ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ನಾಟಿ ಮಾಡಿ, ಮೇವು ಕತ್ತರಿಸಿದ ಕೃಷಿ ಸಚಿವ

ದಿನವಿಡೀ ರೈತರ ಜೊತೆಗಿದ್ದು ಜನ್ಮದಿನ ಆಚರಣೆ ಮಾಡಿಕೊಂಡ ಬಿ.ಸಿ.ಪಾಟೀಲ
Last Updated 14 ನವೆಂಬರ್ 2020, 15:13 IST
ಅಕ್ಷರ ಗಾತ್ರ

ಕೆ.ಆರ್‌.ಪೇಟೆ: ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದ ಅಂಗವಾಗಿ ಶನಿವಾರ ಕೃಷಿ ಸಚಿವ ಬಿ.ಸಿ.ಪಾಟೀಲ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ದಿನವಿಡೀ ರೈತರ ಜೊತೆ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡರು.

ಭತ್ತದ ಗದ್ದೆಗಿಳಿದ ಸಚಿವರು ಪೈರು ನಾಟಿ ಮಾಡಿ ಗಮನ ಸೆಳೆದರು. ಯಂತ್ರದ ಮೂಲಕ ಭತ್ತ ನಾಟಿ ಮಾಡುವ ಪ್ರಾತ್ಯಕ್ಷಿಕೆಯಲ್ಲೂ ಪಾಲ್ಗೊಂಡರು. ಒಂದು ಕಡೆ ಬಿ.ಸಿ.ಪಾಟೀಲ, ಮತ್ತೊಂದು ಕಡೆ ರೇಷ್ಮೆ, ತೋಟಗಾರಿಕೆ ಮತ್ತು ಪೌರಾಡಳಿತ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಕುಳಿತು ನಾಟಿ ಮಾಡಿದರು. ಯಂತ್ರದಿಂದ ಮೇವು ಕತ್ತರಿಸುವ ಮೂಲಕ ಅಧಿಕಾರಿಗಳೊಂದಿಗೆ ಯಂತ್ರದ ಪರಿಚಯ ಮಾಡಿಕೊಟ್ಟರು.

ಯಾಂತ್ರೀಕೃತ ರಾಗಿ ಬಿತ್ತನೆ, ಕಬ್ಬಿನ ನಾಟಿ, ಕಬ್ಬಿನ ಗರಿ–ತೆಂಗಿನ ಗರಿ ಪುಡಿಮಾಡಿ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆಗಳಲ್ಲಿ ಪಾಲ್ಗೊಂಡು ರೈತರಿಗೆ ಅರಿವು ಮೂಡಿಸಿದರು. ಗ್ರಾಮದ ಪ್ರಗತಿಪರ ಕೃಷಿಕ ಮಹಿಳೆ ಲಕ್ಷ್ಮಿದೇವಮ್ಮ ಅವರ ಸಮಗ್ರ ಕೃಷಿ ತಾಕಿಗೆ ಭೇಟಿ ನೀಡಿ ಅಲ್ಲಿಯ ಪ್ರಯೋಗಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕುರಿ, ಕೋಳಿ ಸಾಕಣೆ, ಹೈನುಗಾರಿಕೆಯ ಬಗ್ಗೆ ಮಾಹಿತಿ ಪಡೆದರು. ದೊಡ್ಡಯಾಚೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಮೋಹನ್ ಅವರ ಸಾವಯವ ಕೃಷಿ ತಾಕಿಗೆ ಭೇಟಿ ನೀಡಿ ವೀಕ್ಷಿಸಿದರು.

ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನಕ್ಕೆ ಸಚಿವರು ಚಾಲನೆ ನೀಡಿದರು. ಪ್ರಗತಿಪರ ರೈತರ ಕೃಷಿ ಪ್ರಯೋಗಗಳನ್ನು ವೀಕ್ಷಣೆ ಮಾಡಿದರು. ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಕೃಷಿ ಪರಿಕರ ವಿತರಿಸಿದರು. ರೈತ ಮುಖಂಡರೊಂದಿಗೆ ಗೂಗಲ್‌ ಮೀಟ್‌ ಮೂಲಕ ಸಭೆ ನಡೆಸಿದರು. ಸ್ಥಳದಲ್ಲಿ ಹಾಜರಿದ್ದ ರೈತರೊಂದಿಗೆ ಸಂವಾದವೂ ನಡೆಯಿತು.

ಜನ್ಮದಿನ ಆಚರಣೆ: ಎತ್ತಿನಗಾಡಿಗಳಿಗೆ ಅಲಂಕಾರ ಮಾಡಿ ಮೆರವಣಿಗೆ ನಡೆಸುವ ಮೂಲಕ ರೈತರು ಸಚಿವರಿಗೆ ಸ್ವಾಗತ ಕೋರಿದರು. ಶನಿವಾರ ಸಚಿವ ಬಿ.ಸಿ.ಪಾಟೀಲ ಅವರ ಜನ್ಮದಿನವೂ ಆಗಿದ್ದು ರೈತರೊಂದಿಗೆ ಜನ್ಮದಿನ ಆಚರಿಸಿಕೊಂಡರು. ಕಾಂಗ್ರೆಸ್‌ ಮುಖಂಡ ಕೆ.ಬಿ.ಚಂದ್ರಶೇಖರ್ ಸೇರಿ ವಿವಿಧ ಪಕ್ಷಗಳ ಮುಖಂಡರು ಸಚಿವರಿಗೆ ಶುಭಾಶಯ ಕೋರಿದರು.

‘ನಗರಗಳಿಗೆ ವಲಸೆ ಹೋಗುವ ರೈತರ ಮಕ್ಕಳನ್ನು ಹಳ್ಳಿಗಳಲ್ಲೇ ಉಳಿಸಿಕೊಳ್ಳಲಾಗುವುದು. ಅದಕ್ಕಾಗಿ ಕೃಷಿ ಇಲಾಖೆಯಲ್ಲಿ ರೈತಮಿತ್ರ ಹುದ್ದೆ ಸೃಷ್ಟಿಸಿ ಶೀಘ್ರ 2,236 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಬೆಳೆವಿಮೆ ಸಮೀಕ್ಷೆ ಜವಾಬ್ದಾರಿಯನ್ನು ರೈತರಿಗೆ ನೀಡಿದ ಕಾರಣ ಪರಿಹಾರ ವಿತರಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ’ ಎಂದು ಬಿ.ಸಿ.ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT