ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Bicycle Day | ಲಕ್ಷ ಕಿಮೀ ದಾಟಿದ ಸೈಕಲ್ 'ಪಯಣ'

ತೂಕ ಇಳಿಸುವುದಕ್ಕಾಗಿ ಆರಂಭವಾದ ಹವ್ಯಾಸ; ನಿತ್ಯ ಕ್ರಮಿಸುವ ದೂರ 25ರಿಂದ 30 ಕಿಮೀ
Last Updated 3 ಜೂನ್ 2022, 4:25 IST
ಅಕ್ಷರ ಗಾತ್ರ

ಮಂಗಳೂರು: ದೇಹದ ತೂಕ ಇಳಿಸುವ ಮತ್ತು ರಕ್ತದೊತ್ತಡಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆರಂಭವಾದ ಹವ್ಯಾಸವು ಸೈಕ್ಲಿಂಗ್ ಬಳಗವನ್ನು ಹುಟ್ಟುಹಾಕಲು ಮತ್ತು ಒಂದು ಲಕ್ಷ ಕಿಲೋಮೀಟರ್‌ ‘ಯಾತ್ರೆ’ಯ ಗುರಿಮುಟ್ಟಲು ನೆರವಾದ ಖುಷಿಯಲ್ಲಿದ್ದಾರೆ, ಮಂಗಳೂರಿನ ಅನಿಲ್ ಕುಮಾರ್ ಶೇಟ್.

ಬೈಸಿಕಲ್ ದಿನಾಚರಣೆಗೆ (ಜೂನ್‌ 3) ವಿಶ್ವವೇ ಸಜ್ಜಾಗುತ್ತಿರುವ ಸಂದರ್ಭದಲ್ಲಿ, ಸೈಕ್ಲಿಂಗ್‌ನಿಂದ ಆರೋಗ್ಯದ ಮೇಲೆ ಉಂಟಾಗುವ ಪೂರಕ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಅನಿಲ್ ಅವರ ಕಾರ್ಯ ನಿರಂತರವಾಗಿ ಸಾಗುತ್ತಿದ್ದು ಮಂಗಳೂರು ಸೈಕ್ಲಿಂಗ್ ಕ್ಲಬ್ ಅವರಿಗೆ ಬೆನ್ನೆಲುಬು ಆಗಿ ನಿಂತಿದೆ.

ಎಂಜಿನಿಯರಿಂಗ್ ಪದವೀಧರರಾಗಿರುವ ಅನಿಲ್ ಬೆಂಗಳೂರಿನ ಬಿಇಎಲ್‌ನಲ್ಲಿ ಉದ್ಯೋಗಿಯಾಗಿದ್ದರು. ಈಗ ನಗರದ ಕೊಡಿಯಾಲ್ ಬೈಲ್ ನಿವಾಸಿ, ಉದ್ಯಮಿ. ಅವರ ಸೈಕಲ್ ‘ಪಯಣ’ ಆರಂಭವಾದದ್ದು 2014ರಲ್ಲಿ. ’ಆಗ ಅವರಿಗೆ ವಯಸ್ಸು 34. ದೇಹದ ತೂಕ 95 ಕೆಜಿ ಇತ್ತು. ಜೊತೆಗೆ ರಕ್ತದೊತ್ತಡದ ಕಾಟವೂ. ಇದಕ್ಕೆ ಮದ್ದೇನು ಎಂದು ಯೋಚಿಸುತ್ತಿರುವಾಗ ನೆರವಿಗೆ ಬಂದವರು ಪತ್ನಿ, ವೈದ್ಯೆ ರಮ್ಯಾ. ಸೈಕಲ್ ತುಳಿಯಲು ಆರಂಭಿಸುವಂತೆ ಸಲಹೆ ನೀಡಿದ್ದು ಅವರೇ. ‌

‘ಸೈಕ್ಲಿಂಗ್‌ನಿಂದಾಗಿ 7 ತಿಂಗಳಲ್ಲಿ ಸುಮಾರು 18 ಕೆಜಿ ತೂಕ ಕಡಿಮೆಯಾಯಿತು. ಹೀಗಾಗಿ ಇನ್ನಷ್ಟು ಉತ್ಸಾಹದಿಂದ ಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಂಡೆ. ಒಂದು ವರ್ಷದಲ್ಲಿ 7500 ಕಿಮೀ, ಎರಡು ವರ್ಷಗಳಲ್ಲಿ 10,000 ಕಿಮೀ ಗುರಿ ಮುಟ್ಟಿದೆ. ಈಗ, ನಾನು ತುಳಿದ ಒಟ್ಟು ದೂರ ಒಂದು ಲಕ್ಷ ಕಿಮೀ ದಾಟಿದೆ. ಎರಡು ತಿಂಗಳ ಹಿಂದೆ ಕನ್ಯಾಕುಮಾರಿ ವರೆಗೆ ಪಯಣಿಸಿದ್ದೇನೆ’ ಎಂದು ಅನಿಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆರಿಡಾ ಮ್ಯಾಟ್ಸ್‌ 500 ಸೈಕಲ್‌ನಲ್ಲಿ ನಿತ್ಯವೂ 25ರಿಂದ 30 ಕಿಮೀ ಪಯಣಿಸುತ್ತೇನೆ. ಒಂದು ದಿನ ಸೈಕ್ಲಿಂಗ್ ಮಾಡದೇ ಇದ್ದರೂ ಬೇಜಾರು ಅನಿಸುತ್ತದೆ ಎಂದು ನನ್ನ ಬಳಗದ ಪ್ರತಿಯೊಬ್ಬರೂ ಹೇಳುತ್ತಾರೆ. ಸೈಕ್ಲಿಂಗ್‌ನಿಂದ ಉತ್ಸಾಹ ಮೂಡುತ್ತದೆ. ಮನಸ್ಸು ಉಲ್ಲಾಸಗೊಂಡಿರುತ್ತದೆ. ಸೈಕ್ಲಿಂಗ್ ಹವ್ಯಾಸ ಇರುವವರಿಗೆ ಜೀವನದಲ್ಲಿ 10 ವರ್ಷ ಹೆಚ್ಚುವರಿ ಆಯುಸ್ಸು ಸಿಗುತ್ತದೆ ಎಂಬುದು ನನ್ನ ಅನಿಸಿಕೆ’ ಎಂದರು ಅವರು.

ಸೈಕ್ಲಿಂಗ್ ಟ್ರ್ಯಾಕ್ ಯೋಜನೆ ಜಾರಿಯಾಗಲಿ
ಮಂಗಳೂರಿನಲ್ಲಿ ಪ್ರತ್ಯೇಕ ಸೈಕ್ಲಿಂಗ್ ಟ್ರ್ಯಾಕ್ ಯೋಜನೆ ಇನ್ನೂ ಜಾರಿಯಾಗಲಿಲ್ಲ. ಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಜನರು ಮುಂದೆ ಬಾರದೇ ಇರುವುದಕ್ಕೆ ಇದು ಕೂಡ ಕಾರಣ. ಮಕ್ಕಳನ್ನು ಸೈಕಲ್‌ನೊಂದಿಗೆ ರಸ್ತೆಗೆ ಬಿಡಲು ಪಾಲಕರು ಹೆದರುತ್ತಾರೆ. ಆದ್ದರಿಂದ ಯೋಜನೆ ಆದಷ್ಟು ಶೀಘ್ರ ಜಾರಿಗೆ ಬರಬೇಕು ಎಂದು ಅನಿಲ್ ಕುಮಾರ್ ಶೇಟ್ ಆಗ್ರಹಿಸಿದರು.

ಮಂಗಳೂರಿನಲ್ಲಿ ಬೈಸಿಕಲ್ ದಿನಾಚರಣೆ
ನೆಹರು ಯುವಕೇಂದ್ರವು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ವಿವಿಯ ಎನ್‌ಎಸ್ಎಸ್‌, ಯೆನೆಪೋಯ ವಿಶ್ವವಿದ್ಯಾಲಯ, ಎನ್‌ಸಿಸಿ, ಮಂಗಳೂರು ಸೈಕ್ಲಿಂಗ್ ಕ್ಲಬ್‌ ಸಹಯೋಗದಲ್ಲಿ ಆಯೋಜಿಸಿರುವ ಬೈಸಿಕಲ್ ದಿನ ಆಚರಣೆ ಶುಕ್ರವಾರ ಬೆಳಿಗ್ಗೆ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆ 6.30ಕ್ಕೆ ಸೈಕ್ಲಿಂಗ್ ಆರಂಭವಾಗಲಿದ್ದು ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದಲ್ಲಿ ಕೊನೆಗೊಳ್ಳಲಿದೆ ಎಂದು ನೆಹರು ಯುವಕೇಂದ್ರದ ಕಾರ್ಯಕ್ರಮ ಮೇಲ್ವಿಚಾರಕ ವಿಷ್ಣುಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದಹಲಿಯಲ್ಲೂ ವಿವಿಧ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲೂ ಬೈಸಿಕಲ್ ದಿನಾಚರಣೆ ನಡೆಯುತ್ತದೆ. ಆರೋಗ್ಯ ಕಾಪಾಡುವುದು ಮತ್ತು ಪರಿಸರ ಸಂರಕ್ಷಣೆಯ ಗುರಿ ಇದರಲ್ಲಿದೆ’ ಎಂದು ಅವರು ವಿವರಿಸಿದರು.

ಮಂಗಳೂರು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ನಾಗರತ್ನ ಕೆ.ಎ, ಮಂಗಳೂರು ಸೈಕ್ಲಿಂಗ್ ಕ್ಲಬ್‌ನ ಅನಿಲ್ ಕುಮಾರ್ ಶೇಟ್‌, ನೆಹರು ಯುವಕೇಂದ್ರದ ಜಗದೀಶ್ ಕೆ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT