ಮಂಗಳವಾರ, ಜೂನ್ 28, 2022
25 °C
ಪಠ್ಯಪುಸ್ತಕ ಪರಿಷ್ಕರಣೆ: 10ನೇ ತರಗತಿ ಸಮಾಜ ವಿಜ್ಞಾನ ಭಾಗ–2

ಆಳ-ಅಗಲ| ಪಠ್ಯ ಅಂಬೇಡ್ಕರ್ ವಿಚಾರ ಕೈಬಿಟ್ಟ ಚಕ್ರತೀರ್ಥ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು, ಕನ್ನಡ ಮಾಧ್ಯಮದ 10ನೇ ತರಗತಿಯ ಸಮಾಜ ವಿಜ್ಞಾನ ಭಾಗ–2 ಪಠ್ಯಪುಸ್ತಕದ ‘ಸ್ವಾತಂತ್ರ್ಯೋತ್ತರ ಭಾರತ’ ಪಾಠದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌, ಜವಾಹರಲಾಲ್ ನೆಹರು ಮತ್ತು ಭಾರತದ ವಿಭಜನೆಗೆ ಸಂಬಂಧಿಸಿದ ವಿವರಗಳನ್ನು ನೀಡಿತ್ತು. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ಈ ವಿವರಗಳನ್ನು ಬದಲಿಸಿದೆ ಮತ್ತು ಕೆಲವು ವಿವರಗಳನ್ನು ಕೈಬಿಟ್ಟಿದೆ.

ಅಸಮಾನತೆ, ಶ್ರೇಣೀಕರಣಕ್ಕೆ ಕೊಕ್

ಪರಿಷ್ಕರಣ ಸಮಿತಿಯು ಅಂತಿಮಗೊಳಿಸಿದ್ದ ಪಠ್ಯಪುಸ್ತಕದಲ್ಲಿ ಡಾ. ಬಿ.ಆರ್.ಅಂಬೇಡ್ಕರ್‌ ಕುರಿತು ಇದ್ದ ಪಾಠದಲ್ಲಿ ಹಲವಾರು ಬದಲಾವಣೆಗಳನ್ನು ಪರಿಶೀಲನಾ ಸಮಿತಿ ತಂದಿದೆ. ಸಮಾನತೆ–ಅಸಮಾನತೆ, ಸಾಮಾಜಿಕ ಶ್ರೇಣೀಕರಣಕ್ಕೆ ಸಂಬಂಧಿಸಿದಂತೆ ಇದ್ದ ವಿವರಗಳನ್ನು ಪರಿಶೀಲನಾ ಸಮಿತಿ ಕೈಬಿಟ್ಟಿದೆ. ಅಂತಹ ಪ್ರಮುಖ ಬದಲಾವಣೆಗಳು ಇಂತಿವೆ

1. ‘ಸಾಮಾಜಿಕ ಸಮಾನತೆಯಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಡಾ.ಬಿ.ಆರ್. ಅಂಬೇಡ್ಕರ್‌ರವರು ಬಲವಾಗಿ ನಂಬಿದ್ದರು’ ಎಂಬ ವಾಕ್ಯವನ್ನು, ‘ಸಾಮಾಜಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಡಾ.ಬಿ.ಆರ್. ಅಂಬೇಡ್ಕರ್‌ರವರು ಬಲವಾಗಿ ನಂಬಿದ್ದರು’ ಎಂದು ಬದಲಿಸಲಾಗಿದೆ. ಸಮಾನತೆ ಎಂಬ ಪದವನ್ನು ಕೈಬಿಡಲಾಗಿದೆ

2. ‘ಅವರು ಭಾರತವನ್ನು ಕೇವಲ ಒಂದು ರಾಜಕೀಯ ಪರಿಕಲ್ಪನೆಯಾಗಿ ಕಾಣದೆ ಅದರ ಒಟ್ಟಾರೆ ಮುಖವನ್ನು ಪರಿಚಯಿಸಿದರು’ ಎಂಬ ವಾಕ್ಯವನ್ನು, ‘ಅವರು ಭಾರತವನ್ನು ಕೇವಲ ಒಂದು ರಾಜಕೀಯ ಪರಿಕಲ್ಪನೆಯಾಗಿ ಕಾಣದೆ ಅದರ ಭಾವನಾತ್ಮಕ ಮುಖವನ್ನು ಪರಿಚಯಿಸಿದರು’ ಎಂದು ಬದಲಿಸಲಾಗಿದೆ

3. ‘ಇವರು ಮೂರೂ ದುಂಡು ಮೇಜಿನ ಪರಿಷತ್ತಿನ ಸಮಾವೇಶಗಳಲ್ಲಿ ಭಾಗವಹಿಸಿ ನಿಮ್ನ ವರ್ಗಗಳು ವಿವಿಧ ಸಂಕೋಲೆಗಳಿಂದ ಬಿಡುಗಡೆ ಪಡೆಯಲು ಬೇಕಾದ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು’ ಎಂಬ ವಾಕ್ಯವನ್ನು ‘ಮೂರೂ ದುಂಡು ಮೇಜಿನ ಪರಿಷತ್ತಿನ ಸಮಾವೇಶಗಳಲ್ಲಿ ಭಾಗವಹಿಸಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು’ ಎಂದು ಬದಲಿಸಲಾಗಿದೆ. ‘ನಿಮ್ನ ವರ್ಗಗಳು ವಿವಿಧ ಸಂಕೋಲೆಗಳಿಂದ ಬಿಡುಗಡೆ ಪಡೆಯಲು ಬೇಕಾದ’ ಎಂಬ ವಿವರವನ್ನು ಕೈಬಿಡಲಾಗಿದೆ

4. ‘ಜಾತಿ ವ್ಯವಸ್ಥೆಯಿಂದ ಬೇಸತ್ತ ಇವರು ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿದ ಬೌದ್ಧ ಧರ್ಮವನ್ನು ಸ್ವೀಕರಿಸಿದರು’ ಎಂಬ ವಾಕ್ಯವನ್ನು, ‘ತಮ್ಮ ಇಳಿವಯಸ್ಸಿನಲ್ಲಿ ಇವರು ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಬೌದ್ಧ ಧರ್ಮವನ್ನು ಸ್ವೀಕರಿಸಿದರು’ ಎಂದು ಬದಲಿಸಲಾಗಿದೆ. ‘ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿದ ಬೌದ್ಧ ಧರ್ಮವನ್ನು’ ಎಂಬುದನ್ನು ತೆಗೆದು, ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಬೌದ್ಧ ಧರ್ಮ’ ಎಂದು ಬೇರೆ ಅರ್ಥ ಬರುವಂತೆ ಬರೆಯಲಾಗಿದೆ

ವಿವಿಧತೆ ವಿವರ ಡಿಲೀಟ್

ಪರಿಷ್ಕರಣ ಸಮಿತಿ ಸಿದ್ಧಪಡಿಸಿದ್ದ ಪಠ್ಯಪುಸ್ತಕದ ‘ಜವಾಹರಲಾಲ್‌ ನೆಹರು’ ಪಾಠಭಾಗದಲ್ಲಿ, ‘ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾರತಕ್ಕೆ ವಿವಿಧತೆಯನ್ನು ಒಪ್ಪುವ ತಾತ್ವಿಕ ತಳಹದಿಯನ್ನು ಹಾಕಿದರು’ ಎಂಬ ವಿವರ ಇತ್ತು. ರೋಹಿತ್ ಚಕ್ರತೀರ್ಥ ನೇತೃತ್ವದ ಪರಿಶೀಲನಾ ಸಮಿತಿಯು ಇದನ್ನು, ‘ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾರತಕ್ಕೆ ಪ್ರಜಾಪ್ರಭುತ್ವೀಯ ತಳಹದಿಯನ್ನು ಹಾಕಿದರು’ ಎಂದು ಬದಲಿಸಲಾಗಿದೆ. ‘ಭಾರತಕ್ಕೆ ವಿವಿಧತೆಯನ್ನು ಒಪ್ಪುವ ತಾತ್ವಿಕ ತಳಹದಿಯನ್ನು’ ಎಂಬ ವಿವರವನ್ನು ಕೈಬಿಡಲಾಗಿದೆ

ಗಾಂಧಿ ಹತ್ಯೆ ವಿಚಾರ ಮಾಯ

l ಪ್ರೊ. ಬರಗೂರು ಸಮಿತಿಯು ‘ಭಾರತದ ವಿಭಜನೆ’ ಕುರಿತು ಮಾಹಿತಿ ನೀಡುವಾಗ, ‘ಹಿಂದು ಮತ್ತು ಮುಸ್ಲಿಂ ವಿಭಜನೆಯನ್ನು ಸೃಷ್ಟಿಸುವ ಆಸಕ್ತಿಯನ್ನು ಬ್ರಿಟಿಷರು ಹೊಂದಿದ್ದರು. ಬಂಗಾಳ ವಿಭಜನೆ, 1909ರ ಕಾಯ್ದೆಯ ಅನುಷ್ಠಾನದ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳನ್ನು ಮಾಡಿದ್ದನ್ನು ಇಲ್ಲಿ ಕಾಣಬಹುದು. ಹಾಕಿದ ವಿಭಜನೆಯ ಬೇರುಗಳು ದೇಶ ವಿಭಜನೆಯಲ್ಲಿ ಪರ್ಯಾವಸಾನವಾಯಿತು’ ಎಂದು ಉಲ್ಲೇಖಿಸಿದೆ. ಈ ಪ್ಯಾರಾವನ್ನು ಪರಿಶೀಲನಾ ಸಮಿತಿ ಕೈಬಿಟ್ಟಿದೆ 

l ‘ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಹರಿಕಾರ ಗಾಂಧೀಜಿಯವರನ್ನು ನಾಥೋರಾಮ್ ಗೋಡ್ಸೆ ಎಂಬುವವನು ಹತ್ಯೆ ಮಾಡಿದನು’ ಎಂಬ ವಿವರವನ್ನು ಪರಿಶೀಲನಾ ಸಮಿತಿ ತೆಗೆದುಹಾಕಿದೆ. ಅಂದರೆ, ಗಾಂಧೀಜಿ ಹಂತಕನ ಬಗೆಗಿನ ಮಾಹಿತಿಯನ್ನು ಕೈಬಿಡಲಾಗಿದೆ 

l ‘ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರಕ್ಕಾಗಿ ನೇರ ಕಾರ್ಯಾಚರಣೆ ದಿನಕ್ಕೆ ಕರೆ ನೀಡಿದಾಗ ದೇಶದಾದ್ಯಂತ ಕೋಮುಗಲಭೆಗಳು ನಡೆದವು’ ಎಂದಷ್ಟೇ ಪ್ರೊ.ಬರಗೂರು ಸಮಿತಿ ಹೇಳುತ್ತದೆ. ಆದರೆ ಪರಿಶೀಲನಾ ಸಮಿತಿಯು ಇದನ್ನು ಮುಂದುವರಿಸಿ, ‘ಬಂಗಾಳ ಒಂದರಲ್ಲೇ ಸಾವಿರಾರು ಅಮಾಯಕ ಹಿಂದೂಗಳನ್ನು ಕೇವಲ 48 ತಾಸುಗಳ ಅವಧಿಯಲ್ಲಿ ಮೂಲಭೂತವಾದಿ ಮುಸ್ಲಿಮರು ಅಮಾನುಷವಾಗಿ ಕೊಂದರು’ ಎಂಬ ವಿವರವನ್ನು ಹೊಸದಾಗಿ ಸೇರಿಸಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು