹ್ಯಾಕಾಶ ತ್ಯಾಜ್ಯವನ್ನು ವಿಲೇವಾರಿ ಮಾಡುವ ಯಾವುದೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರೂ, ಅದರ ಜತೆಯಲ್ಲಿ ದೊಡ್ಡ ಅಪಾಯವು ಇದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯ ವಿಲೇವಾರಿ ತಂತ್ರಜ್ಞಾನವನ್ನು ಸಕ್ರಿಯವಾಗಿರುವ ಉಪಗ್ರಹಗಳನ್ನು ನಾಶ ಮಾಡಲೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಒಂದು ದೇಶವು, ಮತ್ತೊಂದು ದೇಶದ ಬಾಹ್ಯಾಕಾಶ ಸ್ವತ್ತುಗಳನ್ನು ನಾಶ ಮಾಡಬಹುದು ಮತ್ತು ಆ ಮೂಲಕ ಆ ದೇಶದ ಸಂಪರ್ಕ–ಸಂವಹನ ವ್ಯವಸ್ಥೆ, ಹವಾಮಾನ ಮುನ್ಸೂಚನೆ ವ್ಯವಸ್ಥೆ, ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವ ಅಪಾಯವಿರುತ್ತದೆ. ಇದೆಲ್ಲವೂ ಬಾಹ್ಯಾಕಾಶ ಸಮರಕ್ಕೆ ಕಾರಣವಾಗುವ ಅಪಾಯವೂ ಇದೆ. ಹೀಗಾಗಿ ಇಂತಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಾಗ, ಅವುಗಳ ದುರ್ಬಳಕೆಯ ಸಾಧ್ಯತೆಗಳನ್ನೂ ಪರಿಗಣಿಸಬೇಕು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಪರಿಹಾರ ಮಾರ್ಗಗಳೇನು?
ಬಾಹ್ಯಾಕಾಶದಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಹಲವು ಮಾರ್ಗೋಪಾಯಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಅವುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆಯೂ ಪ್ರಯೋಗಗಳು ನಡೆಯುತ್ತಿವೆ. ಈ ಮಾರ್ಗೋಪಾಯಗಳ ಸಾಧಕ–ಬಾಧಕಗಳನ್ನೂ ಪರಿಶೀಲಿಸಲಾಗಿದೆ. ವಿವಿಧ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಈ ದಿಸೆಯಲ್ಲಿ ಪ್ರಯೋಗಗಳನ್ನು ನಡೆಸುತ್ತಿವೆ. ಆದರೆ, ‘ಏನೇ ಮಾಡಿದರೂ ಬಾಹ್ಯಾಕಾಶದಿಂದ ಈ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಸಾಧ್ಯವಿಲ್ಲ. ತ್ಯಾಜ್ಯವು ಬಾಹ್ಯಾಕಾಶದಲ್ಲಿ ಇರಲಿದೆ’ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ತಂತ್ರಜ್ಞಾನದ ಆವಿಷ್ಕಾರ ಬೇಕು
ಬಾಹ್ಯಾಕಾಶದ ‘ಕತ್ತಲ ತಾಣ’ಗಳಲ್ಲಿ ಹರಡಿರುವ ಸಣ್ಣ ಸಣ್ಣ ತುಣುಕುಗಳು ಮತ್ತು ದೂಳಿನ ಕಣಗಳು ಗೋಚರಿಸುವುದಿಲ್ಲ. ಮೇಲಿನ ಕಕ್ಷೆಯಲ್ಲಿರುವ ಈ ವಸ್ತುಗಳನ್ನು ಭೂಮಿಯ ಮೇಲ್ಮೈನಿಂದ ನೋಡುವುದು ಕಷ್ಟ. ಬಾಹ್ಯಾಕಾಶ ತ್ಯಾಜ್ಯಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನದ ಆವಿಷ್ಕಾರವು ಈ ಸಮಸ್ಯೆಗೆ ಪರಿಹಾರ ಒದಗಿಸಬಲ್ಲದು. 2019ರಲ್ಲಿ ನ್ಯೂಜಿಲೆಂಡ್‌ನ ಲಿಯೊಲ್ಯಾಬ್ಸ್ ಸಂಸ್ಥೆಯು ಹೊಸ ಬಾಹ್ಯಾಕಾಶ ರೇಡಾರ್ ರೂಪಿಸಿತ್ತು. ಇದು ಪೆಸಿಫಿಕ್ ವಲಯದಲ್ಲಿ ಕೆಲವು ಕತ್ತಲ ತಾಣಗಳನ್ನು ಗುರುತಿಸಿತ್ತು. ಭೂ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳ ಸ್ಥಿತಿಯ ಮೇಲ್ವಿಚಾರಣೆಯೂ ಸೇರಿದಂತೆ ಭೂ ಕಕ್ಷೆಯಲ್ಲಿ ನಡೆಯುವ ವಿದ್ಯಮಾನಗಳ ಮೇಲೆ ನಿಗಾ ವಹಿಸುವ ಸಾಮರ್ಥ್ಯವನ್ನು ಎಚ್‌ಇಒ ರೊಬಾಟಿಕ್ಸ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ.

ಅಂತರರಾಷ್ಟ್ರೀಯ ಸಹಕಾರ

ಬಾಹ್ಯಾಕಾಶ ದಟ್ಟಣೆ ನಿರ್ವಹಣೆಯು ಈ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಕ್ರಮ. ಬಾಹ್ಯಾಕಾಶ ವಸ್ತುಗಳ ಸಂಘರ್ಷವನ್ನು ತಪ್ಪಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ವಿನಿಮಯ, ಸಹಕಾರ ಮೊದಲಾದ ಕ್ರಮಗಳಿಂದ ಬಾಹ್ಯಾಕಾಶವನ್ನು ದಕ್ಷತೆ ಹಾಗೂ ಸುಸ್ಥಿರವಾಗಿ ಬಳಸಿಕೊಳ್ಳುವುದು ಬಾಹ್ಯಾಕಾಶ ದಟ್ಟಣೆ ನಿರ್ವಹಣೆಯ ಉದ್ದೇಶ. ಅಂತರ್‌ಸಂಸ್ಥೆ ಬಾಹ್ಯಾಕಾಶ ತ್ಯಾಜ್ಯ ಸಹಕಾರ ಸಮಿತಿಯು (ಎಐಡಿಸಿ) ಬಾಹ್ಯಾಕಾಶದಲ್ಲಿ ತ್ಯಾಜ್ಯ ಶೋಧ, ಪ್ರಗತಿಯ ಮೇಲ್ವಿಚಾರಣೆಯಲ್ಲಿ ಸಹಕಾರ ಒದಗಿಸುತ್ತದೆ. ಪ್ರತಿಯೊಂದು ಬಾಹ್ಯಾಕಾಶ ಯೋಜನೆಯು ತ್ಯಾಜ್ಯ ನಿರ್ವಹಣೆ ಮಾಡುವ ಕುರಿತಂತೆ ಈ ಸಮಿತಿ ಶಿಫಾರಸು ಮಾಡುತ್ತದೆ. ವಿಶ್ವಸಂಸ್ಥೆಯ ‘ಬಾಹ್ಯಾಕಾಶ ವಿದ್ಯಮಾನ ಕಚೇರಿ’ ಹಾಗೂ ‘ಬಾಹ್ಯಾಕಾಶದ ಶಾಂತಿಯುತ ಬಳಕೆ ಸಮಿತಿ’ಗಳು ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸಂಸ್ಥೆಗಳೆನಿಸಿವೆ. ದೀರ್ಘಾವಧಿಯ ಸುಸ್ಥಿರ ಬಾಹ್ಯಾಕಾಶ ಚಟುವಟಿಕೆ ಕುರಿತಂತೆ ವಿಶ್ವಸಂಸ್ಥೆಯು 2018ರಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಬಾಹ್ಯಾಕಾಶ ಕಾರ್ಯಕ್ರಮಗಳ ಮೂಲಕ ಯಾವ ಸಂಸ್ಥೆಯೂ ತ್ಯಾಜ್ಯ ಉತ್ಪಾದನೆಗೆ ಕಾರಣವಾಗಬಾರದು ಎಂದು ಎಲ್ಲ ಸರ್ಕಾರಗಳಿಗೆ ಮಾರ್ಗಸೂಚಿ ನಿರ್ದೇಶನಗಳನ್ನು ನೀಡಿತ್ತು. ತ್ಯಾಜ್ಯ ಉತ್ಪಾದನೆ ಕಡಿತಗೊಳಿಸುವ ಕುರಿತಂತೆ ನಾಸಾ, ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳೂ ನಿಯಮಗಳನ್ನು ರೂಪಿಸಿವೆ. ಕಾರ್ಯಾಚರಣೆ ಪೂರ್ಣಗೊಳಿಸಿದ ಉಪಗ್ರಹದ ಇಂಧನ, ಬ್ಯಾಟರಿ ಸಾಮರ್ಥ್ಯಗಳನ್ನು ನಿಷ್ಕ್ರಿಯಗೊಳಿಸುವುದರಿಂದ ಘರ್ಷಣೆ ಆಗುವುದನ್ನು ತಗ್ಗಿಸಬಹುದು ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ. ಆದರೆ ಉಡ್ಡಯನ ಮಾಡಲಾಗುವ ಶೇ 60ರಷ್ಟು ಉಪಗ್ರಹಗಳಲ್ಲಿ ಈ ಮಾರ್ಗಸೂಚಿಗಳ ಪಾಲನೆಯಾಗುತ್ತಿಲ್ಲ. ಭವಿಷ್ಯದ ತಲೆಮಾರಿಗೆ ಬಾಹ್ಯಾಕಾಶವನ್ನು ಸುರಕ್ಷಿತವಾಗಿ ವರ್ಗಾಯಿಸುವ ಹಲವು ಯತ್ನಗಳು ಕಾರ್ಯರೂಪಕ್ಕೆ ಬರಬೇಕಿವೆ.

-ಆಲಿಸ್‌ ಗೋರ್ಮನ್

ಲೇಖಕಿ ಅಡಿಲೇಡ್‌ನ ಫ್ಲಿಂಡರ್ಸ್ ವಿಶ್ವವಿದ್ಯಾಲಯದಲ್ಲಿ ಬಾಹ್ಯಾಕಾಶ ತಜ್ಞೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು