ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬಿಸಿಲ ಧಗೆ ಮಧ್ಯೆ ಅಮಿತ್ ಶಾ ರೋಡ್ ಶೋ, ಮೇರೆ ಮೀರಿದ ಉತ್ಸಾಹ

ವಾಹನದ ಮೇಲೆ ಹೂವಿನ ಸಿಂಚನ
Last Updated 30 ಏಪ್ರಿಲ್ 2019, 15:57 IST
ಅಕ್ಷರ ಗಾತ್ರ

ಶಿವಮೊಗ್ಗ/ಭದ್ರಾವತಿ:ಮುಖಕ್ಕೆ ರಾಚುತ್ತಿದ್ದ ಬಿಸಿಲ ಝಳ. ಸುತ್ತಲೂ ನರೆದಿದ್ದ ಜನಸಾಗರ, ಹೂವಿನ ಸುರಿಮಳೆ, ಪಟಾಕಿ ಸಿಡಿತ, ಸಿಹಿ ಹಂಚಿಕೆಯ ಸಂಭ್ರಮ ಇವುಗಳ ನಡುವೆ ‘ಮತ್ತೊಮ್ಮೆ ಮೋದಿ’ ಎಂದು ಬರೆದಿದ್ದ ತೆರೆದ ವಾಹನದಲ್ಲಿ ಸಾಗುತ್ತಾ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರತ್ತ ಕೈ ಬೀಸಿದ ಅಮಿತ್ ಶಾ.

ಈ ದೃಶ್ಯ ಕಂಡುಬಂದಿದ್ದು ಶನಿವಾರ ಭದ್ರಾವತಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋನಲ್ಲಿ. ಒಂದು ತಾಸು ತಡವಾಗಿ ಬಂದ ಶಾ, 11.45 ರ ಸುಮಾರಿಗೆ ತೆರೆದ ವಾಹನವೇರಿದರು.

ಸಂಸದ ಬಿ.ವೈ. ರಾಘವೇಂದ್ರ ಶಾಲು, ಹಾರ ಹಾಕುವ ಮೂಲಕ ಅವರನ್ನು ಸ್ವಾಗತಿಸಿದರು. ಶಾ ಅವರ ಜತೆ, ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್. ದತ್ತಾತ್ರಿ, ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಕ್ಷೇತ್ರ ಪ್ರಭಾರಿ ವಿ. ಕದಿರೇಶ್, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್, ನಗರಾಧ್ಯಕ್ಷ ಜಿ. ಆನಂದಕುಮಾರ್, ಮಹಿಳಾ ಆಯೋಗ ಮಾಜಿ ಅಧ್ಯಕ್ಷೆ ಸಿ.ಮಂಜುಳಾ ಸಾಥ್ ನೀಡಿದರು.

ವಾಹನದ ಎರಡು ಬದಿಯಲ್ಲಿ ಯುವಕರ ತಂಡ ಹೂ ಎರುಚಿ ಮೋದಿ, ಮೋದಿ ಎಂದು ಕೂಗಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವರ್ತಕರು ಅಂಗಡಿ ಬಾಗಿಲು ಮುಚ್ಚಿ ರೋಡ್‌ ಶೋ ವೀಕ್ಷಿಸಿದರು.ಕೈಯಲ್ಲಿ ಧ್ವಜ, ಮುಖಕ್ಕೆ ಮೋದಿ ಮುಖವಾಡ, ಮೈ ಮೇಲೆ ಮೋದಿ ಟೀ ಶರ್ಟ್... ಹೀಗೆ ವಿವಿಧ ರೀತಿಯ ಅಲಂಕಾರದ ಮೂಲಕ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಸಾಗಿದರು.

ಅಮಿತ್ ಶಾ ವಾಹನದ ಮುಂದೆ ಹರಡಿದ್ದ ಹೂಗಳನ್ನು ರಸ್ತೆ ಎರಡು ಬದಿಯ ನಾಗರಿಕರ ಮೇಲೆ ಎಸೆದು, ನಗೆ ಬೀರುತ್ತ ಜಯದ ಸಂಕೇತ ತೋರುತ್ತಿದ್ದಂತೆ ಕಾರ್ಯಕರ್ತರ, ನಾಗರಿಕರ ಉತ್ಸಾಹ ಹೆಚ್ಚಿತು. ಇದರ ಮಧ್ಯೆಯೇ ಅಭ್ಯರ್ಥಿ ರಾಘವೇಂದ್ರ ಎರಡು ಕೈಗಳನ್ನು ಮುಗಿದು ಮತ ಯಾಚನೆ ಮಾಡಿದರು.ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಂಚಾರ ದಟ್ಟಣೆಗೆ ಕಡಿವಾಣ ಹಾಕಲಾಗಿತ್ತು. ಪ್ರಮುಖ ವೃತ್ತ, ರಸ್ತೆಯಲ್ಲಿ ಭಾರತಮಾತೆ, ವಿವೇಕಾನಂದ ಭಾವಚಿತ್ರಗಳಿಗೆ ಅಲಂಕಾರ ಮಾಡಲಾಗಿತ್ತು.

ರಂಗಪ್ಪ ವೃತ್ತದಿಂದ ಆರಂಭವಾದ ರೋಡ್‌ ಶೋ ಸುಮಾರು 45 ನಿಮಿಷ ಸಾಗಿ ಹಾಲಪ್ಪ ವೃತ ತಲುಪಿತು. ಅಲ್ಲಿ ನಡೆದ 9 ನಿಮಿಷದ ಸಭೆಯಲ್ಲಿ ಈಶ್ವರಪ್ಪ, ರಾಘವೇಂದ್ರ ತಲಾ 3 ನಿಮಿಷ, ಅಮಿತ್ ಶಾ 2 ನಿಮಿಷ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT